ಸೋಮವಾರ, ಸೆಪ್ಟೆಂಬರ್ 20, 2021
26 °C

ರಾಮನಗರ ಬರಪೀಡಿತ ತಾಲ್ಲೂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ ಬರಪೀಡಿತ ತಾಲ್ಲೂಕು

ರಾಮನಗರ: ತೀವ್ರ ಬರದಿಂದ ತತ್ತರಿಸಿರುವ ರಾಮನಗರ ತಾಲ್ಲೂಕನ್ನು ಬರ ಪೀಡಿತ ಎಂದು ಘೋಷಿಸುವಂತೆ ಸೋಮವಾರ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ಶಾಸಕ ಕೆ.ರಾಜು ತಿಳಿಸಿದರು.ತಾಲ್ಲೂಕಿನ ಹುಲಿಕೆರೆ-ಗುನ್ನೂರು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನ ಅವ್ವೇರಹಳ್ಳಿಯಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ ಎರಡು ತಿಂಗಳಿಂದೀಚೆಗೆ 150 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿದೆ.ನೀರಿಗೆ ತೀವ್ರ ತತ್ವಾರ ಉಂಟಾದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಖಾತೆ ಬದಲಾವಣೆ, ಜಮೀನು ಅಳತೆ ಮಾಡುವ ಪ್ರಕ್ರಿಯೆಯನ್ನು ಸಕಾಲ ವ್ಯಾಪ್ತಿಗೆ ತಂದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ಕುರಿತು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಶಾಸಕ ರಾಜು ತಿಳಿಸಿದರು.ಬಿಪಿಎಲ್ ಪಡಿತರ ಚೀಟಿ ಅರ್ಹರಿಗೆ ದೊರೆಯುವಂತಾಗಬೇಕು ಎಂದ ಅವರು, ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ವೇತನಕ್ಕಾಗಿ ಜನರು ಶಾಸಕ ಬಳಿ ಬರುವಂತೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ತಹಸೀಲ್ದಾರ್ ಡಾ. ರವಿ ಎಂ ತಿರ್ಲಾಪುರ ಮಾತನಾಡಿ, ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಸಕಾಲದಿಂದ ತಾಲ್ಲೂಕಿನಲ್ಲಿ ಏಪ್ರಿಲ್‌ನಿಂದ ಶುಕ್ರವಾರದವರೆಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಇಪ್ಪತ್ತು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು.ಇದರಲ್ಲಿ 19,883 ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೆವಾರಿ ಮಾಡಲಾಗಿದೆ. ಅಂದರೆ ಶೇ.99.21ರಷ್ಟು ಪ್ರಗತಿ ಸಾಧಿಸಲಾಗಿದೆ. ಸಕಾಲ ಅನುಷ್ಠಾನಗೊಳಿಸುವಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರಾಮನಗರ ತಾಲ್ಲೂಕು ಮೊದಲನೇ ಸ್ಥಾನ ಪಡೆದಿದೆ. ಸಕಾಲದಿಂದಾಗಿ ಅಧಿಕಾರಿಗಳಲ್ಲಿ ಜಾಗೃತಿ ಮೂಡಿದೆ ಎಂದು ತಿಳಿಸಿದರು.ಭೂಮಿ ಯೋಜನೆಯಲ್ಲಿ ರಾಮನಗರ ತಾಲ್ಲೂಕು 183ನೇ ಸ್ಥಾನದಲ್ಲಿತ್ತು. ಅದೀಗ 53ನೇ ಸ್ಥಾನಕ್ಕೆ ಬಂದಿದೆ. ಖಾಲಿಯಿರುವ ಸರ್ವೇಯರ್‌ಗಳ ಹುದ್ದೆಗಳನ್ನು ಭರ್ತಿ ಮಾಡಲು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.ಖಾಸಗಿ ಜವಾಬ್ದಾರಿಯಲ್ಲಿ ನಡೆಯುತ್ತಿರುವ ನೆಮ್ಮದಿ ಕೇಂದ್ರಗಳನ್ನು ಸೆಪ್ಟೆಂಬರ್‌ನಿಂದ ಕಂದಾಯ ಇಲಾಖೆಯೇ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ವಿಳಂಬ ಆಗುವುದಿಲ್ಲ. ಬಿಎಸ್‌ಎನ್‌ಎಲ್ ಹೈ ಪವರ್ ಬ್ರಾಡ್‌ಬ್ಯಾಂಡ್ ಅನ್ನು ಇಲಾಖೆ ಪ್ರತ್ಯೇಕವಾಗಿ ಅಳವಡಿಸಿಕೊಳ್ಳಲಿದೆ. ಸೋಲಾರ್ ಬ್ಯಾಟರಿ ಹಾಗೂ ಯುಪಿಎಸ್ ಸೌಲಭ್ಯವನ್ನು ಕಲ್ಪಿಸುವುದರಿಂದ 8 ಗಂಟೆಗಳ ಕಾಲ ವಿದ್ಯುತ್ ಇಲ್ಲದಿದ್ದರೂ ಕಾರ್ಯ ನಿರ್ವಹಿಸಬಹುದಾಗಿದೆ. ಜನರ ಕೆಲಸಗಳು ಶೀಘ್ರ ಆಗಲಿವೆ ಎಂದು ಭರವಸೆ ನೀಡಿದರು.ಜಿಲ್ಲೆಯಲ್ಲಿ ಸುಮಾರು ಆರೂವರೆ ಸಾವಿರ ಪಿಂಚಣಿದಾರರನ್ನು ಅನರ್ಹಗೊಳಿಸಲಾಗಿದೆ. ಇದರಲ್ಲಿ ಶೇ. 50 ರಷ್ಟು ಮಂದಿ ಮೃತಪಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯ ಆಗಿದ್ದರೆ ಮರು ಪರಿಶೀಲನೆ ಮಾಡುವ ಅವಕಾಶವಿದೆ. ಅಂತವರು ನನ್ನನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಸಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಿಕ್ಕತಾಯಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ನಾಗರಾಜು, ಸದಸ್ಯರುಗಳಾದ ಮಧು, ಶಾಂತಕುಮಾರ್, ಪುಟ್ಟರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.