ಬುಧವಾರ, ಏಪ್ರಿಲ್ 21, 2021
23 °C

ರಾರಾಜಿಸಲಿರುವ ತ್ರಿವರ್ಣ ಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಒಲಿಂಪಿಕ್ಸ್ ಕೂಟದ `ಕ್ರೀಡಾ ಗ್ರಾಮ~ ದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಭಾನುವಾರ ಆರೋಹಣ ಮಾಡಲಾಗುವುದು. ಭಾರತದ ಕೆಲವು ಕ್ರೀಡಾಳುಗಳು ಹಾಗೂ ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿರುವರು. ಧ್ವಹಾರೋಹಣ ಹಾಗೂ ಸ್ವಾಗತ ಕಾರ್ಯಕ್ರಮವನ್ನು ಒಂದೆರಡು ದಿನಗಳ ಮಟ್ಟಿಗೆ ಮುಂದೂಡುವಂತೆ ಭಾರತವು ಲಂಡನ್ ಒಲಿಂಪಿಕ್ಸ್‌ನ ಸಂಘಟಕರಲ್ಲಿ ಕೇಳಿಕೊಂಡಿತ್ತು. ಆದರೆ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸಂಘಟಕರು ನುಡಿದಿದ್ದರು. ಈ ಕಾರಣ ಮೊದಲೇ ನಿರ್ಧರಿಸಿದಂತೆ ಭಾನುವಾರ ಸಮಾರಂಭ ನಡೆಯಲಿದೆ.ಭಾರತದ ಎಲ್ಲ ಕ್ರೀಡಾಳುಗಳು ಇನ್ನೂ ಕ್ರೀಡಾಗ್ರಾಮ ತಲುಪಿಲ್ಲ. ಸಮಾರಂಭವನ್ನು ಸ್ವಲ್ಪ ತಡವಾಗಿ ನಡೆಸಿದರೆ, ಇನ್ನಷ್ಟು ಸ್ಪರ್ಧಿಗಳಿಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸುತ್ತಿತ್ತು. ಇದೇ ಉದ್ದೇಶದಿಂದ ಭಾರತ ತನ್ನ ಕೋರಿಕೆಯನ್ನು ಸಂಘಟಕರ ಮುಂದಿರಿಸಿತ್ತು.ಧ್ವಜಾರೋಹಣ ಸಮಾರಂಭ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದ್ದು, ಭಾರತ ತಂಡದ ಹೆಚ್ಚಿನ ಸದಸ್ಯರು ಪಾಲ್ಗೊಳ್ಳುವರು ಎಂದು ಉಪ ಚೆಫ್ ಡಿ ಮಿಷನ್ ಪಿ.ಕೆ. ಮುರಳೀಧರನ್ ರಾಜಾ ನುಡಿದಿದ್ದಾರೆ. ಸಮಾರಂಭಕ್ಕಾಗಿ ಮಾಡಿರುವ ವ್ಯವಸ್ಥೆಗಳನ್ನು ಅವರು ಶನಿವಾರ ಪರಿಶೀಲಿಸಿದರು.`ನಾವು ಕಾರ್ಯಕ್ರಮವನ್ನು ಮುಂದೂಡಲು ಬಯಸಿದ್ದೆವು. ಆದರೆ ಸಂಘಟಕರು ಅದಕ್ಕೆ ಅನುಮತಿ ನೀಡಲಿಲ್ಲ~ ಎಂದು ರಾಜಾ ನುಡಿದರು. `ಭಾರತದ ಹಾಗೆ ಇತರ ಕೆಲವು ರಾಷ್ಟ್ರಗಳು ಕೂಡಾ ಇದೇ ಕೋರಿಕೆಯನ್ನು ಮುಂದಿಟ್ಟಿದ್ದವು. ಅದಕ್ಕೆ ಒಪ್ಪಿಗೆ ನೀಡಿದರೆ ನಮ್ಮ ವೇಳಾಪಟ್ಟಿಯನ್ನು ಸಂಪೂರ್ಣವಾಗಿ ಬದಲಿಸಬೇಕಾಗುತ್ತದೆ~ ಎಂದು ಸಂಘಟಕರು ಹೇಳಿದ್ದಾರೆ.`ಭಾರತ ತಂಡದ 50 ಸದಸ್ಯರು ಈಗಾಗಲೇ ಕ್ರೀಡಾ ಗ್ರಾಮಕ್ಕೆ ಆಗಮಿಸಿದ್ದಾರೆ. ಇದರಲ್ಲಿ 35 ರಿಂದ 40 ಕ್ರೀಡಾಳುಗಳಿದ್ದಾರೆ~ ಎಂದು ರಾಜಾ ಹೇಳಿದರು. ಹಾಕಿ ತಂಡದ ಸದಸ್ಯರಲ್ಲದೆ, ಬಾಕ್ಸರ್‌ಗಳು ಮತ್ತು ಆರ್ಚರಿ ಸ್ಪರ್ಧಿಗಳಿಗೆ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಗೌರವ ಲಭಿಸಿದೆ. ಅದೇ ರೀತಿ ಕೆಲವು ಶೂಟರ್‌ಗಳೂ ಕ್ರೀಡಾ ಗ್ರಾಮದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.