ಮಂಗಳವಾರ, ಮೇ 18, 2021
24 °C

ರೆಡ್ಡಿಯಿಂದ ಚಿನ್ನದ 32 ಕಿರೀಟ ದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಆಂಧ್ರ ಪ್ರದೇಶದ ಜೈಲಿನಲ್ಲಿರುವ ಕರ್ನಾಟಕದ ಮಾಜಿ ಸಚಿವ ಹಾಗೂ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರು ಕಳೆದ ಒಂದು ದಶಕದಲ್ಲಿ ದಕ್ಷಿಣ ಭಾರತದ ವಿವಿಧ ದೇವಸ್ಥಾನಗಳಿಗೆ ವಜ್ರ ಖಚಿತ ಬಂಗಾರದ 32 ಕಿರೀಟಗಳನ್ನು ದಾನವಾಗಿ ನೀಡಿದ್ದರು.ಆಂಧ್ರ ಪ್ರದೇಶ. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ರೆಡ್ಡಿ ಅವರು ಚಿನ್ನದ ಕಿರೀಟ ಸೇರಿದಂತೆ ವಿವಿಧ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದರು.ಈಗ ಲಭ್ಯವಾಗಿರುವ ಮೂಲಗಳ ಪ್ರಕಾರ ಒಟ್ಟು 32 ಚಿನ್ನದ ಕಿರೀಟಗಳನ್ನು ನೀಡಿದ್ದಾರೆ. ಈ ಪೈಕಿ 29 ಕಿರೀಟಗಳನ್ನು ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ದೇವಸ್ಥಾನಗಳಿಗೆ ನೀಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನಕ್ಕೆ ಮೂರು ದೊಡ್ಡ ಕಿರೀಟಗಳನ್ನು ನೀಡಲಾಗಿದೆ.ಬ್ರಹ್ಮಣಿ ಸ್ಟೀಲ್ಸ್‌ಗೆ ಅಗತ್ಯ ಇರುವ ಭೂಮಿಯನ್ನು ಆಂಧ್ರ ಪ್ರದೇಶ ಸರ್ಕಾರ ಮಂಜೂರು ಮಾಡಿದ ಸಂದರ್ಭದಲ್ಲಿ ಒಂದು ದೊಡ್ಡ ಕಿರೀಟವನ್ನು ನೀಡಿದ್ದಾರೆ. ಒಸಿಎಂಗೆ ಗಣಿ ಗುತ್ತಿಗೆ ಪರವಾನಗಿಯನ್ನು ನೀಡಿದ ಸಂದರ್ಭದಲ್ಲಿ ಎರಡನೇ ಕಿರೀಟ ಹಾಗೂ 2009ರಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಎರಡನೇ ಬಾರಿಗೆ ಚುನಾವಣೆಯಲ್ಲಿ ಜಯಗಳಿಸಿದಾಗ ಮೂರನೇ ಕಿರೀಟ ನೀಡಿದ್ದಾರೆ.ಅಕ್ರಮ ಸಂಪಾದನೆಯಿಂದ ಜನಾರ್ದನ ರೆಡ್ಡಿ ಮತ್ತು ಕುಟುಂಬದವರು ದೇವಸ್ಥಾನಗಳಿಗೆ ನೀಡಿರುವ ಚಿನ್ನಾಭರಣಗಳ ದಾನವನ್ನು ಹಿಂತಿರುಗಿಸುವಂತೆ ತಿರುಪತಿ ಮತ್ತು ಶ್ರೀಕಾಳಹಸ್ತಿ ದೇವಸ್ಥಾನದ ಭಕ್ತರು ಒತ್ತಾಯ ಮಾಡಿದ್ದಾರೆ.ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಭಕ್ತರು ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಿದ್ದರು. 2009ರಲ್ಲಿ ಜನಾರ್ದನ ರೆಡ್ಡಿ ದಾನ ನೀಡಿದ್ದ 45 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ದೇವಸ್ಥಾನದಲ್ಲಿ ಬಳಕೆ ಮಾಡಬಾರದು ಎಂದರು.ಈ ಕಿರೀಟ ಸುಮಾರು 30 ಕೆ.ಜಿ ಬಂಗಾರ ಮತ್ತು ದಕ್ಷಿಣ ಆಫ್ರಿಕಾದ 800 ವಜ್ರದ ಹರಳುಗಳನ್ನು ಒಳಗೊಂಡಿದ್ದು, ಎರಡೂವರೆ ಅಡಿ ಎತ್ತರವಿದೆ. ಕಳಂಕಿತ ಹಣದಿಂದ ನೀಡಿದ ದಾನ ಪಡೆದರೆ ದೇವರ ಅವಕೃಪೆಗೆ ಒಳಗಾಗಬೇಕಾಗುತ್ತದೆ ಎಂದು ಭಕ್ತ ಆರ್.ಲಿಂಗೇಶ್ವರ ರಾವ್ ಆತಂಕ ವ್ಯಕ್ತಪಡಿಸಿದರು.ಭಕ್ತರು ದಾನ ನೀಡುವ ವಸ್ತುಗಳ ಬಗ್ಗೆ ಪ್ರಶ್ನಿಸುವಂತಿಲ್ಲ. ಅದು ಅಕ್ರಮ ಹಣದಿಂದ ಬಂದಿದೆಯೋ ಸಹಜವಾಗಿ ದುಡಿದ ಹಣದಿಂದ ಬಂದಿದೆಯೋ ಎಂದೂ ಕೇಳುವುದಿಲ್ಲ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಿ.ಸುಬ್ರಹ್ಮಣ್ಯಂ ಪ್ರತಿಕ್ರಿಯೆ ನೀಡಿದ್ದಾರೆ.2011ರ ಮೇ ತಿಂಗಳಿನಲ್ಲಿ ಕಡಪ ಲೋಕಸಭಾ ಉಪ ಚುನಾವಣೆಯಲ್ಲಿ ಜಗನ್ ಮೋಹನರೆಡ್ಡಿ ಜಯಗಳಿಸಿದ ಸಂದರ್ಭದಲ್ಲಿ ಶ್ರೀಕಾಳಹಸ್ತಿಯ ಶ್ರೀ ಜ್ಞಾನ ಪ್ರಸೂನಾಂಭಿಕಾ ದೇವಿ ದೇವಸ್ಥಾನಕ್ಕೆ 12 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಜನಾರ್ದನ ರೆಡ್ಡಿ ದಾನ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.