ಮಂಗಳವಾರ, ಜನವರಿ 28, 2020
29 °C

ರಾಷ್ಟ್ರೀಯ ಯುವಜನೋತ್ಸವ: ರಾಜ್ಯಕ್ಕೆ 8 ಬಹುಮಾನ

ಮಂಜುನಾಥ ಹೆಬ್ಬಾರ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಡಲತಡಿಯ ನಾಡಿನಲ್ಲಿ ಐದು ದಿನಗಳ ಕಾಲ ನಡೆದ 17ನೇ ರಾಷ್ಟ್ರೀಯ ಯುವಜನೋತ್ಸವ ವಿವಿಧ ಸ್ಪರ್ಧೆಗಳ ಪೈಕಿ ಆತಿಥೇಯ ತಂಡ ಎಂಟು ವಿಭಾಗಗಳಲ್ಲಿ ಬಹುಮಾನ ಗಳಿಸಿದೆ. ಈ ಪೈಕಿ ನಾಲ್ಕರಲ್ಲಿ ಪ್ರಥಮ ಬಹುಮಾನವೂ ಸೇರಿದೆ.ಜನಪದ ಹಾಡುಗಾರಿಕೆ, ಸಿತಾರ್ ವಾದನ, ಕೂಚುಪುಡಿ ನೃತ್ಯ ಹಾಗೂ ಹಿಂದೂಸ್ತಾನಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ, ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ದ್ವಿತೀಯ, ಹಾರ್ಮೊನಿಯಂ ಮತ್ತು  ತಬಲಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸುವ ಮೂಲಕ ರಾಜ್ಯದ ಯುವ ಪ್ರತಿಭೆಗಳು ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದ್ದಾರೆ.ಬಹುಮಾನ ಸ್ವೀಕರಿಸಲು ವೇದಿಕೆಗೆ ತೆರಳುವ ಸಂಭ್ರಮದ ನಡುವೆಯೂ ಬಹುಮಾನ ವಿಜೇತರು `ಪ್ರಜಾವಾಣಿ~ ಜತೆ ಸೋಮವಾರ ಸಂಭ್ರಮ ಹಂಚಿಕೊಂಡರು. ರಾಜ್ಯಕ್ಕೆ ಕೀರ್ತಿ ತಂದ ಧನ್ಯತಾ ಭಾವ ಅವರ ಮೊಗದಲ್ಲಿ ಮನೆ ಮಾಡಿತ್ತು.ಜನಪದ ಹಾಡು: ಬೆಂಗಳೂರಿನ ಮಾತೃಭೂಮಿ ಯುವಕ ತಂಡದ ಸದಸ್ಯರ ಹಾಡಿಗೆ ಪ್ರಥಮ ಸ್ಥಾನದ ಸಂಭ್ರಮ. ತಂಡದ ನಂಜಪ್ಪ, ಭೀಮಪ್ಪ, ಗಂಗಣ್ಣ, ಜೆ.ಲಕ್ಷ್ಮಿಕಾಂತ್, ಟಿ.ಎಸ್.ಲಕ್ಷ್ಮಣ, ಕಿರಣ್, ಸುಬ್ರಹ್ಮಣ್ಯ, ಪ್ರದೀಪ್, ರಾಮಚಂದ್ರ, ಕೆ.ರವಿಚಂದ್ರ ತಂಡದಲ್ಲಿದ್ದರು. ತಂಡದ ಸದಸ್ಯರಿಗೆ 400 ಜನಪದ ಹಾಡುಗಳು ಬಾಯಿಪಾಠ. ಇವರಲ್ಲಿ ಬಹುತೇಕರು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು.`ಎರಡು ತಿಂಗಳಿನಿಂದ ಪೂರ್ವ ತಯಾರಿ ನಡೆಸಿದ್ದೆವು. ಜನಪದ ವಿದ್ವಾಂಸರ ಸಹಕಾರ, ತಂಡದ ಸದಸ್ಯರ ಪರಿಶ್ರಮದಿಂದ ಪ್ರಥಮ ಸ್ಥಾನ ಬಂದಿದೆ~ ಎಂದು ತಂಡದ ಸದಸ್ಯರು ಸಂತಸ ವ್ಯಕ್ತಪಡಿಸಿದರು.ಭರತನಾಟ್ಯ: ಈ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದವರು ಬೆಂಗಳೂರಿನ ಅನಿಲ್ ವಿ.ಅಯ್ಯರ್. ಮೊದಲ ಬಾರಿ ಯುವಜನೋತ್ಸವದಲ್ಲಿ ಭಾಗವಹಿಸುತ್ತಿರುವ ಜಯನಗರದ ನ್ಯಾಷನಲ್ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ ಅನಿಲ್‌ಗೆ ಮೊದಲ ಪ್ರಯತ್ನದಲ್ಲೇ ಬಹುಮಾನ ಬಂದಿರುವುದು ಅತೀವ ಖುಷಿ ಕೊಟ್ಟಿದೆ.ಕೂಚುಪುಡಿ: ಒಂದನೇ ತರಗತಿ ಓದುವ ಪುಟ್ಟ ಬಾಲಕನ `ಅಮ್ಮ~ನೂ ಆಗಿರುವ ಬೆಂಗಳೂರಿನ ಅರ್ಚನಾ ಪುಣ್ಯೇಶ್, ಕೂಚುಪುಡಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿದ್ದಾರೆ. ಮೂರನೇ ಬಾರಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅವರಿಗೆ ಕಳೆದ ಸಲ ದ್ವಿತೀಯ ಸ್ಥಾನ ದೊರಕಿತ್ತು. `ಉದಯಪುರದಲ್ಲಿ ದ್ವಿತೀಯ ಸ್ಥಾನ ಪಡೆದಾಗಲೇ ಮುಂದಿನ ಬಾರಿ ಪ್ರಥಮ ಸ್ಥಾನ ಪಡೆದೇ ತೀರುತ್ತೇನೆ ಎಂಬ  ತೀರ್ಮಾನಕ್ಕೆ ಬಂದಿದ್ದೆ. ಈಗ ಸಂತಸ ಹೇಳತೀರದು~ ಎಂದು ಅರ್ಧನಾರೀಶ್ವರ ವೇಷದಲ್ಲೇ ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ಅರ್ಚನಾ ಬಹುಮಾನದ ಗುಟ್ಟು ಬಿಟ್ಟುಕೊಟ್ಟರು.ಸಿತಾರ್: ಸಂಗೀತ ಕುಟುಂಬದಿಂದ ಬಂದ ಧಾರವಾಡದ ಮಹಸೀನ್ ಖಾನ್ ಅವರಿಗೆ ಸಿತಾರ್ ಸ್ಪರ್ಧೆಯಲ್ಲಿ ಅಗ್ರಪಟ್ಟ. ಕಳೆದ ವರ್ಷ ಉದಯಪುರದಲ್ಲೂ ಅವರು ಪ್ರಥಮ ಸ್ಥಾನ ಗಳಿಸಿದ್ದರು. ಅವರಿಗೆ ತಂದೆಯೇ ಗುರು. ಅವರು ಪ್ರೀತಿಯ ಅಜ್ಜನಿಗೆ ಬಹುಮಾನ ಅರ್ಪಿಸಿದರು.ಕರ್ನಾಟಕ ಶಾಸ್ತ್ರೀಯ ಸಂಗೀತ: ಈ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಉಷಾ ಕರಾವಳಿಯ ಉದಯೋನ್ಮುಖ ಪ್ರತಿಭೆ. ಉಡುಪಿ ಜಿಲ್ಲೆಯ ಪರ್ಕಳ ಗಣಪತಿ ಜೋಯಿಸ್-ಶ್ಯಾಮಲಾ ದಂಪತಿ ಪುತ್ರಿ. ಉಡುಪಿ ಪಿಪಿಸಿ ಕಾಲೇಜಿನ ವಿದ್ಯಾರ್ಥಿನಿ. ಆರಂಭದಲ್ಲಿ ಉಮಾ ಉದಯಶಂಕರ್ ಅವರಲ್ಲಿ ಸಂಗೀತಾಭ್ಯಾಸ ನಡೆಸಿದ್ದ ಈಕೆ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅವರ ಬಳಿ ಸಂಗೀತ ಕಲಿಕೆ ಮುಂದುವರಿಸಿದ್ದಾರೆ.ದ್ವಿತೀಯ ಸ್ಥಾನಕ್ಕೆ ಬೇಸರ: `ಪ್ರಥಮ ಸ್ಥಾನ ನಿರೀಕ್ಷೆ ಮಾಡಿದ್ದೆ. ದ್ವಿತೀಯ ಸ್ಥಾನ ಸಿಕ್ಕಿರುವುದು ಬೇಸರ ಮೂಡಿದೆ. ಮುಂದಿನ ವರ್ಷಗಳಲ್ಲಿ ಯುವಜನೋತ್ಸವದಲ್ಲಿ ಭಾಗವಹಿಸುವುದಿಲ್ಲ~ ಎಂದು ಬೇಸರದಿಂದ ಹೇಳಿದರು.ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ಈ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬಾಲೆ ಧಾರವಾಡದ ಶಿವಾನಿ ಮಿರಜ್‌ಕರ್. ಈಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 93 ಅಂಕ ಪಡೆದಾಕೆ. ವಿಜ್ಞಾನ ವಿಭಾಗಕ್ಕೆ ಸೇರಿದರೆ ಸಂಗೀತ ಕ್ಷೇತ್ರದಲ್ಲಿ ಸಾಧಕಿ ಆಗುವುದು ಕಷ್ಟ ಎಂದು ಕಲಾ ವಿಭಾಗಕ್ಕೆ ಸೇರಿದವಳು ಈಕೆ. ಈ ವಿಭಾಗದಲ್ಲಿ ಭಾಗವಹಿಸಿದ ಸ್ಪರ್ಧಿಗಳಲ್ಲಿ ಕಿರಿಯವಳು. ಧಾರವಾಡದ ಕರ್ನಾಟಕ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ. ರಾಜೇಂದ್ರ ಕುಮಾರ್-ಸಾಧನಾ ಮಿರಜ್‌ಕರ್ ದಂಪತಿಯ ಪುತ್ರಿ.ತಬಲಾ: ಬೆಂಗಳೂರಿನ ವಿಜಯ ಮೇನ್ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ ಕಾರ್ತಿಕ್ ಡಿ.ಭಟ್ ಅವರಿಗೆ ತಬ್ಲಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ದೊರಕಿದೆ. `ಮುಂದಿನ ವರ್ಷವೂ ಯುವಜನೋತ್ಸವದಲ್ಲಿ ಭಾಗವಹಿಸುವ ಇಚ್ಛೆ ಇದೆ. ಬಹುಮಾನಕ್ಕಿಂತ ಬೇರೆ ರಾಜ್ಯಗಳ ಸಂಸ್ಕೃತಿ ತಿಳಿಯಬಹುದು. ಬಹುಮಾನವೇ ಮುಖ್ಯವಲ್ಲ~ ಎಂದು ಅವರು ತಿಳಿಸಿದರು. ಹಾರ್ಮೋನಿಯಂ:  ಈ ವಿಭಾಗದಲ್ಲಿ ರಾಜ್ಯದ ಅಂಧ ಕಲಾವಿದ ಸುಕ್ರುಸಾಬ್ ಮುಲ್ಲಾ ತೃತೀಯ ಸ್ಥಾನ ಗಳಿಸಿದ್ದಾರೆ. `ತಂಡದ ಸದಸ್ಯರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ~ ಎಂದು 14 ವರ್ಷಗಳಿಂದ ಯುವಜನೋತ್ಸವದಲ್ಲಿ ಭಾಗವಹಿಸುತ್ತಿರುವ ರಾಜ್ಯದ ತಂಡದ ಬಾಲಾಜಿ `ಪ್ರಜಾವಾಣಿ~ಗೆ ಸೋಮವಾರ ತಿಳಿಸಿದರು.`ಉದಯಪುರದಲ್ಲಿ ಕಳೆದ ವರ್ಷ ನಡೆದ ಯುವಜನೋತ್ಸವದಲ್ಲಿ ಕರ್ನಾಟಕ ತಂಡ ಸಿತಾರ್, ಜಾನಪದ ನೃತ್ಯ, ವೀಣೆ, ತಬಲಾ, ಕೂಚುಪುಡಿ, ಕೊಳಲು, ಮಣಿಪುರಿ, ಒಡಿಸ್ಸಿ, ಆಶುಭಾಷಣ, ಹಾರ್ಮೋನಿಯಂನಲ್ಲಿ ಬಹುಮಾನ ಗಳಿಸಿತ್ತು. ಹರಿಯಾಣದಲ್ಲಿ ನಡೆದ ಸ್ಪರ್ಧೆಯಲ್ಲಿ 16 ವಿಭಾಗಗಳಲ್ಲಿ, ಚೆನ್ನೈಯಲ್ಲಿ ನಡೆದ ಉತ್ಸವದಲ್ಲಿ 14 ವಿಭಾಗಗಳಲ್ಲಿ ಬಹುಮಾನ ಗಳಿಸಿತ್ತು. ಈ ಬಾರಿ ಇನ್ನಷ್ಟು ವಿಭಾಗಗಳಲ್ಲಿ ಬಹುಮಾನ ನಿರೀಕ್ಷೆ ಮಾಡಿದ್ದೆವು~ ಎಂದು ಅವರು    ತಿಳಿಸಿದರು.

ಪ್ರತಿಕ್ರಿಯಿಸಿ (+)