ಗುರುವಾರ , ಜನವರಿ 30, 2020
20 °C
ನಿವೃತ್ತ ನ್ಯಾ.ಗಂಗೂಲಿ ಪ್ರಕರಣ: ಕಾನೂನು ವಿದ್ಯಾರ್ಥಿನಿ ಪ್ರಮಾಣ ಪತ್ರ ಬಹಿರಂಗ

ರಾಜೀನಾಮೆಗೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಐಎಎನ್‌ಎಸ್/ಪಿಟಿಐ): ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸುತ್ತಿದ್ದ  ಸುಪ್ರೀಂ­ಕೋರ್ಟ್‌ ನ್ಯಾಯಮೂರ್ತಿಗಳ ಸಮಿತಿ ಎದುರು ಕಾನೂನು ವಿದ್ಯಾರ್ಥಿನಿ ಸಲ್ಲಿಸಿದ್ದ ಪ್ರಮಾಣ ಪತ್ರ ಬಹಿ­ರಂಗ­­­ಗೊಂಡ ಬೆನ್ನಲ್ಲೇ, ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ಸ್ಥಾನ­ದಿಂದ ಕೆಳಗಿಳಿ­ಯುವಂತೆ   ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರ ಮೇಲೆ ಒತ್ತಡ ಹೆಚ್ಚಿದೆ.ಪ್ರಮಾಣ ಪತ್ರದಲ್ಲಿಯ ವಿಷಯ ಬಹಿರಂಗ­ಗೊಳ್ಳು ತ್ತಲೇ ಕಾಂಗ್ರೆಸ್‌, ಬಿಜೆಪಿ, ತೃಣಮೂಲ ಕಾಂಗ್ರೆಸ್‌ ಸೇರಿ­ದಂತೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಗಂಗೂಲಿ ಅವರ ರಾಜೀ­ನಾಮೆಗೆ  ಒತ್ತಾಯಿಸಿವೆ.  ವಕೀಲರು ಮತ್ತು ಮಹಿಳಾ ಸಂಘಟನೆ­ಗಳು ಅವರ ಕಚೇರಿ ಎದುರು ಧರಣಿ ಆರಂಭಿಸಿವೆ.ಆದರೆ, ಈ ಯಾವ ಬೇಡಿಕೆಗೂ ಜಗ್ಗದ ಗಂಗೂಲಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕಾನೂನು ವಿದ್ಯಾರ್ಥಿನಿಯ ಪ್ರಮಾಣ ಪತ್ರವನ್ನು ಮಾಧ್ಯಮಗಳಿಗೆ ಬಹಿರಂಗ­ಗೊಳಿಸಿರುವ ತಮ್ಮ ಕ್ರಮ­ವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಇಂದಿರಾ ಜೈಸಿಂಗ್‌ ಸಮರ್ಥಿಸಿಕೊಂಡಿದ್ದಾರೆ.ಈ ಕುರಿತು ಪ್ರಧಾನಿಗೆ  ಪತ್ರ ಬರೆದಿರುವ ಅವರು, ಪಶ್ಚಿಮ ಬಂಗಾಳ ಮಾನವ ಹಕ್ಕುಗಳ  ಆಯೋಗದ ಮುಖ್ಯಸ್ಥ ಸ್ಥಾನದಿಂದ ಗಂಗೂಲಿ ಅವರನ್ನು ಕಿತ್ತು ಹಾಕುವಂತೆ ಒತ್ತಾಯಿಸಿದ್ದಾರೆ.ಸಮಾಜದ ಬಲಾಢ್ಯ ವರ್ಗವೊಂದು ಗಂಗೂಲಿ ಅವರ ಬೆಂಬಲಕ್ಕೆ ನಿಂತಿರುವುದನ್ನು ಮನಗಂಡು ತಾವು ಅನಿವಾರ್ಯವಾಗಿ ಪ್ರಮಾಣ ಪತ್ರವನ್ನು ಬಹಿರಂಗ­ಗೊಳಿಸಬೇಕಾಯಿತು ಎಂದು ಅವರು  ತಿಳಿಸಿದ್ದಾರೆ.ಈ ನಡುವೆ ಬಿಜೆಪಿ ನಾಯಕ ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ಸಿಪಿಐ ನಾಯಕ ಡಿ. ರಾಜಾ, ಸಮಾಜವಾದಿ ಪಕ್ಷದ ನಾಯಕ ನರೇಶ್‌ ಅಗರ್‌­ವಾಲ್ ಅವರೂ,  ನ್ಯಾ. ಗಂಗೂಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಗಂಗೂಲಿ ಅಸಮಾಧಾನ: ಸುಪ್ರೀಂಕೋರ್ಟ್‌ ನ್ಯಾಯ­ಮೂರ್ತಿ­ಗಳ ಎದುರು ಸಲ್ಲಿಸಲಾದ ಈ ಪ್ರಮಾಣ ಪತ್ರ ಗೋಪ್ಯವಾಗಿರಬೇಕಿತ್ತು. ಆದರೆ, ಬಹಿರಂಗ­ಗೊಂಡಿದ್ದು ಹೇಗೆ ಎಂದು ಗಂಗೂಲಿ ಸೋಮವಾರ ಅಸಮಾಧಾನ ಹೊರಹಾಕಿದ್ದಾರೆ.  ಪತ್ರ ಬಹಿರಂಗೊಳಿ­ಸಿದ ಇಂದಿರಾ ಜೈಸಿಂಗ್‌ ವಿರುದ್ಧ ಅವರು ಕಿಡಿ ಕಾರಿದ್ದಾರೆ. ಗಂಗೂಲಿ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ‘ಇದೇ ರೀತಿ ನಿಮ್ಮ ಮಗಳಿಗೂ ಆಗಿದ್ದರೆ, ಆಗ ನಿಮ್ಮ  ಪ್ರತಿಕ್ರಿಯೆ ಹೇಗಿರುತ್ತಿತ್ತು?’ ಎಂದು ಇಂದಿರಾ ಖಾರವಾಗಿ ಪ್ರಶ್ನಿಸಿದ್ದಾರೆ.‘ಇದು ಕೇವಲ ಕಾನೂನು ವಿದ್ಯಾರ್ಥಿನಿ ಅಥವಾ ನ್ಯಾಯಮೂರ್ತಿ ಗಂಗೂಲಿ ಅವರ ಪ್ರಶ್ನೆಯಲ್ಲ. ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆ. ಹೀಗಾಗಿ ವಿದ್ಯಾರ್ಥಿನಿಯ ಪ್ರಮಾಣ ಪತ್ರವನ್ನು ಬಹಿರಂಗಗೊಳಿಸಿರುವುದಾಗಿ’ ತಮ್ಮ ಕ್ರಮ  ಸಮರ್ಥಿಸಿ­ಕೊಂಡಿದ್ದಾರೆ.ಪ್ರೇಮಭಿಕ್ಷೆ ಯಾಚಿಸಿದ್ದ ಗಂಗೂಲಿ!

ತಮ್ಮ ಬಳಿ ತರಬೇತಿಗೆ ಬಂದಿದ್ದ ಯುವತಿ ಬಳಿ ನ್ಯಾ. ಗಂಗೂಲಿ ಪ್ರೇಮ ಭಿಕ್ಷೆ ಬೇಡಿದ್ದರೇ?

ಹೌದು! ಎನ್ನುತ್ತಾಳೆ ಗಂಗೂಲಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಕಾನೂನು ವಿದ್ಯಾರ್ಥಿನಿ. ಸಹಿ ಮಾಡಿದ ಪ್ರಮಾಣ ಪತ್ರದಲ್ಲಿ ಆಕೆ ತಿಳಿಸಿ­ರುವ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.‘ಕಳೆದ ಡಿಸೆಂಬರ್‌ನಲ್ಲಿ ಅವರು ಉಳಿದು­ಕೊಂಡಿದ್ದ ದೆಹಲಿಯ ಪಂಚ­ತಾರಾ ಹೋಟೆಲ್‌ನ ಕೊಠಡಿಗೆ ವರದಿಯೊಂದನ್ನು ನೀಡಲು ತೆರಳಿದ್ದೆ. ರಾತ್ರಿ ಹೋಟೆಲ್‌ನ ತಮ್ಮ ಕೋಣೆಯಲ್ಲಿಯೇ ಉಳಿದು­ಕೊಳ್ಳು­ವಂತೆ ಆಹ್ವಾನ ನೀಡಿದ್ದ ಅವರು, ತಮ್ಮೊಂದಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದರು’‘ನನ್ನ ಕೈಯನ್ನು ಬಲವಂತವಾಗಿ ಹಿಡಿದು ‘ಐ ಲವ್‌ ಯೂ’ ಎಂದು ಹೇಳಿದ್ದರು. ನಾನು ನಿನ್ನನ್ನು ತುಂಬಾ ಮೋಹಿಸುತ್ತೇನೆ. ನಿನಗೂ ಕೂಡಾ ನನ್ನ ಮೇಲೆ ಪ್ರೀತಿ ಇಲ್ಲವೇ? ಎಂದು ಪ್ರಶ್ನಿಸಿದ್ದರು. ‘ಈ ಮುದುಕ ಕುಡಿದ ಮತ್ತಿನಲ್ಲಿ ಏನನ್ನೋ ಕನವರಿಸುತ್ತಿದ್ದಾನೆ ಎಂದು­ಕೊಳ್ಳ­­ಬೇಡ. ನಿಜ­ವಾ­ಗಿಯೂ ನಾನು ನಿನ್ನನ್ನು ತುಂಬಾ ಪ್ರೀತಿಸು­ತ್ತಿದ್ದೇನೆ. ನೀನು ನನ್ನನ್ನು ಪ್ರೀತಿಸು’ ಎಂದು ಗೋಗರೆದರು.‘ನಾನು ಬಲವಂತವಾಗಿ ಅವರ ಕೈಯಿಂದ ತಪ್ಪಿಸಿ­ಕೊಂಡು ಹೊರಬಂದೆ. ನನ್ನನ್ನು ಹೋಟೆಲ್‌ ಮೆಟ್ಟಿಲು­­ಗಳ­ವರೆಗೂ ಹಿಂಬಾಲಿಸಿಕೊಂಡು ಬಂದ ಅವರು ‘ಐ ಲವ್‌ ಯೂ’ ಎಂದು ಮತ್ತೆ ಗೋಗರೆ­ದಿದ್ದರು. ಅವರ ಕೈಯನ್ನು ಕೊಸರಿಕೊಂಡು ನಾನು ಅಲ್ಲಿಂದ ಬಂದಿದ್ದೆ’.‘ಮರುದಿನ ಅವರ ಬಳಿ ಕೆಲಸ ಬಿಡುವುದಾಗಿ ಹೇಳಿ ಸಂದೇಶ ಕಳಿಸಿದ್ದೆ. ಅದಕ್ಕೆ ಪ್ರತಿಯಾಗಿ ಅನೇಕ ಬಾರಿ ಕರೆ ಮಾಡಿ ಕ್ಷಮೆ ಕೋರಿದ್ದರು.ನನ್ನನ್ನು ಪ್ರೀತಿಸು­ತ್ತಿರುವುದಾಗಿ ಹೇಳಿದ್ದ ಅವರು, ಕೆಲಸ ಬಿಡ­ದಂತೆ ಒತ್ತಾಯಿಸಿದ್ದರು. ಕೊನೆಗೆ ಕ್ಷಮೆ ಕೋರಿ ಸಂದೇಶ­ವನ್ನೂ ಕಳಿಸಿದ್ದರು’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾಳೆ. ವಿದ್ಯಾರ್ಥಿನಿ ಈ ವಿಷಯವನ್ನು ಕಾನೂನು ವೆಬ್‌­ಸೈಟ್‌­ನಲ್ಲಿ ಬರೆ­ದಾಗ ಘಟನೆ ಬೆಳಕಿಗೆ ಬಂದಿತ್ತು.ಮಧ್ಯಪ್ರವೇಶ ಅಗತ್ಯ

ಜನಸಾ­ಮಾನ್ಯರ ವಿರುದ್ಧ ಜರುಗಿಸುವ ಕ್ರಮ ದಂತೆಯೇ ಸುಪ್ರೀಂ­ಕೋರ್ಟ್‌ ಈ ಪ್ರಕರಣದಲ್ಲೂ ನಡೆದು­­ಕೊಳ್ಳುತ್ತದೆ. ನ್ಯಾ. ಗಂಗೂಲಿ,  ಸ್ವಯಂ ಪ್ರೇರಿತ­ರಾಗಿ ರಾಜೀ­ನಾಮೆ ನೀಡದಿದ್ದರೆ ಸರ್ಕಾರ ಮಧ್ಯೆ ಪ್ರವೇಶಿಸ­ಬೇಕಾಗುತ್ತದೆ 

– ಕಪಿಲ್‌ ಸಿಬಲ್‌, ಕೇಂದ್ರ ಕಾನೂನು ಸಚಿವ

ಪ್ರತಿಕ್ರಿಯಿಸಿ (+)