ರಾಜ್ಯಕ್ಕೂ ಚಾಚಲಿರುವ ಸಿಬಿಐ ಗಣಿ ತನಿಖೆ

ಶುಕ್ರವಾರ, ಮೇ 24, 2019
26 °C

ರಾಜ್ಯಕ್ಕೂ ಚಾಚಲಿರುವ ಸಿಬಿಐ ಗಣಿ ತನಿಖೆ

Published:
Updated:

ಬೆಂಗಳೂರು: ರಾಜ್ಯದ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿರುವ ಸಿಬಿಐ ತನ್ನ ತನಿಖೆಯನ್ನು ಆಂಧ್ರಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಮಾತ್ರ ಸೀಮಿತಗೊಳಿಸುತ್ತಿಲ್ಲ.

ಅಂದಾಜು ರೂ 5,000 ಕೋಟಿ  ಮೊತ್ತದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದು ಕೂಡ ತನಿಖೆ ಭಾಗವಾಗಲಿದೆ ಎಂದು ಸಿಬಿಐ ಮಂಗಳವಾರ ಹೇಳಿದೆ.`ಆಂಧ್ರಪ್ರದೇಶದಲ್ಲಿ ನಡೆದ ಅಕ್ರಮಗಳನ್ನು ಮಾತ್ರ ತನಿಖೆ ಮಾಡಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಕರ್ನಾಟಕದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಲ್ಲಿಂದ ಅಕ್ರಮವಾಗಿ ರಫ್ತಾದ ಅದಿರಿನ ಕುರಿತೂ ನಾವು ವಿಚಾರಣೆ ನಡೆಸಲಿದ್ದೇವೆ~ ಎಂದು ಹೈದರಾಬಾದ್‌ನಿಂದ ದೂರವಾಣಿ ಮೂಲಕ ಮಾತನಾಡಿದ ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮೀನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.ಓಬಳಾಪುರಂ ಮೈನಿಂಗ್ ಕಂಪೆನಿಯ ಚಟುವಟಿಕೆಗಳ ಕುರಿತ ತನಿಖೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ, ಅವರ ಪುತ್ರ ಜಗನ್ ಮೋಹನ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಅವರ ನಡುವಿನ ನಿಕಟ ಸಂಬಂಧದ ಕುರಿತು ಅರಿಯಲು ಸಹಾಯವಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.ಜಗನ್ ಮತ್ತು ಅವರ ಕುಟುಂಬದ ಇನ್ನಿತರ ಕೆಲವು ಸದಸ್ಯರು ಜನಾರ್ದನ ರೆಡ್ಡಿ ಒಡೆತನದ ಬ್ರಹ್ಮಣಿ ಉಕ್ಕು ಕಂಪೆನಿ ಸ್ಥಾಪನೆಯ ಸಂದರ್ಭದಲ್ಲಿ ಅದರ ಪಾಲುದಾರರಾಗುವವರಿದ್ದರು ಎಂದು ಮೂಲಗಳು ತಿಳಿಸಿವೆ.ಬಳ್ಳಾರಿಯ ರೆಡ್ಡಿ ಸಹೋದರರಿಗೆ ಜಗನ್ ಅವರೊಂದಿಗೆ ಸಂಬಂಧ ಇತ್ತು ಎನ್ನುವುದರ ಜೊತೆಗೇ ರೆಡ್ಡಿ ಸಹೋದರರಿಂದ ಜಗನ್ ಅವರಿಗೆ `ಕಪ್ಪ~ ಸಂದಾಯವಾಗಿದೆ ಎಂಬ ಕುರಿತೂ ಸಾಕಷ್ಟು ದಾಖಲೆಗಳು ಸಿಬಿಐಗೆ ದೊರೆತಿವೆ.ಈ ದಾಖಲೆಗಳು ರಾಜಶೇಖರ ರೆಡ್ಡಿ ಅವರಿಂದ ಜನಾರ್ದನ ರೆಡ್ಡಿ ಅವರು ಹೇಗೆ ಗಣಿ ಅನುಮತಿ ಪಡೆದುಕೊಂಡರು ಮತ್ತು ಹೇಗೆ ದುರ್ಬಳಕೆ ಮಾಡಿಕೊಂಡಿರಬಹುದು ಎಂಬುದನ್ನು ಪತ್ತೆ ಮಾಡಲು ಸಹಾಯವಾಗುತ್ತದೆ ಎಂದು ಸಿಬಿಐ ಮೂಲಗಳು ಹೇಳಿವೆ.ಆಂಧದ ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ಲಿನ ಸರ್ಕಾರಿ ಅಧಿಕಾರಿಗಳು ಈ ಅಕ್ರಮದಲ್ಲಿ ಶಾಮೀಲಾಗಿರುವ ಕುರಿತು ಸಿಬಿಐ ದಾಖಲೆ ಸಂಗ್ರಹಿಸಿದೆ. ಆದರೆ ಅವರು ಶಾಮೀಲಾಗಿದ್ದರಿಂದ ಉಂಟಾದ ಪರಿಣಾಮಗಳು ಏನು ಎಂಬುದು ಕರ್ನಾಟಕದಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸದೆ ಸ್ಪಷ್ಟವಾಗಿ ತಿಳಿಯುವುದಿಲ್ಲ ಎಂದು ಮೂಲಗಳು ಹೇಳುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry