ಸೋಮವಾರ, ಜುಲೈ 26, 2021
27 °C

ರೂ. 48 ಸಾವಿರ ಕೋಟಿ ಪೂರೈಕೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ತನ್ನ ಸಾಲ ನೀತಿಯ  ಮಧ್ಯಂತರ ತ್ರೈಮಾಸಿಕ ಪರಾಮರ್ಶೆ  ಪ್ರಕಟಿಸಿದ್ದು, ಅಲ್ಪಾವಧಿ ಬಡ್ಡಿ ದರ ಸೇರಿದಂತೆ ಪ್ರಮುಖ ನೀತಿ ನಿರೂಪಣಾ ನಿರ್ಧಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬ್ಯಾಂಕಿಂಗ್ ವ್ಯವಸ್ಥೆಗೆ ರೂ. 48 ಸಾವಿರ ಕೋಟಿಗಳಷ್ಟು ಹಣ ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದೆ.ಬ್ಯಾಂಕ್‌ಗಳು ತಮ್ಮ ಠೇವಣಿಗಳ ಕೆಲ ಭಾಗವನ್ನು ಕಡ್ಡಾಯವಾಗಿ ಸರ್ಕಾರಿ ಸಾಲಪತ್ರಗಳಲ್ಲಿ ತೊಡಗಿಸುವ ಶಾಸನಬದ್ಧ ನಗದು ಅನುಮಾತವನ್ನು (ಎಸ್‌ಎಲ್‌ಆರ್) ಶೇ 1ರಷ್ಟು ( ಶೇ 24ಕ್ಕೆ) ಕಡಿಮೆ ಮಾಡಿದೆ. ‘ಎಸ್‌ಎಲ್‌ಆರ್’ ಕಡಿಮೆ ಮಾಡಿರುವುದು ಮತ್ತು ಮುಂದಿನ ಒಂದು ತಿಂಗಳಲ್ಲಿ ಹಣಕಾಸು ಮಾರುಕಟ್ಟೆಗೆ  ರೂ. 48 ಸಾವಿರ ಕೋಟಿ ಹರಿದು ಬರಲಿರುವುದು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸುವ  ನಿರೀಕ್ಷೆ ಇದೆ.ಅಲ್ಪಾವಧಿ ಸಾಲ ನೀಡುವ ಮತ್ತು ಸಾಲ ಪಡೆಯುವ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕಳೆದ ಒಂದು ವರ್ಷದಲ್ಲಿ 6 ಬಾರಿ ಹೆಚ್ಚಿಸಿರುವ ಆರ್‌ಬಿಐ, ಈಗ  ಇವುಗಳ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ನಗದು ಹೊಂದಾಣಿಕೆ ಸೌಲಭ್ಯದಡಿ ಬ್ಯಾಂಕ್ ರೆಪೊ (ಶೇ 6.25) ಮತ್ತು ರಿವರ್ಸ್ ರೆಪೊ (ಶೇ 5.25) ದರಗಳಲ್ಲಿ  ಯಾವುದೇ ಬದಲಾವಣೆ ಮಾಡಲಾಗಿಲ್ಲ. ರೂ. 48,000 ಕೋಟಿಗಳಷ್ಟು ಮೊತ್ತದ ಸರ್ಕಾರಿ ಸಾಲ ಪತ್ರಗಳನ್ನು ಖರೀದಿಸಲು ಕೇಂದ್ರೀಯ ಬ್ಯಾಂಕ್ ನಿರ್ಧರಿಸಿದೆ.ಇದರಿಂದ  ಹಣಕಾಸು ಪೇಟೆಯಲ್ಲಿನ ನಗದು ಹಣದ ಕೊರತೆ ಸಮಸ್ಯೆ ದೂರವಾಗುವ ನಿರೀಕ್ಷೆ ಇದೆ. ಕೇಂದ್ರೀಯ ಬ್ಯಾಂಕ್ ಪ್ರಕಟಿಸಿದ ಕ್ರಮಗಳು ಷೇರುಪೇಟೆಯಲ್ಲಿಯೂ ಉತ್ಸಾಹ ಮೂಡಿಸಿವೆ.ಬ್ಯಾಂಕ್ ಮುಖ್ಯಸ್ಥರ ಪ್ರತಿಕ್ರಿಯೆ: ನಗದು ಹಣದ ಪೂರೈಕೆ ಪರಿಸ್ಥಿತಿಯು ಬಿಗುವಿನಿಂದ ಕೂಡಿರುವಾಗ ಮತ್ತು ಒಟ್ಟಾರೆ ಹಣದುಬ್ಬರ ಒತ್ತಡ ಕಡಿಮೆ ಮಾಡಲು ಹಣಕಾಸು ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವ ಆರ್‌ಬಿಐ ಧೋರಣೆ ನಿರೀಕ್ಷಿತ ಮಟ್ಟದಲ್ಲಿ ಇದೆ.  ಹಣಕಾಸು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಆರ್‌ಬಿಐ ಸಮತೋಲನದ ನಿಲುವು ತಳೆದಿದೆ ಎಂದು ಬ್ಯಾಂಕ್ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.