ಮಂಗಳವಾರ, ಏಪ್ರಿಲ್ 13, 2021
29 °C

ರೈತರಿಗೆ ಮಾದರಿ ಲಲಿತಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ದೊಡ್ಡ ಕುಟುಂಬ, ಇರುವ ಅತ್ಯಲ್ಪ ಜಮೀನಿನಲ್ಲಿ ಜೀವನ ಸಾಗಿಸುವುದೇ ಕಷ್ಟ ಎಂದು ತಮ್ಮ ಗೋಳು ಹೇಳಿಕೊಂಡು ಬೇರೆಯವರ ಬಳಿ ಸಹಾಯಕ್ಕಾಗಿ ಕೈ ಚಾಚುವರೇ ಹೆಚ್ಚು. ಇಂತಹ ಸಮಾಜದಲ್ಲಿ ಯಾರೊಬ್ಬರ ಸಹಾಯವಿಲ್ಲದೇ ರಸಾಯನಿಕ ಕೃಷಿಯನ್ನು ದೂರವಿಟ್ಟು ಸಾವಯವ ಕೃಷಿಯ ಮೂಲಕ ಯಶಸ್ವಿಯಾದ ರೈತ ಮಹಿಳೆಯ ಕತೆಯಿದು.ಹಾವೇರಿ ತಾಲ್ಲೂಕಿನ ಕಲ್ಲಾಪುರ ಗ್ರಾಮದ ನಿವಾಸಿ ಲಲಿತವ್ವ ಹೊಸಳ್ಳಿ ತನ್ನ ಕೇವಲ 3.2 ಎಕರೆ ಜಮೀನಿನಲ್ಲಿ ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ತನ್ನ ಹತ್ತು ಜನರಿರುವ ಕುಟುಂಬ ನಿರ್ವಹಣೆ ಮಾಡುವುದರ ಜತೆಗೆ ಪುರುಷ ರೈತರಿಗೆ ಮಾದರಿಯಾಗಿ ‘ಶ್ರೇಷ್ಠ ಕೃಷಿ ಮಹಿಳೆ’ ಪ್ರಶಸ್ತಿಗೆ ಪಾತ್ರರಾದ ರೈತ ಮಹಿಳೆಯಾಗಿದ್ದಾರೆ.ಸಂಪೂರ್ಣ ಸಾವಯವ: ಲಲಿತಮ್ಮ ಅವರ ಪತಿ ಈರಪ್ಪ ಅವರು ಸಹ ಸಾಂಪ್ರಾಯಿಕ ಕೃಷಿಯನ್ನೇ ಮಾಡುತ್ತಾ ಬಂದವರು.ಆದರೆ, ಇತ್ತೀಚೆಗೆ ಅಷ್ಟು ಕಡಿಮೆ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಅದಾಯ ಕಡಿಮೆಯಾಗಿ ಕುಟುಂಬ ನಿರ್ವಹಣೆ ಕಷ್ಟವಾದಾಗ ಅನಿವಾರ್ಯವಾಗಿ ರಸಾಯನಿಕ ಕೃಷಿಯತ್ತ ವಾಲಿದರು. ಅದರಿಂದ ಆದಾಯ ಹೆಚ್ಚಾಗಿ ಕುಟುಂಬ ನಿರ್ವಹಣೆ ಸಮಸ್ಯೆ ಇಲ್ಲದಾಯಿತು. ಆದರೆ, ಮೊದಲಿನಿಂದ ಸಾಂಪ್ರದಾಯಿಕ ಕೃಷಿಯತ್ತ ಒಲವು ಹೊಂದಿದ್ದ ಲಲಿತಮ್ಮ ರಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿ ಮಾಡುವುದರ ಬಗ್ಗೆ ಚರ್ಚಿಸಿದ್ದಾರೆ. ಆಗ ಲಲಿತಮ್ಮಳ ಮಾತಿಗೆ ಮನ್ನಣೆ ನೀಡಿದ ಪತಿ ಈರಪ್ಪ ರಸಾಯನಿಕ ಕೃಷಿ ಪದ್ಧತಿಯನ್ನು ಸಂಪೂರ್ಣ ಕೈಬಿಟ್ಟು ಐದು ವರ್ಷಗಳಿಂದ ಸಂಪೂರ್ಣ ಸಾವಯವ ಕೃಷಿಯನ್ನು ಅಳವಡಿಸಿಕೊಂಡು, ಅದರ ಜವಾಬ್ದಾರಿಯನ್ನು ಲಲಿತಮ್ಮಳಿಗೆ ನೀಡಿದ್ದಾರೆ.ಪರಿಕರ ತಯಾರಿಕೆ: ಸಾವಯವ ಕೃಷಿ ಮಾಡುವಂತೆ ಪತಿಯನ್ನು ಒಪ್ಪಿಸಿ ಸುಮ್ಮನಾಗದ ಲಲಿತಮ್ಮ ಆ ಕೃಷಿಗೆ ಬೇಕಾದ ಜೀವಾಮೃತ ಹಾಗೂ ಎರೇಹುಳು ಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ಪಡೆದು ಸ್ವತಃ ತಾನೇ ಅವುಗಳನ್ನು ತಯಾರಿಸುವ ಮೂಲಕ ತನ್ನ ಮೇಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಮನೆಯಲ್ಲಿರುವ ನಾಲ್ಕು ದೇಶಿ ಆಕಳುಗಳಿಂದ ಬರುವ ಸಗಣಿ ಹಾಗೂ ಗೋಮೂತ್ರವನ್ನು ಜೀವಾಮೃತ ಹಾಗೂ ಎರೆಹುಳು ಗೊಬ್ಬರ ತಯಾರಿಸಲು ಬಳಸಿದರಲ್ಲದೇ, ಸಗಣಿ ಸಾಲದಿದ್ದಾಗ ಹೊಲದ ದಾರಿಯಲ್ಲಿ ಬಿದ್ದ ಸಗಣಿಯನ್ನು ಸಂಗ್ರಹಿಸಿ ತಮಗೆ ಬೇಕಾದಷ್ಟು ಎರೆಹುಳು ಗೊಬ್ಬರವನ್ನು ತಯಾರಿಸಿ ಅದರಲ್ಲಿಯೂ ಸ್ವಾವಲಂಬಿಯಾದರು.ಮೂರು ವರ್ಷ ಕಷ್ಟ: ರಸಾಯನಿಕ ಕೃಷಿ ಪದ್ಧತಿಯನ್ನು ಏಕಾಏಕಿ ಬಿಟ್ಟು ಸಾವಯವ ಅಳವಡಿಸಿಕೊಂಡಿದ್ದರಿಂದ ಮೂರು ವರ್ಷ ಅಷ್ಟೇನು ಹೇಳಿಕೊಳ್ಳುವಂತಹ ಬೆಳೆ ಬರಲಿಲ್ಲ. ಆಗ ಮತ್ತೆ ಕುಟುಂಬ ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಆದರೂ, ಎದೆಗುಂದದೇ ಮುಂದುವರೆದರು. ಇದರ ಪರಿಣಾಮ ಮೂರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ರಸಾಯನಿಕ ಗೊಬ್ಬರ ಬಳಸಿ ತಗೆಯುತ್ತಿದ್ದ ಉತ್ಪನ್ನಕ್ಕಿಂತ ಹೆಚ್ಚಿನ ಉತ್ಪನ್ನ ತೆಗೆದು ಸಾವಯವದಿಂದಲೂ ಹೆಚ್ಚಿನ ಬೆಳೆ ತೆಗೆಯಬಹುದು . ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪನ್ನ ಪಡೆಯಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.ಮೂರು ಎಕರೆ ಎರಡು ಗುಂಟೆ ಜಮೀನಿನಲ್ಲಿ ತೊಗರಿ, ಕಬ್ಬು, ಜೋಳ ಬೆಳೆಯುತ್ತಿದ್ದು, ಒಂದು ಎಕರೆ ಜಮೀನಿನಲ್ಲಿ ಶೇ 12 ರಷ್ಟು ಸಕ್ಕರೆ ಅಂಶವಿರುವ 40 ಟನ್ ಕಬ್ಬು ಬೆಳೆದಿದ್ದೇವೆ. ಆ ಒಂದು ಎಕರೆ ಹೊಲದಲ್ಲಿ 72 ಸಾವಿರ ರೂ.ಲಾಭ ಬಂದಿದೆ ಎಂದು ಹೇಳುತ್ತಾರೆ ಲಲಿತಮ್ಮ.ಸ್ವಲ್ಪ ಜಮೀನಿನಲ್ಲಿ ಬಿಟಿ ಹತ್ತಿಯನ್ನು ಬಿತ್ತನೆ ಮಾಡಿದ್ದರೂ ಅದಕ್ಕೆ ಯಾವುದೇ ರಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನು ಬಳಕೆ ಮಾಡಿಲ್ಲ. ಇತ್ತೀಚಗಷ್ಟೆ ಗೋಡೆಬಿದ್ದ ಕಾಲು ಮುರಿತಕ್ಕೆ ಒಳಗಾದರೂ ಊರುಗೋಲಿನಿಂದಲೇ ಹೊಲಕ್ಕೆ ತೆರಳಿ ಸಾವಯವ ಕೃಷಿ ಕುರಿತು ತಮಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳುತ್ತಾರೆ ಲಲಿತಮ್ಮಳ ಮಗ ಸುರೇಶ.ಧಾರವಾಡ ಕೃಷಿ ವಿಶ್ವವಿದ್ಯಾಲಯವು ಇತ್ತೀಚಿಗೆ ನಡೆದ ಕೃಷಿ ಉತ್ಸವದಲ್ಲಿ ಲಲಿತಮ್ಮ ಹೊಸಳ್ಳಿ ಅವರಿಗೆ ‘ಶ್ರೇಷ್ಠ ಕೃಷಿ ಮಹಿಳೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತು. ಹಾವೇರಿ ಗೆಳೆಯರ ಬಳಗವು ನಾಡಹಬ್ಬದಲ್ಲಿ ಅವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿತು.ಕೃಷಿಯಿಂದ ಯುವ ಜನತೆ ದೂರ ಸರಿಯುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ನೇಗಿಲ ಹೊತ್ತು ಸಾಗುವವರಷ್ಟೇ ರೈತರು ಎಂದು ಗುರುತಿಸಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ  ಕಾಲದಲ್ಲಿ ಅವರಿಗೆ ಸರಿಸಮಾನವಾಗಿ ನಿಂತು ಅವರಿಗಿಂತ ಹೆಚ್ಚಿನ ಸಾಧನೆ ಮಾಡಿರುವ ಕಲ್ಲಾಪುರದ ಲಲಿತಮ್ಮ ಇಡೀ ರೈತ ಸಮುದಾಯಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.