ಶುಕ್ರವಾರ, ಜೂನ್ 5, 2020
27 °C

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಸ್ಥಗಿತದ ನಂತರ ಮುಂದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸರ್ವರಿಗೂ ಆರೋಗ್ಯ ಸೇವೆ ನೀಡುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಂ) ಯೋಜನೆ ಸ್ಥಗಿತಗೊಂಡ ನಂತರ ಮುಂದೇನು? ಅದನ್ನು ಮುನ್ನಡೆಸಿಕೊಂಡು ಹೋಗಲು ಯಾವ ಸಿದ್ಧತೆ ಮಾಡಲಾಗಿದೆ? ಈ ರೀತಿಯ ಪ್ರಶ್ನೆ ಕೇಳಿದ್ದು, ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್.

ಎನ್‌ಆರ್‌ಎಚ್‌ಎಂನ ರಾಜ್ಯ ಘಟಕದ ಸಭೆಯಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರದ ಈ ಯೋಜನೆ 2012ಕ್ಕೆ ಸ್ಥಗಿತಗೊಳ್ಳುತ್ತದೆ. ಆ ನಂತರ ಈ ಯೋಜನೆಯಡಿ ಜಾರಿ ಮಾಡಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲು ಏನೆಲ್ಲ ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಯೋಜನೆಯನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲೂ ಮುಂದುವರೆಸಬೇಕೆಂದು ಅನೇಕ ರಾಜ್ಯಗಳು ಬೇಡಿಕೆ ಇಟ್ಟಿವೆ. ಆದರೆ, ಆ ಬಗ್ಗೆ ಯಾವುದೂ ಅಂತಿಮವಾಗಿಲ್ಲ. ಹೀಗಾಗಿ ರಾಜ್ಯದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ ಒದಗಿಸುವ ಕೆಲಸ ಈಗಿನಿಂದಲೇ ಆರಂಭವಾಗಬೇಕು. ಇಲ್ಲದಿದ್ದರೆ, ಮಿಷನ್‌ನ ಉದ್ದೇಶ ಈಡೇರುವುದಿಲ್ಲ ಎಂದರು.

ರಾಜ್ಯದಲ್ಲಿನ ಎನ್‌ಆರ್‌ಎಚ್‌ಎಂ ಕಾರ್ಯವೈಖರಿ ಮತ್ತು ಪ್ರಗತಿ ಬಗ್ಗೆ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದರು. ಹೆರಿಗೆ  ಸಂದರ್ಭದಲ್ಲಿ ತಾಯಂದಿರ ಸಾವಿನ ಪ್ರಮಾಣ 228ರಿಂದ 213ಕ್ಕೆ ಇಳಿದಿದೆ (1 ಲಕ್ಷ ಮಹಿಳೆಯರಲ್ಲಿ). ಇದು ಇನ್ನೂ ಕಡಿಮೆ ಆಗಬೇಕು. ಹಾಗೆಯೇ ಶಿಶು ಮರಣ ಪ್ರಮಾಣ ಕೂಡ ಸಾವಿರ ಮಕ್ಕಳಲ್ಲಿ 47ರಿಂದ 45ಕ್ಕೆ ಇಳಿದಿದೆ ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ಹೆರಿಗೆ ಆಗುವುದು ಕೂಡ ರಾಜ್ಯದಲ್ಲಿ ಶೇ 65ರಿಂದ 86.4ಕ್ಕೆ ಹೆಚ್ಚಾಗಿದೆ. ಆದರೆ, ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಇದು ಶೇ 99ರಷ್ಟು ಇದ್ದು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತನಾಡಿ, ‘2005ರಲ್ಲಿ ಆರಂಭವಾದ ಈ ಯೋಜನೆ 2009-10ರಲ್ಲಿ ಶೇ 83ರಷ್ಟು ಪ್ರಗತಿ ಕಂಡಿದೆ. 2010-11ನೇ ಸಾಲಿನಲ್ಲಿ ಮಂಜೂರಾಗಿದ್ದ ರೂ 674 ಕೋಟಿಯಲ್ಲಿ ಇದುವರೆಗೂ ರೂ 359.2 ಕೋಟಿ ಖರ್ಚಾಗಿದೆ ಎಂದು ಹೇಳಿದರು.

ಕೇಂದ್ರದ ನೆರವಿನ ಜತೆಗೆ ರಾಜ್ಯ ಸರ್ಕಾರವೂ ತನ್ನ ಬಜೆಟ್‌ನಲ್ಲಿ ಹೆಚ್ಚಿನ ಹಣಕಾಸಿನ ನೆರವು ನೀಡಬೇಕೆಂದು ಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ.ರಮಣರೆಡ್ಡಿ, ಎನ್‌ಆರ್‌ಎಚ್‌ಎಂ ನಿರ್ದೇಶಕ ಸೆಲ್ವಕುಮಾರ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.