ಭಾನುವಾರ, ಏಪ್ರಿಲ್ 11, 2021
21 °C

ರಾಜಧಾನಿಗೆ 20 ಸಾವಿರ ಹುಬ್ಬಳ್ಳಿ ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎಲ್ಲ ಗೊಂದಲಗಳೂ ಮಾಯವಾಗಿ ಜಗದೀಶ ಶೆಟ್ಟರ್ ಗುರುವಾರ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿರುವುದರಿಂದ ಅವಳಿನಗರವೂ ಸೇರಿದಂತೆ ಅಖಂಡ ಧಾರವಾಡ (ಹಾವೇರಿ ಮತ್ತು ಗದಗ ಸೇರಿ) ಜಿಲ್ಲೆಯಿಂದ 20,000ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಬುಧವಾರ ರಾತ್ರಿ ರಾಜಧಾನಿಯತ್ತ ಹೊರಟಿದ್ದಾರೆ.ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ವಾರ್ಡ್‌ಗೆ ಎರಡರಂತೆ ಒಟ್ಟಾರೆ 130 ಬಸ್ಸುಗಳು ಹೊರಟವು. ಅದೇ ರೀತಿ ನೂರಾರು ಖಾಸಗಿ ವಾಹನಗಳೂ ರಾಜಧಾನಿಗೆ ತೆರಳಿದವು. ಬೆಂಗಳೂರಿಗೆ ಹೊರಡುವ ಎಲ್ಲ ರೈಲುಗಳೂ ಬಿಜೆಪಿ ಕಾರ್ಯಕರ್ತರನ್ನೇ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿದ್ದವು.`ಹುಬ್ಬಳ್ಳಿ ಕಡೆಯಿಂದ ಹೋಗುವ ಎಲ್ಲ ಕಾರ್ಯಕರ್ತರಿಗೆ ತುಮಕೂರಿನಲ್ಲಿ ಸ್ನಾನಾದಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಎಲ್ಲ ಬಸ್ಸುಗಳು ನೇರವಾಗಿ ಅರಮನೆ ಅಂಗಳದ ಗಾಯತ್ರಿ ವಿಹಾರಕ್ಕೆ ತೆರಳಲಿವೆ. ಅಲ್ಲಿಯೇ ಬಂದವರಿಗೆಲ್ಲ ಉಪಾಹಾರ-ಊಟ ವ್ಯವಸ್ಥೆ ಮಾಡಲಾಗಿದೆ. ಗಾಯತ್ರಿ ವಿಹಾರದಲ್ಲೇ ಬೃಹತ್ ಸ್ಕ್ರೀನ್ ಅಳವಡಿಸಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ಕಾರ್ಯಕರ್ತರು ಅಲ್ಲಿಯೇ ವೀಕ್ಷಿಸಲಿದ್ದಾರೆ~ ಎಂದು ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ `ಪ್ರಜಾವಾಣಿ~ಗೆ ತಿಳಿಸಿದರು.`ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಬಳಿಕ ಗಾಯತ್ರಿ ವಿಹಾರಕ್ಕೆ ಆಗಮಿಸುವ ಶೆಟ್ಟರ್, ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಲಿದ್ದಾರೆ~ ಎಂದೂ ಅವರು ಮಾಹಿತಿ ನೀಡಿದರು. `ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶೆಟ್ಟರ್ ತವರಿಗೆ 21ರಂದು ಆಗಮಿಸುವ ಸಾಧ್ಯತೆ ಇದೆ. ಬೆಂಗಳೂರಿನಿಂದ ವಾಪಸ್ಸಾದ ನಂತರ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಅವರು ಹೇಳಿದರು.ಶಿಲ್ಪಾ ಶೆಟ್ಟರ್ ಅವರ ಮಹಿಳಾ ಸಂಘಟನೆಗಳ ಪ್ರತಿನಿಧಿಗಳನ್ನು ಕರೆದೊಯ್ಯಲು ಬಾದಾಮಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ತಮ್ಮ ಜೊತೆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದ ಶಿಲ್ಪಾ ಅವರ ಜೀವನದ ಅವಿಸ್ಮರಣೀಯ ಘಟನೆಗೆ ಸಾಕ್ಷಿಯಾಗಲು ಈ ಗೆಳೆತಿಯರು ಹೊರಟಿದ್ದಾರೆ. ಶೆಟ್ಟರ್ ಸಿ.ಎಂ ಆಗುವುದನ್ನು ಖಚಿತಪಡಿಸಿಕೊಂಡ ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಬುಧವಾರ ಅವರ ಮನೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ರಕ್ಷಣಾ ವ್ಯವಸ್ಥೆ ಪರಿಶೀಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.