ಸೋಮವಾರ, ಮೇ 23, 2022
27 °C

ರಾಜ್ಯದ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್‌ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಭೂ ಹಗರಣ, ಆಡಳಿತ ಯಂತ್ರ ದುರುಪಯೋಗ, ಗಣಿ ಸಂಪತ್ತು ಲೂಟಿಯಲ್ಲಿ ನಿರತವಾಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಕಾಂಗ್ರೆಸ್‌ನ ನಾಡ ರಕ್ಷಣಾ ರ್ಯಾಲಿ ಭಾನುವಾರ ರಾಜ್ಯದ ಜನತೆಯಲ್ಲಿ ಮನವಿ ಮಾಡಿತು.ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಎಲ್ಲ ಮುಖಂಡರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರು, ಬಿಜೆಪಿ ಶಾಸಕರು, ಮುಖಂಡರು ರಾಜ್ಯದ ಲೂಟಿಯಲ್ಲಿ ನಿರತರಾಗಿದ್ದಾರೆ. ಇದನ್ನು ವಿರೋಧ ಪಕ್ಷಗಳು ದಾಖಲೆ ಸಹಿತ ಸಾಬೀತು ಮಾಡಿವೆ. ಆದರೂ ಲಜ್ಜೆಗಟ್ಟ ಯಡಿಯೂರಪ್ಪ ಅಧಿಕಾರ ಬಿಟ್ಟುಕೊಡದೆ ಭಂಡತನದಿಂದ ನಡೆದು ಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ಸರ್ಕಾರ ಅಭಿವೃದ್ಧಿ ಕೆಲಸ ಮಾಡುವುದನ್ನು ಸಹಿಸದೇ ವಿರೋಧ ಪಕ್ಷಗಳು ಪದೇ ಪದೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನೆಮ್ಮದಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಇವರು ಮಾಡಿರುವ ಭ್ರಷ್ಟಾಚಾರ ಕುರಿತು ಸೂಟ್‌ಕೇಸ್ ತುಂಬ ದಾಖಲೆಗಳನ್ನು ಸದನಕ್ಕೆ ತೆಗೆದು ಕೊಂಡು ಹೋದರೆ ಚರ್ಚೆಗೆ ಬರದೇ ಪಲಾಯನ ಮಾಡುತ್ತಾರೆ. ಅಭಿವೃದ್ಧಿ ಎಂದರೆ ವೈಯಕ್ತಿಕ ಅಭಿವೃದ್ಧಿ ಎಂದು ಯಡಿಯೂರಪ್ಪ ಮತ್ತು ಸರ್ಕಾರ ನಂಬಿದೆ. ಆದ್ದರಿಂದ ಜನತೆ ಜಾಗೃತರಾಗಿ ಬೀದಿಗಿಳಿದು ಹೋರಾಟ ನಡೆಸಬೇಕು’ ಎಂದು ಕರೆ ಕೊಟ್ಟರು.ಅಲ್ಪಸಂಖ್ಯಾತರಿಗೆ ಅಭಯ: ನ್ಯಾ. ಸೋಮಶೇಖರ್ ಆಯೋಗದ ವರದಿ ಕುರಿತು ರ್ಯಾಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ‘ವರದಿಯು ಸರ್ಕಾರಕ್ಕೆ ಬೇಕಾದ ರೀತಿಯಲ್ಲಿದೆ. ಆದ್ದರಿಂದ ವರದಿಯನ್ನು ತಿರಸ್ಕರಿಸಿ ಸಿಬಿಐ ತನಿಖೆಗೆ ಒಳಪಡಿಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.  ‘ರಾಜ್ಯದಲ್ಲಿ ಇರುವ ಅಲ್ಪಸಂಖ್ಯಾತರು ಯಾವುದೇ ಕಾರಣಕ್ಕೂ ಹೆದರಬಾರದು. ಅಲ್ಪ ಸಂಖ್ಯಾತರ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಸದಾ ಸಿದ್ಧವಾಗಿರುತ್ತದೆ’ ಎಂದು ಭರವಸೆ ನೀಡಿದರು.ಗಡ್ಕರಿ ಫಲಾನುಭವಿ: ‘ಯಡಿಯೂರಪ್ಪ ನೇತೃತ್ವದ ಭ್ರಷ್ಟ ಸರ್ಕಾರದ ಮೊದಲ ಫಲಾನುಭವಿ ಗಡ್ಕರಿಯಾಗಿದ್ದಾರೆ. ಆದ್ದರಿಂದಲೇ ಅವರು 1000 ದಿನ ಸಮಾವೇಶಕ್ಕೆ ಆಗಮಿಸಿ ಮುಖ್ಯಮಂತ್ರಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿ ಹಾಡಿ ಹೊಗಳಿದ್ದಾರೆ. ಇದೇ ಗಡ್ಕರಿ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಗೇಲಿ ಮಾಡಿದರು.ಮಠಗಳು ನಮಗೂ ಸೇರಿವೆ: ‘ರಾಜ್ಯದಲ್ಲಿ ಇರುವ ಕ್ರೈಸ್ತ ಸಮುದಾಯದ ಧರ್ಮ ಗುರುಗಳು ಮನವಿಪತ್ರ ಸಲ್ಲಿಸಲು 2 ನಿಮಿಷ ಸಮಯವನ್ನು ನೀಡದ ಯಡಿಯೂರಪ್ಪ ಮಠಾಧೀಶರನ್ನು ದತ್ತು ತೆಗೆದುಕೊಂಡವರಂತೆ ವರ್ತಿಸುತ್ತಾರೆ. ನಮಗೂ ಮಠಗಳ ಬಗ್ಗೆ ಗೌರವ ಇದೆ. ಆದರೆ ಯಡಿಯೂರಪ್ಪ ಮಾತ್ರ ಮಠಗಳನ್ನು ಗುತ್ತಿಗೆ ಪಡೆದವರಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಕಟುಕಿಯಾಡಿದರು.ಚುನಾವಣೆಗೆ ಸಿದ್ಧರಾಗಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಯಾವುದೇ ಸಮಯದಲ್ಲಿ ಚುನಾವಣೆ ಬಂದರೂ ಪಕ್ಷದ ಕಾರ್ಯಕರ್ತರು ಎದುರಿಸಲು ಸಿದ್ಧರಾಗಬೇಕು. ಏಕೆಂದರೆ ಯಡಿಯೂರಪ್ಪ ಕೇಂದ್ರ ಬಜೆಟ್‌ಗಿಂತ ಮೊದಲೇ ರಾಜ್ಯ ಬಜೆಟ್ ಮಂಡಿಸಿ, ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ಹುನ್ನಾರ ನಡೆಸಿದ್ದಾರೆ’ ಎಂದರು.ಯಡಿಯೂರಪ್ಪ 1000 ದಿನಗಳಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಕ್ಕಾಗಿ ಸಮಾವೇಶ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರ ಅವರು ‘ಜನರನ್ನು ದಾರಿ ತಪ್ಪಿಸುವ ಸಲುವಾಗಿಯೇ ಇಂತಹ ಸಮಾವೇಶ ಮಾಡುತ್ತಿದ್ದಾರೆ.ಇದಕ್ಕೆ ಜನರು ಮರುಳಾಗಬಾರದು. ಯಡಿಯೂರಪ್ಪ ಮತ್ತು ಬಿಜೆಪಿ ಸರ್ಕಾರ ತೊಲಗುವ ತನಕ ಹೋರಾಟ ನಡೆಸಲಾಗುವುದು. ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಬೇಕು.ಬಿಜೆಪಿ ಕೆಟ್ಟಿದೆ, ಜೆಡಿಎಸ್ ಮೂರ್ನಾಲ್ಕು ಜಿಲ್ಲೆಯಲ್ಲಿ ಮಾತ್ರ ಇದೆ.ಆದ್ದರಿಂದ ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲಿಸಿ ಅಧಿಕಾರಕ್ಕೆ ತರಬೇಕು’ ಎಂದು ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.