ಸೋಮವಾರ, ಮಾರ್ಚ್ 1, 2021
31 °C

ರೋಗಿಗೆ ನುಡಿಗುಳಿಗೆ

ನಿರೂಪಣೆ: ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ರೋಗಿಗೆ ನುಡಿಗುಳಿಗೆ

ಮೂಲತ: ಗದಗ ಜಿಲ್ಲೆಯವರಾದ ಡಾ.ನಂದಾ, ಚಿಕ್ಕಂದಿನಿಂದಲೂ ವೈದ್ಯೆಯಾಗುವ ಕನಸಿನೊಂದಿಗೇ ಬೆಳೆದವರು. ಸಲಹೆಗಾರರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು, ನಂತರ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಸೋಸಿಯೇಟ್ ಫ್ರೊಪೆಸರ್ ಆಗಿ ಒಂದಷ್ಟು ದಿನ ಕೆಲಸ ಮಾಡಿದರು. ಅನೇಕ ಅಂತರರಾಷ್ಟ್ರೀಯ ಕಾರ್ಯಾಗಾರಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಅವರು, ಪತ್ರಿಕೆಗಳಿಗೆ ವೈದ್ಯಕೀಯ ಲೇಖನಗಳನ್ನೂ ಬರೆಯುತ್ತಾರೆ. `ರೋಗಿಗಳಿಗೆ ಕೇವಲ ಪರೀಕ್ಷೆ, ಚಿಕಿತ್ಸೆಯ ಮೂಲಕ ಮಾತ್ರವಲ್ಲ, ಹಿತವಾದ ನಾಲ್ಕು ಮಾತುಗಳಿಂದ ಟ್ರೀಟ್ ಮಾಡಿ~ ಎನ್ನುವುದು ಅವರ ಅನುಭವದ ಮಾತು....

`ಮಾತು ಮನುಷ್ಯನಿಗೆ ಮಾತ್ರ ಇರುವ ಬಹು ದೊಡ್ಡ ಕಲೆ. ಪೃಥ್ವಿಯಲ್ಲಿ ಮಾತು ಬಲ್ಲ ಜಾಣ ಪ್ರಾಣಿ ಮನುಷ್ಯ. ಆದರೆ ಇಂಥದ್ದೊಂದು ದೊಡ್ಡ ಆಸ್ತಿಯನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ.

ನಿಜ, ಎಲ್ಲಾ ಕ್ಷೇತ್ರಕ್ಕೂ ಮಾತಿನ ಅಗತ್ಯತೆ ಹೆಚ್ಚಿದೆ. ನಮ್ಮ ಮಾತು ನಮ್ಮ ವ್ಯಕ್ತಿತ್ವವನ್ನು, ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ನಮ್ಮ ಸಂಸ್ಕಾರವನ್ನು ತೋರಿಸುತ್ತದೆ. ಮೌಲ್ಯ ಹಾಗೂ ಘನತೆಯನ್ನು ಎತ್ತಿಹಿಡಿಯುತ್ತದೆ.

ಎಷ್ಟು ಉನ್ನತ ಮಟ್ಟದ ಮಾತುಗಳನ್ನು ಆಡುತ್ತೇವೆಯೋ ಅಷ್ಟೂ ಎತ್ತರದಲ್ಲಿ ನಿಲ್ಲುತ್ತೇವೆ. ಹಾಗೆಯೇ ಎಷ್ಟು ಕೆಳಮಟ್ಟದ ಮಾತುಗಳನ್ನಾಡುತ್ತೇವೆಯೋ ಅಷ್ಟೂ ಕೆಳಗಿಳಿಯುತ್ತೇವೆ...

ಯಾವುದೇ ವೃತ್ತಿ ಇರಲಿ, ವ್ಯವಹಾರವಿರಲಿ ನಮ್ಮ ಯಶಸ್ಸನ್ನು ನಿರ್ಧರಿಸುವುದು ನಮ್ಮ ವಾಕ್ ಚಾತುರ್ಯ. ವೈಯಕ್ತಿಕ ಮಟ್ಟದಲ್ಲಿಯೂ ನಮ್ಮ ಸಂಬಂಧಗಳ ಆಳವನ್ನು ಇದು ನಿರ್ಧರಿಸುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿಯೂ ಇದು ಸತ್ಯ. ಬಹಳಷ್ಟು ಜನರಿಗೆ ವೈದ್ಯಕೀಯ ಕ್ಷೇತ್ರ ಕೇವಲ ತಾಂತ್ರಿಕ ಮತ್ತು ವೈದ್ಯಕೀಯ ಜ್ಞಾನವನ್ನು ಅವಲಂಬಿಸಿರುವ ಕ್ಷೇತ್ರ ಎಂಬ ನಂಬಿಕೆ ಇದೆ. ಇದು ನಿಜವಾದರೂ ತಾಂತ್ರಿಕ ಮತ್ತು ವೈದ್ಯಕೀಯ ಜ್ಞಾನದ ಜತೆಗೆ ನಮಗೆ ಸಂಭಾಷಣೆ, ಅಂದರೆ ಭಾಷಾ ಜ್ಞಾನವೂ ಅಷ್ಟೇ ಅವಶ್ಯಕ.

ದಿನನಿತ್ಯ ನಮ್ಮಲ್ಲಿ ಬರುವ ಅನೇಕ ರೋಗಿಗಳು ವಿಚಿತ್ರ ನೋವು-ಸಂಕಟ- ಅನುಮಾನಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಬಂದಿರುತ್ತಾರೆ. ರೋಗಕ್ಕಿಂತ ರೋಗದ ಬಗ್ಗೆ ಇರುವ ಭೀತಿ ಅವರನ್ನು ಹೆಚ್ಚು ಕಾಡಿರುತ್ತದೆ. ಮನೋದೈಹಿಕ ತೊಂದರೆಗಳಲ್ಲದೆ ಸಾಮಾಜಿಕ ಹಾಗೂ ಕೌಟುಂಬಿಕ ವಿಷಯಗಳೂ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿರುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಕಾಯಿಲೆಯೊಂದಿಗೆ ಸೇರಿರುವ ಹಣದ ವಿಚಾರ.

ಕೇವಲ ಆ ರೋಗಿಗೆ ತಪಾಸಣೆ, ಚಿಕಿತ್ಸೆ ನೀಡಿದರೆ ಆ ರೋಗದೊಂದಿಗೆ ಹೆಣೆದುಕೊಂಡ ಈ ಎಲ್ಲ ವಿಷಯಗಳನ್ನು ಯಾರು ಡೀಲ್ ಮಾಡುತ್ತಾರೆ? ಅದಕ್ಕಾಗಿ ಅವರು ಮತ್ತೆ ಯಾರನ್ನು ಹುಡುಕಿಕೊಂಡು ಹೋಗಬೇಕು?

ಅಂತೆಯೇ, ವೈದ್ಯರಾಗಿ ನಮ್ಮ ಮೇಲೆ ಅಂಥದ್ದೊಂದು ಗುರುತರ ಜವಾಬ್ದಾರಿ ಇದ್ದೇ ಇರುತ್ತದೆ. ಮೊದಲು ಅವರ ಮನಸ್ಸಿಗೆ ಚಿಕಿತ್ಸೆ ನೀಡಬೇಕು. ಅಲ್ಲಿರುವ ಭಯ, ಆವೇಶ, ಅನುಮಾನಗಳನ್ನು ಹೊರಹಾಕಬೇಕು. `ಯಾವುದೇ ರೋಗಕ್ಕೂ ಮದ್ದಿದೆ. ನಿನ್ನೊಂದಿಗೆ ನಾನಿದ್ದೇನೆ. ನಿನ್ನ ರೋಗ ಗುಣವಾಗುತ್ತದೆ~ ಎಂಬ ಭರವಸೆಯನ್ನು ಮೂಡಿಸಬೇಕಾದರೆ ನಮಗೆ ಯಾವ ಔಷಧದ ಸಹಾಯವೂ ಇರುವುದಿಲ್ಲ. ಅಲ್ಲಿ ಮಾತೇ ರೋಗಿಗಳಲ್ಲಿ ಮನೋಸ್ಥೈರ್ಯವನ್ನು ತುಂಬಲು ಸಹಕಾರಿ.

ರೋಗ ಬಂದದ್ದು ಹೇಗೆ? ಅದಕ್ಕಿರುವ ಸಾಧ್ಯತೆಗಳೇನು? ಔಷಧ-ಚಿಕಿತ್ಸೆ ಏನು? ಎಷ್ಟು ದಿನ ಬೇಕು ಎಂಬುದನ್ನು ಅವರಿಗೆ ತಿಳಿಸಿ ಹೇಳುವ ಮೂಲಕ ಅವರನ್ನು ಚಿಕಿತ್ಸೆಗೆ ಸನ್ನದ್ಧಗೊಳಿಸಿಕೊಳ್ಳಬೇಕಾಗುತ್ತದೆ. ಅಂದಾಗ ಮಾತ್ರ ಅವರು ನಮ್ಮಂದಿಗೆ ಕಂಫರ್ಟ್ ಫೀಲ್ ಮಾಡಿಕೊಳ್ಳುತ್ತಾರೆ. ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಚಿಕಿತ್ಸೆಗೂ ಹೆಚ್ಚು ಗೆಲುವಿನಿಂದ ಸ್ಪಂದಿಸುತ್ತಾರೆ. ಅವರನ್ನು ಹಾಗೆ ನಾವು ತಯಾರು ಮಾಡಿಕೊಳ್ಳಬೇಕು. ಆಗ ನಮ್ಮ ಚಿಕಿತ್ಸೆಯೂ ಯಶಸ್ವಿಯಾಗುತ್ತದೆ.

ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ನಮ್ಮ ಕ್ಷೇತ್ರದಲ್ಲಿ ನಮ್ಮ ಸಾಧನೆ ಎನ್ನುವುದು ನಾವು ಸಂಪಾದಿಸಿದ ಹಣದಿಂದ ಮಾತ್ರ ಅಲ್ಲ, ರೋಗಿಗಳೊಂದಿಗೆ ನಾವು ಹೊಂದಿರುವ ಬಾಂಧವ್ಯದಿಂದಲೂ ನಿರ್ಧಾರವಾಗುವಂಥದ್ದು.

ಎಲ್ಲಾ ರೋಗಿಗಳೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಗುಣ-ನಡವಳಿಕೆಗಳನ್ನು ಹೊಂದಿರುತ್ತಾರೆ. ಕೆಲವರು ಸಣ್ಣ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಗಂಟೆಗಟ್ಟಲೆ ಮಾತನಾಡುತ್ತಾರೆ. ವಿಷಯ ಪಲ್ಲಟ ಮಾಡುತ್ತಾರೆ. ಆದರೆ ಅವರನ್ನು ನೇರ ಪ್ರಶ್ನೆಗೆ ಎಳೆಯುವ ಮೂಲಕ ರೋಗದ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುವಂತೆ ಮಾಡಬೇಕಾಗುತ್ತದೆ. ಅವರಿಗೆ ನಾವು ದೇವರಾದರೆ, ನಮ್ಮ ದೇವರು ಅವರೇ ಅಲ್ವೆ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.