ಭಾನುವಾರ, ಮಾರ್ಚ್ 7, 2021
18 °C
ನವೀಕರಣಕ್ಕೆ ರಾಜ್ಯ ಬಜೆಟ್‌ನಿಂದ ರೂ 20 ಲಕ್ಷ ಬಿಡುಗಡೆ

ರಾಜರ ಗದ್ದುಗೆಗೆ ಸಿಗಲಿದೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ/ ಜಿ.ಸಿ. ಅನಿಲ್‌ ಕುಮಾರ Updated:

ಅಕ್ಷರ ಗಾತ್ರ : | |

ರಾಜರ ಗದ್ದುಗೆಗೆ ಸಿಗಲಿದೆ ಕಾಯಕಲ್ಪ

ಮಡಿಕೇರಿ:  ಇಲ್ಲಿನ ಬನ್ನಿ ಮಂಟಪದ ಬಳಿಯಿರುವ, ಕೊಡಗಿನ ಐತಿಹಾಸಿಕ ಕೇಂದ್ರಗಳಲ್ಲಿ ಒಂದಾಗಿರುವ ರಾಜರ ಗದ್ದುಗೆಯ ನವೀಕರಣ ಕಾರ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ರೂ 20 ಲಕ್ಷ ಅನುದಾನ ಬಿಡುಗಡೆ ಮಾಡಿದೆ.ರಾಜ್ಯ ಸರ್ಕಾರ ಕಳೆದ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಈ ವಿಶೇಷ ಅನುದಾನವನ್ನು ಪ್ರಾಚ್ಯವಸ್ತು ಇಲಾಖೆಯ ಖಾತೆಗೆ ನೀಡಿದೆ.

ಕಳೆದ ಎರಡು ದಶಕಗಳ ಹಿಂದೆ ನಿರ್ಮಿಸಲಾಗಿರುವ ಈ ರಾಜರ ಗದ್ದುಗೆ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪ್ರಾಚ್ಯವಸ್ತು ಇಲಾಖೆ ಇದೀಗ ಗದ್ದುಗೆಯ ಮೂರು ಸಮಾಧಿಗಳ ನವೀಕರಣ ಕಾರ್ಯಕ್ಕೆ ಮುಂದಾಗಿದೆ.ಕಳೆದ ತಿಂಗಳೇ ಈ ಅನುದಾನ ಇಲಾಖೆಯ ಖಾತೆಗೆ ಬಂದಿದೆ. ನವೀಕರಣ ಕಾರ್ಯಕ್ಕೆ ಟೆಂಡರ್‌ದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಇತ್ತ ಯಾರೊಬ್ಬರು ಗಮನಹರಿಸಿದ ಕಾರಣ ಮರು ಟೆಂಡರ್‌ ಕರೆಯುವುದೋ ಅಥವಾ ಇಲಾಖೆಯ ವತಿಯಿಂದಲೇ ಪುನಶ್ಚೇತನ ಕಾರ್ಯ ನಡೆಸಬೇಕೋ ಎನ್ನುವುದರ ಬಗ್ಗೆ ಚಿಂತನೆ ನಡೆದಿದೆ. ಲೋಕಸಭಾ ಚುನಾವಣೆ ಮುಗಿದ ಕೂಡಲೇ ಅದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಚ್ಯವಸ್ತು ಇಲಾಖೆಯ ಸಹಾಯಕ ಅಧಿಕಾರಿ ಸತೀಶ್‌ ತಿಳಿಸಿದರು.ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಗದ್ದುಗೆ ನವೀಕರಣ ಕಾರ್ಯಕ್ಕೆ ಬಿಡುಗಡೆಯಾದ ಹಣದಲ್ಲಿ ವಿದ್ಯುತ್‌ ಸಂಪರ್ಕ, ಸುಣ್ಣ ಬಳಿಯುವುದು ಹಾಗೂ ಚಿಕ್ಕರಾಜೇಂದ್ರ ಹಾಗೂ ಅವರ ರಾಣಿಯ ಸಮಾಧಿಯ ಎಡ ಭಾಗದಲ್ಲಿರುವ ರಾಜ ಪುರೋಹಿತ ರುದ್ರಪ್ಪ ಅವರ ಸಮಾಧಿಯನ್ನು ಸಂಪೂರ್ಣವಾಗಿ ನವೀಕರಣ ಮಾಡಲಾಗುವುದು ಎಂದರು.ಸೂಕ್ತ ನಿರ್ವಹಣೆ ಇಲ್ಲ : ಎರಡು ವರ್ಷಗಳ ಹಿಂದೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರವು ಗದ್ದುಗೆ ಆವರಣದಲ್ಲಿ ಉದ್ಯಾನವನ ನಿರ್ಮಿಸಿತ್ತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.ಉದ್ಯಾನವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಗದ್ದುಗೆಯ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಲು ನಗರದೆಲ್ಲೆಡೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.