ಶುಕ್ರವಾರ, ಮಾರ್ಚ್ 5, 2021
17 °C

ರಾಜ್ಯ ಬಜೆಟ್‌; ಉದ್ಯಮದ ನಿರೀಕ್ಷೆ

ಬಿ.ವಿ.ಮಹೇಶ್‌ ಚಂದ್ರ Updated:

ಅಕ್ಷರ ಗಾತ್ರ : | |

ರಾಜ್ಯ ಬಜೆಟ್‌; ಉದ್ಯಮದ ನಿರೀಕ್ಷೆ

ಯಾವುದೇ ರಾಜ್ಯ ಅಭಿವೃದ್ಧಿ ಆಗಿದೆಯೆ? ಇಲ್ಲವೇ? ಅಥವಾ ಪ್ರಗತಿಯ ಹಾದಿಯಲ್ಲಾದರೂ ಇದೆಯೇ? ಎನ್ನುವುದು ಆ ರಾಜ್ಯದಲ್ಲಿನ ಮೂಲ ಸೌಕರ್ಯ ಉದ್ಯಮದ ಬೆಳೆವಣಿಗೆಗೆ ಪೂರಕವಾದ ಆಡಳಿತ ಮತ್ತು ನೀತಿ, ಹೊರೆ ಎನಿಸದ ತೆರಿಗೆ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ, ಕೌಶಲ ವೃದ್ಧಿಗೆ ಪೂರಕ ಚಟುವಟಿಕೆ, ಉದ್ಯೋಗಾವಕಾಶ ಸೃಷ್ಟಿ ಮೊದಲಾದ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ ಎನ್ನುವುದು ‘ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ’ಯ (ಎಫ್‌ಕೆಸಿಸಿಐ) ಸ್ಪಷ್ಟನುಡಿ.ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪರಿಸ್ಥಿತಿ ಅಷ್ಟೊಂದು ಸಮಾಧಾನಕರವಾಗಿಯೇನೂ ಇಲ್ಲ. ಹಾಗೆಂದು ‘ಪ್ರಗತಿ’ ಎಂಬುದು ರಾಜ್ಯದ ಪಾಲಿಗೆ ಮರೀಚಿಕೆಯೇನೂ ಅಲ್ಲ.  ಅಸಾಧ್ಯವಾದುದೂ ಅಲ್ಲ. ಆದರೆ, ಕೃಷಿ, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಹಾಗೂ ಉದ್ಯಮ ಕ್ಷೇತ್ರದ ಉನ್ನತಿಗೆ ಅತ್ಯಗತ್ಯವಾದ ಯೋಜನೆಗಳಿಗೆ, ಶಿಕ್ಷಣ ಮತ್ತು ಕೌಶಲ ವೃದ್ಧಿ ಕಾರ್ಯಕ್ರಮಗಳಿಗೆ ಅವಶ್ಯಕತೆ ಇರುವಷ್ಟು ಅನು­ದಾನ­ವನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸುವುದು, ಯೋಜನೆಗಳನ್ನು ಸಮರ್ಪಕವಾಗಿ  ಅನುಷ್ಠಾನ­ಗೊಳಿಸುವ ಕೆಲಸ ಆಗಬೇಕಿದೆ. ಆದರೆ, ರಾಜ್ಯ ಮುಂಗ­ಡಪತ್ರ ಹಾಗೂ ಘೋಷಣೆಯಾಗುವ ಯೋಜನೆಗಳು ಮತ್ತು ಅವುಗಳ ಅನುಷ್ಠಾನದ ಪರಿ ಗಮನಿಸಿದರೆ ಭರವಸೆಯ ಬೆಳಕೇನೂ ಕಾಣುತ್ತಿಲ್ಲ ಎನ್ನುತ್ತಾರೆ ‘ಎಫ್‌ಕೆಸಿಸಿಐ’ ಅಧ್ಯಕ್ಷ  ಆರ್‌. ಶಿವಕುಮಾರ್‌ ರಾಜ್ಯ ಮುಂಗಡಪತ್ರ ಮತ್ತು ಉದ್ಯಮದ ನಿರೀಕ್ಷೆಗಳ ಕುರಿತು ಅವರು ಮುಂದಿಡುವ ವಾದ ಇಲ್ಲಿದೆ..ಸರಕು ಸಾಗಣೆ ಎಂಬುದು ಉದ್ಯಮದ ಮತ್ತು ಕೃಷಿ ಕ್ಷೇತ್ರದ ಮುಖ್ಯ ಚಟುವಟಿಕೆಗಳಲ್ಲೊಂದು. ಆದರೆ, ರಾಜ್ಯದಲ್ಲಿ ಸರಕು ಸಾಗಣೆಗೆ ಎಲ್ಲೆಲ್ಲೂ ಗುಂಡಿಗಳೇ ಇರುವ ರಸ್ತೆಗಳದ್ದೇ ದೊಡ್ಡ ತೊಡರುಗಾಲು. ರೈಲು ಸಂಪರ್ಕದ ವಿಚಾರದಲ್ಲೂ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಹಳ ಹಿಂದೆ ಉಳಿದಿದೆ.

ರಫ್ತು ಚಟುವಟಿಕೆ

ದೇಶದ ರಫ್ತು ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆಯೂ ದೊಡ್ಡದೇ ಇದೆ. 2009ರಲ್ಲಿ ₨15 ಸಾವಿರ ಕೋಟಿ ಮೌಲ್ಯದ ಖನಿಜಗಳ ರಫ್ತು ಆಗಿತ್ತು. ಕಬ್ಬಿಣ ಅದಿರು ಗಣಿಗಾರಿಕೆ ಸಮರ್ಪಕವಾಗಿ ನಡೆದಿದ್ದರೆ ಇದು ₨25 ಸಾವಿರ ಕೋಟಿ ಮುಟ್ಟುತ್ತಿತ್ತು. ಸದ್ಯ ಗ್ರಾನೈಟ್‌, ಜವಳಿ, ಸಂಬಾರ ಪದಾರ್ಥಗಳು, ಹೂವುಗಳು, ಔಷಧ, ವೈದ್ಯಕೀಯ ಉಪಕರಣ, ಫೌಂಡ್ರೀಸ್‌ ವಿಭಾಗದಿಂದಲೂ ರಫ್ತು ಚಟುವಟಿಕೆ ಜೋರಾಗಿದೆ. ಇತ್ತೀಚೆಗೆ ವೈದ್ಯ ಶುಶ್ರೂಷೆ ಪ್ರವಾಸೋದ್ಯಮವೂ ರಾಜ್ಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ.ಸಂಪರ್ಕ ಸಮಸ್ಯೆ

ಆದರೆ, ರಫ್ತು ಚಟುವಟಿಕೆಗೆ ಅತ್ಯಗತ್ಯವಾದ ಸಂಪರ್ಕ ವ್ಯವಸ್ಥೆಗಳೆಂದರೆ ವಿಮಾನ  ನಿಲ್ದಾಣ ಮತ್ತು ಬಂದರು. ಬೆಂಗಳೂರು, ಮಂಗಳೂರು ಬಿಟ್ಟರೆ ರಾಜ್ಯದ ಉಳಿದೆಡೆ ವಿಮಾನ ನಿಲ್ದಾಣಗಳು ರಫ್ತು ಚಟುವಟಿಕೆಗೆ ಉತ್ತೇಜನಕಾರಿಯಾಗಿಲ್ಲ. ಬೆಂಗಳೂರಿ­ನಿಂದ ಜೈಪುರಕ್ಕೋ, ಅಹಮದಾಬಾದ್‌ಗೋ, ದೆಹಲಿಗೋ ಬೆಳಿಗ್ಗೆ ಹೋಗಿ ಸಂಜೆ ವಾಪಸಾಗಬ­ಹುದು. ಆದರೆ, ರಾಜ್ಯದೊಳಗೇ ವಿಮಾನ ಸಂಚಾರ ಅಷ್ಟು ಸುಲಭದ್ದಾಗಿಲ್ಲ.ಬಂದರು ದೂರ!

ಮಂಗಳೂರಿನಲ್ಲಿ ‘ನವ ಮಂಗಳೂರು ಬಂದರು ಮಂಡಳಿ’ (ಎನ್‌ಎಂಪಿಟಿ)ಯ ಆಧುನಿಕ ಬಂದರು ಇದ್ದರೂ ರಾಜ್ಯದ ವಿವಿಧೆಡೆಯಿಂದ ಅಲ್ಲಿಗೆ ರಸ್ತೆ ಮಾರ್ಗದಲ್ಲಿ ತಲುಪುವುದೇ ಕಷ್ಟವಾಗಿದೆ. ಶಿರಾಡಿ ಘಾಟಿಯಲ್ಲಿ ಹಾದುಹೋಗಿರುವ ಹೆದ್ದಾರಿ ಮಾರ್ಗದಲ್ಲಿ 18 ಕಿ.ಮೀಗಳಷ್ಟು ಉದ್ದದ ಸುರಂಗ ಮಾರ್ಗ ನಿರ್ಮಿಸುವ ಕುರಿತು ಕೆಲವು ತಿಂಗಳ ಹಿಂದೆ ಪ್ರಸ್ತಾವವಾಗಿದ್ದರೂ ಅದಿನ್ನೂ ಕನಸಿನ ಗಂಟಿನಂತಿದೆ.ಯೋಜನೆ ಜಾರಿ ವಿಳಂಬ

2012; 13ನೇ ಹಣಕಾಸು ವರ್ಷದ ರಾಜ್ಯ ಮುಂಗಡ-ಪತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿಯೇ ₨5862 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಲಾಯಿತು. ಕೇಂದ್ರದಿಂದಲೂ ರಾಜ್ಯದಲ್ಲಿನ ಹೆದ್ದಾರಿಗಳ ಅಭಿವೃದ್ಧಿಗಾಗಿ ₨2000 ಕೋಟಿ ಅನುದಾನ ಪ್ರಕಟವಾಯಿತು. ಆದರೆ, ಆಗಿದ್ದೇನು. 2014ರ ಜನವರಿಯಲ್ಲಿ ರಾಜ್ಯದಲ್ಲಿನ ಪ್ರಮುಖ ರಸ್ತೆಗಳ ದುರಸ್ತಿಗೆ ಟೆಂಡರ್‌ ಕರೆಯಲಾಯಿತು. ಅಂದರೆ, ಉದ್ದೇಶಿತ ಯೋಜನೆಯನ್ನು ಕೈಗೆತ್ತಿಕೊಳ್ಳಲೇ 9 ತಿಂಗಳುಗಳಷ್ಟು ದೀರ್ಘಕಾಲದ ವಿಳಂಬ.ಈಗಿನ ಹಣದುಬ್ಬರ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆ ಒಂದು ವರ್ಷ ತಡವಾದರೆ ಯೋಜನೆಯ ಒಟ್ಟು ವೆಚ್ಚ ಕನಿಷ್ಠ ಶೇ 30ರಿಂದ 40ರಷ್ಟು ಹೆಚ್ಚುತ್ತದೆ. ಉದಾಹರಣೆಗೆ ಸಕಲೇಶಪುರ ಮಂಗಳೂರು ನಡುವಿನ ಶಿರಾಡಿ ಹೆದ್ದಾರಿಯ ದುರಸ್ತಿಗೆ 2005ರಲ್ಲಿ ₨28 ಕೋಟಿಯ ಅಂದಾಜು ಪಟ್ಟಿ ಸಿದ್ಧಪಡಿಸ­ಲಾಗಿತ್ತು. ಆದರೆ, ಕೆಲಸ ಆರಂಭಗೊಳ್ಳುವುದೇ ತಡವಾಗಿದ್ದರಿಂದ ಈಗ ಅದರ ದುರಸ್ತಿ ವೆಚ್ಚದ ಅಂದಾಜು ₨95 ಕೋಟಿಗೆ ಏರಿಕೆಯಾಗಿದೆ.ಹೀಗೆ ನಿಗದಿತ ಕಾಲಮಿತಿಯೊಳಗೆ ಯೋಜನೆಗಳು ಜಾರಿಯಾಗದೇ ಇದ್ದರೆ ವೆಚ್ಚವೂ ಹೆಚ್ಚುತ್ತದೆ, ಗುಣಮಟ್ಟವೂ ಕೆಡುತ್ತದೆ. ಅಲ್ಲದೆ, ಕೇಂದ್ರದ ಅನುದಾನವನ್ನೂ ಸರಿಯಾಗಿ ಬಳಸಿಕೊಳ್ಳುವುದು ಕಷ್ಟವಾಗುತ್ತದೆ.ಭರಪೂರ ತೆರಿಗೆ

ಯೋಜನೆಗಳ ಜಾರಿಗೆ ಹಣ ಕೊರತೆ ಇದೆ ಎಂದು ಹೇಳುವಂತಿಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸ್ಥಳೀಯ ತೆರಿಗೆಗಳು ತುಸು ಹೆಚ್ಚೇ ಇವೆ. ಇಡೀ ದೇಶದಲ್ಲಿ ‘ಮೌಲ್ಯವರ್ಧಿತ ತೆರಿಗೆ’(ವಿಎಟಿ; ವ್ಯಾಟ್‌) ಜಾರಿಯಾದಾಗ ಮೊದಲು ಸ್ವಾಗತಿಸಿದ್ದೇ

‘ಎಫ್‌ಕೆಸಿಸಿಐ’.2005ರಲ್ಲಿ ರಾಜ್ಯದಲ್ಲಿ ವಾಣಿಜ್ಯೋದ್ಯಮ ಕ್ಷೇತ್ರದಿಂದ ಸಂಗ್ರಹವಾಗಿದ್ದ ತೆರಿಗೆ ₨11,000 ಕೋಟಿ. ಈ ಬಾರಿ ₨37,000 ಕೋಟಿಗೆ ಮುಟ್ಟಲಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆಯೇ (2014ರ ಜನವರಿ 31ರವರೆಗೆ) ₨30,595 ಕೋಟಿ ಸಂಗ್ರಹವಾಗಿದೆ. ಸೇವಾ ತೆರಿಗೆ, ವೃತ್ತಿ ತೆರಿಗೆ, ಅಬಕಾರಿ ಸುಂಕ ಎಂದು ನೇರ ತೆರಿಗೆಗಳ ಮೂಲಕವೇ ಕರ್ನಾಟಕದಲ್ಲಿ ₨66,000 ಕೋಟಿವರೆಗೂ ಸಂಗ್ರಹವಾಗುತ್ತದೆ. ಇದೆಲ್ಲವೂ ಕೇಂದ್ರಕ್ಕೆ ಸಂದಾಯವಾಗುವ ಮೊತ್ತವೇ ಆಗಿದ್ದರೂ ರಾಜ್ಯಕ್ಕೂ ಇದರಲ್ಲಿ ಪಾಲು ಸಿಗುತ್ತದೆ.ಆದರೆ, 2013; 14ರಲ್ಲಿ ರಾಜ್ಯ ಮುಂಗಡಪತ್ರದಲ್ಲಿ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಟ್ಟ ಮೊತ್ತ ಕೇವಲ ₨885 ಕೋಟಿ.

ಈ ಬಾರಿಯ ನಿರೀಕ್ಷೆಗಳುರಾಜ್ಯ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೊಸದಾಗಿ ಕನಿಷ್ಠ ಆರು ಕಡೆ ಕೈಗಾರಿಕಾ ವಸಾಹತುಗಳ ನಿರ್ಮಾಣವಾಗಬೇಕು.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಇಂಡಸ್ಟ್ರಿಯಲ್‌ ಕಾರಿಡಾರ್‌

ಚಿಕ್ಕಬಳ್ಳಾಪುರ, ದೇವನಹಳ್ಳಿ ಇಂಡಸ್ಟ್ರಿಯಲ್‌ ಕಾರಿಡಾರ್‌

ಹುಬ್ಬಳ್ಳಿ ಧಾರವಾಡ ಇಂಡಸ್ಟ್ರಿಯಲ್‌ ಕಾರಿಡಾರ್‌

ಮೈಸೂರು ಹಾಸನ ಇಂಡಸ್ಟ್ರಿಯಲ್‌ ಕಾರಿಡಾರ್‌

ಮೈಸೂರು ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌

ಹೊಸಕೋಟೆ ಕೋಲಾರ ಇಂಡಸ್ಟ್ರಿಯಲ್‌ ಕಾರಿಡಾರ್‌ಪ್ರವಾಸೋದ್ಯಮ ಅಭಿವೃದ್ಧಿ

ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಬಾಗಲಕೋಟಕ್ಕೆ ವಿಮಾನ ಯಾನ ಸಂಪರ್ಕ ಸಾಧ್ಯವಾಗಬೇಕು. ಶಿವಮೊಗ್ಗ, ಗುಲ್ಬರ್ಗ ವಿಮಾನ ನಿಲ್ದಾಣ ಕಾಮಗಾರಿ ಶೇ 50ರಷ್ಟಾಗಿ ಸ್ಥಗಿತಗೊಂಡಿದೆ. ಅವು ಪೂರ್ಣಗೊಳ್ಳಬೇಕು.ಕರ್ನಾಟಕದಲ್ಲಿ ಹೊರ ರಾಜ್ಯದ ಪ್ರವಾಸಿ ವಾಹನಗಳ ಪ್ರವೇಶಕ್ಕೆ ವಿಧಿಸುವ ರಸ್ತೆ ತೆರಿಗೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಭಾರಿ ಪ್ರಮಾಣದ್ದಾಗಿದೆ. ಈ ತೆರಿಗೆ ತಗ್ಗಿಸಬೇಕಿದೆ. ಹೆಚ್ಚು ತೆರಿಗೆ ಪಾವತಿಸುವ ತೆರಿಗೆದಾರ ಹಾಗೂ ಹೆಚ್ಚು ತೆರಿಗೆ ಸಂಗ್ರಹಿಸುವ ಅಧಿಕಾರಿಗಳಿಬ್ಬರಿಗೂ ಬಹುಮಾನ ನೀಡಿ ಉತ್ತೇಜಿಸಬೇಕಿದೆ.ರಾಜ್ಯದಲ್ಲಿನ ಐದೂ ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ವಿಲೀನಗೊಳಿಸಿ ಒಂದೇ ಕಂಪೆನಿ ರಚಿಸಬೇಕು. ‘ಜೆಸ್ಕಾಂ’ ಹಾಗೂ ‘ಹೆಸ್ಕಾಂ’ ಮುಖ್ಯವಾಗಿ ಕೃಷಿ ಆಧಾರಿತ ಕ್ಷೇತ್ರಕ್ಕೆ ವಿದ್ಯುತ್‌ ಸರಬರಾಜು  ಮಾಡುತ್ತಿರುವುದರಿಂದ ಶೇ 40ರಷ್ಟು ನಿರೀಕ್ಷಿತ ಕಂದಾಯವೂ ಸಂಗ್ರಹವಾಗುತ್ತಿಲ್ಲ. ಐದು ಕಂಪೆನಿಗಳಾಗಿರುವುದರಿಂದ ಆಡಳಿತ ವೆಚ್ಚವೂ ಹೆಚ್ಚಿದೆ. ವಿಲೀನಗೊಳಿಸಿದರೆ ವೆಚ್ಚ ತಗ್ಗುತ್ತದೆ, ವರಮಾನ ಹಂಚಿಕೆಯೂ ಸಮನಾಗಿರುತ್ತದೆ.ಭರವಸೆ ಮಾತು; ನಿರೀಕ್ಷೆಯ ನೋಟ

‘ಎಫ್‌ಕೆಸಿಸಿಐ’ ನಿಯೋಗ ಡಿಸೆಂಬರ್‌ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಈ ಬಾರಿಯ ಮುಂಗಡಪತ್ರದಲ್ಲಿ ವಾಣಿಜ್ಯೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ಮನವಿ ಮಾಡಿತ್ತು. ‘ನಾನೇನೂ ಉದ್ಯಮ ವಿರೋಧಿ ಅಲ್ಲ. ವಾಣಿಜ್ಯೋದ್ಯಮ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಎಲ್ಲ ಅನುಕೂಲಗಳನ್ನೂ ಮಾಡಿಕೊಡಲು ಪ್ರಯತ್ನಿಸುವೆ’ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನೋಡೋಣ ಫೆ. 14ರಂದು ಏನೇನು ಕೊಡುಗೆ ಘೋಷಿಸುತ್ತಾರೆ’ ಎನ್ನುವ ‘ಎಫ್‌ಕೆಸಿಸಿಐ’ ಪದಾಧಿಕಾರಿಗಳು ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ತೆರಿಗೆ ಸೋರಿಕೆ

ಇನ್ನೊಂದೆಡೆ ರಾಜ್ಯದಲ್ಲಿ ತೆರಿಗೆ ಸಂಗ್ರಹ ಪ್ರಕ್ರಿಯೆಯಲ್ಲೂ ಸೋರಿಕೆ ಆಗುತ್ತಿದೆ. ಮನೆ ನಿರ್ಮಿಸುತ್ತಿದ್ದ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಚದರಡಿಗೆ ₨3000ದಂತೆ ಮಾರ್ಬಲ್‌ ಖರೀ­ದಿಸಿದರು. ಆದರೆ, ರಶೀತಿ ಬೇಡ ಎಂದು ತೆರಿಗೆ ಪಾವತಿಸುವು­ದನ್ನು ತಪ್ಪಿಸಿಕೊಂಡ ಉದಾಹರ­ಣೆಯೂ ಇದೆ. ತೆರಿಗೆ ಸಂಗ್ರಹದಲ್ಲಿ ಸೋರಿಕೆ ಹೇಗೆಲ್ಲಾ ಆಗುತ್ತದೆ ಎಂಬು­ದಕ್ಕೆ ಇದು ಸಾಕ್ಷಿ ಎನ್ನುತ್ತಾರೆ ‘ಎಫ್‌ಕೆಸಿಸಿಐ’ ಪದಾಧಿಕಾರಿಗಳು.

ರಾಜ್ಯದಲ್ಲಿ 2000 ಬೃಹತ್‌ ಕೈಗಾರಿಕೆಗಳಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಸಂಖ್ಯೆ (ನೋಂದಾಯಿತ) 3.5 ಲಕ್ಷ. ಇವುಗಳಿಂದ ತೆರಿಗೆಯಷ್ಟೇ ಸಂಗ್ರಹವಾಗುತ್ತಿಲ್ಲ. 1.50 ಕೋಟಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ.ಆದರೆ, ನೋಂದಣಿಯೇ ಆಗದ ಸಣ್ಣ ಉದ್ಯಮಗಳ ಸಂಖ್ಯೆಯೇ 3 ಲಕ್ಷದಷ್ಟಿದೆ. ಹೀಗೆ ದೊಡ್ಡ ಪ್ರಮಾಣ­ದಲ್ಲಿ ತೆರಿಗೆ ಸೋರಿಕೆ­ಯಾ­ಗುತ್ತದೆ. ಸಂಗ್ರಹ­ವಾಗುವ ತೆರಿಗೆ ಬಾಬ್ತಿನಲ್ಲಿ ವಾಣಿಜ್ಯೋ­ದ್ಯಮ ಕ್ಷೇತ್ರದ ಪಾಲೇ ದೊಡ್ಡದಿ­ರುತ್ತದೆ. ಹಾಗಾಗಿ ಈ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ, ಮೂಲ ಸೌಕರ್ಯಗಳನ್ನು ಒದಗಿಸು­ವುದಕ್ಕೆ ಮೀಸಲಿಡಬೇಕು.  ಯೋಜನೆಗಳನ್ನು ಕಾಲಮಿತಿ­ಯೊಳಗೆ ಸಮರ್ಪಕ­ವಾಗಿ ಅನುಷ್ಠಾನ­­­ಗೊಳಿಸಬೇಕು. ಮುಖ್ಯ­ಮಂತ್ರಿಗಳ ಅಧ್ಯಕ್ಷತೆಯ ಉದ್ಯಮ ಕ್ಷೇತ್ರದ ಉನ್ನತ ಸಮಿತಿ ಸಭೆಯೂ ಕಾಲಕಾಲಕ್ಕೆ ನಡೆಯಬೇಕು.ಎಲ್ಲಕ್ಕಿಂತ ಮುಖ್ಯವಾಗಿ ಇದೆಲ್ಲವನ್ನೂ ಸಾಧ್ಯವಾಗಿಸುವ ಇಚ್ಛಾಶಕ್ತಿ  ಸರ್ಕಾರಕ್ಕೆ ಇರಬೇಕು. ಹಾಗಾದಾಗಲೇ ಪ್ರಗತಿ ಎಂಬುದು ರಾಜ್ಯದ ಪಾಲಿಗೆ ವಾಸ್ತವ ಸಂಗತಿಯಾಗುತ್ತದೆ. ವಿಷಾದದ ಸಂಗತಿ ಎಂದರೆ ರಾಜ್ಯ ಯೋಜನಾ ಆಯೋಗಕ್ಕೆ ಈವರೆಗೂ ಉಪಾಧ್ಯಕ್ಷರ ನೇಮಕವೇ ಆಗಿಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.