ಬುಧವಾರ, ಮೇ 18, 2022
24 °C

ರೂ 2 ಲಕ್ಷ ವರೆಗಿನ ಕೃಷಿಸಾಲಕ್ಕೆ ಬಡ್ಡಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ಎರಡು ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಹಾಗೂ ಎರಡರಿಂದ ಮೂರು ಲಕ್ಷ ರೂಪಾಯಿವರೆಗೆ ಶೇಕಡ 1ರ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಇದರೊಂದಿಗೆ ಪಕ್ಷದ ಚುನಾವಣಾ ಪ್ರಣಾಳಿಕೆಯ ಮತ್ತೊಂದು ಅಂಶವನ್ನು ಅನುಷ್ಠಾನಕ್ಕೆ ತಂದಿದ್ದಾರೆ.ಈ ಹಿಂದೆ ಒಂದು ಲಕ್ಷ ರೂಪಾಯಿವರೆಗೆ ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ ಮತ್ತು ಒಂದರಿಂದ ಮೂರು ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇ 1ರ ಬಡ್ಡಿ ದರ ವಿಧಿಸಲಾಗುತ್ತಿತ್ತು. ಈ ಯೋಜನೆಯಲ್ಲಿ ತುಸು ಮಾರ್ಪಾಡು ಮಾಡಿ ಶೂನ್ಯ ಬಡ್ಡಿದರದ ಸಾಲದ ಮಿತಿಯನ್ನು ಇನ್ನೂ ಒಂದು ಲಕ್ಷ ರೂಪಾಯಿ ಏರಿಸಿದೆ.ರೈತರು ಪಡೆಯುವ ಹತ್ತು ಲಕ್ಷ ರೂಪಾಯಿವರೆಗಿನ ಸಹಕಾರಿ ಸಾಲಕ್ಕೆ ಶೇ 3ರ ಬಡ್ಡಿ ಮುಂದುವರಿಯುತ್ತದೆ. ವಾಣಿಜ್ಯ ಬ್ಯಾಂಕುಗಳಿಂದ ಪಡೆಯುವ ಅಲ್ಪಾವಧಿ ಮತ್ತು ಮಧ್ಯಮಾವಧಿ ಕೃಷಿ ಸಾಲಗಳ ಮಿತಿಯೂ ಹಿಂದಿನಂತೆಯೇ ಇರಲಿದೆ.ಕೃಷಿ ಮತ್ತು ತೋಟಗಾರಿಕೆಗೆ 4,378 ಕೋಟಿ ರೂಪಾಯಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 1,903 ಕೋಟಿ ರೂಪಾಯಿ ಹಾಗೂ ಸಹಕಾರ ಕ್ಷೇತ್ರಕ್ಕೆ 2,216 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಹಾಗೂ ಬೆಲೆ ಮಧ್ಯಸ್ಥಿಕೆ ವಹಿಸಲು ಸ್ಥಾಪಿಸಿರುವ ಆವರ್ತ ನಿಧಿಯ ಮೊತ್ತವನ್ನು 1,000 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ.ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ದರ ದೊರಕಿಸಲು `ಕೃಷಿ ಬೆಲೆ ಆಯೋಗ' ಅಸ್ತಿತ್ವಕ್ಕೆ ಬರಲಿದೆ. ರೈತರು, ಕೃಷಿ ತಜ್ಞರು ಮತ್ತು ಕೃಷಿ ಆರ್ಥಿಕ ತಜ್ಞರನ್ನು ಒಳಗೊಂಡ ಆಯೋಗವು ನೀಡುವ ಶಿಫಾರಸು ಆಧರಿಸಿ ಸರ್ಕಾರವು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡಲಿದೆ. ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆಹಾನಿಗೆ ಪರಿಹಾರ ನೀಡಲು `ವಿಕೋಪ ಉಪಶಮನ ನಿಧಿ' ಸ್ಥಾಪನೆಯ ಮೂಲಕ ರೈತರ ನೆರವಿಗೆ ನಿಲ್ಲಲು ನಿರ್ಧರಿಸಿದ್ದು,  ನೈಸರ್ಗಿಕ ವಿಪತ್ತುಗಳಿಂದ ಹಾನಿಗೊಳಗಾದ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಶುಲ್ಕ ಭರಿಸಲಿದೆ.ರಸಗೊಬ್ಬರ ದಾಸ್ತಾನಿಗಾಗಿ 152 ಕೋಟಿ ರೂಪಾಯಿ, ಬಿತ್ತನೆ ಮತ್ತು ಇತರೆ ಕೃಷಿ ಸಲಕರಣೆಗಳ ವಿತರಣೆಗೆ 150 ಕೋಟಿ ರೂಪಾಯಿ ಹಾಗೂ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಗೆ 500 ಕೋಟಿ ರೂಪಾಯಿ ಒದಗಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ 20 ರಾಜ್ಯ ವಲಯದ ಯೋಜನೆಗಳನ್ನು ವಿಲೀನಗೊಳಿಸಿ ಐದು ಯೋಜನೆಗಳನ್ನಾಗಿ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.ನೀರಾ ತಯಾರಿಕೆ: ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ತೆಂಗಿನ ಮರಗಳಿಂದ ನೀರಾ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು ಎಂಬ ಬೆಳೆಗಾರರ ಬಹುಕಾಲದ ಬೇಡಿಕೆಗೆ ಹೊಸ ಸರ್ಕಾರ ಅಸ್ತು ಎಂದಿದೆ. ತೆಂಗಿನ ಮರಗಳಿಂದ ನೀರಾ ತೆಗೆಯಲು ಅವಕಾಶ ಕೊಡುವುದಕ್ಕಾಗಿ ಅಬಕಾರಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಿದೆ.ತೆಂಗಿನ ನೀರಾದಿಂದ ಪಾಮ್‌ಸಿರಪ್, ಪಾಮ್ ಬೆಲ್ಲ, ಪಾಮ್ ಸಕ್ಕರೆ ಮತ್ತಿತರ ಉತ್ಪನ್ನ ತಯಾರಿಕೆಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ. ತೆಂಗು ಸಂಸ್ಕರಣಾ ಘಟಕಗಳಿಗೆ ಶೇ 25ರಷ್ಟು ಹಾಗೂ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಐದು ಪಾರ್ಕ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ.ತೋಟಗಾರಿಕೆಯಲ್ಲಿ ಹನಿ ನೀರಾವರಿ ಸಹಾಯಧನಕ್ಕೆ 243.76 ಕೋಟಿ ರೂಪಾಯಿ ಒದಗಿಸಲಾಗಿದೆ. ಪರಿಶಿಷ್ಟರಿಗೆ ಶೇ 90ರಷ್ಟು ಮತ್ತು ಇತರರಿಗೆ ಶೇ 75ರಷ್ಟು  ಸಹಾಯಧನ ದೊರೆಯಲಿದೆ. 85,000 ಎಕರೆ ತೋಟಗಾರಿಕಾ ಪ್ರದೇಶದಲ್ಲಿ ಸಾವಯವ ಕೃಷಿ ಅಳವಡಿಕೆಗೆ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ.ಪ್ರೋತ್ಸಾಹಧನಕ್ಕೆ ರೂ 818 ಕೋಟಿ: ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ನಾಲ್ಕು ರೂಪಾಯಿ ಪ್ರೋತ್ಸಾಹಧನ ನೀಡುವುದಕ್ಕಾಗಿ 818 ಕೋಟಿ ರೂಪಾಯಿ ಒದಗಿಸಲಾಗಿದೆ. ಪಶು ಸಂಗೋಪನೆಗೆ ಪೂರಕವಾಗಿ 52,553 ಹೆಕ್ಟೇರ್ ಪ್ರದೇಶದಲ್ಲಿ 13.14 ಕೋಟಿ ರೂಪಾಯಿ ವೆಚ್ಚದಲ್ಲಿ ಮೇವು ಬೆಳೆಯುವ ಗುರಿ ಇದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದು ಮತ್ತು ಶಾಲಾ ಮಕ್ಕಳಿಗೆ ಹಾಲು ವಿತರಿಸುವುದಕ್ಕೆ ಅನುಕೂಲ ಆಗುವಂತೆ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ.ವಿಮೆಗೆ ಒಳಪಡದ ಕುರಿಗಳು ಮತ್ತು ಮೇಕೆಗಳು ಆಕಸ್ಮಿಕವಾಗಿ ಅಥವಾ ದೃಢೀಕೃತ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟಲ್ಲಿ ಪ್ರತಿ ಕುರಿ, ಮೇಕೆಗೆ ಮೂರು ಸಾವಿರ ರೂಪಾಯಿ ಪರಿಹಾರ ದೊರೆಯಲಿದೆ. ಈ ಯೋಜನೆಗಾಗಿ ಎರಡು ಕೋಟಿ ರೂಪಾಯಿ ಮೀಸಲಿಡಲಾಗಿದೆ. ಪ್ರಕೃತಿ ವಿಕೋಪ ಪರಿಹಾರ ವ್ಯಾಪ್ತಿಯಲ್ಲಿ ಬರದ ಪ್ರಕರಣಗಳಲ್ಲಿ ಈ ಪರಿಹಾರ ಲಭ್ಯವಾಗಲಿದೆ.ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರನ್ನು ಉತ್ತೇಜಿಸಲು ಪ್ರತಿ ಕೆ.ಜಿ. ಬಿತ್ತನೆ ಗೂಡಿಗೆ 20 ರೂಪಾಯಿ ಪ್ರೋತ್ಸಾಹಧನ ದೊರೆಯಲಿದೆ. ರೇಷ್ಮೆ ನೂಲು ಬಿಚ್ಚಾಣಿಕೆ ವೃತ್ತಿ ನಿರ್ವಹಿಸುತ್ತಿರುವವರು ಕೇಂದ್ರ ರೇಷ್ಮೆ ಮಂಡಳಿಯಿಂದ ಪಡೆದಿರುವ ಸಾಲವನ್ನು ಪೂರ್ಣವಾಗಿ ಮನ್ನಾ ಮಾಡಲು ರಾಜ್ಯದ ಪಾಲಿನ 2.32 ಕೋಟಿ ರೂಪಾಯಿ ಒದಗಿಸಲಾಗಿದೆ.ಮೀನುಗಾರರ ನೆರವಿಗೆ:  ಮೀನುಗಾರಿಕೆಗೆ ಯಾಂತ್ರೀಕೃತ ದೋಣಿಗಳನ್ನು ಬಳಸುತ್ತಿರುವವರಿಗೆ ತೆರಿಗೆರಹಿತವಾಗಿ ಒದಗಿಸುವ ಡೀಸೆಲ್ ಪ್ರಮಾಣವನ್ನು 1.50 ಲಕ್ಷ ಕಿಲೋ ಲೀಟರಿಗೆ ಹೆಚ್ಚಿಸಲಾಗಿದೆ. ನಾಡದೋಣಿ ಬಳಸುತ್ತಿರುವವರಿಗೆ ಪ್ರತಿ ತಿಂಗಳು ಹಂಚಿಕೆ ಮಾಡುವ ಸೀಮೆಎಣ್ಣೆ ಪ್ರಮಾಣವನ್ನು 150 ಲೀಟರ್‌ನಿಂದ 400 ಲೀ.ಗೆ ಏರಿಸಲಾಗಿದೆ.`ಮತ್ಸ್ಯಾಶ್ರಯ' ಯೋಜನೆ ಅಡಿಯಲ್ಲಿ ಮೀನುಗಾರರಿಗೆ ಮನೆ ನಿರ್ಮಿಸಿಕೊಳ್ಳಲು ನೀಡುತ್ತಿದ್ದ ಸಹಾಯಧನದ ಮೊತ್ತವನ್ನು 60 ಸಾವಿರ ರೂಪಾಯಿಯಿಂದ 1.20 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಮಹಿಳಾ ಸ್ವಸಹಾಯ ಗುಂಪುಗಳು ನಡೆಸುವ ಚಟುವಟಿಕೆಗಳಿಗೆ ನೆರವಾಗಲು ಮತ್ಸ್ಯ ಮಹಿಳಾ ಸ್ವಾವಲಂಬನ ಯೋಜನೆಯಡಿ ನೀಡುತ್ತಿದ್ದ ಆವರ್ತನಿಧಿಯ ಮೊತ್ತ 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಲಿದೆ.ಪರಿಶಿಷ್ಟರ ಹಳೆ ಸಾಲ ಮನ್ನಾ

ಸಹಕಾರ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈ ವರ್ಗದ ಜನರನ್ನು ರಾಜ್ಯದ ವಿವಿಧ ಸಹಕಾರ ಸಂಸ್ಥೆಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸಲು ಎರಡು ಕೋಟಿ ರೂಪಾಯಿ ಒದಗಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ `ಯಶಸ್ವಿನಿ' ಆರೋಗ್ಯ ವಿಮೆ ನೋಂದಣಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ಗಳಿಂದ ಪಡೆದು 25 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಉಳಿಸಿಕೊಂಡಿರುವ ಅವಧಿ ಸಾಲದ ಅಸಲನ್ನು ಸರ್ಕಾರ ಮನ್ನಾ ಮಾಡಲಿದೆ. ಆದರೆ ಸಾಲದ ಮೇಲಿನ ಬಡ್ಡಿ ಮೊತ್ತವನ್ನು ಆಯಾ ಬ್ಯಾಂಕುಗಳೇ ಮನ್ನಾ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.