ಶನಿವಾರ, ಮೇ 15, 2021
26 °C

ರೌಡಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತು ವರ್ಷ ಸಹಾಯಕ ನಿರ್ದೇಶಕರಾಗಿ ದುಡಿದು ಮೊದಲ ಬಾರಿಗೆ ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಲು ಹೊರಟಿರುವ ಗುರುಮಹೇಂದ್ರ ಮಾತನಾಡಲು ಕುಳಿತಿದ್ದರೂ ಬೇರೇನೋ ಯೋಚಿಸುತ್ತಿರುವಂತೆ ತೋರುತ್ತಿತ್ತು. ಗಂಟಲಿನಿಂದ ಜೋರಾಗಿ ಸ್ವರಗಳೇ ಹೊರಡುತ್ತಿರಲಿಲ್ಲ.`ಪೂಜೆ~ ಚಿತ್ರದ ಮುಹೂರ್ತಕ್ಕಾಗಿ ಕ್ಯಾಮೆರಾಕ್ಕೆ ಪೂಜೆ ಸಲ್ಲಿಸಿದ ಚಿತ್ರತಂಡ  ಮಾಡಲು ಹೊರಟಿರುವ ಚಿತ್ರದ ಬಗ್ಗೆ ಹೇಳತೊಡಗಿತು.ನಿರ್ದೇಶಕ ಸಾಯಿಸಾಗರ್ ಅವರಿಗೆ ಸಹಾಯಕರಾಗಿ ದುಡಿಯುತ್ತಿದ್ದಾಗಲೇ ಹತ್ತಾರು ಕಥೆಗಳು ಗುರುಮಹೇಂದ್ರ ಅವರಿಗೆ ಹೊಳೆದಿದ್ದವಂತೆ. ಆದರೆ ಯಾವುದೂ ಸರಿಬರಲಿಲ್ಲ. ಕೆಲವು ಹೆಚ್ಚಿನ ಬಜೆಟ್ ಬಯಸುವಂತಹವು. ಅವುಗಳಿಗೆ ನಿರ್ಮಾಪಕರನ್ನು ಹುಡುಕುವುದು ಸುಲಭವಲ್ಲ ಎಂದು ಕೈಬಿಟ್ಟರಂತೆ.ಕೊನೆಗೂ ಒಂದು ಕಥೆ ಸಿದ್ಧವಾಯಿತು. ನಾಲ್ಕು ವರ್ಷದ ಹಿಂದಿನಿಂದಲೇ ಚಿತ್ರಕ್ಕೆ ತಯಾರಿ ಪ್ರಾರಂಭಿಸಿದರು. ನಾಯಕರಾಗಿ `ಮೆಂಟಲ್ ಮಂಜ~ ಖ್ಯಾತಿಯ ಅರ್ಜುನ್ ಸಿಕ್ಕರು. ಕ್ಯಾಮೆರಾಮನ್ ಮತ್ತು ಸಂಗೀತ ನಿರ್ದೇಶಕರನ್ನೂ ಕಲೆ ಹಾಕಿದರು.

 

ಹುಡುಕಾಟದ ಬಳಿಕ ನಿರ್ಮಾಪಕರೂ ಸಿಕ್ಕರು. ಎಲ್ಲವೂ ಪ್ಲಾನ್ ಆದ ಬಳಿಕ ಚಿತ್ರೀಕರಣ ಶುರುಮಾಡಿದ್ದೇವೆ ಎಂದು ಮೆಲ್ಲನೆ ನಿಟ್ಟುಸಿರುಬಿಟ್ಟರು ಗುರುಮಹೇಂದ್ರ.ನಿರ್ದೇಶಕನಾಗಲು ಸಾಕಷ್ಟು ಶ್ರಮಪಟ್ಟಿದ್ದೇನೆ. ಎರಡು ವರ್ಷದಿಂದ ತಂಡ ಕಟ್ಟಲು ಓಡಾಡಿದ್ದೇನೆ. ಇದೇ ವೇಳೆ ಸ್ನೇಹಿತರು ಸಹಕಾರ ನೀಡಿದ್ದರಿಂದ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ಗುರುಮಹೇಂದ್ರ ಸ್ನೇಹಿತರು ಕೊಟ್ಟ ಸಹಾಯಹಸ್ತವನ್ನು ಸ್ಮರಿಸಿಕೊಂಡರು.`ಪೂಜೆ~ ಎಂಬ ಹೆಸರು ಭಕ್ತಿಭಾವಗಳನ್ನು ಮೂಡಿಸುತ್ತದೆ ಎಂಬಂತೆ ಕಂಡರೂ ಚಿತ್ರದಲ್ಲಿ ನಾಯಕ ಮಾಡುವ ಪೂಜೆ ಬೇರೆಯದ್ದೆ ಎಂಬ ಸುಳಿವನ್ನು ಅವರು ನೀಡಿದರು. ದೇವಸ್ಥಾನದಲ್ಲಿ ನಾಯಕ ನಾಯಕಿ ಮೊದಲ ಬಾರಿಗೆ ಭೇಟಿ ಆಗುತ್ತಾರೆ. ಇಲ್ಲೇ ಪ್ರೇಮಪೂಜೆ ಪ್ರಾರಂಭವಾಗುತ್ತದೆ. ಆದರೆ ಈ ಪ್ರೇಮ ಪೂಜಾರಿಗೆ ನಾಯಕಿ ಇನ್ನೂ ಸಿಕ್ಕಿಲ್ಲ!ಬಡಕುಟುಂಬದ ದಿಕ್ಕುದೆಸೆಯಿಲ್ಲದ ಹುಡುಗನೊಬ್ಬ ಭೂಗತಜಗತ್ತಿನೊಳಗೆ ಸಿಕ್ಕಿಕೊಂಡಾಗ ಆತ ಎದುರಿಸುವ ಸಂಕಷ್ಟಗಳು. ಪುಡಿ ರೌಡಿಯಾಗಿ ಜೊತೆಗೆ ಪ್ರೇಮಿಯಾಗಿ ಹೋರಾಡುವ ಪಾತ್ರ ನನ್ನದು ಎಂದು ಅರ್ಜುನ್ ವಿವರಿಸಿದರು.

ಶಿವರಾಜ್ ಮತ್ತು ಭಾಸ್ಕರ್ ಚಿತ್ರದ ನಿರ್ಮಾಪಕರು. ಬೆಂಗಳೂರು, ಮಡಿಕೇರಿ, ಸಕಲೇಶಪುರ, ಹುಬ್ಬಳ್ಳಿಗಳಲ್ಲಿ ಚಿತ್ರೀಕರಣ ನಡೆಯಲಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.