ಭಾನುವಾರ, ಮಾರ್ಚ್ 7, 2021
22 °C

ರ್‍ಯಾಂಪ್‌ ಮೇಲೆ ಸಿನಿಮಾ ಕನಸು

–ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ರ್‍ಯಾಂಪ್‌ ಮೇಲೆ ಸಿನಿಮಾ ಕನಸು

ಬೆಳಕಿನ ಝಗಮಗದಲ್ಲಿ ಹೆಜ್ಜೆಇಡಬೇಕು, ಬಣ್ಣಬಣ್ಣದ ಬಟ್ಟೆಗೆ ಒಡ್ಡಿಕೊಳ್ಳಬೇಕು, ಅಂದದ  ಆಭರಣಗಳನ್ನು ತೊಟ್ಟ ಮುದ್ದು ಬೆಡಗಿಯಾಗಬೇಕು... ಹೀಗೆ ಚಿಕ್ಕಂದಿನಿಂದ ಚಾಂದನಿ ಹುಸೇನ್‌ ಕಂಡಿದ್ದ ಕನಸುಗಳು ಅನೇಕ.ಸಂಪ್ರದಾಯದ ಹಿನ್ನೆಲೆ ಇರುವ ಮುಸ್ಲಿಂ ಕುಟುಂಬದವರಾದ ಇವರಿಗೆ ಮಾಡೆಲಿಂಗ್‌ ಕ್ಷೇತ್ರದ ಬಗ್ಗೆ ಒಲವಿದ್ದರೂ ಅದೇ ಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಸುಲಭವಾಗಿರಲಿಲ್ಲ. ವಿದ್ಯಾಭ್ಯಾಸದ ಕಡೆ ಗಮನಹರಿಸು ಎಂದು ಅಪ್ಪ ಪದೇಪದೇ ಬುದ್ಧಿಮಾತು ಹೇಳುತ್ತಿದ್ದರು. ಹೀಗಾಗಿ ಜೈವಿಕ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ಓದಿ ‘ಜಿ ಹೆಲ್ತ್‌ಕೇರ್‌ ಕೇಂದ್ರ’ದಲ್ಲಿ ಅಪ್ಲಿಕೇಶನ್‌ ಸ್ಪೆಷಲಿಸ್ಟ್‌ ಆಗಿ ಕೆಲಸ ಗಿಟ್ಟಿಸಿಕೊಂಡರು.ಬೆಂಗಳೂರಿನವರೇ ಆದ ಇವರನ್ನು ಅಲ್ಲಿ ಇಲ್ಲಿ ನಡೆಯುವ ಫ್ಯಾಷನ್‌ ಷೋಗಳು, ಸೌಂದರ್ಯ ಸ್ಪರ್ಧೆಗಳು ಆಗಾಗ ಸೆಳೆಯಲಾರಂಭಿಸಿದವು. ಹೀಗಾಗಿ ಮನೆಯವರನ್ನು ಒಪ್ಪಿಸಿ, ‘ಎಲ್ಲೆ ಮೀರುವುದಿಲ್ಲ’ ಎಂದು ಹೇಳಿ ಮೊದಲ ಬಾರಿಗೆ ಮಿಸ್‌ ಬೆಂಗಳೂರು ಸ್ಪರ್ಧೆಯಲ್ಲಿ ಚಾಂದನಿ ರ್‍ಯಾಂಪ್‌ ಏರಿದರು. ‘ಮಿಸ್‌ ಬೆಂಗಳೂರು’ ಗರಿ ಮುಡಿಗೇರದಿದ್ದರೂ, ಆ ಸ್ಪರ್ಧೆಯಲ್ಲಿ ಜನಪ್ರಿಯ ಮಾಡೆಲ್‌ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು. ನಂತರ ‘ಮಿಸ್‌ ಕರ್ನಾಟಕ’ದಲ್ಲಿ ರನ್ನರ್‌ಅಪ್‌ ಆದರು.ಇದೀಗ ಅವರು ಸುಂದರಿ ಎಂಬುದನ್ನು ‘ಇಂಡಿಯನ್‌ ಪ್ರಿನ್ಸಸ್‌’ ಗೌರವ ಸಾಬೀತುಪಡಿಸಿದೆ. ಫೇಸ್‌ಬುಕ್‌ ಮೂಲಕ ಸ್ಪರ್ಧೆಯ ಬಗ್ಗೆ ತಿಳಿದುಕೊಂಡು ಹೈದರಾಬಾದ್‌ನಲ್ಲಿ ನಡೆದ ಆಡಿಶನ್‌ನಲ್ಲಿ ಭಾಗವಹಿಸಿದರು. ಮಿಸ್‌ ಇಂಡಿಯಾ ರೀತಿಯಲ್ಲೇ ನಡೆಯುವ ಈ ಸ್ಪರ್ಧೆಯಲ್ಲಿ ಟಾಪ್‌ 20ರಲ್ಲಿ ಆಯ್ಕೆಯಾದರು. ಆಯ್ಕೆಯಾದವರಲ್ಲಿ ಇವರು ಮಾತ್ರ ಕರ್ನಾಟಕದವರು ಎಂಬುದು ವಿಶೇಷ. ನಂತರ ರತ್ನಗಿರಿ ಹಾಗೂ ಥಾಯ್ಲೆಂಡ್‌ನಲ್ಲಿ ಗ್ರೂಮಿಂಗ್‌ ಸೆಶನ್‌ನಲ್ಲಿ ಭಾಗವಹಿಸಿದರು.‘ರತ್ನಗಿರಿಯಲ್ಲಿ ನಮಗೆ ಯಾವ ರೀತಿಯ ಡಯೆಟ್‌ ಪಾಲಿಸಬೇಕು ಎಂಬುದನ್ನು ಹೇಳಿಕೊಟ್ಟರು. ಯೋಗ ಮಾಡಿಸುತ್ತಿದ್ದರು. ಏರೊಬಿಕ್ಸ್‌, ಜಿಮ್‌, ಸ್ವಿಮಿಂಗ್‌ ದಿನಚರಿ ಆಗಿತ್ತು. ಬೀಚ್‌ಗೆ ಕರೆದುಕೊಂಡು ಹೋಗಿ ಆಟ ಆಡಿಸುತ್ತಿದ್ದರು. ದಿನವಿಡೀ ಮೇಕಪ್‌ನಲ್ಲೇ ನಾವಿರುತ್ತಿದ್ದುದು.ಬ್ಯಾಂಕಾಕ್‌ನಲ್ಲಿ ಕೂಡ ನಮ್ಮ ತರಬೇತಿ ಮುಂದುವರಿಯಿತು. ಊಟ ತಿಂಡಿಯ ಮ್ಯಾನರಿಸಂ ಏನು, ಸಾರ್ವಜನಿಕ ಸ್ಥಳದಲ್ಲಿರುವಾಗ ನಮ್ಮ ನಡವಳಿಕೆ ಹೇಗಿರಬೇಕು, ಮೇಕಪ್‌ ಮಾಡಿಕೊಳ್ಳುವುದು ಹೇಗೆ, ದಿನದ 24 ಗಂಟೆ ಮುಖದಲ್ಲಿ ಮಂದಹಾಸವಿರಬೇಕು, ಹೈಹೀಲ್ಡ್‌ ಹಾಕಿದಾಗ ಹೇಗೆ ನಡೆಯಬೇಕು ಮುಂತಾದ ಸಣ್ಣಪುಟ್ಟ ವಿಷಯಗಳನ್ನೂ ಅವರು ಕಲಿಸಿಕೊಟ್ಟರು. ಮೊದಲಿನಿಂದಲೂ ಮಾಡೆಲಿಂಗ್‌ ಕ್ಷೇತ್ರದಲ್ಲಿ ನುರಿತವಳು ನಾನಲ್ಲವಾದ್ದರಿಂದ ಹತ್ತು ದಿನದ ತರಬೇತಿಯಲ್ಲಿ ಈ ಕ್ಷೇತ್ರದ ಬಗ್ಗೆ ಸಾಕಷ್ಟು ಕಲಿತುಕೊಂಡೆ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಚಾಂದನಿ.ನಟ ಗೋವಿಂದ ಹಾಗೂ ಜೂಹಿ ಚಾವ್ಲಾ ತೀರ್ಪುಗಾರರಾಗಿ ಆಗಮಿಸಿದ್ದ ಅಂತಿಮ ಸುತ್ತಿನಲ್ಲೂ ಗೆದ್ದು ಬರುವ ಆತ್ಮವಿಶ್ವಾಸ ಅವರಲ್ಲಿ ಇತ್ತಾದರೂ ಅಂತಿಮ ಸುತ್ತಿನ ಹಿಂದಿನ ದಿನವೇ ಫುಡ್‌ ಪಾಯಿಸನ್‌ನಿಂದ ವಾಪಸ್‌ ಬರಲೇಬೇಕಾದ ಅನಿವಾರ್ಯತೆ ಅವರನ್ನು ಕಾಡಿತಂತೆ. ‘ಇಂಡಿಯನ್‌ ಪ್ರಿನ್ಸೆಸ್‌’ ಬಗ್ಗೆ ಉತ್ತರ ಭಾರತೀಯರಿಗೆ ಚೆನ್ನಾಗಿ ಗೊತ್ತು. ಆದರೆ ದಕ್ಷಿಣ ಭಾರತೀಯರ ಭಾಗವಹಿಸುವಿಕೆ ಕಮ್ಮಿ ಎಂಬುದೂ ಅವರ ಬೇಸರ.ಅಂದಹಾಗೆ, ಇದುವರೆಗೆ 50ಕ್ಕೂ ಹೆಚ್ಚು ರ್‍ಯಾಂಪ್‌ ಶೋ, 40ಕ್ಕೂ ಅಧಿಕ ಫೋಟೊ ಶೂಟ್‌ಗಳಲ್ಲಿ ಕಾಣಿಸಿಕೊಂಡಿರುವ ಇವರು ಸದ್ಯದಲ್ಲೇ ಕಿರುಚಿತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಸಿನಿಮಾಗಳಲ್ಲೂ ಇವರಿಗೆ ಅವಕಾಶ ಸಿಕ್ಕಿದೆ. ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆ ಇರುವುದರಿಂದ ಹದ್ದುಬಸ್ತು ಮೀರದ ಸಭ್ಯ ಪಾತ್ರಗಳು ಸಿಕ್ಕರೆ ಮಾತ್ರ ಅಭಿನಯಿಸಲು ಅವರು ಸಿದ್ಧರಿದ್ದಾರೆ.ಹೆಚ್ಚಾಗಿ ನೀರು ಕುಡಿಯುವುದು, ಎಣ್ಣೆ ಪದಾರ್ಥಗಳನ್ನು ಕಡಿಮೆ ಸೇವಿಸುವುದು, ಜಾಗಿಂಗ್‌ ಅವರ ದೇಹದ ಸೌಂದರ್ಯವನ್ನು ಕಾಪಾಡಿದೆ. ‘ಕಿರುಚಿತ್ರದಲ್ಲಿ ಅಭಿನಯಿಸಲು ದಪ್ಪವಾಗಬೇಕು ಎಂದಿದ್ದಕ್ಕೆ ಎರಡು ಕೆ.ಜಿ. ತೂಕ ಏರಿಸಿಕೊಂಡಿದ್ದೇನೆ. ಚೀಸ್‌, ಕೇಕ್‌, ಚಾಕಲೇಟ್‌ ಅಂದರೆ ತುಂಬಾ ಇಷ್ಟ. ಆದರೂ ಮನಸ್ಸನ್ನು ನಿಯಂತ್ರಿಸಬೇಕಾದದ್ದು ಅನಿವಾರ್ಯ. ಅದರಲ್ಲೂ ಹೆಣ್ಣುಮಕ್ಕಳಿಗೆ ಹೊಟ್ಟೆಕಿಚ್ಚು ಜಾಸ್ತಿ ನೋಡಿ. ನಮಗಿಂತ ಪಕ್ಕದಲ್ಲಿರುವವರು ಸಣ್ಣಗಿದ್ದಾರೆ ಎಂದರೆ ನಮ್ಮ ಡಯಟ್‌ ಕಾನ್ಶಿಯಸ್‌ನೆಸ್‌ ಥಟ್ಟನೆ ಎಚ್ಚೆತ್ತುಕೊಳ್ಳುತ್ತದೆ’ ಎಂದು ನಗುತ್ತಾರೆ ಚಾಂದನಿ.ಒಳ್ಳೆಯ ಕಂಪೆನಿಯ ಉತ್ಪನ್ನಗಳನ್ನು ಬಳಸುವುದರಿಂದ ತ್ವಚೆಗೆ ಯಾವುದೇ ಹಾನಿಯಿಲ್ಲ. ಆದರೂ ದಿನದ 24 ಗಂಟೆಯೂ ಮೇಕಪ್‌ ಮಾಡಿಕೊಂಡಿರುವುದಕ್ಕಿಂತ ಚರ್ಮಕ್ಕೂ ಉಸಿರಾಡುವುದಕ್ಕೆ ತುಸು ಸಮಯ ನೀಡಬೇಕು ಎಂಬುದು ಅವರ ನಿಯಮಾವಳಿ.ಎಂ.ಎಸ್‌.ಶ್ರೀಧರ್‌, ರಿಜ್ವಾನ್‌ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಕೌಶಿಕ್‌ ಘೋಷ್‌ ಅವರಿಂದ ತರಬೇತಿ ಪಡೆದ ಖುಷಿ ಅವರದ್ದು.

ನಟನೆಯಲ್ಲಿ ಯಾವುದೇ ತರಬೇತಿಯನ್ನು ಅವರು ಪಡೆದಿಲ್ಲ. ಸಿನಿಮಾಗಳಲ್ಲಿ ಗೆಲ್ಲುತ್ತೇನಾ ಎಂಬ ಸಣ್ಣ ಆತಂಕವೂ ಅವರಿಗಿದೆ. ಹೀಗಾಗಿ ಕೆಲಸವನ್ನೂ ಬಿಟ್ಟಿದ್ದಾರೆ. ಅಭಿನಯ ತರಬೇತಿಗೆ ಸೇರುವ ಮನಸ್ಸು ಮಾಡಿದ್ದಾರೆ. ಇನ್ನುಮುಂದೆ ಸಂಪೂರ್ಣವಾಗಿ ಮಾಡೆಲಿಂಗ್‌, ಸಿನಿಮಾಗೆ ಸಮಯ ಮೀಸಲು ಎನ್ನುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.