ಶನಿವಾರ, ಜೂಲೈ 4, 2020
24 °C

ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ಸೋಮವಾರ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. 

ಜಿಎಸ್ಎಸ್ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಎರಡು ದಿನಗಳ ಶೋಕಾಚರಣೆ ಮತ್ತು ಮಂಗಳವಾರ ಸರ್ಕಾರಿ ಕಚೇರಿಗಳು ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಗೋವಿಂದ ಪೈ, ಕುವೆಂಪು ಅವರ ನಂತರ ನವೆಂಬರ್ 1, 2006ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ಮೂರನೆಯ ರಾಷ್ಟ್ರಕವಿ ಎಂದು ಘೋಷಿಸಲಾಗಿತ್ತು.ಜಿಎಸ್ಎಸ್ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕುವೆಂಪು ಅವರ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. 1965ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಬರೆದ ‘ಸೌಂದರ್ಯ ಸಮೀಕ್ಷೆ’ ಗ್ರಂಥಕ್ಕೆ ಪಿಎಚ್ ಡಿ ಪದವಿ ಪಡೆದಿದ್ದರು.

1946ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. 1963ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ 1966ರ ವರೆಗೆ ಅಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 1966ರಿಂದ 1987ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ತೆರೆದ ಬಾಗಿಲು, ಗೋಡೆ, ವ್ಯಕ್ತಮಧ್ಯಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ ಮತ್ತು ಚಕ್ರಗತಿ ಇವು ಜಿಎಸ್ಎಸ್ ಅವರ ಕವನ ಸಂಕಲನಗಳಾಗಿವೆ.

ಇನ್ನೂ ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ(ಇದು ಅವರ ಪಿಹೆಚ್‌ಡಿ ಪ್ರಬಂಧ), ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು : ಪುನರವಲೋಕನ ಮತ್ತು ಸಮಗ್ರ ಗದ್ಯ ಭಾಗ 1, 2 ಮತ್ತು 3ಇವು ವಿಮರ್ಶೆ ಮತ್ತು ಗದ್ಯ ಬರಹಗಳಾಗಿವೆ.

ಮಾಸ್ಕೋದಲ್ಲಿ 22 ದಿನ(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ), ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ ಇವು ಜಿಎಸ್ಎಸ್ ಅವರ ಪ್ರವಾಸಕಥನಗಳಾಗಿವೆ.

ಬದುಕಿನುದ್ದಕ್ಕೂ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗುತ್ತ ಬಂದ ಜಿಎಸ್‌ಎಸ್‌ ಅವರಿಗೆ 1984 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, 1973 ರಲ್ಲಿ ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ, 2006ರಲ್ಲಿ  ರಾಷ್ಟ್ರಕವಿ ಪುರಸ್ಕಾರ, 1982ರಲ್ಲಿ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಸಂದಿವೆ. ಜತೆಗೆ ಬೆಂಗಳೂರು ವಿ.ವಿ. ಮತ್ತು ಕುವೆಂಪು ವಿ.ವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಅಷ್ಟೇ ಅಲ್ಲದೇ, ದಾವಣಗೆರೆಯಲ್ಲಿ ನಡೆದ 61 ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಎಸ್ಎಸ್‌  ಆಯ್ಕೆಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.