ಗುರುವಾರ , ಮೇ 13, 2021
34 °C

`ರೈತರ ಸಮಸ್ಯೆ ಚರ್ಚೆಗೆ ಶೀಘ್ರವೇ ಸಿಎಂ ಜತೆ ಸಭೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಗೋಲಿಬಾರ್‌ನಲ್ಲಿ ಗಾಯಗೊಂಡವರಿಗೆ ಪರಿಹಾರ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಿ ನಾರಾಯಣಗೌಡರು ತಿಳಿಸಿದರು.ನಗರದಲ್ಲಿ ಸೋಮವಾರ ಏರ್ಪಡಿಸಿದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅದೇ ಸಮಯದಲ್ಲಿ ರೈತ ಸಮಸ್ಯೆಗಳ ಪರಿಹಾರಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿ ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದು ಹೇಳಿದರು.ಮುಖ್ಯಮಂತ್ರಿಗಳ ಜತೆ ದೂರವಾಣಿ ಮೂಲಕ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಅವರೇ ಈ ಕುರಿತು ಶೀಘ್ರ ಸಭೆ ಕರೆಯುವ ಭರವಸೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಪರಿಹಾರದ ಕುರಿತು ಜೂ.15 ರಂದು ಸಭೆ ಸೇರಿ ಕ್ರಿಯಾಯೋಜನೆ ಸಿದ್ಧಪಡಿಸುವುದಾಗಿ ತಿಳಿಸಿದರು.ಮುಖ್ಯಮಂತ್ರಿಗಳ ಸಭೆಯಲ್ಲಿ ರಾಜ್ಯದ ಪ್ರಮುಖ 500 ಜನ ರೈತ ಮುಖಂಡರು ಭಾಗವಹಿಸಲಿದ್ದೇವೆ. ರೈತರಿಗೆ ಪ್ರಮುಖವಾಗಿ ಎದುರಾಗುವ ಸಮಸ್ಯೆಗಳಾದ ಮಾರುಕಟ್ಟೆ ಸಮಸ್ಯೆ. ಬೆಳೆಗಳಿಗೆ ವೈಜ್ಞಾನಿಕ ಬೆಳೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.ಹಾವೇರಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗನ್ನಾಥ ಶೆಟ್ಟಿ ಆಯೋಗ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಿ ಅದರಲ್ಲಿ ರೈತರಿಗೆ ಅನುಕೂಲವಾಗುವ ಕ್ರಮಗಳನ್ನು ಜಾರಿಗೆ ತರಬೇಕು. ಗಾಯಾಳುಗಳಿಗೆ ಕೂಡಲೇ ಹೆಚ್ಚಿನ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ರೈತರ ಪ್ರತಿಯೊಂದು ಬೆಳೆಗಳಿಗೂ ಬೆಲೆ ನಿಗದಿತಗೊಳಿಸಬೇಕು. ವೈಜ್ಞಾನಿಕ ತಳಹದಿ ಮೇಲೆ ರೈತರ ಅಭಿಪ್ರಾಯ ಸಂಗ್ರಹಿಸಿ ಬೆಲೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ವಿದ್ಯುತ್ ಸಮಸ್ಯೆ, ನೀರಾವರಿ ಸಮಸ್ಯೆಗಳನ್ನು ಬಗೆಹರಿಸಬೇಕು. ಕೃಷಿ ಪರಿಕರಗಳಿಗೆ 100ಕ್ಕೆ ಶೇ.75ರಷ್ಟು ಸಹಾಯಧನವನ್ನು ಸರ್ಕಾರ ನೀಡಬೇಕು. ಮುಂಗಾರು ಬಿತ್ತನೆಗೆ ಮುನ್ನವೇ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತುಂಗಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು. ಬೈರಂಪಾದದಲ್ಲಿ ಏತ ನೀರಾವರಿ, ಯಲಿವಾಳ ಏತ ನೀರಾವರಿ, ಮದಗ ಮಾಸೂರು ಏತ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮೂರ್ತಿ ಸ್ಥಾಪಿಸಿ: ಮುಂದಿನ ವರ್ಷದೊಳಗೆ ಹುತಾತ್ಮರಾದ ಸಿದ್ದಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಅವರ ಮೂರ್ತಿಗಳನ್ನು ಸಿದ್ದಪ್ಪ ಹೊಸಮನಿ ಸರ್ಕಲ್‌ನಲ್ಲಿ ಸರ್ಕಾರವೇ ಸ್ಥಾಪಿಸಬೇಕು.ಅಲ್ಲದೆ ಗೌರವ ಸೂಚಿಸುವ ವ್ಯವಸ್ಥೆ ಆಗಬೇಕು. ಪ್ರತಿವರ್ಷ ರೈತರ ಹುತಾತ್ಮ ದಿನವನ್ನು ಸರ್ಕಾರದ ವತಿಯಿಂದ ಆಚರಿಸಲು ಅಧಿಸೂಚನೆ ಹೊರಡಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಮುಖಂಡರಾದ ಬಿ.ಎಂ.ಜಯದೇವ, ಗದಿಗೆಪ್ಪ ದಾನಮ್ಮನವರ, ರಾಜಶೇಖರ ದೂದಿಹಳ್ಳಿ, ಶಿವನಗೌಡ ಪಾಟೀಲ, ಪೀರಪ್ಪ ಪೂಜಾರ, ಶಿವನಗೌಡ ಹೊಸಗೌಡರ, ಮಲ್ಲನಗೌಡ ಸೊರಟೂರು, ರಾಜು ಕುಗೂರ, ಈರಣ್ಣ ಕೆರೂರು, ಉಮೇಶ ಹೊಸಮನಿ, ಗುತ್ತೆಪ್ಪ ಗುಡಿಹಿಂದ್ಲರ್, ಈರಣ್ಣ ಬೇತೂರು, ಬಸಪ್ಪ ವಡ್ಡರ, ಪರಮೇಶಪ್ಪ ಕಾಳಮ್ಮನವರ, ಹನುಮಂತಪ್ಪ ಕಬ್ಬಾರ, ಶಿವಯೋಗಿ ಬೆನ್ನೂರು,  ಶಿವಯೋಗಿ ಮಲ್ಲೇನಹಳ್ಳಿ, ಬಸವರೆಡ್ಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.