ಶುಕ್ರವಾರ, ಮೇ 7, 2021
25 °C

ರೈತರ ಹತಾಶ ಸ್ಥಿತಿ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಮಧ್ಯಮ ಹಾಗೂ ಸಣ್ಣ ರೈತರ ಜೀವನಮಟ್ಟ ಬಡತನ ರೇಖೆಗಿಂತ ಕೆಳಗೆ ಇದೆ. ಈ ಎರಡೂ ವರ್ಗಗಳು ಕೃಷಿಯಲ್ಲಿ ಭವಿಷ್ಯ ಇಲ್ಲ ಎಂಬ ಹತಾಶೆಯ ಸ್ಥಿತಿಗೆ ತಲುಪಿದ್ದಾರೆ' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಪ್ರೊ.ಕೆ.ಎಂ.ಜಯರಾಮಯ್ಯ ಕಳವಳ ವ್ಯಕ್ತಪಡಿಸಿದರು. ನಗರದ ಕೃಷಿ ತಂತ್ರಜ್ಞರ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹ್ಯಾನ್ಸ್ ಇ.ಕಾರ್ಡೆಲ್ ಮತ್ತು ಬಿ.ಜೆ.ನಂಜುಂಡಪ್ಪ ಸ್ಮಾರಕ ದತ್ತಿ ಉಪನ್ಯಾಸದಲ್ಲಿ `ಕೃಷಿ-ಉತ್ತಮ ಜೀವನಕ್ಕಾಗಿ ರೈತರ ಹೋರಾಟ' ಕುರಿತು ಉಪನ್ಯಾಸ ನೀಡಿದರು.`ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಎಪಿಎಂಸಿಗಳು ರೈತರಿಗೆ ನೆರವಾಗುತ್ತಿಲ್ಲ. ಬಹುತೇಕ ಕೃಷಿ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ದೊರಕುತ್ತಿಲ್ಲ. ಈ ಸಮಸ್ಯೆಗಳನ್ನು ನಿವಾರಿಸಲು ಕೃಷಿ ಉತ್ಪನ್ನ ಬೆಲೆ ಆಯೋಗ ಸ್ಥಾಪಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿದರು.`1,200 ಅಡಿ ಕೊರೆದರೂ ಕೊಳವೆಬಾವಿಗಳಲ್ಲಿ ನೀರು ದೊರಕುತ್ತಿಲ್ಲ. ಕೊಳವೆಬಾವಿಗಳು ಮೂರೇ ವರ್ಷಗಳಲ್ಲಿ ಬತ್ತಿ ಹೋಗುವ ದಯನೀಯ ಸ್ಥಿತಿ ಇದೆ. ವಿದ್ಯುತ್ ಪೂರೈಕೆ ಸಮಸ್ಯೆಯೂ ಕೃಷಿ ಹಿನ್ನಡೆಗೆ ಮತ್ತೊಂದು ಕಾರಣ.  ಗೋಮಾಳಗಳು ಮಾಯವಾಗುತ್ತಿವೆ. ಮಳೆಯ ಕಣ್ಣುಮುಚ್ಚಾಲೆಯಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದರು. ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಕೆ.ಎಸ್.ಕೃಷ್ಣ ಮಾತನಾಡಿ, `ಬೇರೆ ಉದ್ಯೋಗ ದೊರಕದೇ ಇದ್ದಾಗ ಕೊನೆಯ ಆದ್ಯತೆಯಾಗಿ ಯುವಜನರು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ. ಪೋಷಕರು ದಡ್ಡ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಪ್ರವೃತ್ತಿ ಇದೆ. ಇಂತಹ ಸ್ಥಿತಿ ಇರುವಾಗ ಕೃಷಿ ಕ್ಷೇತ್ರದ ಸುಧಾರಣೆ ಹೇಗೆ ನಿರೀಕ್ಷಿಸಲು ಸಾಧ್ಯ' ಎಂದು ಪ್ರಶ್ನಿಸಿದರು.ದಾವಣಗೆರೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಬಿ.ದುರ್ಗಪ್ಪ `ದಾವಣಗೆರೆ ತಾಲ್ಲೂಕಿನಲ್ಲಿ ಕೃಷಿ ವಿಸ್ತರಣೆ ಅನುಭವಗಳು' ಕುರಿತು ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.