ಭಾನುವಾರ, ಜನವರಿ 19, 2020
22 °C

ರೈತ ಮಿತ್ರ ಹುತ್ತದ ಸುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತ ಮಿತ್ರ ಹುತ್ತದ ಸುತ್ತ

‘ಠಾಕ ಠೀಕಿಯ ಮನೆ

ಟಗರ ಘಂಟೆಯ ಮನೆ

ಉಳಿ ಬಾಚಿ ಮುಟ್ಟದ ಮನೆ’...

- ಇದು ಒಗಟು. ಅದನ್ನು ಬಿಡಿಸಿದಾಗ; ಚಾಕ ಚಕ್ಯತೆ, ಚಮತ್ಕಾರ ಮತ್ತು ಸೊಗಸುಗಾರಿಕೆಯಿಂದ, ಟಗರು ಕೊಂಬಿನ ಆಕೃತಿಯಲ್ಲಿ, ಬಡಗಿ ಕೆಲಸಗಾರ ಬಾಗಿಲು, ಕಿಟಕಿ ತಯಾರಿಸಲು ಉಪಯೋಗಿಸುವ ಉಳಿ, ಬಾಚಿ ಬಳಸದೇ ನಿರ್ಮಿಸಿರುವ ಮನೆ ಅದು.

ಇದು ರೈತನ ಮಿತ್ರ ಗೆದ್ದಲು ಹುಳು ನಿರ್ಮಿಸಿದ ಗೂಡು. ಅಂದರೆ, ಹಾವಿನ ವಾಸಸ್ಥಾನವಾಗಿ, ನಾಗರ ಪಂಚಮಿ ಹಾಗೂ ಗಣೇಶ ಹಬ್ಬಕ್ಕೆ ಎಲ್ಲಿಲ್ಲದ ಮಹತ್ವ ಪಡೆಯುವ ಹುತ್ತ!ಹಾವಿನ ವಾಸಸ್ಥಾನ ಹುತ್ತ ಎಂದು ನಂಬಿರುವ ಜನರು ಹಿಂದಿನಿಂದಲೂ ಹುತ್ತಕ್ಕೆ ಹಾಲೆರೆಯುತ್ತಾ ಬಂದಿದ್ದಾರೆ. ಆದರೆ, ಅದು ನಾಗರ ಹಾವು ನಿರ್ಮಿಸಿಕೊಂಡ ಮನೆಯಲ್ಲ. ಬದಲಿಗೆ ಗೆದ್ದಲು ಹುಳು ಕಟ್ಟಿದ ಗೂಡು. ಗೆದ್ದಲು ಹುಳು ಕಟ್ಟಿದ ಗೂಡಿನ ರಂಧ್ರದ ಮೂಲಕ ಒಳ ಸೇರುವ ಹಾವುಗಳಿಗೆ ಅದೇ ವಾಸದ ನೆಲೆಯಾಗುತ್ತದೆ.ಈ ಗೆದ್ದಲು ಹುಳು ತನ್ನ ಪರಿಶ್ರಮದಿಂದ ಗೂಡು ನಿರ್ಮಿಸಿ ಹಾವುಗಳಿಗೆ ಮಾತ್ರ ಆಶ್ರಯ ನೀಡುವುದಿಲ್ಲ. ಬದಲಿಗೆ, ಭೂಮಿಯಲ್ಲಿ ನೀರು ಇಂಗಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ. ಜಮೀನಿನೆಲ್ಲೆಡೆ ಇರುವ ಗೆದ್ದಲುಗಳ ಪುಟ್ಟ, ಪುಟ್ಟ ಗೂಡುಗಳು ನೀರು ಇಂಗುವಂತೆ ಮಾಡಿ, ಭೂಮಿ ತೇವಾಂಶ ಹಿಡಿದಿಡಲು ಸಹಕಾರಿ ಆಗುತ್ತವೆ. ಜತೆಗೆ, ಜಮೀನಿನಲ್ಲಿನ ಕಸ, ಕಡ್ಡಿ, ತ್ಯಾಜ್ಯವನ್ನು ತಿನ್ನುವ ಗೆದ್ದಲುಗಳು ಬೆಳೆಗಳಿಗೆ ಉತ್ತಮ ಗೊಬ್ಬರವನ್ನು ಒದಗಿಸುತ್ತದೆ. ಹೀಗಾಗಿ, ಅದು ಬರಿ ಗೆದ್ದಲು ಅಲ್ಲ. ರೈತನ ಮಿತ್ರ!ಹುತ್ತ ರಚನೆಯಾಗುವ ಪರಿ

ಗೆದ್ದಲು ಹುಳು ಭೂಮಿಯಲ್ಲಿ ಹುದುಗಿರುವ ಕಸ, ಕಡ್ಡಿ, ಸಾವಯವಯುಕ್ತ ಕಟ್ಟಿಗೆ, ಮರ ಕಡಿದು ಬಿಟ್ಟಿರುವ ಮರದ ಬುಡವನ್ನು ತಿನ್ನುತ್ತವೆ. ಗೆದ್ದಲು ಹುಳುಗಳ ಸಮೂಹದಲ್ಲಿ  ರಾಣಿಹುಳು, ಕಾರ್ಮಿಕ ಹುಳು ಹಾಗೂ ಸೈನಿಕ ಹುಳು ಎಂಬ ಮೂರು ವಿಧಗಳಿವೆ.ರಾಣಿ ಹುಳು ಮೊಟ್ಟೆ ಇಡುವ ಮೂಲಕ ಸಂತಾನ ಅಭಿವೃದ್ಧಿಯ ಕಾರ್ಯ ನಿರ್ವಹಿಸುತ್ತದೆ. ಕಾರ್ಮಿಕ ಹುಳು ಆಹಾರ ಹುಡುಕಾಟ ಹಾಗೂ ಮನೆ ನಿರ್ಮಾಣ  ಕಾರ್ಯ ಮಾಡುತ್ತದೆ. ತಾವೇ ಆಹಾರ ಸೇವಿಸಿ ಹಾಕಿದ ತ್ಯಾಜ್ಯ, ಮಣ್ಣು, ಆಹಾರ ಸೇವಿಸುವ ವೇಳೆ ಬರುವ ಕಟ್ಟಿಗೆಯ ಪುಟ್ಟ-ಪುಟ್ಟ ಎಳೆಗಳನ್ನು ತನ್ನ ಬಾಯಿಯಿಂದ ಉತ್ಪಾದಿಸುವ ಜೊಲ್ಲು ರಸ ಬೆರೆಸಿ ಸುರಕ್ಷಿತವಾಗಿ ಮನೆ ನಿರ್ಮಿಸುತ್ತದೆ. ಮಣ್ಣಿನ ಪುಟ್ಟ-ಪುಟ್ಟ ಹುಂಡಿಗಳನ್ನು ಪೇರಿಸುತ್ತಾ ಸಾಗುತ್ತದೆ. ಈ ನಡುವೆ ಅತಿ ಸೂಕ್ಷ್ಮವಾದ ರಂಧ್ರಗಳು ಇರುತ್ತವೆ. ಮಣ್ಣಿಗೆ ಜೊಲ್ಲುರಸ ಬೆರೆಸುವುದರಿಂದ ಮಳೆ ಬಂದಾಗಲೂ ಗೂಡು ಹಾಳಾಗದಂತೆ ತಡೆಯುತ್ತದೆ.  ಹೀಗಾಗಿ, ಈ ಮಣ್ಣು ಗಣೇಶ ಮೂರ್ತಿ ತಯಾರಿಕೆ­ಯ­ಲ್ಲಿಯೂ ಮಹತ್ವ ಪಡೆಯುತ್ತದೆ. ಸೈನಿಕ ಹುಳು ಮನೆಯ ಸುರಕ್ಷತೆ, ತನ್ನ ಸಮೂಹಕ್ಕೆ ಎದುರಾಗಬಹು­ದಾದ ರೋಗಗಳ ತಡೆಗೆ ಕ್ರಮ ವಹಿಸುತ್ತದೆ.ಹುತ್ತ ಸೇರುವ ಹಾವು

ಗೆದ್ದಲು ಹುಳು ನಿರ್ಮಿಸಿದ ಹುತ್ತಕ್ಕೆ ಹಾವುಗಳು ಸೇರುವುದು ಸಹಜ ಎನಿಸಿದರೂ ಅಚ್ಚರಿ ಮೂಡಿಸುತ್ತದೆ.

ಗೆದ್ದಲು ಹುಳು ಹುತ್ತವನ್ನು ತೊರೆದ ನಂತರ ಅಲ್ಲಿಗೆ ಹಾವುಗಳು ಸೇರಿಕೊಳ್ಳುತ್ತವೆ. ಗೆದ್ದಲು ನಿರ್ಮಿಸಿದ ಮನೆಯ ಮಣ್ಣಿನ ಗೋಡೆಯಲ್ಲಿ ಪುಟ್ಟ ರಂಧ್ರಗಳು ನಿರ್ಮಾಣ ಆಗಿರುವುದರಿಂದ ಅವುಗಳ ಮೂಲಕ ಹಾದು ಬರುವ ಗಾಳಿ ಗೂಡಿನ ಒಳಗೆ ‘ಹವಾ ನಿಯಂತ್ರಿತ ಕೊಠಡಿ’(ಎಸಿ) ವಾತಾವರಣ ಇರುವಂತೆ ಮಾಡುತ್ತದೆ. ಹಾಗಾಗಿ, ಸದಾ ತಂಪು ವಾತಾವರಣ ಬಯಸುವ ಹಾವುಗಳು ಹುತ್ತವನ್ನು ಸೇರುತ್ತವೆ.  ಮಾನವ ಬಿಸಿ ರಕ್ತದ ಜೀವಿ. ಹಾವುಗಳು ತಣ್ಣನೆ ರಕ್ತದ ಪ್ರಾಣಿಗಳು. ಆದ್ದರಿಂದ, ಹಾವು ಈ ಹವಾ ನಿಯಂತ್ರಿತ, ತಂಪು ವಾತಾವರಣ ಇರುವ ಹುತ್ತವನ್ನು ಸೇರುತ್ತವೆ ಎನ್ನುತ್ತಾರೆ ಈ ಕುರಿತು ಸಂಶೋಧನೆ ನಡೆಸಿರುವ ತಜ್ಞರು.

 

ಪ್ರತಿಕ್ರಿಯಿಸಿ (+)