ಸೋಮವಾರ, ಮೇ 10, 2021
21 °C

ರಾಜ್ಯದಲ್ಲಿ ಮಳೆಯ ಅಬ್ಬರ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದಲ್ಲಿ ಬುಧವಾರ ಮಳೆ ಇಳಿಮುಖವಾಗಿದೆ.ಮಂಗಳೂರು ಸುತ್ತಮುತ್ತ ಮಂಗಳವಾರದ ನಿರಂತರ ಮಳೆಗೆ ಹೋಲಿಸಿದರೆ ಬುಧವಾರ ಮಳೆಯ ರಭಸ ಕೊಂಚ ಕಡಿಮೆಯಾಗಿತ್ತು. ಆದರೆ ಕಳೆದ ವಾರ ಪೂರ್ತಿ ಮಳೆ ಬಿದ್ದು ಭೂಮಿ ಮೆದುವಾದ ಪರಿಣಾಮ ಅಲ್ಲಲ್ಲಿ ಭೂ ಕುಸಿತ, ಆವರಣ ಗೋಡೆಗಳ ಕುಸಿತ, ಮರಗಳು ಮುರಿದು ಬಿದ್ದ ಘಟನೆಗಳು ವರದಿಯಾಗಿವೆ.ಮಂಗಳೂರಿನ ಮರೋಳಿಯ ರಿಚರ್ಡ್ ಕುಟಿನ್ಹೋ ಎಂಬುವವರ ಮನೆ ಮೇಲೆ ಮರ ಬಿದ್ದು ಸುಮಾರು ಐದು ಲಕ್ಷ ರೂಪಾಯಿ, ಕುಂಜತ್ತಬೈಲ್‌ನ ಲಕ್ಷ್ಮಣ ಎಂಬುವವರ ಮನೆಗೆ ಒತ್ತಾಗಿದ್ದ ಆವರಣ ಗೋಡೆ ಕುಸಿದು ಸುಮಾರು 50 ಸಾವಿರ ರೂಪಾಯಿ,  ಅದೇ ಮನೆಯ ಪಕ್ಕದಲ್ಲೇ ಇದ್ದ ಶ್ರೀಕಾಂತ್ ಎಂಬುವವರ ಮನೆಗೂ ಈ ಗೋಡೆಯ ಮಣ್ಣು ಕುಸಿದ ಪರಿಣಾಮ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ. ಇಡ್ಯದಲ್ಲಿ ರಾಮಚಂದ್ರ ಕಾಮತ್ ಅವರ ಜ್ಯೋತಿ ಟ್ರೇಡರ್ಸ್‌ನಲ್ಲಿ ಶಾರ್ಟ್ ಸರ್ಕಿಟ್ ಆಗಿ ಕಟ್ಟಡಕ್ಕೆ ಹಾನಿಯಾಗಿದೆ.ಬಂಟ್ವಾಳದ ಮುನ್ನೂರು ಗ್ರಾಮದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿ, ಸೋಮೇಶ್ವರದಲ್ಲಿ ಒಂದು ಮನೆಗೆ ಹಾನಿ, ಉಳ್ಳಾಲದ 8 ಕಡೆ ಮನೆ ಮತ್ತು ಕಟ್ಟಡಗಳಿಗೆ ಭಾಗಶಃ ಹಾನಿ, ಮಂಜನಾಡಿಯಲ್ಲಿ ಮೂರು ಮನೆಗಳಿಗೆ ತೀವ್ರ ಹಾನಿಯಾದ ವರದಿಯಾಗಿದೆ.

ಭಯದ ನೆರಳಿನಲ್ಲಿ ಜಲ್ಲಿಗುಡ್ಡೆ: ಪಡೀಲ್ ಜಲ್ಲಿಗುಡ್ಡೆಯಲ್ಲಿ ಬುಧವಾರ ಗುಡ್ಡವೊಂದು ಕುಸಿದು ಬಿದ್ದು ಜನರು ಆತಂಕಕ್ಕೊಳಗಾದರು. ಅಲ್ಲದೆ ಗುಡ್ಡದ ಮೇಲೆ ಬೃಹತ್ ಬಂಡೆ ಕಲ್ಲು ಅಪಾಯಕಾರಿಯಾಗಿ ನಿಂತಿರುವುದರಿಂದ ಅದು ಯಾವ ಕ್ಷಣದಲ್ಲಾದರೂ ಬೀಳಬಹುದು ಎಂಬ ಆತಂಕ ಎದುರಾಗಿದೆ.ಬುಧವಾರದ ಮಳೆ ವಿವರ (ಮಿ.ಮೀಗಳಲ್ಲಿ):  ಮಂಗಳೂರು- 69.1, ಬಂಟ್ವಾಳ-54.5, ಪುತ್ತೂರು-43.5, ಬೆಳ್ತಂಗಡಿ- 49.4, ಸುಳ್ಯ-88.4, ಮೂಡುಬಿದಿರೆ-65.2, ಕಡಬ- 36.2.ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಬುಧವಾರ ಹಗಲು ಹೊತ್ತಲ್ಲಿ ಮಳೆ ಸ್ವಲ್ಪ ಬಿಡುವು ನೀಡಿತ್ತು. ಮಲೆನಾಡು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.ಕೊಡಗು ಜಿಲ್ಲೆಯಲ್ಲಿ ಬುಧವಾರ ಮುಂಗಾರಿನ ಬಿರುಸು ಕೊಂಚ ಕಡಿಮೆಯಾಗಿದೆ. ನಗರದಲ್ಲಿ ಬೆಳಿಗ್ಗೆಯಿಂದಲೇ ಮಂಜು ಮುಸುಕಿದ ವಾತಾವರಣವಿತ್ತು. ಸಂಜೆ ವೇಳೆ ಸ್ವಲ್ಪ ಮಳೆ ಸುರಿಯಿತು.ಜಿಲ್ಲೆಯ ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ ಕಸಬಾ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಬಾಳಲೆ, ಶಾಂತಳ್ಳಿ, ಕೊಡ್ಲಿಪೇಟೆ ಮತ್ತಿತರ ಪ್ರದೇಶದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯ ಅವಧಿಯಲ್ಲಿ 37.24 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.67 ಮಿ.ಮೀ. ಮಳೆಯಾಗಿತ್ತು.ನೀರಿನಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನಮಟ್ಟ 2,805.28 ಅಡಿಗಳು. ಕಳೆದ ವರ್ಷ ಇದೇ ದಿನ 2,803.38 ಅಡಿ ನೀರು ಸಂಗ್ರಹ ಇತ್ತು.ಉತ್ತರ ಕನ್ನಡ ಜಿಲ್ಲೆಯಾದ್ಯಂತ 3-4 ದಿನಗಳಿಂದ ಸುರಿದ ಮಳೆ ಬುಧವಾರ ಬಿಡುವು ನೀಡಿತ್ತು. ಸಂಜೆ ನಂತರ ಭಟ್ಕಳ, ಹೊನ್ನಾವರ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.ಬೆಳಗಾವಿ, ಧಾರವಾಡ, ಹುಬ್ಬಳ್ಳಿಗಳಲ್ಲೂ ಜಿಟಿ ಜಿಟಿ ಮಳೆಯಾಗಿದೆ.ಮಂಗಳವಾರ ರಾತ್ರಿ ಬೀಸಿದ ಗಾಳಿಗೆ ಅಂಕೋಲಾ ತಾಲ್ಲೂಕಿನ ಹಾರವಾಡ ದುರ್ಗಾದೇವಿ ದೇವಸ್ಥಾನದ ಸಮೀಪ ದೊಡ್ಡ ಆಲದ ಮರ ಬಿದ್ದ ಪರಿಣಾಮ ಅಶೋಕ ಗುನಗಾ ಅವರಿಗೆ ಸೇರಿದ ಮ್ಯಾಕ್ಸಿಕ್ಯಾಬ್ ಜಖಂಗೊಂಡಿದೆ.ಯಲ್ಲಾಪುರ ತಾಲ್ಲೂಕಿನಾದ್ಯಂತ ವಾರದಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಬುಧವಾರ ತೇಲಂಗಾರ ಬಳಿ ಬಾರೆ ಚಿನ್ನಾಪುರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ವಿದ್ಯುತ್ ತಂತಿ ತುಂಡಾಗಿದೆ. ಇದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಯಿತು. ಹೆಸ್ಕಾಂ ಸಿಬ್ಬಂದಿ, ಸಾರ್ವಜನಿಕರು ಮರವನ್ನು ತೆರವುಗೊಳಿಸಿದರು.ಮಂಗಳೂರು ಬಂದರಿನಿಂದ ಸಮುದ್ರ ಮೀನುಗಾರಿಕೆ ತೆರಳಿದ್ದ ದೋಣಿಯೊಂದರ ಎಂಜಿನ್‌ನಲ್ಲಿ ದೋಷ ಉಂಟಾಗಿ ಅಪಾಯಕ್ಕೆ ಸಿಲುಕಿದೆ ಎಂಬ  ಮಾಹಿತಿ ಬಂದ ಹಿನ್ನೆಲೆಯಲ್ಲಿ ತೆರಳಿದ ಕರಾವಳಿ ಕಾವಲು ಪಡೆ ಸಿಬ್ಬಂದಿ ಸಮುದ್ರದಲ್ಲಿ ಯಾವುದೇ ದೋಣಿ ಸಿಗದ ಕಾರಣ ಹಿಂತಿರುಗಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.