ಬುಧವಾರ, ಮೇ 12, 2021
24 °C

ರೈತರಿಗೆ 3.83 ಕೋಟಿ ಸಾಲ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಕೇಂದ್ರ ಸರ್ಕಾರದ ಆದೇಶದಂತೆ ಸಣ್ಣ ರೈತರಿಗೆ ಸುಲಭ ಕೃಷಿ ಸಾಲ ನೀಡುವ `ಕಿಸಾನ ವಿಕಾಸ ವರ್ಷ~ ಯೋಜನೆಯಡಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಸವಣೂರು ತಾಲ್ಲೂಕಿನ 518 ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3.83 ಕೋಟಿ ರೂ.ಗಳ ಸಾಲವನ್ನು ವಿತರಣೆ ಮಾಡಿತು.ಸವಣೂರ ಪಟ್ಟಣದಲ್ಲಿ ಗುರುವಾರ ನಡೆದ ಸಾಲ ವಿತರಣಾ ಸಮಾರಂಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಸಿ. ಸಾಂಬಶಿವರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಲೇವಾದೇವಿಗಾರರ ಕಪಿ ಮುಷ್ಠಿಯಿಂದ ಪಾರು ಮಾಡುವ ಉದ್ದೇಶದಿಂದ ಶೇ. 7ರ ಬಡ್ಡಿ ದರದಲ್ಲಿ ತಮ್ಮ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ ಎಂದು ಹೇಳಿದರು.ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ತನ್ನ ವ್ಯಾಪ್ತಿಯ ಹಾವೇರಿ ಜಿಲ್ಲೆ ಸೇರಿದಂತೆ 9 ಜಿಲ್ಲೆಗಳಲ್ಲಿ ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯದೇ ಇರುವ 15 ಸಾವಿರ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿದೆ. ಈಗಾಗಲೇ 10 ಸಾವಿರ ಕೃಷಿಕರಿಗೆ ಕೋಟಿ ರೂ.ಗಳ ಸಾಲ ನೀಡಲಾಗಿದೆ ಎಂದು ತಿಳಿಸಿದರು.ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಸಾಲ ನೀಡುವಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಂಚೂಣಿ ಯಲ್ಲಿದ್ದು, ಸಾಮಾನ್ಯ ರೈತರಿಗೂ ಒಂದು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಸಾಲ ಪಾವತಿಸುವ ಮೂಲಕ ಕೃಷಿ ಸಂಘದ ಏಳ್ಗೆಗೆ ತನ್ನ ಬದ್ಧತೆ ಯನ್ನು ಮುಂದುವರಿಸಿದೆ ಎಂದರು.ಸಮಾರಂಭವನ್ನು ಉದ್ಘಾಟಿಸಿದ ಸವಣೂರು ತಹಸೀಲ್ದಾರ್ ಡಾ.ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ಬಡ ರೈತರ ಮನೆ ಬಾಗಿಲಿಗೆ ಹೋಗಿ ಸುಲಭ ಕೃಷಿ ಸಾಲ ವಿತರಿಸುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಯತ್ನವನ್ನು ಶ್ಲಾಘಿಸಿದರಲ್ಲದೇ, ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನೊಂದಿಗೆ ಸಹಕರಿಸಬೇಕೆಂದು ಸಲಹೆ ಮಾಡಿದರು.ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ದೊಡ್ಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹಾವೇರಿ ಪ್ರಾದೇಶಿಕ ಕಚೇರಿ ಪ್ರಬಂಧಕ ಕೆ. ಪಾಂಡು ಸ್ವಾಗತಿಸಿದರು. ಬ್ಯಾಂಕ್‌ನ  ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕ ಎ.ಎ. ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಶಾಖಾಧಿಕಾರಿ ಆರ್.ಬಿ. ಕೊಲ್ಲಾಪುರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.