ಗುರುವಾರ , ಜೂನ್ 24, 2021
29 °C

ರಾಜ್ಯಸಭೆಯಲ್ಲಿ ಒಂದಾದ ಡಿಎಂಕೆ-ಎಐಡಿಎಂಕೆ ! - ಕಲಾಪ ಮೂಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾ ವಿರುದ್ಧ ಮಂಡಿತವಾಗಿರುವ ಸಮರ ಅಪರಾಧ ಆರೋಪಗಳಿಗೆ ಸಂಬಂಧಿಸಿದ ನಿರ್ಣಯ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿ ಯುಪಿಎ ಅಂಗಪಕ್ಷ ಡಿಎಂಕೆ ಸೇರಿದಂತೆ ಎಐಎಡಿಎಂಕೆ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು. ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ  ಸಭೆಯಲ್ಲಿ ಶ್ರೀಲಂಕಾ ವಿರುದ್ಧ ಮಂಡಿಸಲಾದ ಅಮೆರಿಕ ಬೆಂಬಲಿತ ಮಾನವ ಹಕ್ಕು ಉಲ್ಲಂಘನೆ ನಿರ್ಣಯಕ್ಕೆ ಭಾರತ ಬೆಂಬಲ ನೀಡಬೇಕೆಂದು ಆಗ್ರಹಿಸುವ ಭಿತ್ತಿಪತ್ರಗಳನ್ನು ಕಲಾಪ ಆರಂಭವಾಗುತ್ತಿದ್ದಂತೆ ಡಿಎಂಕೆ ಸದಸ್ಯರು ಪ್ರದರ್ಶಿಸಿದರು. ಇದಕ್ಕೆ ಎಐಎಡಿಎಂಕೆ ಹಾಗು ಎಡಪಕ್ಷಗಳ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.ಪ್ರಮುಖ ವಿರೋಧಪಕ್ಷ ಬಿಜೆಪಿ ಕೂಡ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿಲುವನ್ನು ತಿಳಿಸಬೇಕು ಎಂದು ಒತ್ತಾಯಿಸಿತು. ನಂತರ ಗದ್ದಲ ತಾರಕಕ್ಕೇರಿದ್ದರಿಂದ ಕಲಾಪವನ್ನು ಮಧ್ಯಾಹ್ನಕ್ಕೆ ಸಭಾಧ್ಯಕ್ಷ ಹಮೀದ್ ಅನ್ಸಾರಿ ಅವರು ಮುಂದೂಡಿದರು.ಮಧ್ಯಾಹ್ನ ರಾಜ್ಯಸಭೆ ಮತ್ತೆ ಸಮಾವೇಶಗೊಂಡಾಗಲೂ ಪರಿಸ್ಥಿತಿ ತಿಳಿಯಾಗಲೇ ಇಲ್ಲ. ಸರ್ಕಾರವು ಬುಧವಾರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಈ ಬಗ್ಗೆ ಹೇಳಿಕೆ ನೀಡುವರೆಂದು ಭರವಸೆ ನೀಡಿದರೂ, ಡಿಎಂಕೆ ಹಾಗೂ ಎಐಡಿಎಂಕೆ ಸದಸ್ಯರು ತೃಪ್ತರಾಗದೆ ಒಟ್ಟಾಗಿ ಸಭಾಧ್ಯಕ್ಷರ ಪೀಠದತ್ತ ನುಗ್ಗಿದರು.ಇದರಿಂದ ಗೊಂದಲದ ಗೂಡಾದ ರಾಜ್ಯಸಭೆಯನ್ನು ಸಭಾಪತಿ ಹಮೀದ್ ಅನ್ಸಾರಿ ಅವರು ಒಂದು ದಿನದ ಮಟ್ಟಿಗೆ ಮುಂದೂಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.