ಭಾನುವಾರ, ಏಪ್ರಿಲ್ 11, 2021
23 °C

ರಾಜ್ಯೋತ್ಸವದಲ್ಲಿ ಉಕ್ಕಿದ ಕನ್ನಡ ಭಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ವಿವಿಧೆಡೆಯ ತಾಲ್ಲೂಕುಗಳಲ್ಲಿ ಗುರುವಾರ ವರುಣನ ಅರ್ಭಟದ ನಡುವೆಯು 57ನೇ ರಾಜ್ಯೋತ್ಸವವನ್ನು  ಸಂಭ್ರಮದಿಂದ ಆಚರಣೆ ಮಾಡಲಾಯಿತು.ಗಂಗಾವತಿ ವರದಿ

ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಳೆಯೊಂದಿಗೆ ಆರಂಭವಾದ ರಾಜ್ಯೋತ್ಸವ.. ಇಡೀ ದಿನಕ್ಕೆ ವರುಣನ ಕಾಟ... ಬಿಟ್ಟು ಬಿಡದೇ ವಿಘ್ನದಂತೆ ಕಾಡಿದ ವರುಣನ ಆರ್ಭಟದ ಮಧ್ಯೆಯೂ ಸಾರ್ವಜನಿಕ ಧ್ವಜಾರೋಹಣ... ಇದು ಗುರುವಾರದ ಕನ್ನಡ ರಾಜ್ಯೋತ್ಸವದ ಚಿತ್ರಣ.ತಾಲ್ಲೂಕು ಕ್ರೀಡಾಂಗಣದಲ್ಲಿ ತಹಸೀಲ್ದಾರ ಅನ್ನದಾನಿ ಹನುಮಂತಪ್ಪ ಆಲೂರು ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಪರಣ್ಣ ಮುನವಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು.ಪ್ರತಿ ಸಾರ್ವಜನಿಕ ಧ್ವಜಾರೋಹಣಕ್ಕೆ ವಿದ್ಯಾರ್ಥಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಗುರುವಾರ ಬೆಳ್ಳಂಬೆಳಗ್ಗೆ ಆರಂಭವಾದ ಮಳೆಯಿಂದಾಗಿ ಈ ಬಾರಿಯ ಸಾರ್ವಜನಿಕ ಧ್ವಜಾರೋಹಣ ಕಳೆಗುಂದಿತ್ತು.ಕೇವಲ ವಿವಿಧ ಇಲಾಖೆಯ ನೌಕರರು, ಚುನಾಯಿತ ಪ್ರತಿನಿಧಿಗಳು ಅದರಲ್ಲೂ ಪೊಲೀಸ್ ಇಲಾಖೆಯ ಸಿಬ್ಬಂದಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿತ್ತು. ಬೀಳುತ್ತಿದ್ದ ಮಳೆಯನ್ನು ಲೆಕ್ಕಿಸದೇ ಪೊಲೀಸರು ಪಥಸಂಚಲನ ಮಾಡಿ ಗಮನ ಸೆಳೆದರು. ನಗರಸಭೆಯ ಆವರಣದಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ನಡೆದ ಮೆರವಣಿಗೆಯಲ್ಲಿ ತಹಸೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು ಮಳೆಯಲ್ಲಿಯೆ ನಡೆದರು.ಸಾರ್ವಜನಿಕ ಧ್ವಜಾರೋಹಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಜಮೀರ ನಂದಾಪುರ, ಡಿವೈಎಸ್‌ಪಿ ಡಿ.ಎಲ್. ಹಣಗಿ, ತಾ.ಪಂ. ಇಓ ಎಸ್.ಎನ್. ಮಠ, ಬಿಇಒ ಸೋಮಶೇಖರಗೌಡ ಇತರರಿದ್ದರು.ವಿವಿಧೆಡೆ ಆಚರಣೆ: ನೀಲಂ ಪ್ರಭಾವದಿಂದ ಬಿಟ್ಟುಬಿಡದೇ ಕಾಡಿದ ವರುಣನ ಕಾಟದ ಮಧ್ಯೆಯೂ ನಗರದ ವಿವಿಧ ಸರ್ಕಾರಿ ಕಚೇರಿ, ಕನ್ನಡ ಪರ ಸಂಘಟನೆಗಳಿಂದ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕೇಂದ್ರ ಬಸ್‌ನಿಲ್ದಾಣದ ಎದುರು ಇರುವ ಕೃಷ್ಣದೇವರಾಯ ವೃತ್ತದಲ್ಲಿ ಪಂಪಣ್ಣ ನಾಯಕ್ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಧ್ವಜಾರೋಹಣಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕತರು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ತೆರಳಿ ಬಡ ರೋಗಿಗಳಿಗೆ ಹಾಲು ಹಣ್ಣು ಹಂಚಿದರು. ಬೀದಿ ಬದಿಯ ನಿರಾಶ್ರಿತರಿಗೆ ಬಟ್ಟೆ ಹಂಚಿದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಇಂದಿರಾವೃತ್ತದಲ್ಲಿ (ಜುಲೈ ನಗರ) ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಗುರುವಾರ ಹಮ್ಮಿಕೊಂಡಿದ್ದ ಧ್ವಜಾರೋಹಣಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಅಜಮೀರ ನಂದಾಪುರ ನೇತೃತ್ವದಲ್ಲಿ ಗುರುವಾರ ರಾಜ್ಯೋತ್ಸವ ಆಚರಿಸಲಾಯಿತು. ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಾರ್ವಜನಿಕ ಶಾಖಾ ಗ್ರಂಥಾಲಯದಲ್ಲಿ ಗ್ರಂಥಾಲಯದ ಸಹಾಯಕ ಪರಶುರಾಮ ಮೂಲಂಗಿ ನೇತೃತ್ವದಲ್ಲಿ ಓದುಗರು ಗುರುವಾರ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.ಕಾರ್ಯಕ್ರಮದಲ್ಲಿ ಕಸಾಪದ ಸದಸ್ಯರಾದ ಹನುಮಂತಪ್ಪ ಡಗ್ಗಿ, ಶಿಕ್ಷಕರಾದ ಮಲ್ಲಪ್ಪ ಒಡೆಯರ್, ಸತೀಷ್, ದೈಹಿಕ ಶಿಕ್ಷಕ ಯಂಕಪ್ಪ ತಳವಾರ, ಯಂಕಪ್ಪ ಕಟ್ಟಿಮನಿ, ವಿದ್ಯಾರ್ಥಿಗಳಾದ ವಿಜಯ್, ಹನುಮಂತ, ಸಂತೋಷ, ಶೋಭಾ, ಜಯೀರಾಬೇಗಂ, ತನುಶ್ರೀ, ನರಸಪ್ಪ ಇತರರಿದ್ದರು.ಕನಕಗಿರಿ ವರದಿ

ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಕನ್ನಡಿಗರು ಅಭಿಮಾನ, ಗೌರವ ಬೆಳಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ತಿರುಳ್ಗನ್ನಡ ಕ್ರಿಯಾ ಸಮಿತಿಯ ಕನಕಗಿರಿ ಘಟಕದ ನಿಯೋಜಿತ ಅಧ್ಯಕ್ಷ ಶಿವಕುಮಾರ ಕೋರಿಶೆಟ್ಟರ್ ತಿಳಿಸಿದರು.ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವಂತೆ ಆದೇಶ ಮಾಡಿರುವುದು ಖಂಡನೀಯ ಎಂದು ವಿಷಾದ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ ಮಾತನಾಡಿದರು.ಗ್ರಾಪಂ ಸದಸ್ಯ ಸಣ್ಣ ಕನಕಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಸರಿಗಿಡದ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿದರು.ಗ್ರಾಪಂ ಸದಸ್ಯರಾದ ಹನುಮಂತಪ್ಪ ಚೌಡ್ಕಿ, ಕೆ. ಎಚ್. ಕುಲಕರ್ಣಿ, ಶಾಮಲಿಸಾಬ, ತಿಪ್ಪಣ್ಣ ಮಡಿವಾಳರ, ಹೊನ್ನುರುಸಾಬ ಉಪ್ಪು, ಪ್ರಕಾಶ ಹಾದಿಮನಿ, ಹೊನ್ನೂರುಸಾಬ ಬೀಡಿ, ಶಾರದಮ್ಮ ಕಲಕೇರಿಮಠ, ರಾಜಾಸಾಬ ನಂದಾಪುರ, ರಾಜಾಮಾಬೀ ಬೇಲ್ದಾರ, ಸತ್ಯಮ್ಮ ಮಡಿವಾಳರ, ರಂಗಮ್ಮ ನಾಯಕ, ಮಲ್ಲಮ್ಮ ಮೆಣಸಿಕನಕಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಜಿಪಿಎಸ್ ಶಾಲೆ: ಇಲ್ಲಿನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮುಖ್ಯಗುರು ಶ್ರೀಶೈಲ ಪಾಟೀಲ, ಸುರೇಶ ಬಲಕುಂದಿ, ಶಿವಕುಮಾರ ನಾಯಕ, ತುಕರಾಮ ಪೂಜಾರ ಮಾತನಾಡಿದರು.ಎಸ್‌ಡಿಎಂಸಿ ಸದಸ್ಯ ಆನಂದ ಕಂದಗಲ್, ಚೆನ್ನಮ್ಮ ಹಡಪದ, ಗೀತಾ ಪಾಟೀಲ, ಎಂ. ತುಳಸಿ, ದೀಪಾ ಗಡಗಿ, ಗೀತಾ ಕೆ. ಎಂ. ಜ್ಯೋತಿ ಮ್ಯಾಗೇರಿ ಇದ್ದರು.ಯಲಬುರ್ಗಾ ವರದಿ

ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಆ ಮೂಲಕ ಅನುಷ್ಠಾನಗೊಳಿಸುತ್ತಿರುವುದರಿಂದ ಕನ್ನಡ ಭಾಷೆ ಉತ್ತುಂಗಕ್ಕೇರುತ್ತಿದೆ. ಆದರೆ ವಿವಿಧ ಗಡಿ ಪ್ರದೇಶದಲ್ಲಿ ನೆರೆ ರಾಜ್ಯಗಳೊಂದಿಗೆ ಇರುವ ವಿವಾದಗಳು ಶೀಘ್ರದಲ್ಲಿ ಇತ್ಯರ್ಥಗೊಂಡರೆ ಕರ್ನಾಟಕ ಮಾದರಿ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಹಸೀಲ್ದಾರ ಈ.ಡಿ, ಭೃಂಗಿ ಹೇಳಿದರು.ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಬಿಜೆಪಿ ಯುವ ಮುಖಂಡ ನವೀನ ಗುಳಗಣ್ಣವರ್ ಮಾತನಾಡಿದರು.ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವೀರಣ್ಣ ಹುಬ್ಬಳ್ಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ ಸೇರಿದಂತೆ ಅನೇಕರು ಮಾತನಾಡಿ, ಕನ್ನಡ ನೆಲದಲ್ಲಿ ಭಾಷಾ ಸ್ಥಾನಮಾನದ ಬಗ್ಗೆ ಮಾತನಾಡುವುದೇ ಒಂದು ಅಪರಾಧವಿದ್ದಂತೆ. ಅನ್ಯ ಭಾಷಿಕರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರ ಮಾತೃಭಾಷೆಯೊಂದಿಗೆ ಮಾತನ್ಡಾಲು ಇಚ್ಛಿಸುವ ಕನ್ನಡಿಗರು ಕನ್ನಡ ಭಾಷೆಯನ್ನು ಕಲಿಯುವಂತೆ ಪ್ರಚೋದನೆ ನೀಡುವರಿಲ್ಲ. ಇದರಿಂದಲೇ ನೆರೆ ರಾಜ್ಯದವರು ನಿರಾತಂಕವಾಗಿ ರಾಜ್ಯದಲ್ಲಿ ನೆಲೆಯೂರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೆಂಕಟೇಶ, ಸಮಾಜ ಕಲ್ಯಾಣಾಧಿಕಾರಿ ಮಂಜೂರಹುಸೇನ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಗೊಂದಕರ್, ವೈದ್ಯಾಧಿಕಾರಿ ಮಹೇಶಬಾಬು ಸೇರಿದಂತೆ ಅನೇಕರು ಹಾಜರಿದ್ದರು. ದೇವಪ್ಪ ವಾಲ್ಮೀಕಿ ಸ್ವಾಗತಿಸಿ ನಿರೂಪಿಸಿದರು. ಕೆ.ಎನ್. ಮುಳಗುಂದ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ವಿವಿಧ ಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು.ಹನುಮಸಾಗರ ವರದಿ

ಇಂದ್ಲ್ಲಿಲಿ ಶಾಶ್ವತ ನಾಡಧ್ವಜ ಕಟ್ಟೆ ನಿರ್ಮಾಣವಾಗಿರುವುದರಿಂದ ನಮ್ಮ ಬಹು ದಿನದ ಆಸೆ ಈಡೇರಿದಂತಾಗಿದ್ದು ಇನ್ನು ಮುಂದೆ ಇಲ್ಲಿ ನಾಡಧ್ವಜ ನಿತ್ಯ ಹಾರಾಡಲಿದೆ ಎಂದು ರಾಜ್ಯ ದೈಹಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಬ್ದುಲ್‌ಕರೀಮ ವಂಟೆಳಿ ಹೇಳಿದರು.ಗುರುವಾರ 57ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಇಲ್ಲಿನ ಗ್ರಾಮ ಪಂಚಾಯತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಸಹಯೋಗದಲ್ಲಿ ಬಸವೇಶ್ವರ ವೃತ್ತದಲ್ಲಿ ನಿರ್ಮಿಸಲಾಗಿರುವ ಕನ್ನಡ ನಾಡಧ್ವಜದ ಶಾಶ್ವತ ಕಟ್ಟೆಯ ಮೇಲೆ ನಾಡಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನ. 1ರಂದು ಉದ್ಘಾಟನೆಗೊಂಡಿರುವ ಈ ಧ್ವಜದ ಕಟ್ಟೆಯ ಮೇಲೆ ವರ್ಷದ 365 ದಿನಗಳೂ ಕನ್ನಡದ ಧ್ವಜ ಹಾರಾಡುತ್ತಿರುತ್ತದೆ. ಇದು ಅಪರೂಪವಾಗಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗುತ್ತದೆ. ಆದರೆ ಧ್ವಜದ ರಕ್ಷಣೆ ಹಾಗೂ ಅದರ ಪಾವಿತ್ರ್ಯತೆ ಕಾಪಾಡುವುದು ಪ್ರತಿಬ್ಬರ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ಅದನ್ನು ಗಮನಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.ಕನ್ನಡ ಪಂಡಿತ ಅಮರೇಶ ತಮ್ಮಣ್ಣವರ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಕನ್ನಡ ಭಾಷೆಯ ತೇಜಸ್ಸು ಹೊರಹೊಮ್ಮುತ್ತಿದೆ, ಕನ್ನಡ ಭಾಷೆಗೆ ದೊರಕಿರುವ ಎಂಟು ಜ್ಞಾನಪೀಠ ಪ್ರಶಸ್ತಿಗಳೆ ಅದಕ್ಕೆ ಸಾಕ್ಷಿಯಾಗಿದೆ. ಅನ್ಯ ಭಾಷಿಕರು ಕನ್ನಡ ಭಾಷೆ ಹಾಗೂ ನೆಲದ ಮೇಲೆ ಸವಾರಿ ಮಾಡುವ ಸಂಸ್ಕೃತಿ ಹೆಚ್ಚುತ್ತಿದ್ದು ಅದಕ್ಕೆ ನಾವು ಎದ್ದು ನಿಲ್ಲಬೇಕಾದದ್ದು ಅನಿವಾರ್ಯ ಎಂದು ಹೇಳಿದರು.ಕಸಾಪ ಹೋಬಳಿ ಘಟಕದ ಅಧ್ಯಕ್ಷ ಮಂಜುನಾಥ ಗುಳೆದಗುಡ್ಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಧರಿಯಾಬಿ ಬಳೂಟಗಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಘಟಕದ ಗೌರವಾಧ್ಯಕ್ಷ ಬಸವರಾಜ ಕನ್ನೂರ, ಲೆಂಕಪ್ಪ ವಾಲಿಕಾರ, ಭರಮಪ್ಪ ಕಂಡೇಕಾರ, ಪಿ.ಕೆ.ಪುರೋಹಿತ, ಬಸವರಾಜ ದಟ್ಟಿ, ಮಲ್ಲಪ್ಪ ಲಂಗಟದ, ವಿದ್ಯಾಧರ ಸೊಪ್ಪಿಮಠ, ಎಂ.ಡಿ.ಮಕಾನದಾರ, ಜಯದೇವಿ ಉಪ್ಪಿನ, ಸದಾನಂದಯ್ಯ ಹಿರೇಮಠ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.