ಶುಕ್ರವಾರ, ಜೂಲೈ 3, 2020
29 °C

ರೂ. 5 ಲಕ್ಷಕ್ಕೆ ಕನಸಿನ ಮನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂ. 5 ಲಕ್ಷಕ್ಕೆ ಕನಸಿನ ಮನೆ!

ಬೆಂಗಳೂರು: ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಭೂಮಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನತೆ ಒಂದು ಸೂರು ಮಾಡಿಕೊಳ್ಳುವುದೇ ದುಸ್ತರ ಎನಿಸಿದೆ. ಈ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡೇ `ಜನಾಧಾರ ಕನ್ಸ್‌ಟ್ರಕ್ಷನ್~ ಸಂಸ್ಥೆಯು ಇದೀಗ ಕೇವಲ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಿದೆ. ನೋಂದಣಿ, ವಿದ್ಯುತ್ ಹಾಗೂ ನೀರಿನ ಸಂಪರ್ಕ, ಎರಡು ವರ್ಷಗಳ ನಿರ್ವಹಣಾ ವೆಚ್ಚ ಸೇರಿದಂತೆ ಮನೆಯ ಬೆಲೆ ರೂ. 6.73 ಲಕ್ಷಗಳಿಂದ 7.13 ಲಕ್ಷ ರೂಪಾಯಿಗಳಾಗಲಿದೆ.ಇಂಥದ್ದೊಂದು ಸುಂದರ ಕನಸಿನ ಅಪಾರ್ಟ್‌ಮೆಂಟ್ ವಸತಿ ಯೋಜನೆ ನಿರ್ಮಾಣಗೊಳ್ಳುತ್ತಿರುವುದು ಆನೇಕಲ್ ರಸ್ತೆಯ ಅತ್ತಿಬೆಲೆ ಬಳಿ. ಅದುವೇ `ಜನಾಧಾರ- ಶುಭ~ ವಸತಿ ಯೋಜನೆ. ಇಂತಹ ಅಪಾರ್ಟ್‌ಮೆಂಟ್‌ನ ಮನೆಯೊಂದನ್ನು ಜನ ತಮ್ಮದಾಗಿಸಿಕೊಳ್ಳಬೇಕಾದರೆ, ಕೇವಲ 45 ಸಾವಿರ ರೂಪಾಯಿ ಮುಂಗಡ ಪಾವತಿಸಿ ಹೆಸರು ನೋಂದಾಯಿಸಬೇಕು. ಆನಂತರದ 30 ದಿನಗಳಲ್ಲಿ ಉಳಿದ 1.10 ಲಕ್ಷ ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.ಜನಲಕ್ಷ್ಮಿ ಸೋಷಿಯಲ್ ಸರ್ವೀಸಸ್, ಸ್ಟರ್ಲಿಂಗ್ ಡೆವಲಪರ್ಸ್‌ ಹಾಗೂ ವೆಂಕಟರಮಣ ಅಸೋಸಿಯೇಟ್ಸ್ ಕಂಪೆನಿಗಳು ಸೇರಿ ಈ ವಸತಿ ಯೋಜನೆ ಪ್ರಾರಂಭಿಸಿವೆ. ಮನೆ ಮಾಲೀಕನ ವರಮಾನದ ಮೇರೆಗೆ ಸಂಸ್ಥೆಯು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಜಿಆರ್‌ಯುಎಚ್ ಫೈನಾನ್ಸ್, ಎಚ್‌ಡಿಎಫ್‌ಸಿ ಲಿಮಿಟೆಡ್, ಜನಲಕ್ಷ್ಮಿ ಹಣಕಾಸು ಸಂಸ್ಥೆಗಳಿಂದಲೂ ಸಾಲ ಸೌಲಭ್ಯವನ್ನು ಒದಗಿಸಲಿದೆ.`ಜನಲಕ್ಷ್ಮಿ ಫೈನಾನ್ಷಿಯಲ್ ಸರ್ವೀಸಸ್~ (ಎನ್‌ಬಿಎಫ್‌ಸಿ) ಶೇ 90ರಷ್ಟು ಸಾಲ ಸೌಲಭ್ಯ ನೀಡುವ ಭರವಸೆ ನೀಡಿದೆ. ಮಾಸಿಕ 15ರಿಂದ 53 ಸಾವಿರ ರೂಪಾಯಿಗಳವರೆಗೆ ಆದಾಯವಿರುವ ಸ್ವ-ಉದ್ಯೋಗಿಗಳು, ಕೌಶಲಾಧಾರಿತ ಕಾರ್ಮಿಕರು, ಶಿಕ್ಷಕರು, ನರ್ಸ್‌ಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರು ಇದರ ಪ್ರಯೋಜನ ಪಡೆಯಬಹುದು.ನಗರಕ್ಕೆ ಎಷ್ಟು ದೂರ:

ಮೆಜೆಸ್ಟಿಕ್‌ನಿಂದ `ಜನಾಧಾರ ಶುಭ~ ವಸತಿ ಯೋಜನೆಯ ಸ್ಥಳಕ್ಕೆ 39 ಕಿ.ಮೀ. ದೂರವಿದೆ. ಬೊಮ್ಮಸಂದ್ರ, ಹೊಸೂರು, ಜಿಗಣಿ, ಎಲೆಕ್ಟ್ರಾನಿಕ್ ಸಿಟಿ, ಟಿವಿಎಸ್ ಮೋಟಾರ್ಸ್‌ ಕಂಪೆನಿ ಸೇರಿದಂತೆ ಮತ್ತಿತರ ಕೈಗಾರಿಕಾ ಪ್ರದೇಶಗಳಿಗೂ ಇದು ಹತ್ತಿರದಲ್ಲಿದೆ.ಒಟ್ಟು 11.5 ಎಕರೆ ಪ್ರದೇಶದಲ್ಲಿ 1128 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಸಂಸ್ಥೆಯು ನಿರ್ಧರಿಸಿದೆ. ಮೊದಲ ಹಂತದಲ್ಲಿ 480 ಮನೆ (ತಲಾ 400 ಚದರ ಅಡಿ) ಹಾಗೂ 2ನೇ ಹಂತದಲ್ಲಿ 648 ಮನೆಗಳನ್ನು (ತಲಾ 615 ಚದರ ಅಡಿ) ನಿರ್ಮಿಸಲು ಸಂಸ್ಥೆ ಉದ್ದೇಶಿಸಿದೆ. ಅಪಾರ್ಟ್‌ಮೆಂಟ್‌ನ ಒಂದು ಮನೆಯು ಮಲಗುವ ಕೋಣೆ, ಅಡಿಗೆ ಕೋಣೆ ಹಾಗೂ ವಿಶಾಲವಾದ ಕೋಣೆಯನ್ನು ಒಳಗೊಂಡಿರುತ್ತದೆ.`ಮೊದಲ ಹಂತದಲ್ಲಿ ಅಂದರೆ, ಜುಲೈನೊಳಗಾಗಿ 160 ಮನೆಗಳನ್ನು ಹಂಚಿಕೆ ಮಾಡಲಿದ್ದೇವೆ. ಅಕ್ಟೋಬರ್- ನವೆಂಬರ್ ವೇಳೆಗೆ 208 ಹಾಗೂ 2012ರ ಜನವರಿ ವೇಳೆಗೆ ಉಳಿಕೆ ಮನೆಗಳನ್ನು ಜನರಿಗೆ ವಿತರಿಸುವ ಗುರಿ ಇದೆ~ ಎನ್ನುತ್ತಾರೆ ಜನಾಧಾರ ಕನ್‌ಸ್ಟ್ರಕ್ಷನ್‌ನ (ಮಾರುಕಟ್ಟೆ ಮತ್ತು ಮಾರಾಟ ವಿಭಾಗ) ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಹರಿ ರಾಜಗೋಪಾಲನ್.`ಎರಡನೇ ಹಂತದಲ್ಲಿ 648 ಮನೆಗಳ ನಿರ್ಮಾಣ ಕಾರ್ಯವನ್ನು ಅಕ್ಟೋಬರ್- ನವೆಂಬರ್‌ನಿಂದ ಪ್ರಾರಂಭಿಸಲಾಗುತ್ತದೆ~ ಎಂದು ಅವರು ತಿಳಿಸಿದರು.ನಿವೇಶನಗಳ ಬೆಲೆ ಗಗನಮುಖಿಯಾಗಿರುವ ಈ ಸಂದರ್ಭದಲ್ಲಿ ಕೇವಲ ಐದು ಲಕ್ಷ ರೂಪಾಯಿಗಳಲ್ಲಿ ಹೇಗೆ ಅಪಾರ್ಟ್‌ಮೆಂಟ್ ಮನೆ ನಿರ್ಮಿಸಿಕೊಡಲು ಸಂಸ್ಥೆಗೆ ಸಾಧ್ಯವಾದೀತು ಎಂಬ ಪ್ರಶ್ನೆಗೆ, `ನಾವು ಇನ್ನೂ ಅಷ್ಟೇನೂ ಅಭಿವೃದ್ಧಿಯಾಗದಂತಹ ಕಡೆಗಳಲ್ಲಿ ಮೊದಲೇ ಜಾಗ ಖರೀದಿಸಿ ವಸತಿ ಯೋಜನೆ ಪ್ರಾರಂಭಿಸಿದ್ದೇವೆ. ಹೀಗಾಗಿ, ಈಗ ಕಡಿಮೆ ಬೆಲೆಗೆ ಮನೆಗಳನ್ನು ನೀಡಲು ಸಾಧ್ಯವಾಗುತ್ತಿದೆ. ಆದರೆ, ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಮುಂದಿನ 5ರಿಂದ 10 ವರ್ಷಗಳಲ್ಲಿ ಈ ಜಾಗ ಕೂಡ ಇತರ ಪ್ರತಿಷ್ಠಿತ ಬಡಾವಣೆಗಳ ರೀತಿ ಅಭಿವೃದ್ಧಿಯಾಗಲಿದೆ~ ಎಂದು ಹೇಳಿದರು.`ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಭದ್ರತಾ ಕೊಠಡಿ, ಮನೆಗಳಿಗೆ ಗೃಹೋಪಯೋಗಿ ವಸ್ತುಗಳನ್ನು ಪೂರೈಸುವಂತಹ ಶಾಪಿಂಗ್ ಸೆಂಟರ್, ಮಕ್ಕಳ ಆಟದ ಮೈದಾನ ಕೂಡ ತಲೆಯೆತ್ತಲಿವೆ. ಅಲ್ಲದೆ, ಟೌನ್‌ಶಿಪ್‌ನಿಂದ ಅತ್ತಿಬೆಲೆ ಜಂಕ್ಷನ್ ಹಾಗೂ ಸಮೀಪದ ಮುಖ್ಯ ಪ್ರದೇಶಗಳಿಗೆ ಬಸ್/ ಮಿನಿ ಬಸ್ ಸೌಲಭ್ಯವನ್ನೂ ಒದಗಿಸಲು ಉದ್ದೇಶಿಸಿದ್ದೇವೆ~ ಎಂದು ಹರಿರಾಜಗೋಪಾಲನ್ ತಿಳಿಸಿದರು.

 

ಗ್ರಾಹಕರು ಏನನ್ನುತ್ತಾರೆ?`ಕಟ್ಟಡದ ನಿರ್ಮಾಣಕ್ಕೆ ಬಳಸಿದ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿವೆ. ಸುತ್ತಮುತ್ತಲಿನ ವಾತಾವರಣ ಕೂಡ ಚೆನ್ನಾಗಿದೆ. ಈ ಭಾಗದಲ್ಲಿ ಮಳಿಗೆಗಳು ಆರಂಭವಾಗದ ಕಾರಣ ಸದ್ಯಕ್ಕೆ ವಾಸ ಮಾಡಲು ಆಗುತ್ತಿಲ್ಲ. ಒಟ್ಟಾರೆ, ವಾಸ ಯೋಗ್ಯ ಮನೆಗಳು ಕಡಿಮೆ ಮೊತ್ತಕ್ಕೆ ಲಭ್ಯವಾಗುತ್ತಿರುವುದು ಸಂತಸದ ವಿಚಾರ~ ಎನ್ನುತ್ತಾರೆ ಯಲಚೇನಹಳ್ಳಿಯ ನಿವಾಸಿ ಶಹೀರಾ ಬೇಗಂ.`ನಮ್ಮಂತಹ ಮಧ್ಯಮ ವರ್ಗದವರಿಗೆ ಒಂದೇ ಬಾರಿ ಅಧಿಕ ಮೊತ್ತ ನೀಡಿ ಮನೆ ಕೊಳ್ಳಲು ಶಕ್ತಿಯಿಲ್ಲ. ನಮಗೆ ಏನೋ ಚೆನ್ನಾಗಿದೆ ಅನ್ನಿಸ್ತು. ಮನೆಗೆ 1 ಲಕ್ಷ ರೂಪಾಯಿ ಮುಂಗಡ ಪಾವತಿಸಿದ್ದೇವೆ. ಇನ್ನುಳಿದ ಮನೆಯ ಬಾಕಿ ಮೊತ್ತ ಭರಿಸಲು ಕಂಪೆನಿಯೇ ಸಾಲದ ವ್ಯವಸ್ಥೆ ಮಾಡುತ್ತಿದೆ~ ಎಂದು ಮಡಿವಾಳ ಸಮೀಪದ ತಾವರೆಕೆರೆಯ ಗೃಹಿಣಿ ಸರೋಜಾ ಆನಂದ್ ಪ್ರತಿಕ್ರಿಯಿಸಿದರು.ಹೆಚ್ಚಿನ ಮಾಹಿತಿಗೆ ಸಂಪರ್ಕ ವಿಳಾಸ: ಜನಾಧಾರ ಕನ್ಸ್‌ಟ್ರಕ್ಷನ್ಸ್, ರಾಜಶ್ರೀ ಸರೋಜಾ ಪ್ಲಾಜಾ, 34/1, ಆ್ಯಂಡ್ರೀ ರಸ್ತೆ, ಶಾಂತಿನಗರ, ಬೆಂಗಳೂರು-560027. ದೂರವಾಣಿ ಸಂಖ್ಯೆ: 42595700.

 
ವಿವಿಧೆಡೆ ವಸತಿ ಕಟ್ಟಡಗಳುಈ ನಡುವೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೂಡ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ-1ರ ಜನರಿಗೆ ಕಡಿಮೆ ವೆಚ್ಚದಲ್ಲಿ 30 ಸಾವಿರ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ನಿರ್ಧರಿಸಿದ್ದು, ನಗರದ 17 ಪ್ರದೇಶಗಳಲ್ಲಿ ಸ್ಥಳ ಗುರುತಿಸಿ ಯೋಜನೆ ರೂಪಿಸಿದೆ. ಈ ವಸತಿ ಸೌಲಭ್ಯಕ್ಕಾಗಿ ಸಾರ್ವಜನಿಕ ಬೇಡಿಕೆ ಸಮೀಕ್ಷೆಗಾಗಿ ನೋಂದಣಿ ಮಾಡಿಸಲು ಜೂನ್ 15ರವರೆಗೆ ಕಾಲಾವಕಾಶ ವಿಸ್ತರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.`ಪುರವಂಕರ~ ಸಂಸ್ಥೆ ಕೂಡ ಯಲಹಂಕ ಬಳಿಯ ಮಾರಸಂದ್ರ ಸಮೀಪ (ದೊಡ್ಡಬಳ್ಳಾಪುರ ರಸ್ತೆ) `ಪ್ರಾವಿಡೆಂಟ್ ಹೌಸಿಂಗ್~ ಯೋಜನೆಯಡಿ 16ರಿಂದ 18 ಲಕ್ಷ ರೂಪಾಯಿ ವೆಚ್ಚದಲ್ಲಿ ವಸತಿ ಸಮುಚ್ಛಯ ಯೋಜನೆ ಕೈಗೊಂಡಿರುವುದನ್ನು ಇಲ್ಲಿ ಗಮನಿಸಬಹುದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.