ಸೋಮವಾರ, ಮೇ 16, 2022
29 °C

ಲಂಚದ ಗಣಿಯಲ್ಲಿ ಸಚಿವರ ಹೆಸರು : ಆಂಧ್ರ ಸರ್ಕಾರ ಇಕ್ಕಟ್ಟಿನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಗಾಲಿ ಜನಾರ್ದನ ರೆಡ್ಡಿ `ಜಾಮೀನಿಗಾಗಿ ಲಂಚ~ ಪ್ರಕರಣದಲ್ಲಿ ಆಂಧ್ರ ಪ್ರದೇಶದ ಸಚಿವರೊಬ್ಬರು ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದೆ.

ರಾಜಕೀಯ ಬಿಡುವೆ: ಏರಾಸು ಸವಾಲು
ಈ ಮಧ್ಯೆ, ಏರಾಸು ಅವರು ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ವಿರೋಧಿಸಿದ್ದು, ಆರೋಪ ಸಾಬೀತಾದರೆ ಶಾಶ್ವತವಾಗಿ ರಾಜಕೀಯ ತೊರೆಯುವುದಾಗಿ ಹೇಳಿದ್ದಾರೆ.ಕರ್ನೂಲ್‌ನ ಏರಾಸು, ಶನಿವಾರ ಬೆಳಿಗ್ಗೆ ಹೈದರಾಬಾದ್‌ಗೆ ಧಾವಿಸಿ, ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರಿಗೆ ಈ ಬಗ್ಗೆ `ಸ್ಪಷ್ಟನೆ~ ನೀಡಿದ್ದಾರೆ. ಅಲ್ಲದೇ ವಿಸ್ತೃತ ತನಿಖೆಗೆ ಆಗ್ರಹಿಸಿದ್ದಾರೆ.`ನಾನು ನಿರಪರಾಧಿ. ಈ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಜನಾರ್ದನ ರೆಡ್ಡಿ ನನ್ನ ಸಂಬಂಧಿ ಇರಬಹುದು. ಆದರೆ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಕೇಂದ್ರ ಸಚಿವರಾಗಿದ್ದ ನನ್ನ ತಂದೆಯ ಕಾಲದಿಂದಲೂ ನಮ್ಮ ಕುಟುಂಬವು ಕಳಂಕ ರಹಿತ ರಾಜಕೀಯ ಇತಿಹಾಸ ಹೊಂದಿದೆ~ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು.`ಚಂಚಲಗುಡ ಜೈಲಿನಲ್ಲಿ ನಾನು ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಜೈಲಿನಲ್ಲಿ ಕೆಲವೊಂದು ಸುಧಾರಣಾ ಕಾರ್ಯಕ್ರಮಗಳನ್ನು ಆರಂಭಿಸಲು ಅಲ್ಲಿಗೆ ಭೇಟಿ ನೀಡಿದ್ದೆ. ಆದರೆ ರೆಡ್ಡಿ ಅವರನ್ನು ಭೇಟಿಯಾಗಿಲ್ಲ. ಒಂದು ವೇಳೆ ನಾನು ಅವರನ್ನು ಭೇಟಿಯಾಗಿದ್ದಿದ್ದರೆ, ರಾಜಾರೋಷವಾಗಿ ಅಲ್ಲಿಗೆ ಯಾಕೆ ಹೋಗುತ್ತೇನೆ?~ ಎಂದು ಅವರು ಪ್ರಶ್ನಿಸಿದರು.ಕಾನೂನು ಸಚಿವ ಏರಾಸು ಪ್ರತಾಪ್ ರೆಡ್ಡಿ ಅವರು ಇಡೀ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರ ನಡುವೆ ಸಂಧಾನಕಾರರಲ್ಲಿ ಒಬ್ಬರಾಗಿ ಕೆಲಸ ಮಾಡಿದ್ದರು ಎಂದು ಆರೋಪಿಸಲಾಗಿದೆ.ರಾಮರಾವ್, ನಿವೃತ್ತ ನ್ಯಾಯಾಧೀಶ ಟಿ.ವಿ.ಚಲಪತಿ ರಾವ್ ಮತ್ತಿತರರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವ ಸಾಧ್ಯತೆ ಇದ್ದು, ಅವರ ಬಂಧನಕ್ಕೆ ತಯಾರಿ ನಡೆಸಲಾಗಿದೆ. ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸಿಬಿಐ `ನಿರ್ಣಾಯಕ ಪುರಾವೆ~ ಸಂಗ್ರಹಿಸಿ ಹೈಕೋರ್ಟ್‌ಗೆ ಸಲ್ಲಿಸಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಮುಂದಿನ ತನಿಖೆ ನಡೆಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಅಸಹ್ಯಕರ: ಈ ಹಗರಣದಲ್ಲಿ ಸಚಿವರೊಬ್ಬರು ಸಂಧಾನಕಾರರಾಗಿ ಕೆಲಸ ಮಾಡಿರುವುದು ಅಸಹ್ಯಕರವಾಗಿದೆ ಎಂದು ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದಾರೆ.`ಈ ಸಚಿವರು ಒಂದೋ ರಾಜೀನಾಮೆ ನೀಡಬೇಕು, ಇಲ್ಲವೇ ಸಂಪುಟದಿಂದ ಅವರನ್ನು ಕೈಬಿಡಬೇಕು~ ಎಂದು ಪಕ್ಷದ ವಕ್ತಾರ ವರ್ಲ ರಾಮಯ್ಯ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.