ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯತಾವಾದಿ ನೇತಾಜಿ

ನೇತಾಜಿ ಸುಭಾಷ್ ಚಂದ್ರ ಬೋಸ್
Last Updated 23 ಜನವರಿ 2020, 5:52 IST
ಅಕ್ಷರ ಗಾತ್ರ

ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ಸುಭಾಷ್ ಚಂದ್ರ ಬೋಸ್ ಮನೆಗೆ ತಡವಾಗಿ ಬರುತ್ತಿದ್ದರು. 1928ರಲ್ಲಿ ಒಂದು ರಾತ್ರಿ ಹಾಗೆ ತಡವಾಗಿ ಬಂದಾಗ, ಸುಭಾಷರ ತಂದೆ ಜಾನಕಿ ನಾಥ್ ಬೋಸ್ ತನ್ನ ಕೋಣೆಯಿಂದ ಹೊರಬಂದು, ‘ಸುಭಾಷ್, ನೀನು ಭಾರತದ ಗ್ಯಾರಿಬಾಲ್ಡಿ ಆಗುತ್ತೀಯೇನೋ ಎಂದು ನನಗನ್ನಿಸುತ್ತಿದೆ’ ಎಂದರಂತೆ (ಗ್ಯುಸೆಪ್ ಗ್ಯಾರಿಬಾಲ್ಡಿ ಇಟಲಿಯ ಏಕೀಕರಣಕ್ಕೆ ಹೋರಾಡಿ, ಸೇನಾಶಕ್ತಿಯನ್ನು ಸಂಘಟಿಸಿದ ಜನರಲ್ ಹಾಗೂ ರಾಜಕಾರಣಿ). ತಂದೆ ನುಡಿದ ಆ ಭವಿಷ್ಯವಾಣಿ ಸುಭಾಷರ ವಿಷಯದಲ್ಲಿ ನಿಜವಾಯಿತು. ಭಾರತ ಮಾತ್ರ ಸುಭಾಷ್ ಅವರಿಗೆ ಸಲ್ಲಬೇಕಿದ್ದ ಮಾನ್ಯತೆ, ಗೌರವವನ್ನು ಸಲ್ಲಿಸಲಿಲ್ಲ.

ಸ್ವಾತಂತ್ರ್ಯಾ ನಂತರ ಪಶ್ಚಿಮ ಬಂಗಾಳದ ಹಂಗಾಮಿ ರಾಜ್ಯಪಾಲರೂ ಆಗಿದ್ದ ಕೋಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಬಿ.ಚಕ್ರಬರ್ತಿ, ಗ್ರೇಟ್ ಬ್ರಿಟನ್‌ನ ಪ್ರಧಾನಿ ಕ್ಲೆಮೆಂಟ್ ಅಟ್ಲಿ ಕೋಲ್ಕತ್ತಗೆ ಬಂದಾಗ ಹೀಗೆ ಕೇಳಿದ್ದರು: ‘ಮಿಸ್ಟರ್ ಅಟ್ಲಿ, ಎರಡನೇ ವಿಶ್ವಯುದ್ಧದಲ್ಲಿ ಗೆದ್ದ ನಂತರವೂ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಮುಖ್ಯ ಕಾರಣವೇನು?’ ಇದಕ್ಕೆ ಅಟ್ಲಿ ಕೊಟ್ಟ ಉತ್ತರ ಹೀಗಿತ್ತು: ‘ಭಾರತೀಯ ಭೂಸೇನೆ ಹಾಗೂ ನೌಕಾಪಡೆಯು ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ತಿಂದುಹಾಕುವಂಥ ಬದ್ಧತೆ ತೋರಿದವು. ಇದಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಟುವಟಿಕೆಗಳೇ ಕಾರಣ. ಇದೇ ಬ್ರಿಟಿಷರು ಭಾರತವನ್ನು ತೊರೆಯಲು ಮುಖ್ಯ ಪ್ರೇರಣೆಯಾಯಿತು’.

‘ಬ್ರಿಟಿಷರು ಭಾರತ ಬಿಟ್ಟು ತೊಲಗುವ ನಿರ್ಧಾರದಲ್ಲಿ ಗಾಂಧಿ ಅವರ ಪ್ರಭಾವ ಎಷ್ಟಿತ್ತು’ ಎಂದು ಚಕ್ರಬರ್ತಿ ಕೇಳಿದ ಇನ್ನೊಂದು ಪ್ರಶ್ನೆಗೆ, ‘ಎಂ-ಐ-ಎನ್-ಐ-ಎಂ-ಎ-ಎಲ್’ (ಮಿನಿಮಲ್) ಎಂದು ಮೆಲುದನಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದರು. ಗಾಂಧಿ ಪಾತ್ರ ಇದರಲ್ಲಿ ತುಂಬಾ ಕಡಿಮೆ ಎನ್ನುವುದನ್ನು ಅವರು ಈ ಬಿಡಿ ಅಕ್ಷರಗಳನ್ನು ಉಚ್ಚರಿಸುವ ಮೂಲಕ ಹೇಳಿದ್ದರು.

‘ದೇಶಭಕ್ತರ ದೇಶಭಕ್ತ’ ಎಂದು ಹೆಸರಾಗಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಗಾಂಧಿ ‘ದೇಶಭಕ್ತರ ದೊರೆ’ ಎಂದೇ ಹೊಗಳಿದ್ದರು. ಕಠಿಣಕರವಾದ ಐಸಿಎಸ್ ಪರೀಕ್ಷೆ ಬರೆಯಲು 1919ರಲ್ಲಿ ಸುಭಾಷ್ ಕೇಂಬ್ರಿಡ್ಜ್‌ಗೆ ಹೋದರು. ಕೇವಲ ಎಂಟೇ ತಿಂಗಳಲ್ಲಿ ತಯಾರಾಗಿ, ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದು ತೇರ್ಗಡೆಯಾದರು. ಬ್ರಿಟಿಷರ ಕೆಳಗೆ ಕೆಲಸ ಮಾಡಲು ಒಪ್ಪದ ಸುಭಾಷ್, ಫೈರ್ ಬ್ರಾಂಡ್ ಅರ್ಥಾತ್ ಕಲಹಪ್ರೇರಕ ದೇಶಭಕ್ತ ಆಗಿದ್ದರು.

ಲೋಕಮಾನ್ಯ ತಿಲಕರು ಆ ವರ್ಷ ಕೇಂಬ್ರಿಡ್ಜ್‌ಗೆ ಭೇಟಿ ನೀಡಿ, ಬ್ರಿಟಿಷರಿಗಾಗಿ ಕೆಲಸ ಮಾಡದೆ ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು. ತನ್ನ ಸಹೋದರ ಶರತ್ ಚಂದ್ರ ಬೋಸ್‌ಗೆ ಆಗ ಸುಭಾಷ್ ಹೀಗೊಂದು ಪತ್ರ ಬರೆದರು: ‘ನನಗೆ ಗುಲಾಮಗಿರಿಯ ಬದುಕು ಸಾಧ್ಯವಿಲ್ಲ. ಈ ಕೆಲಸವನ್ನು ನಾನು ಮಾಡುವುದಿಲ್ಲ’. 1920ರಲ್ಲಿ ಕೇಂಬ್ರಿಡ್ಜ್ ಪದವೀಧರನಾಗಿ ಬೋಸರು ಹೊರಬಂದರು. ಆಗ ಸ್ವಾತಂತ್ರ್ಯ ಚಳವಳಿಗೆ ಧುಮುಕುವಂತೆ ಐಸಿಎಸ್ ವಿದ್ಯಾರ್ಥಿಗಳನ್ನು ಅರಬಿಂದೊ ಹುರುದುಂಬಿಸಿದರು. ಅವರ ಜಾಡನ್ನು ಅನುಸರಿಸಿ 1921ರ ಏಪ್ರಿಲ್ 22ರಂದು ಸುಭಾಷ್ ರಾಜೀನಾಮೆ ನೀಡಿ, ಮನೆಗೆ ಬಂದರು.

ಇಂಗ್ಲೆಂಡ್‌ನಿಂದ ವಾಪಸ್ಸಾದ ನಂತರ ಸುಭಾಷರು ಮಹಾತ್ಮ ಗಾಂಧಿಯನ್ನು ಭೇಟಿ ಮಾಡಿದರು. ದೇಶಬಂಧು ಚಿತ್ತರಂಜನ್ ದಾಸ್ ಅವರನ್ನು ಭೇಟಿ ಮಾಡುವಂತೆ ಗಾಂಧಿ ಸೂಚಿಸಿದರು. ತೀವ್ರ ರಾಷ್ಟ್ರೀಯತಾವಾದದ ವಕ್ತಾರರಾಗಿದ್ದ ಸಿ.ಆರ್.ದಾಸ್, ಸುಭಾಷರ ಗುರುವಾದರು. ಕಷ್ಟದ ಹಾದಿಗಳನ್ನೇ ಒಳಗೊಂಡಿದ್ದ ಸ್ವಾತಂತ್ರ್ಯ ಚಳವಳಿಗೆ ಬೋಸ್ ಸಕ್ರಿಯವಾಗಿ ಧುಮುಕಿದರು. ಬಹಳ ಬೇಗ ಬ್ರಿಟಿಷರ ಪರಮ ವೈರಿಯಾಗಿ ಗುರುತಾದರು. 1921ರಿಂದ 1940ರ ಅವಧಿಯಲ್ಲಿ ಯಾವುದೇ ಕಾರಣಗಳಿಲ್ಲದೆ ಹನ್ನೊಂದು ಸಲ ಅವರು ಬಂಧಿತರಾಗಿ ಜೈಲು ಸೇರಬೇಕಾಯಿತು.

ಪ್ರಿನ್ಸ್ ಆಫ್ ವೇಲ್ಸ್ 1921ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಸಂಭ್ರಮಾಚರಣೆ ಮಾಡುವುದನ್ನು ತಡೆಗಟ್ಟುವ ಯೋಜನೆ ರೂಪಿಸಿದ್ದಕ್ಕಾಗಿ ಅದೇ ವರ್ಷ ಡಿಸೆಂಬರ್‌ನಲ್ಲಿ ಬೋಸ್ ಅವರನ್ನು ಬಂಧಿಸಲಾಗಿತ್ತು. 1924ರ ಅಕ್ಟೋಬರ್‌ನಲ್ಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಬೋಸ್ ಅವರನ್ನು ಭಯೋತ್ಪಾದಕ ಎಂದು ಶಂಕಿಸಿ ಬರ್ಮದ ಮಂಡಾಲೆ ಜೈಲಿಗೆ ಕಳುಹಿಸಲಾಗಿತ್ತು.

ಬೋಸ್ ಹಾಗೂ ತಿಲಕರನ್ನು ಮಂಡಾಲೆ ಜೈಲಿನಲ್ಲಿ ಇರಿಸಿ, ಲಾಠಿ ಚಾರ್ಜ್ ಮಾಡಿ ಚಿತ್ರಹಿಂಸೆ ಕೊಟ್ಟು ದೈಹಿಕವಾಗಿ ದಂಡಿಸಿದರು. ‘ಮಂಡಾಲೆ ಜೈಲು ಹಿಂಸೆಯ ಶಿಬಿರ. ಅಲ್ಲಿ ಜೈಲುವಾಸಿಗಳಿಗೆ ಹೊಡೆದು ಚಿತ್ರಹಿಂಸೆ ನೀಡುತ್ತಾರೆ. ಬ್ರಿಟಿಷರು ಬೋಸರನ್ನು ಕೀಳಾಗಿ ನೋಡಿದ್ದೇ ಅಲ್ಲದೆ ಕಾರಣಗಳೇ ಇಲ್ಲದೆ ಅವರನ್ನು ಬಂಧಿಸಿದರು’ ಎಂದು ‘ನೇತಾಜಿ ಸುಭಾಷ್ ಚಂದ್ರ ಬೋಸ್: ಕಾಂಟೆಂಪರರಿ ಅನೆಕ್‌ಡೋಟ್ಸ್, ರೆಮಿನಿಸೆನ್ಸಸ್ ಅಂಡ್ ವಾರ್‌ಟೈಮ್ ರ್ಯಾಪರ್ಟೇಜ್’ ಕೃತಿಯನ್ನು ಬರೆದ ಸಂಶೋಧಕ ಪ್ರೊ. ಪ್ರಿಯದರ್ಶಿ ಮುಖರ್ಜಿ ಹೇಳಿದ್ದಾರೆ.

ಮಂಡಾಲೆ ಜೈಲಿನಲ್ಲಿ ಬ್ರಿಟಿಷರು ಬೋಸರಿಗೆ ವಿಷ ಉಣಿಸಲು ಯತ್ನಿಸಿದ್ದರು. ಜೈಲಿನಿಂದ ಬಿಡುಗಡೆಯಾದಾಗ ಅವರು ಕ್ಷಯರೋಗದಿಂದ ಬಳಲುತ್ತಿದ್ದರು. ಕಾಯಿಲೆಯಿಂದ ಚೇತರಿಸಿಕೊಳ್ಳಲು ಅವರಿಗೆ ತುಂಬ ಸಮಯ ಬೇಕಾಯಿತು. 1927ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಬೋಸ್‌ ಆಯ್ಕೆಯಾದರು. ನಾಗರಿಕ ನಿಯಮೋಲ್ಲಂಘನೆಯ ನೆಪವೊಡ್ಡಿ ಅವರನ್ನು ಮತ್ತೆ ಜೈಲಿಗೆ ಹಾಕಲಾಯಿತು. ಈ ಘಟನೆಯನ್ನು ಆಗಿನ ಕೋಲ್ಕತ್ತ ಕಾರ್ಪೊರೇಷನ್‌ನ ಶಿಕ್ಷಣ ಅಧಿಕಾರಿಯಾಗಿದ್ದ ಚಟ್ಟೋಪಾಧ್ಯಾಯ ಒಮ್ಮೆ ಸ್ಮರಿಸಿಕೊಂಡದ್ದು ಹೀಗೆ: ‘ಚೌರಿಂಗಿಯನ್ನು ನಾವು ದಾಟುತ್ತಿದ್ದಾಗ, ಅಶ್ವಾರೋಹಿ ಪೊಲೀಸರ ತಂಡವೊಂದು ನಮ್ಮತ್ತ ನುಗ್ಗಿಬಂದು, ಎಲ್ಲರನ್ನೂ ಚದುರಿಸಿತು.

ನಮ್ಮ ಮೇಯರ್‌ (ಸುಭಾಷ್‌ 1931ರಲ್ಲಿ ಕೋಲ್ಕತ್ತ ಕಾರ್ಪೊರೇಷನ್‌ನ ಮೇಯರ್‌ ಆಗಿದ್ದರು) ಏಕಾಂಗಿ ಆಗುವಂತೆ ಮಾಡಿತು. ಎಲ್ಲರ ಮೇಲೂ ಪೊಲೀಸರು ದಾಳಿಯಿಟ್ಟರು. ಅದರಲ್ಲೂ ಮೇಯರ್‌ ಅವರ ಮುಖ್ಯ ಗುರಿಯಾಗಿದ್ದರು. ಲಾಠಿಗಳಿಂದ ಥಳಿಸಿದರು. ಆ ಹೊಡೆತದಿಂದ ತಪ್ಪಿಸಿಕೊಳ್ಳಲು ಬೋಸ್‌ ಬಲಗೈಯನ್ನು ಅಡ್ಡ ಹಿಡಿದ ದೃಶ್ಯ ಈಗಲೂ ನನಗೆ ನೆನಪಿದೆ. ನಿಮಗೆ ಸುಭಾಷ್‌ ಚಂದ್ರ ಬೋಸ್‌ ಅವರನ್ನು ಹೊಡೆಯುವ ಹಕ್ಕಿಲ್ಲ, ಅವರನ್ನು ಬಂಧಿಸಬಹುದಷ್ಟೆ ಎಂದು ಹೊಡೆಯುತ್ತಿದ್ದವರಲ್ಲಿ ಜೋರಾಗಿ ಕೂಗಿ ಕೇಳಿಕೊಂಡೆ.

ಬೋಸ್‌ ಅವರನ್ನು ಥಳಿಸಲು ಅವರು ಮೊದಲೇ ನಿರ್ಧರಿಸಿದ್ದರೆಂದು ತೋರುತ್ತದೆ. ಅದರಲ್ಲೂ ಅವರ ಶಿರಭಾಗವನ್ನೇ ಗುರಿಯಾಗಿಸಿಕೊಂಡು ಲಾಠಿ ಬೀಸುತ್ತಿದ್ದರು. ಅವರನ್ನು ಬಂಧಿಸಿ, ಒಂಟಿ ಸೆರೆಯಲ್ಲಿ ಮರುದಿನದವರೆಗೆ ಇರಿಸಿದ್ದರು. ಚಿಕಿತ್ಸೆ ಕೂಡ ಕೊಡಿಸಿರಲಿಲ್ಲ. ಇಂಥದ್ದೇ ಲಾಠಿಚಾರ್ಜ್‌ನಿಂದ ಗಂಭೀರವಾಗಿ ಗಾಯಗೊಂಡೇ ಲಾಲಾ ಲಜಪತ ರಾಯ್‌ ಅವರು ಮೃತಪಟ್ಟಿದ್ದು’. 1931ರಲ್ಲಿ ನಡೆದ ಈ ಘಟನೆಯನ್ನು ನೇತಾಜಿ 1943ರಲ್ಲಿ ಸಿಂಗಪುರದಿಂದ ರೇಡಿಯೊ ಮೂಲಕ ಮಾತನಾಡಿದಾಗ ನೆನಪಿಸಿಕೊಂಡರು.

ದೊಡ್ಡ ಸಂಖ್ಯೆಯ ಭಾರತೀಯರ ಮೇಲೆ ಬೋಸ್‌ ರಾಜಕೀಯ ಪ್ರಭಾವ ಬೀರಿದ್ದನ್ನು ಸಹಿಸದೆ ಅವರನ್ನು ಗಡೀಪಾರು ಮಾಡಿದರು. ಯುರೋಪ್‌ ತಲುಪಿದ ಅವರು ಅಲ್ಲಿಯೇ ಭಾರತದ ಸ್ವಾತಂತ್ರ್ಯ ದಕ್ಕಿಸಿಕೊಡುವ ಅವಕಾಶಗಳಿಗಾಗಿ ಹುಡುಕಾಡಿದರು. ಸಭೆಗಳಲ್ಲಿ ಭಾಗವಹಿಸಿದರು. ಬೆನಿಟೊ ಮುಸೊಲೋನಿ ಅವರನ್ನು ಕೂಡ ಭೇಟಿ ಮಾಡಿದರು. ‘ದಿ ಇಂಡಿಯನ್‌ ಸ್ಟ್ರಗಲ್‌’ ಎಂಬ ಕೃತಿಯ ಮೊದಲ ಭಾಗವನ್ನು ಅವರು ಬರೆದರಾದರೂ, ಸ್ವಾತಂತ್ರ್ಯ ಚಳವಳಿಯ ಕುರಿತ ಆ ಪುಸ್ತಕ ಪ್ರಕಟಗೊಂಡಲ್ಲಿ ಜನರನ್ನು ಉದ್ದೀಪಿಸಿ ಕ್ಷೋಭೆ ಉಂಟಾದೀತು ಎಂದು ಎಣಿಸಿ ಬ್ರಿಟಿಷರು ಆ ಬರವಣಿಗೆಯನ್ನೇ ನಿಷೇಧಿಸಿದರು.

1934ರಲ್ಲಿ ತನ್ನ ತಂದೆ ಮೃತಪಟ್ಟಾಗ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ನೇತಾಜಿ ಅವರನ್ನು ಇಳಿಸಿ, ಅಂತಿಮ ಸಂಸ್ಕಾರ ಮಾಡಲು ಅಲ್ಪ ಸಮಯವನ್ನಷ್ಟೇ ಬ್ರಿಟಿಷರು ನೀಡಿದರು. ಬೇಗ ಅವರು ಮರಳಬೇಕು ಎಂದು ತಾಕೀತು ಮಾಡಿಯೇ ಅಂತಿಮ ಸಂಸ್ಕಾರಕ್ಕೆ ಅವರನ್ನು ಕಳುಹಿಸಿಕೊಟ್ಟಿದ್ದು. 1936ರಲ್ಲಿ ಬೋಸ್‌ ಯುರೋಪ್‌ನಿಂದ ಮರಳಿದರು. 1938ರ ಹೊತ್ತಿಗೆ ರಾಷ್ಟ್ರ ಮಟ್ಟದ ನಾಯಕರಾಗಿ ಅವರು ಬೆಳೆದು, ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಅವರ ಹಾಗೂ ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾದವು.

ಶತ್ರುಗಳ ಜೊತೆ ಸಂಧಾನ ಮಾಡಿಕೊಳ್ಳಲಿಕ್ಕೆ ಬೋಸರ ವಿರೋಧವಿತ್ತು. ಅದರ ನಂತರದ ವರ್ಷ ಗಾಂಧಿ ವಿರೋಧದ ನಡುವೆಯೂ ಬೋಸರು ಕಾಂಗ್ರೆಸ್‌ ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಇದನ್ನು ವೈಯಕ್ತಿಕ ಸೋಲು ಎಂದು ಭಾವಿಸಿದ ಗಾಂಧಿ ಕಾಂಗ್ರೆಸ್‌ನ ಅಧಿವೇಶನಕ್ಕೇ ಗೈರುಹಾಜರಾದರು. ನಂತರ ಬೋಸರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಯಿತು. ಬ್ರಿಟಿಷರು ಬೋಸರನ್ನು ಕ್ರಾಂತಿಕಾರಿ ಎಂದು ಕಪ್ಪುಪಟ್ಟಿಗೆ ಸೇರಿಸಿದರು. ಮತ್ತೆ 1940ರಲ್ಲಿ ಜೈಲಿಗೆ ಹಾಕಿದರು. ಇದನ್ನು ಪ್ರತಿಭಟಿಸಿ ಹತ್ತು ದಿನ ಉಪವಾಸ ಸತ್ಯಾಗ್ರಹ ಮಾಡಿದ ಬೋಸರ ದೇಹಸ್ಥಿತಿ ಹದಗೆಟ್ಟಿತು.

ಮೃತಪಟ್ಟರೆ ಅವರು ಹುತಾತ್ಮ ಆಗುತ್ತಾರೆಂಬ ಆತಂಕದಿಂದ ಬ್ರಿಟಿಷರು ಅವರನ್ನು ಗೃಹಬಂಧನದಲ್ಲಿ ಇರಿಸಿದರು. 1941ರಲ್ಲಿ ಭಾರತದಿಂದ ನಾಟಕೀಯ ರೀತಿಯಲ್ಲಿ ಬೋಸ್‌ ಪಾರಾದರು (ನೇತಾಜಿ ಅವರ ರಾಜಕೀಯ ಪಯಣವನ್ನು ಇದೇ ಅಂಕಣದ ಮುಂದಿನ ಭಾಗಗಳಲ್ಲಿ ವಿವರವಾಗಿ ಬರೆಯುತ್ತೇನೆ). ಹೇಗಾದರೂ ಮಾಡಿ ಬೋಸ್‌ ಅವರನ್ನು ಮುಗಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. 1941ರಲ್ಲಿ ಇಸ್ತಾನ್‌ಬುಲ್‌ ಹಾಗೂ ಕೈರೊದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದವರಿಗೆ ಲಂಡನ್‌ನಿಂದ ಆದೇಶವೊಂದು ಬಂದಿತ್ತು

ಅದರ ಸಾರಾಂಶ ಹೀಗಿದೆ: ‘ಮಹತ್ವದ ಮಾಹಿತಿಯೊಂದಿಗೆ ಸುಭಾಷ್‌ ಚಂದ್ರ ಬೋಸ್‌ ಇರಾನ್‌, ಇರಾಕ್‌ ಹಾಗೂ ಟರ್ಕಿಯ ಮೂಲಕ ಆಫ್ಘಾನಿಸ್ತಾನದಿಂದ ಜರ್ಮನಿಗೆ ಪ್ರಯಾಣಿಸುತ್ತಿದ್ದಾರೆ. ಅವರನ್ನು ಮುಗಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಾಲ್ಬಿ ಹಾಗೂ ಆಪ್ಲಾಕ್‌ ಇಬ್ಬರಿಗೂ ಸೂಚಿಸಲಾಗಿದೆ’ (ಡಾಲ್ಬಿ ಹಾಗೂ ಅಪ್ಲಾಕ್‌ ಆಗ ಬ್ರಿಟಿಷ್‌ ಕಾರ್ಯತಂತ್ರದ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿದ್ದರು). ಬಿಬಿಸಿಯ ಜಾಹೀರುಗೊಂಡ ದಾಖಲೆಗಳ ಪ್ರಕಾರ ಬ್ರಿಟಿಷರು ಬೋಸ್‌ ವಿಷಯದಲ್ಲಿ ‘ಅವನನ್ನು ಆದಷ್ಟು ಬೇಗ ಮುಗಿಸಿ’ (ಶೂಟ್‌ ಹಿಮ್‌ ಅಂಡ್‌ ಶೂಟ್‌ ಹಿಮ್‌ ಡ್ಯಾಮ್‌ ಕ್ವಿಕ್) ಎಂಬ ನಿಲುವು ತಳೆದಿದ್ದರು.

ಗುಪ್ತಚರರು ಬೆನ್ನುಹತ್ತಿರುವ ಸಂಗತಿ ಗೊತ್ತಾದ ಮೇಲೆ ಬೋಸ್‌ ಮಾಸ್ಕೋದಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋದರು. ಅಲ್ಲಿ ಹಿಟ್ಲರ್‌ ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ, ಇಂಡಿಯನ್‌ ನ್ಯಾಷನಲ್‌ ಆರ್ಮಿ ಸ್ಥಾಪಿಸುವ ನಿರ್ಧಾರಕ್ಕೆ ಬಂದರು. ಸುಭಾಷ್‌ ಚಂದ್ರ ಬೋಸ್‌ ಹಿಟ್ಲರ್‌ನನ್ನು ಭೇಟಿ ಮಾಡಿದ ಸಂಗತಿ 1942ರಲ್ಲಿ ಬ್ರಿಟಿಷ್‌ ಏಜೆಂಟರಿಗೆ ಗೊತ್ತಾಯಿತು. ವಿಮಾನ ಅಪಘಾತದಲ್ಲಿ ಬೋಸ್‌ ಮೃತಪಟ್ಟಿದ್ದಾರೆ ಎಂದು ಏಜೆಂಟರು ಪ್ರಕಟಿಸಿದರು.

ಅದರ ಮರುದಿನ, 1942ರ ಮಾರ್ಚ್‌ 25ರಂದು ಬರ್ಲಿನ್‌ ರೇಡಿಯೊದಲ್ಲಿ ಸುಭಾಷ್‌ ಘೋಷಿಸಿದ್ದು ಹೀಗೆ: ‘ನಾನು ಸುಭಾಷ್‌ ಚಂದ್ರ ಬೋಸ್‌. ನಾನಿನ್ನೂ ಬದುಕಿದ್ದು, ಆಜಾದ್‌ ಹಿಂದ್‌ ರೇಡಿಯೊ ಮೂಲಕ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಟೋಕಿಯೊ ತಲುಪುವ ಹಾದಿಯಲ್ಲಿ ವಿಮಾನ ಅಪಘಾತದಲ್ಲಿ ನಾನು ಮೃತಪಟ್ಟಿದ್ದೇನೆ ಎಂದು ಬ್ರಿಟಿಷ್‌ ಸುದ್ದಿಸಂಸ್ಥೆಗಳು ವಿಶ್ವದಾದ್ಯಂತ ಸುದ್ದಿ ಹಬ್ಬಿಸಿವೆ. ಇಂಗ್ಲೆಂಡ್‌ನ ಸುದ್ದಿಪತ್ರಿಕೆಗಳು ನನ್ನ ವಿಷಯದಲ್ಲಿ ನಿಂದಾತ್ಮಕ ಭಾಷೆ ಬಳಸಲು ಕೂಡ ಹಿಂದೆಮುಂದೆ ನೋಡಿಲ್ಲ. ಬ್ರಿಟಿಷ್‌ ಸರ್ಕಾರಕ್ಕೆ ನನ್ನ ಸಾವು ಬೇಕಾಗಿದೆ’. ತನ್ನ ಮಗನ ಈ ಧ್ವನಿ ಕೇಳಿ ಸುಭಾಷ್‌ ತಾಯಿಯ ಕಣ್ಣಾಲಿಗಳಿಂದ ನೀರು ಹೊಮ್ಮಿತು. ಮಗ ಬದುಕಿರುವುದನ್ನು ಕೇಳಿ ಸಮಾಧಾನಗೊಂಡಿದ್ದ ಅವರು 1943ರಲ್ಲಿ ನಿಧನರಾದರು.

ಸುಭಾಷ್ ಮೃತಪಟ್ಟಿದ್ದಾರೆ ಎಂದು ಮೂರು ಬಾರಿ ಘೋಷಿಸಲಾಗಿತ್ತು. 1943ರಲ್ಲಿ ಬರಗಾಲದಲ್ಲಿ ಪರಿಹಾರ ಕಾಮಗಾರಿಗೆಂದು ಬೋಸರು ಚುರುಕಾಗಿ ಓಡಾಡಿದಾಗ ಅದನ್ನು ಜಪಾನೀಯರು ಸಹಿಸಲಿಲ್ಲ. ಅವರು ಸೇನಾಯೋಧನಾಗಿ ಅಷ್ಟೇ ಇರಬೇಕೆಂದು ಬಯಸಿದರು. ಆಗ ಅವರೂ ಸುಭಾಷ್‌ ಮೃತಪಟ್ಟಿದ್ದಾರೆಂದು ವದಂತಿ ಹಬ್ಬಿಸಿದರು. ತೈಹೋಕು ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದನ್ನು ಆಮೇಲೆ ಅನೇಕರು ಅಲ್ಲಗಳೆದ ಸಂಗತಿ ಗೊತ್ತೇ ಇದೆ. ಆದರೆ, ಮೂರನೇ ಬಾರಿ ಈ ಸುದ್ದಿ ಪ್ರಕಟಗೊಂಡ ನಂತರ ಅವರು ನಿಗೂಢ ರೀತಿಯಲ್ಲಿ ನಾಪತ್ತೆಯಾದರು.

ಜರ್ಮನಿ ತಲುಪಿದ ಆರು ದಿನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವಂತೆ ಜರ್ಮನಿ ಹಾಗೂ ಇಟಲಿ ದೇಶಗಳನ್ನು ಸುಭಾಷ್‌ ವಿನಂತಿಸಿಕೊಂಡರು. ಆ ದೇಶಗಳ ಆಡಳಿತದ ಚುಕ್ಕಾಣಿ ಹಿಡಿದವರನ್ನು ನೇರವಾಗಿ ಭೇಟಿ ಮಾಡಿ, ನೆರವು ಕೇಳಲಿಲ್ಲ. ರೇಡಿಯೊ ಮೂಲಕ ತಮ್ಮ ಹರಿತವಾದ ಮಾತಿನಿಂದಲೇ ವಿನಂತಿಸಿಕೊಂಡರು. ಬೋಸರಿಗೆ ‘ನೇತಾಜಿ’ ಎಂದು ಅವರ ಅನುಯಾಯಿಗಳು ಹೆಸರು ಕೊಟ್ಟಿದ್ದು ಜರ್ಮನಿಯಲ್ಲಿ. ಮೊದಲ ಬಾರಿಗೆ ಭಾರತದ ರಾಷ್ಟ್ರಗೀತೆ ವಿದೇಶಿ ನೆಲದಲ್ಲಿ ಕೇಳುವಂತೆ ಮಾಡಿದ್ದೇ ಬೋಸ್‌, ಅದೂ ಜರ್ಮನಿಯಲ್ಲಿಯೇ. ಬೆಂಬಲ ಯಾಚಿಸಿ ನಡೆಸಿದ ಸಮಾವೇಶದಲ್ಲಿ ಆಗ ರಾಷ್ಟ್ರಗೀತೆ ಹೊಮ್ಮಿದ್ದು. ಧಮನಿ ಧಮನಿಗಳಲ್ಲಿ ಕ್ಷಾತ್ರ ತುಂಬುವಷ್ಟು ಪ್ರಬಲವಾದ ‘ಜೈ ಹಿಂದ್‌’ ಎಂಬ ಘೋಷವಾಕ್ಯ ನೀಡಿದ್ದು ಕೂಡ ನೇತಾಜಿ.

1942ರಲ್ಲಿ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ ಚಳವಳಿ’ಯಲ್ಲಿ ಬಳಸಿದ ‘ಮಾಡು ಇಲ್ಲವೇ ಮಡಿ’ ನುಡಿಗಟ್ಟನ್ನು ಕೊಟ್ಟವರೂ ನೇತಾಜಿ. ಈ ನುಡಿಗಟ್ಟನ್ನ ಅವರು ಜಲ್‌ಪೈಗುರಿಯಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದ ಸಂದರ್ಭದಲ್ಲಿ ಮೊದಲು ಬಳಸಿದ್ದರು. 1944ರಲ್ಲಿ ಆಜಾದ್‌ ಹಿಂದ್‌ ರೇಡಿಯೊ ಮೂಲಕ ಸಿಂಗಪುರದಿಂದ ಮಾತನಾಡಿದಾಗ ಮಹಾತ್ಮ ಗಾಂಧಿ ಅವರನ್ನು ‘ರಾಷ್ಟ್ರಪಿತ’ ಎಂದು ನೇತಾಜಿ ಮೊದಲ ಬಾರಿಗೆ ಕರೆದರು.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ನವೆಂಬರ್ 8, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT