ಸೋಮವಾರ, ಆಗಸ್ಟ್ 2, 2021
28 °C

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ರಾಜ್ಯ ಸರ್ಕಾರ ರೈತ ವಿರೋಧಿ ತೀರ್ಮಾನ ತೆಗೆದುಕೊಂಡಿರುವುದು ರೈತರಿಗೆ ನುಂಗಲಾರದ  ತುತ್ತಾಗಿದೆ ಎಂದು ಆರೋಪಿಸಿ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಸೋಮವಾರ ಪ್ರತಿಭಟನೆ ಮಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ   ಬರುತ್ತಿದ್ದಂತೆ ರೈತ ವಿರೋಧಿ ತೀರ್ಮಾನ ತೆಗೆದುಕೊಳ್ಳುವ ಮೂಲಕ ರೈತನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಈ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ರೂ. 25 ಸಾವಿರ ಸಾಲ ಮನ್ನಾ ಇದುವರೆಗೂ ಜಾರಿಗೊಳ್ಳದೆ ರೈತನಿಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗದಂತಾಗಿದೆ. ಮುಖ್ಯಮಂತ್ರಿಗಳು ಈ ವಿಚಾರವಾಗಿ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದೇ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತ ರೈತನನ್ನು ಮೃತ್ಯು ಕೂಪಕ್ಕೆ ತಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೊಡ್ಡಹನುಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಸಬ್ಸಿಡಿಗಳನ್ನು ಹಂತ ಹಂತವಾಗಿ ಕಡಿತಗೊಳಿಸುವ ಮೂಲಕ ರೈತನ ಬೆನ್ನು ಮುರಿಯಲಾಗುತ್ತಿದೆ. ರೈತರು ಬೆಳೆಯುವ ಪದಾರ್ಥಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ, ಬೆಳೆದ   ಪದಾರ್ಥ ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಬಗ್ಗೆ ಗಮನಹರಿಸದ ಸರ್ಕಾರ ಗೊಬ್ಬರದ ಮೇಲಿನ ದರ      ಹೆಚ್ಚಿಸಿದೆ. ಇದಲ್ಲದೆ ಇತ್ತೀಚೆಗೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದ್ದು, ಸಾಮಾನ್ಯ ವರ್ಗದ ಜನತೆಯ ಮೇಲೆ ಬರೆ ಹಾಕಿದೆ ಎಂದು ದೂರಿದರು.ರಾಜ್ಯ ಸರ್ಕಾರ ಅನೇಕ ಕೃಷಿ ಯೋಜನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮೀಸಲಿಟ್ಟಿದೆ. ಆದರೆ ಕೃಷಿಯಲ್ಲಿ ಯಾವುದೇ ಜಾತಿ ಇರುವುದಿಲ್ಲ. ರೈತರೆಲ್ಲರೂ ಒಂದೇ. ಹೀಗಾಗಿ ಕೃಷಿ ಅವಲಂಬಿತ ಪ್ರತಿಯೊಂದು ವರ್ಗದವರಿಗೂ ಎಲ್ಲ ಸವಲತ್ತುಗಳನ್ನು ನೀಡುವ ಮೂಲಕ ಕೃಷಿ     ಅವಲಂಬಿತ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು  ಒತ್ತಾಯಿಸಿದರು. ಸ್ವಾಮಿ ಕೋಣನಹಳ್ಳಿ, ಶ್ರೀಕಂಠು, ಕುಮಾರೇಗೌಡ, ವಿ. ರಮೇಶ್, ಎಸ್. ತೀರ್ಥಕುಮಾರ್, ಕೆ.ಎನ್. ಆನಂದ್, ಕೆ. ಸತೀಶ್, ಬಿ.ಕೆ. ರಾಮಚಂದ್ರ, ಸಿ.ರವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.