ಗುರುವಾರ , ಮಾರ್ಚ್ 4, 2021
29 °C

ರಾಮನಹಳ್ಳಿ, ತೋಂಟಾಪುರ: ತಪ್ಪದ ನೀರಿನ ದಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಹಳ್ಳಿ, ತೋಂಟಾಪುರ: ತಪ್ಪದ ನೀರಿನ ದಾಹ

ತೋಂಟಾಪುರ (ತಾ.ಸಿಂದಗಿ): ಆಲಮೇಲದಿಂದ ಎಂಟು ಕಿ.ಮೀ. ದೂರದ ತೋಂಟಾಪುರ ಗ್ರಾಮದಲ್ಲಿ ಜನರು ನೀರಿಗಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಇಲ್ಲಿ ಎರಡು ಬೋರ್‌ವೆಲ್‌ಗಳಿದ್ದು, ಅದರಲ್ಲಿ ಒಂದು ಕೆಟ್ಟಿದೆ. ನಾಲ್ಕೈದು ತಿಂಗಳಿನಿಂದ ದುರಸ್ತಿ ಕಂಡಿಲ್ಲ. ಇರುವ ಇನ್ನೊಂದು ಬೋರ್‌ವೆಲ್‌ನಿಂದ ನೀರು ಪಂಪ್ ಮಾಡಲು ಇಲ್ಲಿಯ ಜನ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.

`ಬೋರ್‌ವೆಲ್‌ನಿಂದ ಒಂದು ಕೊಡ ನೀರು ಹೊರತೆಗೆಯಲು ಕನಿಷ್ಟ 15 ನಿಮಿಷ ಸಮಯ ಹಿಡಿಯುತ್ತದೆ. ಸಲೀಸಾಗಿ ನೀರು ಬರುವುದಿಲ್ಲ. ಹನಿಹನಿಯಾಗಿ ನೀರು ಹೊರಬಂದು ಒಂದು ಕೊಡ ತುಂಬಿದರೆ ಪಂಪ್‌ಮಾಡಿ ಮಾಡಿ ಕೈ ಸೋತು ಹೋಗುತ್ತವೆ~ ಎಂದು ಅಂಗೈ ತೋರಿಸುತ್ತಾರೆ ಜನ.`ಯಪ್ಪಾ ನೀರು ಭೂಮಿಯೊಳಗ ಅದಾವ. ಆದ್ರ, ಇಲ್ಲಿಯ ಬೋರ್‌ವೆಲ್ ರಿಪೇರಿ ಮಾಡಿಸಿಕೊಡ್ರಿ ಅಂತಾ ಹೇಳಿ ಸುಸ್ತಾಗಿವಿ. ಆದ್ರೂ ಅವರು ಬಂದು ರಿಪೇರಿ ಮಾಡಾಕ ತಯಾರಿಲ್ಲ. ನೀವರ ಹೇಳಿ ನಮ್ಮ ಈ ತಾಪತ್ರಯ ತಪ್ಪಸ್ರೀ~ ಎಂದು ಶಾರದಾಬಾಯಿ ಬಡಿಗೇರ ಗೋಗೆದರು.`ಊರಾಗಿನ ಈ ಒಂದು ಬೋರ್‌ವೆಲ್ ಬಿಟ್ರ ಅಡವಿ ಅಡವಿ, ಮೆಟಗಿ ತಿರುಗ್ಯಾಡಿ ನೀರ ತರಬೇಕ್ರಿ ,ಆ ತ್ರಾಸಕ್ಕಿಂತ ಇಲ್ಲೇ ಈ ಬೋರ್‌ವೆಲ್‌ನಿಂದ ಪಂಪ್ ಹೊಡೆದು ನೀರು ತರಾಕ ಹತ್ತೀವಿ~ ಎಂದು ದೋಳವ್ವ ಅಚ್ಚಿಗಾಂವ ಸೋತ ಕೈಗಳನ್ನು ದಿಟ್ಟಿಸುತ್ತ ಹೇಳಿದರು.ಇನ್ನೊಂದು ಕಡೆ ಬೋರ್‌ವೆಲ್‌ನ ಹ್ಯಾಂಡ್ ಮುರಿದು ತಿಂಗಳು ಗತಿಸಿದ್ದರೂ ಅದಕ್ಕೆ ಒಂದು ಹ್ಯಾಂಡ್ ಅಳವಡಿಸಿಲ್ಲ. ಆದ್ದರಿಂದ ಇಲ್ಲಿನ ಮಹಿಳೆಯರು ಕಬ್ಬಿಣದ ಹ್ಯಾಂಡಲ್ ತರಹ ಕಟ್ಟಿಗೆಯನ್ನು ಬೋರ್‌ವೆಲ್‌ಗೆ ಹಾಕಿ ಪಂಪ್‌ಮಾಡಿ ನೀರು ತೆಗೆಯುತ್ತಿದ್ದ ದೃಶ್ಯ ಕಂಡು ಬಂತು.`ಈ ಪುಟ್ಟ ಗ್ರಾಮದಲ್ಲಿ ಸಾವಿರ ಜನಸಂಖ್ಯೆ ಇದೆ. ಈ ಎರಡು ಬೋರ್‌ವೆಲ್ ಸುವ್ಯವಸ್ಥಿತ ಸ್ಥಿತಿಯಲ್ಲಿಟ್ಟರೆ ನಮ್ಮ ಊರಿಗೆ ನೀರು ಸಾಕಾಗುತ್ತೆ. ಆದರೆ, ಎಷ್ಟು ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ~ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರ ತೋಂಟಾಪೂರ ದೂರಿದರು.ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಪಂಚಾಯಿತಿಯಿಂದ ಬೋರ್‌ವೆಲ್ ಹಾಕಿ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿದೆ. ಅಲ್ಲಿ ಬೋರ್‌ವೆಲ್ ಕೊರೆಸಿ, ಅದಕ್ಕೆ ಮೋಟಾರ್ ಅಳವಡಿಸಿ ಎಂಟು ವರ್ಷಗಳೇ ಗತಿಸಿವೆ. ಆದರೆ, ಇಲ್ಲಿಂದ ಗ್ರಾಮದವರೆಗೆ ಪೈಪ್‌ಲೈನ್ ಇನ್ನೂ ಅಳವಡಿಸಿಲ್ಲ. ಈ ಯೋಜನೆ ಅನುಷ್ಠಾನಗೊಂಡರೆ ನಮ್ಮೂರಿಗೆ ನೀರಿನ ಕೊರತೆ ಎದುರಾಗದು ಎನ್ನುತ್ತಾರೆ ಅವರು.`ನಮ್ಮೂರಲ್ಲಿ ಅಂತರ್ಜಲ ಕೊರತೆ ಇಲ್ಲ.  ಇಲ್ಲಿ ಇನ್ನೆರಡು  ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು~ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ತೋಂಟಾಪೂರ, ಸ್ಥಳೀಯರಾದ ಕಾಂತಪ್ಪ ಬಡಿಗೇರ, ಲಕ್ಷ್ಮಣ ಗೂಗದೊಡ್ಡಿ, ಶಿವಪ್ಪ ಬಿರಾದಾರ, ನಿಂಗಪ್ಪ ಬಿರಾದಾರ, ಮಾಳಪ್ಪ ಬಿರಾದಾರ ಮೊದಲಾದವರು ಮನವಿ ಮಾಡಿದರು.ರಾಮನಹಳ್ಳಿ: ಇನ್ನು ಸಮೀಪದ ರಾಮನಹಳ್ಳಿ ಗ್ರಾಮದಲ್ಲೂ ಸಿಹಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಎರಡು ಸಾವಿರ ಜನಸಂಖ್ಯೆ ಇದ್ದು, ಇಡೀ ಗ್ರಾಮಕ್ಕೇ ಇರಡು ಬೋರ್‌ವೆಲ್‌ಗಳಿವೆ. ಗ್ರಾಮದಲ್ಲಿ ನೀರು ವಿತರಣಾ ವ್ಯವಸ್ಥೆ ಇದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ನಲ್ಲಿ ನೀರು ಬರುತ್ತಿಲ್ಲ.ಸಿಹಿ ನೀರು ಪಡೆಯಲು ಇಲ್ಲಿಯ ಜನ ಗ್ರಾಮದಿಂದ ಒಂದು ಕಿ.ಮೀ. ದೂರದ ಶಾಲೆಯಲ್ಲಿರುವ ಬೋರ್‌ವೆಲ್‌ಗೆ ಹೋಗುತ್ತಾರೆ. ಅಲ್ಲಿಂದ ನೀರು ತರುತ್ತಿದ್ದಾರೆ. ಇದು ಗ್ರಾಮದ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು  ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಕೋಟಿ ಹೇಳುತ್ತಾರೆ.ಮಾಹಿತಿಗೆ ಸಂಪರ್ಕಿಸಿ

ವಿಜಾಪುರ ಜಿಲ್ಲೆಯಲ್ಲಿ ಈಗ ಭೀಕರ ಬರ. ಜೀವಜಲ ಬತ್ತಿ ಬರಿದಾಗುತ್ತಿದೆ. ಜನತೆ ಎದುರಿಸುತ್ತಿರುವ ಸಮಸ್ಯೆಯ ಮೇಲೆ `ಪ್ರಜಾವಾಣಿ~ಯ ಕ್ಷಕಿರಣ `ಬರದ ನಾಡಿನ ಬವಣೆ~ ಅಂಕಣ. ನಿಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಈ ಅಂಕಣ ಸೂಕ್ತ ವೇದಿಕೆ.ನಮ್ಮ ವಿಳಾಸ: ಜಿಲ್ಲಾ ವರದಿಗಾರರು, ಪ್ರಜಾವಾಣಿ, ಸಾಂಗ್ಲಿಕರ ಕಾಂಪ್ಲೆಕ್ಸ್, ಸಕಾಫ್ ರೋಜಾ, ಕೇಂದ್ರ ಬಸ್ ನಿಲ್ದಾಣದ ಹತ್ತಿರ. ವಿಜಾಪುರ. ದೂರವಾಣಿ ಸಂಖ್ಯೆ: 08352-221515, ಮೊಬೈಲ್: 9448470153 (ಗಣೇಶ ಚಂದನಶಿವ). 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.