ಸೋಮವಾರ, ಜನವರಿ 20, 2020
29 °C
ಅಮುಕ್ತ್‌ ಸಮಾವೇಶ

ರಾಜ್ಯದಲ್ಲಿ 25 ಕಾಲೇಜುಗಳಿಗೆ ಸ್ವಾಯತ್ತತೆ: ಡಾ.ಭಾಗ್ಯಲಕ್ಷ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮುಂದಿನ ವರ್ಷ ರಾಜ್ಯದಲ್ಲಿ 25 ಕಾಲೇಜುಗಳಿಗೆ ಸರ್ಕಾರ ಸ್ವಾಯತ್ತತೆ ನೀಡಲಾಗುವುದು ಎಂದು ರಾಜ್ಯ ಕಾಲೇಜು ಶಿಕ್ಷಣ ಮಂಡಳಿ ನಿರ್ದೇಶಕಿ ಡಾ. ಬಿ.ಎಲ್‌.ಭಾಗ್ಯಲಕ್ಷ್ಮಿ ಹೇಳಿದರು.ಅವರು ಭಾನುವಾರ ನಗರದ ಲೊಯೊಲಾ ಸಭಾಂಗಣದಲ್ಲಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಅಖಿಲ ಭಾರತ ಸಂಘ (ಎಐಎಫ್‌ಯುಸಿಟಿಒ) ಮತ್ತು ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಸ್ವಾಯತ್ತತೆ ನೀಡಲು ಗುರುತಿಸಲಾದ ಕಾಲೇಜುಗಳಿಗೆ ತಲಾ 2 ಕೋಟಿ ರೂಪಾಯಿ ನೀಡಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ. ಅಂತಹ ಕಾಲೇಜುಗಳಲ್ಲಿ ಮೂಲ ಸೌಕರ್ಯ, ಶೈಕ್ಷಣಿಕ ಸವಲತ್ತು ಮುಂತಾದ ತಯಾರಿಗಳಿಗಾಗಿ ಈ ನೆರವು ನೀಡಲಾಗುವುದು ಎಂದು ಹೇಳಿದ ಅವರು ಮಹಿಳಾ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 15 ಮಹಿಳಾ ಕಾಲೇಜುಗಳನ್ನು ಕೂಡ ಆರಂಭಿಸಲಾಗುವುದು. ಈಗಾಗಲೇ 15 ಮಹಿಳಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟು 30 ಕಾಲೇಜುಗಳಾಗಲಿವೆ ಎಂದು ವಿವರಿಸಿದರು.ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಿಸಲು ಮತ್ತು ಅವರನ್ನು ಪ್ರಸ್ತುತ ಜಗತ್ತಿನ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಹಲವಾರು ರೀತಿಯ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಹಯೋಗ, ವಿಕಾಸ ಮತ್ತು ಆಂಗ್ಲ ಎಂಬ ಯೋಜನೆಗಳು ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ನೆರವಾಗಲಿವೆ. ನೈಪುಣ್ಯ ನಿಧಿಯ ಮೂಲಕ ಈ  ಕಾರ್ಯಕ್ರಮಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳಿದ್ದರೂ ಯುವಜನತೆಯನ್ನು ಸಮರ್ಥರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ಅವರು ಹೇಳಿದರು.ದೆಹಲಿಯ ಜವಾಹರ್‌ಲಾಲ್‌ ವಿಶ್ವವಿದ್ಯಾಲಯದ ಪ್ರೊ. ರವಿ ಶ್ರೀವಾಸ್ತವ ಅವರು ದಿಕ್ಸೂಚಿ ಭಾಷಣ ಮಾಡಿದರು. ‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಾಖಲೆಗಳನ್ನು ಕ್ರೋಡೀಕರಿಸಿ ನಡೆಸುವ ಸಂಶೋಧನೆ ನಮ್ಮ ದೇಶದಲ್ಲಿ ಸಾಕಷ್ಟು ನಡೆಯುತ್ತಿಲ್ಲ. ಈಗಾಗಲೇ ಹೊರಹೊಮ್ಮಿರುವ ಸಂಶೋಧನಾ ದಾಖಲೆಗಳನ್ನು ಗಮನಿಸಿದರೆ ಅವುಗಳಲ್ಲಿ ಏರುಪೇರುಗಳಿರುವುದನ್ನು ಗುರುತಿಸಬಹುದು. ಖಾಸಗಿ, ಸರ್ಕಾರಿ ಎಂಬ ವಲಯಗಳಲ್ಲಿ ವಿವಿಧ ಶೈಲಿಗಳಲ್ಲಿ ಶಿಕ್ಷಣವು ಹಂಚಿ ಹೋಗಿರುವುದರಿಂದ ದಾಖಲೆ ಕ್ರೋಡೀಕರಣ ಕಷ್ಟವಾಗಬಹುದು.ಆದರೆ ಅಂತಹ ಸಂಶೋಧನೆಯ ಅಗತ್ಯ ತುಂಬಾ ಇದೆ ಎಂದು ಹೇಳಿದರು. ‘ನಮ್ಮ ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೇ 30ರಷ್ಟು ರಾಷ್ಟ್ರೀಯ ನೋಂದಣಿ ಪ್ರಮಾಣವನ್ನು ಗುರುತಿಸಲಾಗಿದ್ದು ಇದು ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ’ ಎಂದರು.ಅಖಿಲ ಭಾರತ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಮೃಣ್ಮಯ್‌ ಭಟ್ಟಾಚಾರ್ಯ, ನವದೆಹಲಿಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತದ ರಾಷ್ಟ್ರೀಯ ವಿವಿ ಪ್ರಾಧ್ಯಾಪಕ ಪ್ರೊ. ಸುಧಾಂಶು ಭೂಷಣ್‌, ಅಮುಕ್ತ್‌ನ ಅಧ್ಯಕ್ಷ ಡಾ.ಎ.ಎಂ.ನರಹರಿ, ಸಂಘಟನಾ ಕಾರ್ಯದರ್ಶಿ ಡಾ. ನೊಬರ್ಟ್‌ ಲೋಬೊ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)