ಶುಕ್ರವಾರ, ಮೇ 27, 2022
27 °C

ರಾಜ್ಯದ ಕೃಷಿ ಶಿಕ್ಷಣಕ್ಕೆ ನೂರರ ಸಂಭ್ರಮ

ಪ್ರಜಾವಾಣಿ ವಾರ್ತೆ / ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಯತ್ನದಿಂದ ರಾಜ್ಯದಲ್ಲಿ ಆರಂಭವಾದ ಕೃಷಿ ಶಿಕ್ಷಣಕ್ಕೆ ಈಗ ಭರ್ತಿ ನೂರು ವರ್ಷ. ಹೆಬ್ಬಾಳದ 30 ಎಕರೆ ಪ್ರದೇಶದಲ್ಲಿ ಕೃಷಿ ಪಾಠಶಾಲೆ ರೂಪದಲ್ಲಿ ಅಂಕುರಿಸಿದ ಈ ಶಿಕ್ಷಣ ವ್ಯವಸ್ಥೆ, ಇದೀಗ ಹೆಮ್ಮರವಾಗಿ ಬೆಳೆದಿದ್ದು, ಹಲವು ರೆಂಬೆ-ಕೊಂಬೆಗಳಲ್ಲಿ ಮೈಚಾಚಿದೆ.ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ತರಬೇತಿ ಹೊಂದಿದ ಮಾನವ ಸಂಪನ್ಮೂಲವನ್ನು ಕಾಣಿಕೆಯಾಗಿ ಕೊಟ್ಟ ಖ್ಯಾತಿ ಈ ಶಾಲೆಗಿದೆ. ಸಂಶೋಧನಾ ಕ್ಷೇತ್ರವೇ ಹೊಸದೆನಿಸಿದ್ದ ಆ ಕಾಲದಲ್ಲಿ ರೈತರಿಗೆ `ಹಿಂಡಾಫ್-22' ರಾಗಿ ತಳಿಯನ್ನು ಕೊಟ್ಟ ಹಿರಿಮೆ ಕೂಡ ಈ ಸಂಸ್ಥೆಯದಾಗಿದೆ. ಈ ತಳಿ ದಶಕಗಳ ಕಾಲ ರಾಗಿ ರಾಜನಾಗಿ ಮೆರೆದಿದ್ದು ಈಗ ಇತಿಹಾಸ.ಕೃಷಿ ಅಭಿವೃದ್ಧಿಗಾಗಿ 1899ರಲ್ಲಿ ಪ್ರತ್ಯೇಕ ಇಲಾಖೆಯನ್ನೇ ತೆರೆದ ಒಡೆಯರ್, ಸಂಶೋಧನಾ ಕಾರ್ಯಗಳನ್ನು ನಡೆಸಲು ನಗರದ ಸೆಂಟ್ರಲ್ ಕಾಲೇಜು ಪಕ್ಕದಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಿದರು. ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜಗತ್ತಿನ ಕೃಷಿ ತಜ್ಞರನ್ನು ಹುಡುಕಿ ಕರೆತಂದರು. ಜರ್ಮನಿ ವಿಜ್ಞಾನಿ ಡಾ. ಲೆಹ್ಮನ್ ಅವರನ್ನು ಮೊದಲ ಕೃಷಿ ಸಂಶೋಧಕರನ್ನಾಗಿ ನೇಮಕ ಮಾಡಿಕೊಂಡರು. ಮೈಸೂರು ಸಂಸ್ಥಾನದ ರಿಜೆಂಟ್ ಆಗಿದ್ದ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಿಯವರು ಸಂಶೋಧನಾ ಕಾರ್ಯಕ್ಕಾಗಿ ಹೆಬ್ಬಾಳದಲ್ಲಿ 30 ಎಕರೆ ಭೂಮಿದಾನ ಮಾಡಿದರು.ಮಣ್ಣು ಮತ್ತು ಬೆಳೆ ಸಂಬಂಧದ ಮೇಲೆ ವಿವರವಾದ ಅಧ್ಯಯನ ನಡೆಸಿದ ಲೆಹ್ಮನ್, ಕಾಫಿ ಹಾಗೂ ಕಬ್ಬು ಸೇರಿದಂತೆ ವಾಣಿಜ್ಯ ಕೃಷಿಗೆ ವ್ಯವಸ್ಥಿತ ರೂಪವನ್ನು ನೀಡಿದರು. ಹೆಬ್ಬಾಳದಲ್ಲಿ ನಡೆಯುತ್ತಿದ್ದ ಸಂಶೋಧನೆ ಚಟುವಟಿಕೆಗಳ ಲಾಭ ನೇರವಾಗಿ ರೈತರ ಮಕ್ಕಳಿಗೆ ದೊರಕಬೇಕು ಎನ್ನುವ ಉದ್ದೇಶದಿಂದ 1913ರಲ್ಲಿ ಕೃಷಿ ಪಾಠ ಶಾಲೆಯನ್ನು ಆರಂಭಿಸಲಾಯಿತು. ಕೆನಡಾದ ಶಿಲೀಂಧ್ರ ಮತ್ತು ಕೀಟಶಾಸ್ತ್ರಜ್ಞ ಡಾ. ಲೆಸ್ಲಿ ಕೋಲ್ಮನ್ ಈ ಪಾಠಶಾಲೆಗೆ ಮೊದಲ ಪ್ರಾಚಾರ್ಯರಾಗಿ ನೇಮಕಗೊಂಡರು.ಕೆನಡಾದ ಒಂಟೋರಿಯಾ ಭಾಗದ ರೈತ ಕುಟುಂಬದಿಂದ ಬಂದಿದ್ದ ಕೋಲ್ಮನ್, ರಾಜ್ಯದ ಅಗತ್ಯಗಳನ್ನು ಮನಗಂಡು ಅದಕ್ಕೆ ತಕ್ಕಂತಹ ಕೋರ್ಸ್‌ಗಳನ್ನು ರೂಪಿಸಿದವರು. ರಾಜ್ಯ ಕೃಷಿ ಕ್ಷೇತ್ರಕ್ಕೆ ಅಸ್ಥಿಭಾರ ಹಾಕಿದ ಪ್ರಾತಃಸ್ಮರಣೀಯರಲ್ಲಿ ಅವರು ಪ್ರಮುಖರು ಎನ್ನುವುದು ಹಿರಿಯ ಸಂಶೋಧಕರ ಅಭಿಪ್ರಾಯವಾಗಿದೆ.ಮೊದಲು 2 ವರ್ಷದ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದ್ದ ಈ ಶಾಲೆ, 7 ವರ್ಷಗಳ ಬಳಿಕ, 1920ರಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ (ಲೈಸನ್ಸಿಯೇಟ್ ಇನ್ ಅಗ್ರಿಕಲ್ಚರ್-ಎಲ್.ಎಜಿ) ಆರಂಭಿಸಿತು. ಬರ್ಮಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪಾಠಶಾಲೆಯಲ್ಲಿ ಕೃಷಿ ಶಿಕ್ಷಣ ಪಡೆಯಲು ಬಂದರು.ಮೊದಲ ಮಹಾಯುದ್ಧದ ಕಾಲಕ್ಕೆ ಹೆಬ್ಬಾಳದಲ್ಲಿ ಸೈನಿಕರ ಬಿಡಾರಕ್ಕಾಗಿ ನಿರ್ಮಿಸಲಾಗಿದ್ದ ಲಾಹೋರ್ ಶೆಡ್ಡುಗಳನ್ನು ಕೃಷಿ ಪಾಠಶಾಲೆ ವಿದ್ಯಾರ್ಥಿಗಳ ಊಟ, ವಸತಿ ಹಾಗೂ ಪಾಠ-ಪ್ರವಚನಗಳಿಗಾಗಿ ಬಳಕೆ ಮಾಡಿಕೊಳ್ಳಲಾಯಿತು. ಗೋದಾಮುಗಳಂತೆ ಇದ್ದ ಈ ಶೆಡ್ಡುಗಳಲ್ಲಿ ಏನೊಂದು ಸೌಲಭ್ಯ ಇಲ್ಲದಿದ್ದರೂ ಮಣ್ಣಿನ ಮಕ್ಕಳಿಗೆ ಅಲ್ಲಿನ ವಾಸ್ತವ್ಯದಿಂದ ಖುಷಿಯೋ ಖುಷಿ.  ಈ ಶಾಲೆಗೆ ಪ್ರಾಯೋಗಿಕ ತರಬೇತಿಗಾಗಿ 202 ಎಕರೆಯಷ್ಟು ವಿಸ್ತೀರ್ಣದ ಕೃಷಿ ಭೂಮಿ ಒದಗಿಸಲಾಗಿತ್ತು.ಆಗಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಐದು ಗುಂಟೆ ಪ್ರದೇಶದಲ್ಲಿ ರಾಗಿ ಹಾಗೂ 2.5 ಗುಂಟೆ ಜಾಗದಲ್ಲಿ ಭತ್ತ ಬೆಳೆಯುವುದು ಕಡ್ಡಾಯವಾಗಿತ್ತು. ಆಕಾಶಕ್ಕೆ ಮುಖಾಮುಖಿಯಾಗಿ ಮಲಗಿರುವ ಈಗಿನ ಹೊಗೆ ಉಗುಳುವ ಮೇಲ್ಸೇತುವೆಗಳ ಜಾಗದಲ್ಲಿ ಈ ಹಿಂದೆ ಭತ್ತದ ಹಸಿರೇ ತುಂಬಿ ತುಳುಕುತ್ತಿತ್ತು ಎನ್ನುವುದನ್ನು ನೆನಪಿಸಿಕೊಂಡರೆ ಮನಸ್ಸು ವಿಹ್ವಲಗೊಳ್ಳುತ್ತದೆ ಎನ್ನುತ್ತಾರೆ, ಶಾಲೆಯ ಹಳೆಯ ವಿದ್ಯಾರ್ಥಿ ಬಿ.ಆರ್. ಹೆಗಡೆ.ವಾರ್ಷಿಕ 15 ವಿದ್ಯಾರ್ಥಿಗಳು ಮಾತ್ರ ಈ ಶಾಲೆಯಲ್ಲಿ ಎಲ್.ಎಜಿ ಕೋರ್ಸ್ ಶಿಕ್ಷಣ ಪಡೆಯಬಹುದಿತ್ತು. 1946ರಲ್ಲಿ ಅಂದಿನ ಕೃಷಿ ಸಚಿವ ಎಂ.ಎ. ಶ್ರೀನಿವಾಸನ್ ಕೃಷಿ ಕಾಲೇಜು ತೆರೆಯಲು ಮುಂದಾದರು. ಯುದ್ದೋತ್ತರ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೃಷಿ ಶಿಕ್ಷಣಕ್ಕೆ ಅಂದಿನ ಮೈಸೂರು ವಿಶ್ವವಿದ್ಯಾಲಯ ಮಾನ್ಯತೆಯನ್ನೂ ನೀಡಿತು. 1963ರಲ್ಲಿ ಈ ಕೃಷಿ ಕಾಲೇಜು, ವಿಶ್ವವಿದ್ಯಾಲಯವಾಗಿ ರೂಪಾಂತರ ಹೊಂದಿತು. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ ಮತ್ತು ಬೀದರ್‌ಗಳಲ್ಲಿ ಈಗ ಕೃಷಿ ಹಾಗೂ ಕೃಷಿ ಆಧಾರಿತ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಎಲ್ಲ ಕೃಷಿ ವಿದ್ಯಾಲಯಗಳಿಗೆ ಹೆಬ್ಬಾಳದ ಪಾಠಶಾಲೆ ಮಾತೃಸಂಸ್ಥೆ ಎನಿಸಿದೆ. ಈ ಶಾಲೆಯಲ್ಲಿ ಎಲ್.ಎಜಿ ಕೋರ್ಸ್ ಪೂರೈಸಿದ್ದ ಎನ್.ಚಿಕ್ಕೇಗೌಡರು ಮುಂದೆ ರಾಜ್ಯದ ಕೃಷಿ ಸಚಿವರಾಗಿದ್ದು ಈಗ ಇತಿಹಾಸ. ಒಂದೊಮ್ಮೆ ವಿದ್ಯಾರ್ಥಿಯಾಗಿದ್ದ ಸಂಸ್ಥೆಗೆ ಸಹ ಕುಲಾಧಿಪತಿ ಆಗುವಂತಹ ವಿರಳ ಗೌರವವನ್ನು ಅವರು ಸಂಪಾದಿಸಿದ್ದರು.

ನಾಳೆ ಸಮಾರಂಭ

ಹೆಬ್ಬಾಳ ಕೃಷಿಶಾಲೆಯ ಶತಮಾನೋತ್ಸವ ಸಮಾರಂಭ ಶುಕ್ರವಾರ ಬೆಳಿಗ್ಗೆ 11ಕ್ಕೆ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದೆ. ಕೃಷಿ ಸಚಿವ ಕೃಷ್ಣ ಬೈರೇಗೌಡ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕಾರ್ಯದರ್ಶಿ ಡಾ. ಎಸ್. ಅಯ್ಯಪ್ಪನ್, ವಿಶ್ರಾಂತ ಕುಲಪತಿ ಡಾ.ಆರ್. ದ್ವಾರಕಿನಾಥ್, ಕುಲಪತಿ ಡಾ.ಕೆ. ನಾರಾಯಣಗೌಡ ಪಾಲ್ಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.