ಬುಧವಾರ, ಏಪ್ರಿಲ್ 21, 2021
31 °C

ರೈತರ ಮೇಲೆ ಆಪಾದನೆ ಸಹಿಸುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ (ಜೆಸ್ಕಾಂ) ಅಧಿಕಾರಿಗಳು ಅನಗತ್ಯವಾಗಿ ರೈತರು ವಿದ್ಯುತ್ ದುರ್ಬಳಕೆ ಮಾಡುತ್ತಿದ್ದಾರೆ. ಅಕ್ರಮ ಪಂಪಸೆಟ್‌ಗಳ ಹಾವಳಿ ನಿಯಂತ್ರಣ ಸಮಸ್ಯೆಯಾಗಿದೆ ಎಂದು ಆಪಾದನೆ ಮಾಡುವುದನ್ನು ತಾವು ಸಹಿಸುವುದಿಲ್ಲ. ಅಕ್ರಮ ಸಕ್ರಮ ಯೋಜನೆಯಡಿ ಹಣ ಪಾವತಿಸಿದ ಎಷ್ಟು ರೈತರಿಗೆ ನೀವು ನ್ಯಾಯ ಕಲ್ಪಿಸಿದ್ಧೀರಿ ಎಂದು ಕರ್ನಾಟ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆಕ್ರೋಶ ವ್ಯಕ್ತಪಡಿಸಿದರು.ಗುರುವಾರ ಜೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಕರೆದಿದ್ದ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಜೆಸ್ಕಾಂ ಸಿಬ್ಬಂದಿ ತಮ್ಮ ರೈತರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದೆ ಹೋದರೆ ಬೀದಿಗಳಿದು ಹೋರಾಟ ಮಾಡಬೇಕಾಗುತ್ತದೆ. ರೈತರ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಮೇಲಿಂದ ಮೇಲೆ ಭಸ್ಮವಾಗುವ ವಿದ್ಯುತ್ ಪರಿವರ್ತಕ ದುರಸ್ತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ಮಾಡಿದರು.ಮುಖಂಡ ಸಂಗಣ್ಣ ಮೇಟಿ ಮಾತನಾಡಿ ರಸ್ತೆಗಳ ಮಧ್ಯದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಬೇಕು. ತೋಟ ಪಟ್ಟಿಗಳಲ್ಲಿ ಖಾಸಗಿ ವ್ಯಕ್ತಿಗಳು ತಮ್ಮ ಕಂಬ ಎಂದು ಬಾಡಿಗೆ ಪಡೆಯುವುದರ ಮೇಲೆ ಕ್ರಮ ಕೈಗೊಳ್ಳಬೇಕು. ಹಗಲು ರಾತ್ರಿ ಉರಿಯುತ್ತಿರುವ ವಿದ್ಯುತ್ ದುರ್ಬಳಕೆ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅಸಹಾಯಕ ವ್ಯಕ್ತಿ ಗುಡಿಹಾಳದ ಶೇಖರಪ್ಪರಂತಹ ಮನೆಗಳ ಮೇಲಿನ ವಿದ್ಯುತ್ ವಾಯರ್ ಸ್ಥಳಾಂತರಿಸಿ ಸಾಮಾಜಿಕ ನ್ಯಾಯ ನೀಡುವಂತೆ ಮನವಿ ಮಾಡಿದರು.ಕಾರ್ಯನಿರ್ವಾಹಕ ಎಂಜಿನಿಯರ್ ಪಟ್ಟಣಶೆಟ್ಟಿ ಮಾತನಾಡಿ, ರೈತರು, ಗ್ರಾಹಕರಿಗೆ ಪ್ರೀತಿ ವಿಶ್ವಾಸದಿಂದ ಕಂಡು ಉತ್ತಮ ಸೇವೆ ನೀಡುವುದು ಮೊದಲ ಗುರಿ. ಆ ರೀತಿ ಯಾರಾದರು ಅನುಚಿತ ವರ್ತನೆ ನಡೆಸಿದ್ದರೆ ತಾವು ಕ್ಷಮೆಯಾಚಿಸುವುದಾಗಿ ಸಮಾಧಾನಪಡಿಸಿದರು.

ಜೆಸ್ಕಾಂ ಕೂಡ ಒಂದು ಪ್ರತ್ಯೇಕ ಸಂಸ್ಥೆಯಾಗಿರುವುದರಿಂದ ಸೇವೆ ಜೊತೆಗೆ ನೀಡಿದ ಸೌಲಭ್ಯಕ್ಕೆ ಪ್ರತಿಫಲವಾಗಿ ನಿರೀಕ್ಷಿತ ಆದಾಯ ಪಡೆಯುವುದು ಮುಖ್ಯ. ಕಾರಣ ಗ್ರಾಹಕರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಿಯಾಜಅಹ್ಮದ, ಹುಲಿಗೇಶ. ಸಹಾಯಕ ಎಂಜಿನಿಯರ್‌ಗಳಾದ ನೂರಜಾಬೇಗಂ, ಮಲ್ಲಿಕಾರ್ಜುನ. ಶಾಖಾಧಿಕಾರಿಗಳಾದ ಮುದ್ದನಗೌಡ, ನಡುವಿನಮನಿ, ದರಬಾರಅಲಿ, ಹನುಮಂತಪ್ಪ, ಸುರೇಶ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.