ಮಂಗಳವಾರ, ಮೇ 11, 2021
25 °C

ರೈತರ ಪ್ರಶ್ನೆ: ಸಚಿವ ಜಯಚಂದ್ರ ಸುಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಕೊಬ್ಬರಿ ಖರೀದಿ ಕೇಂದ್ರದ ಉದ್ಘಾಟನೆ ಮರುದಿನವೇ  ಸ್ಥಗಿತಗೊಳಿಸಿದರೆ ಹೇಗೆ? ರೈತರು ಏನು ಮಾಡಬೇಕು? ಖರೀದಿಸಿದ ಕೊಬ್ಬರಿಗೆ ದುಡ್ಡು ಯಾವಾಗ ಕೊಡುತ್ತೀರಿ ? ಖಾಸಗಿ ವರ್ತಕರ ದಬ್ಬಾಳಿಕೆ ಹೇಗೆ ತಡೆಗಟ್ಟುತ್ತೀರಿ? ಬೆಲೆ ಸ್ಥಿರತೆ ಇರುತ್ತದಾ? ಬರಗಾಲ ಬಿದ್ದು ತೆಂಗಿನ ಮರಗಳೇ ಒಣಗಿ ನಿಂತಿರುವಾಗ 40 ಎಂ.ಎಂ. ಗಾತ್ರದ ಕೊಬ್ಬರಿಯನ್ನೇ ಕೊಳ್ಳುತ್ತೇವೆಂದರೆ ನಮ್ಮ ಕೊಬ್ಬರಿ ಏನು ಮಾಡಬೇಕು?ಹೀಗೆ ರೈತರು ಪ್ರಶ್ನೆಗಳ ಸುರಿಮಳೆಗರೆದಾಗ ಸ್ಥಳೀಯ ಎಪಿಎಂಸಿಯಲ್ಲಿ ಸೋಮವಾರ ಸಹಕಾರಿ ಮಹಾಮಂಡಲದ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಲು ಬಂದ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸುಸ್ತಾದರು. ತುರ್ತಾಗಿ ಬೆಂಗಳೂರಿಗೆ ಹೋಗಬೇಕಿದ್ದ ಸಚಿವರು ತಮ್ಮ ಕಾರ್ಯಕ್ರಮ ಮುಂದೂಡಿ ಎಪಿಎಂಸಿ ಸಭಾಂಗಣದಲ್ಲಿ ದಿಢೀರ್ ಸಭೆ ನಡೆಸಿದರು. ಸಭೆಯಲ್ಲಿ ರೈತರು  ಕೊಬ್ಬರಿ ಖರೀದಿ ಸಂಬಂಧ ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಎಳೆ ಎಳೆಯಾಗಿ ಬಿಡಿಸಿಟ್ಟರು.ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ರೂ.5500 ಮೀರಿದ ಕೂಡಲೇ ಸಹಕಾರಿ ಮಹಾಮಂಡಲದ ಖರೀದಿ ಕೇಂದ್ರ ರೈತರಿಂದ ಕೊಬ್ಬರಿ ಖರೀದಿ ನಿಲ್ಲಿಸುತ್ತದೆ. ಸೋಮವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ದರ ರೂ. 5600 ಆಸುಪಾಸಿನಲ್ಲಿದೆ. ಅಲ್ಲಿನ ದರದಲ್ಲೇ ಇಲ್ಲಿನ ಎಪಿಎಂಸಿಯಲ್ಲಿ ಮರು ದಿನ ಕೊಬ್ಬರಿ ಮಾರಾಟವಾಗುವುದು ವಾಡಿಕೆ. ಹಾಗಿದ್ದರೆ ಸೋಮವಾರ ಉದ್ಘಾಟನೆಗೊಂಡ ಖರೀದಿ ಕೇಂದ್ರ ಮಂಗಳವಾರವೇ ಸ್ಥಗಿತಗೊಳ್ಳುತ್ತದಾ ? ಎಂಬ ರೈತರ ಪ್ರಶ್ನೆಗೆ ಸಚಿವರ ಬಳಿಯೂ ತಕ್ಷಣದ ಉತ್ತರವಿರಲಿಲ್ಲ. ಸಚಿವರು ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ಕೂಡಲೇ ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ರೈತರನ್ನು ಸಮಾಧಾನಪಡಿಸಿದರು.ಸಹಕಾರಿ ಮಹಾ ಮಂಡಲದ ನಿರ್ದೇಶಕ ಕೆ.ಷಡಕ್ಷರಿ ನಫೆಡ್ ಕೂಡ ನಷ್ಟದಲ್ಲಿದೆ. ಕೊಬ್ಬರಿ ಚೀಲಗಳಲ್ಲಿ ಕಲ್ಲು, ಹೊಟ್ಟು ತುಂಬಿಸಿ ವಂಚಿಸಲಾಗುತ್ತಿದೆ ಎಂದಾಗ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ರೈತರು ಅಂಥ ವಂಚನೆ ಮಾಡುವುದಿಲ್ಲ. ವರ್ತಕರು, ಮಧ್ಯವರ್ತಿಗಳ ಕೆಲಸ ಇದು. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ರೈತರು ಗುಡುಗಿದರು. ಅಂಥ ವರ್ತಕರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಷಡಕ್ಷರಿ ಭರವಸೆ ನೀಡಿದರು.ವರ್ತಕರು ರೈತರ ಪಾಣಿಯನ್ನು ವಶದಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಕೊಬ್ಬರಿ ಮಾರಿ ಸರ್ಕಾರದ ಸಹಾಯಧನ ಪಡೆಯುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಖರೀದಿಸಿದ ಕೊಬ್ಬರಿಯನ್ನೇ ಖರೀದಿ ಕೇಂದ್ರದಲ್ಲಿ ಮರು ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂದು ರೈತರು ಆರೋಪಿಸಿದರು.ಇದಕ್ಕೆ ಉತ್ತರಿಸಿದ ಸಚಿವ ಜಯಚಂದ್ರ ತೆರಿಗೆ ವಂಚಕರನ್ನು, ರೈತರನ್ನು ಶೋಷಿಸುವವರನ್ನು ಶಿಕ್ಷಿಸಲು ವಿಶೇಷ ಕಾನೂನು ಮಾಡಲಾಗುವುದು. ಖರೀದಿ ಕೇಂದ್ರದ ಮೂಲಕ ಕೊಳ್ಳಲಾಗುವ ಕೊಬ್ಬರಿಗೆ ಮೂರೇ ದಿನದಲ್ಲಿ ಹಣ ರೈತರ ಕೈ ಸೇರುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಆರಂಭಿಕ ಹಂತದಲ್ಲಿ ರೂ.10 ಕೋಟಿ ಮೀಸಲಿಡಲಿದೆ. ಜಿಲ್ಲೆಯಲ್ಲಿ 12 ಖರೀದಿ ಕೇಂದ್ರ ತೆಗೆಯಲಾಗುವುದು. ಅಗತ್ಯ ಬಿದ್ದರೆ ಟಿಎಪಿಸಿಎಂಸ್‌ಗಳ ಮೂಲಕ ಸಹ ರೈತರ ಕೊಬ್ಬರಿ ಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಸಂಸದ ಜಿ.ಎಸ್.ಬಸವರಾಜು, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ವರ್ತಕ ಎಂ.ಡಿ.ಮೂರ್ತಿ, ಕಡೇಹಳ್ಳಿ ಸಿದ್ದೇಗೌಡ ಸಲಹೆ ನೀಡಿದರು. ಮಹಾಮಂಡಲದ ವಿಭಾಗ ಮಾರಾಟ ವ್ಯವಸ್ಥಾಪಕಿ ಲಕ್ಷ್ಮೀ, ತುಮಕೂರು ಶಾಖಾ ನಿಬಂಧಕಿ ಶಿಲ್ಪಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.