ಮಂಗಳವಾರ, ಮೇ 11, 2021
20 °C

ರೋಗಗಳ ಪ್ರಸರಣ ತಡೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ರೋಗವಾಹಕ ಆಶ್ರಿತ ರೋಗಗಳಾದ ಡೆಂಗೆ ಮತ್ತು ಚಿಕುನ್‌ಗುನ್ಯಾ ಸೇರಿದಂತೆ ವಿವಿಧ ರೋಗಗಳು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ  ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸೂಚನೆ ನೀಡಿದರು.ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕುರಿತಂತೆ ಚರ್ಚಿಸಲು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿ  ಕಾರ್ಯ ನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಈ ಸೂಚನೆ ನೀಡಿದರು.ಮಳೆಗಾಲ ಪ್ರಾರಂಭವಾಗಿದ್ದು ಸೊಳ್ಳೆಗಳ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದಾಗಿ ಡೆಂಗೆ, ಚಿಕುಗುನ್ಯಾ, ಮಲೇರಿಯಾ ಮುಂತಾದ ರೋಗಗಳು ಹರಡುವ ಸಂಭವ ಹೆಚ್ಚಾಗಿರುತ್ತದೆ. ರೋಗಗಳು ವ್ಯಾಪಕವಾಗಿ ಹರಡಿ, ಸಾರ್ವಜನಿಕರು ತೊಂದರೆಗೆ ಸಿಲುಕುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದರು.ರೋಗಗಳ ಹರಡುವಿಕೆ ಹಾಗೂ ನಿಯಂತ್ರಣ ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿ ಮಾತ್ರ ಅಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರ ಸಹಕಾರದಿಂದ ಇದು ಸಾಧ್ಯ. ಮಳೆಯಿಂದಾಗಿ ಗುಂಡಿ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಸೊಳ್ಳೆಗಳ ಬೆಳವಣಿಗೆಗೆ ಸಹಕಾರಿಯಾಗುವುದರಿಂದ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂತಹ ಪ್ರದೇಶಗಳನ್ನು ಗುರುತಿಸಿ, ಗುಂಡಿ, ತೆಗ್ಗುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಶುದ್ಧ ಕುಡಿಯುವ ನೀರು ಪೂರೈಸಬೇಕು. ಪೈಪ್‌ಗಳ ಸೋರಿಕೆಯಿಂದಾಗಿ ಕುಡಿಯುವ ನೀರು ಕಲುಷಿತವಾಗದಂತೆ ನಿಗಾ ವಹಿಸಬೇಕು. ಆರೋಗ್ಯ ಇಲಾಖೆಯವರು ಆಸ್ಪತ್ರೆಗಳಲ್ಲಿ ಸಾಕಷ್ಟು ಜೀವರಕ್ಷಕ ಔಷಧಿಗಳನ್ನು ದಾಸ್ತಾನು ಇರಿಸಿಕೊಳ್ಳಬೇಕು. ವೈದ್ಯರು ಸಕಾಲದಲ್ಲಿ ಸಾರ್ವಜನಿಕರಿಗೆ ಲಭ್ಯರಾಗುವಂತೆ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.