ಶುಕ್ರವಾರ, ಮೇ 20, 2022
23 °C
ಕೆಪಿಆರ್‌ಎಸ್ ಮುಖಂಡ ಬಸವರಾಜ ಅಸಮಾಧಾನ

ರೈತರನ್ನು ತಲುಪದ ಸರ್ಕಾರದ ಯೋಜನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ರೈತರ ಹೆಸರಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳ ಫಲ ಉಳ್ಳವರ ಪಾಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನಕಾರ್ಯದರ್ಶಿ ಯು.ಬಸವರಾಜ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಭಾನುವಾರ ಸಂಜೆ ನಡೆದ ಸಂಘದ ತಾಲ್ಲೂಕು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ತಮಗಾಗಿಯೇ ಇರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ರೈತರು ಇನ್ನೂ ಹೋರಾಟ ನಡೆಸುವಂಥ ಪರಿಸ್ಥಿತಿ ಇದೆ. ಹಾಗಾಗಿ ರೈತರು ಸಂಘಟಿತರಾಗಿ ಹಕ್ಕು ಪಡೆಯಲು ಸಿದ್ಧರಾಗಬೇಕು, ಅಲ್ಲದೇ ಪಕ್ಷಾತೀತವಾಗಿ ಅನೇಕ ರೀತಿಯ ಹೋರಾಟಗಳನ್ನು ನಡೆಸುತ್ತ ಬಂದಿರುವ ಪ್ರಾಂತ ರೈತಸಂಘ ರೈತರಿಗೆ ನೆರವಾಗಲಿದೆ ಎಂದರು.ಮುಖಂಡ ಆರ್.ಕೆ.ದೇಸಾಯಿ ಮಾತನಾಡಿ, ತಾಲ್ಲೂಕಿನ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಅನೇಕ ಚಳವಳಿ ನಡೆಸಲಾಗಿದೆ, ಹಲವುಬಾರಿ ಮನವಿ ಸಲ್ಲಿಸಿದರೂ ಅದಕ್ಕೆ ಸ್ಪಂದಿಸದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ, ಸರ್ಕಾರದ ಕೆಲಸವನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸುತ್ತಿರುವ ಇಂಥ ಬೇಜಾಬ್ದಾರಿ ಅಧಿಕಾರಿಗಳು ಮತ್ತು ಅವರನ್ನು ನಿಯಂತ್ರಿಸದ ಚುನಾಯಿತ ಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದರು.ಜಿಲ್ಲಾ ಸಮಿತಿ ಸದಸ್ಯ ದೊಡ್ಡನಗೌಡ ಬಿಜಕಲ್, ಗವಿಸಿದ್ದಪ್ಪ ಗಡಾದ, ರಾಮಣ್ಣ ಭಾವಿಕಟ್ಟಿ, ಶರಣೇಗೌಡ ಸಾಸ್ವಿಹಾಳ, ದೇವಪ್ಪ, ಸಂಗಪ್ಪ ಕಮತರ ಮತ್ತಿತರರು ವೇದಿಕೆಯಲ್ಲಿದ್ದರು. ರೈತರು, ಕೃಷಿ ಕಾರ್ಮಿಕರು ಸಮಾವೇದಲ್ಲಿ ಪಾಲ್ಗೊಂಡಿದ್ದರು.ನಿರ್ಣಯ: ಭ್ರಷ್ಟರ ನಿಗ್ರಹಕ್ಕೆ ಕಾರಣರಾಗಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಎತ್ತಂಗಡಿಗೆ ಕಾರಣರಾಗಿರುವ ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ಪ್ರತಿಭಟನೆ ನಡೆಸುವುದು ಮತ್ತು ಉದ್ಯೋಗ ಖಾತರಿ ಯೋಜನೆಯ ಮಾನವ ದಿನಗಳು ಮತ್ತು ಕೂಲಿಹಣವನ್ನು ಹೆಚ್ಚಿಸುವುದು, ವಸತಿ ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡುವಂತೆ ಸರ್ಕಾರವನ್ನು ಒತ್ತಾಯಿಸುವುದು ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಪದಾಧಿಕಾರಿಗಳು: ಪ್ರಾಂತ ರೈತ ಸಂಘದ ಅಧ್ಯಕ್ಷರನ್ನಾಗಿ ಗವಿಸಿದ್ದಪ್ಪ ಗಡಾದ, ಕಾರ್ಯದರ್ಶಿಯಾಗಿ ರಾಮಣ್ಣ ಭಾವಿಕಟ್ಟಿ ಅವರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.