ಭಾನುವಾರ, ಮೇ 22, 2022
22 °C

ರೈತರಿಗೆ ಶೇ 1 ಬಡ್ಡಿಗೆ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರೀಕ್ಷೆಯಂತೆ ರೈತರಿಗೆ ಶೇಕಡಾ 1ರ ಬಡ್ಡಿದರದಲ್ಲಿ ಸಾಲ, ಸುವರ್ಣ ಭೂಮಿ ಯೋಜನೆಯಡಿ 10 ಲಕ್ಷ ರೈತ ಕುಟುಂಬಗಳ ಪುನರುಜ್ಜೀವನಕ್ಕೆ ವಿಶೇಷ ಯೋಜನೆ, ಕೃಷಿ ಆವರ್ತ ನಿಧಿ ಒಂದು ಸಾವಿರ ಕೋಟಿ ರೂಪಾಯಿಗೆ ಹೆಚ್ಚಳ ಸೇರಿದಂತೆ ಒಟ್ಟಾರೆ ಕೃಷಿ, ನೀರಾವರಿ ಮತ್ತು ಕೃಷಿಗೆ ಪೂರಕವಾದ ಯೋಜನೆಗಳಿಗೆ ಪ್ರತ್ಯೇಕ ಕೃಷಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.ಕೃಷಿ ಮತ್ತು ಕೃಷಿಯೇತರ ಕ್ಷೇತ್ರಗಳ ಪುನರುಜ್ಜೀವನಕ್ಕೆ ಸರ್ಕಾರ ಹೆಚ್ಚಿನ ಮಹತ್ವ ನೀಡಿದ್ದು, ಇದಕ್ಕಾಗಿ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಕೃಷಿ ಬಜೆಟ್‌ನ ಒಟ್ಟು ಗಾತ್ರ 17,857 ಕೋಟಿ ರೂಪಾಯಿ ಆಗಿದೆ. ಕೆರೆಗಳ ಪುನರುಜ್ಜೀವನ, ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯತ್ತ ಗಮನಹರಿಸಲಾಗಿದ್ದು, ಹೆಚ್ಚಿನ ಆರ್ಥಿಕ ನೆರವನ್ನೂ ಘೋಷಿಸಲಾಗಿದೆ. ಸಹಕಾರಿ ಸಂಸ್ಥೆಗಳ ಮೂಲಕ ಮೂರು ಲಕ್ಷ ರೂಪಾಯಿವರೆಗೆ ಪಡೆಯುವ ಬೆಳೆ ಸಾಲದ ಮೇಲಿನ ಬಡ್ಡಿದರವನ್ನು ಶೇ 3ರಿಂದ 1ಕ್ಕೆ ಇಳಿಸಲಾಗಿದ್ದು, ಬಡ್ಡಿದರದಲ್ಲಿ ಆಗುವ ಇಳಿಕೆಯ ವ್ಯತ್ಯಾಸದ ಹಣವನ್ನು ಸರ್ಕಾರವೇ ಭರಿಸಲಿದೆ. ಆದರೆ ವಾಣಿಜ್ಯ ಬ್ಯಾಂಕುಗಳಿಂದ ರೈತರು 50 ಸಾವಿರ ರೂಪಾಯಿವರೆಗೆ ಪಡೆಯುವ ಸಾಲದ ಮೇಲಿನ ಬಡ್ಡಿದರ ಶೇ 3ರ ಪ್ರಮಾಣದಲ್ಲಿಯೇ ಮುಂದುವರಿಯಲಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಈ ವರ್ಷ 10 ಲಕ್ಷ ಕುಟುಂಬಗಳ ಪುನರುಜ್ಜೀವನಕ್ಕೆ ಕೃಷಿ ಬಜೆಟ್‌ನಲ್ಲಿ ವಿಶೇಷ ಯೋಜನೆ ರೂಪಿಸಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಯ ಎರಡು ಲಕ್ಷ ಮತ್ತು ಪರಿಶಿಷ್ಟ ಪಂಗಡದ ಒಂದು ಲಕ್ಷ ಕುಟುಂಬಗಳು ಸೇರುತ್ತವೆ.ಈ ಯೋಜನೆ ಪ್ರಕಾರ ಪ್ರತಿಯೊಂದು ರೈತ ಕುಟುಂಬಕ್ಕೆ ನೇರವಾಗಿ ಬ್ಯಾಂಕ್ ಅಥವಾ ಸಹಕಾರಿ ಸಂಘಗಳ ಮೂಲಕ ಪ್ರೋತ್ಸಾಹ ಧನವಾಗಿ ಒಟ್ಟು 10 ಸಾವಿರ ರೂಪಾಯಿಯನ್ನು ಗರಿಷ್ಠ ಎರಡು ಎಕರೆಗೆ ಮೀರದಂತೆ ನೀಡಲಾಗುತ್ತದೆ. ಒಂದು ವೇಳೆ ಹಿಡುವಳಿ ಗಾತ್ರ ಕಡಿಮೆ ಇದ್ದರೆ ಅದೇ ಪ್ರಮಾಣದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ.10 ಸಾವಿರ ಕುಟುಂಬಗಳ ಪೈಕಿ ತೋಟಗಾರಿಕೆ ಕ್ಷೇತ್ರದಲ್ಲಿ 2.5 ಲಕ್ಷ, ರೇಷ್ಮೆ- 50 ಸಾವಿರ, ಜೈವಿಕ ಇಂಧನ- ಒಂದು ಲಕ್ಷ, ಸಾವಯವ ಕೃಷಿ- ಎರಡು ಲಕ್ಷ, ಎಣ್ಣೆ ಬೀಜ, ದ್ವಿದಳ ಧಾನ್ಯಗಳು, ಬಿ.ಟಿ ಹತ್ತಿ- ಮೂರು ಲಕ್ಷ, ಜೇನು ಸಾಕಾಣಿಕೆ- 50 ಸಾವಿರ, ಸವಳು ಪ್ರದೇಶದಲ್ಲಿ ಮೀನುಗಾರಿಕೆ- 50 ಸಾವಿರ ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದ ಸುಮಾರು 15 ಲಕ್ಷ ಎಕರೆ ಪ್ರದೇಶದ ರೈತರ ಜೀವನ ಮಟ್ಟ ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.ಈ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿ ನೀಡಲಾಗುತ್ತಿದ್ದು, ರಾಜ್ಯದ ಎಲ್ಲ ಕಡೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಏಪ್ರಿಲ್ ಒಂದರಿಂದ ಜಾರಿಗೊಳಿಸಲಾಗುತ್ತದೆ. ಇಕ್ರಿಸ್ಯಾಟ್, ಐಐಎಂಬಿ, ಐಸೆಕ್ ಮೊದಲಾದ ಸಂಸ್ಥೆಗಳ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಇದನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.ವಿಸ್ತರಣೆ: ಭೂ ಚೇತನ ಕಾರ್ಯಕ್ರಮವನ್ನು ರಾಜ್ಯದ ಎಲ್ಲ 30 ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದ್ದು, 30 ಲಕ್ಷ ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಇದಕ್ಕೆ 40 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಪ್ರತಿ ತಾಲ್ಲೂಕಿಗೆ ಮೂರು ಸಾವಿರದಂತೆ ಒಟ್ಟು 5,28,000 ರೈತ ಕುಟುಂಬಗಳಿಗೆ ಸಾವಯವ ಕೃಷಿ ಮಿಷನ್ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ರೈತರಿಗೆ ತರಬೇತಿ, ವಿದೇಶ ಪ್ರವಾಸ, ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆ ನೆರವು ಇತ್ಯಾದಿಗಳಿಗೆ 200 ಕೋಟಿ ರೂಪಾಯಿ ನೀಡಲಾಗಿದೆ.ನೀರಿನ ಸಮರ್ಪಕ ಬಳಕೆ, ಅಂತರ್ಜಲ ಸಂರಕ್ಷಣೆ ದೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಯೋಜನೆ ರೂಪಿಸಲಾಗಿದೆ. ಅಂತರಗಂಗಾ ಕಾರ್ಪೊರೇಷನ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಎರಡು ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಮತ್ತು ಎರಡು ಲಕ್ಷ ಹೆಕ್ಟೇರ್ ತೋಟಗಾರಿಕಾ ಪ್ರದೇಶವನ್ನು ಈ ಯೋಜನೆ ವ್ಯಾಪ್ತಿಗೆ ತರುತ್ತಿದ್ದು, 100 ಕೋಟಿ ರೂಪಾಯಿ ನೀಡಲಾಗಿದೆ. ಅಂತರ್ಜಲ ಕುಸಿಯುತ್ತಿರುವ ತಾಲ್ಲೂಕುಗಳಿಗೆ ಆದ್ಯತೆ ನೀಡಲಾಗುತ್ತದೆ.ಸಹಾಯಧನ: ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಟ್ರಾಕ್ಟರ್, ಟಿಲ್ಲರ್, ಭತ್ತ, ಕಬ್ಬು ನಾಟಿ ಮಾಡುವ ಯಂತ್ರ, ಕಟಾವು ಯಂತ್ರಗಳನ್ನು ಶೇ 50ರ ರಿಯಾಯಿತಿ ದರದಲ್ಲಿ ಒದಗಿಸಲು 100 ಕೋಟಿ ರೂಪಾಯಿ ನೀಡಲಾಗಿದೆ. ಕೃಷಿ ಯಂತ್ರಗಳ ವಿತರಣೆಯಲ್ಲಿ ಹಿಂದುಳಿದ ತಾಲ್ಲೂಕುಗಳಿಗೆ ಆದ್ಯತೆ ನೀಡಲಾಗುತ್ತದೆ.ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳಿಗೆ ಉತ್ತಮ ಸಂಸ್ಕರಣೆ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯವಾದ ಬಂಡವಾಳ ಮತ್ತು ಅದಕ್ಕೆ ಬೇಕಾದ ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡಲು ‘ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ’ಯನ್ನು ರೂಪಿಸಲಾಗಿದೆ. ಈ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು 51 ಸಾವಿರ ಕೋಟಿ ರೂಪಾಯಿ ಅಗತ್ಯವಿದ್ದು, ಆದ್ದರಿಂದ ಹೆಚ್ಚಿನ ಬಂಡವಾಳ ಆಕರ್ಷಿಸಲು ಜೂನ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಏರ್ಪಡಿಸಲು ಸರ್ಕಾರ ನಿರ್ಧರಿಸಿದೆ.ಸಂಸ್ಕರಣಾ ಘಟಕಗಳು, ಶೀತಲ ಸಂಗ್ರಹಾಗಾರಗಳು, ಉಗ್ರಾಣಗಳು ಮತ್ತು ಮಾರುಕಟ್ಟೆಗಳ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಕನಿಷ್ಠ 500 ಕೋಟಿ ರೂಪಾಯಿಗಳ ವಾರ್ಷಿಕ ಖಾತರಿಯೊಂದಿಗೆ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಲಾಗುತ್ತದೆ. ಪ್ರಮುಖ ಬೆಳೆಗಳಾದ ಭತ್ತ, ಜೋಳ, ರಾಗಿ, ತೊಗರಿ, ಮುಸುಕಿನ ಜೋಳ ಬೆಳೆಗಳ ಬೆಲೆಗಳು ಕೇಂದ್ರ ಸರ್ಕಾರ ಸೂಚಿಸುವ ಕನಿಷ್ಠ ಬೆಲೆಗಿಂತ ಕಡಿಮೆ ಆಗದಂತೆ ನೋಡಿಕೊಳ್ಳಲು ಕೃಷಿ ಆವರ್ತ ನಿಧಿಯನ್ನು ಒಂದು ಸಾವಿರ ಕೋಟಿ ರೂಪಾಯಿಗೆ ಏರಿಸಲಾಗಿದೆ.ಮುಂದಿನ ನಾಲ್ಕು ವರ್ಷಗಳಲ್ಲಿ ಭತ್ತ ಮತ್ತು ಕಬ್ಬಿನ ಉತ್ಪಾದನೆಯನ್ನು ತಲಾ ನಾಲ್ಕರಿಂದ ಎಂಟು ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದ್ದು, ಇದಕ್ಕಾಗಿ 9 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಗರಿಷ್ಠ ಎರಡು ಹೆಕ್ಟೇರ್ ಮಿತಿಯೊಳಗಿನ ಎಲ್ಲ ವರ್ಗದ ರೈತರಿಗೆ ಶೇ 50ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಪೂರೈಸಲು 60 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ.ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬೀಜೋತ್ಪಾದನೆ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ರೈತರಿಗೆ ಗುಣಮಟ್ಟದ ಬೀಜಗಳು ದೊರಕುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಐದು ಕೋಟಿ ರೂಪಾಯಿ ನೀಡಲಾಗುತ್ತದೆ.   ಏಕಗವಾಕ್ಷಿ ಯೋಜನೆ: ರೈತರಿಗೆ ಸಹಾಯಧನ ನೀಡುವ ಎಲ್ಲ ಇಲಾಖೆಗಳನ್ನು ಸೇರಿಸಿ ‘ಏಕಗವಾಕ್ಷಿ’ ಯೋಜನೆಯಡಿ ವಿತರಣೆಯಾಗುವಂತೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಗುಬ್ಬಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಇದು ಯಶಸ್ವಿಯಾಗಿದ್ದು, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.