ಮಂಗಳವಾರ, ಜನವರಿ 21, 2020
29 °C

ಲಂಡನ್ ಒಲಿಂಪಿಕ್ಸ್: ರಾಜಿಂದರ್ ಸಿಂಗ್ ಸೈನಿ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಳೆದ ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿರುವ ಭಾರತದ ಅಥ್ಲೀಟುಗಳು, ಜುಲೈ ಕೊನೆಯಲ್ಲಿ ಆರಂಭವಾಗುವ ಲಂಡನ್ ಒಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಭಾರತ ರಾಷ್ಟ್ರೀಯ ಜೂನಿಯರ್ ತಂಡದ ಚೀಫ್ ಕೋಚ್ ರಾಜಿಂದರ್ ಸಿಂಗ್ ಸೈನಿ ವಿಶ್ವಾಸ ವ್ಯಕ್ತಪಡಿಸಿದರು.ಇತರ ಕ್ಷೇತ್ರಗಳಂತೆ ಭಾರತ ಕ್ರೀಡೆಯಲ್ಲೂ ಪ್ರಗತಿ ಕಾಣುತ್ತಿದೆ. ಈಗಾಗಲೇ ಲಂಡನ್ ಒಲಿಂಪಿಕ್ಸ್‌ಗೆ ಏಳು ಮಂದಿ ಅರ್ಹತೆ ಸಾಧಿಸಿದ್ದಾರೆ. ಇನ್ನೂ 10 ಮಂದಿ ಅರ್ಹತೆ ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ. ಕಳೆದ ಬಾರಿ ಒಲಿಂಪಿಕ್ಸ್‌ಗೆ ಅಥ್ಲೆಟಿಕ್ಸ್‌ನಿಂದ 17 ಮಂದಿ ಅರ್ಹತೆ ಗಿಟ್ಟಿಸಿದ್ದರು. ಈ ಬಾರಿ ಈ ಸಂಖ್ಯೆ ಹೆಚ್ಚುವ ಅವಕಾಶಗಳಿವೆ. ಮೇ ಕೊನೆಯಲ್ಲಿ ನಿಷೇಧ ಮುಗಿಸುವ ಮಹಿಳೆಯರ 1600 ಮೀ. ರಿಲೇ ತಂಡದ ಒಟಗಾರ್ತಿಯರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೆ ಅದು ಬೋನಸ್ ಎನ್ನುತ್ತಾರೆ ಅವರು.ಯುವಜನೋತ್ಸವ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿದ್ದ ಅವರು ಭಾನುವಾರ `ಪ್ರಜಾವಾಣಿ~ ಜತೆ ಮಾತನಾಡಿದರು. ಒಲಿಂಪಿಕ್ಸ್‌ಗೆ ಭರದ ಸಿದ್ಧತೆ ನಡೆಯುತ್ತಿದೆ. ನಡಿಗೆ ವಿಭಾಗದಲ್ಲಿ ಗುರುಮೀತ್ ಸಿಂಗ್, ಬಾಬುಬಾಯಿ ಪನೋಚ (20 ಕಿ.ಮೀ. ನಡಿಗೆ), ಕಾಮನ್ವೆಲ್ತ್ ಗೇಮ್ಸ ಪದಕ ವಿಜೇತ ಹರ್ವಿಂದರ್ ಸಿಂಗ್, ರವಿಂದರ್ ಸಿಂಗ್ ಸೇರಿದಂತೆ ಆರು ಮಂದಿ ತರಬೇತಿಯಲ್ಲಿದ್ದಾರೆ. ಶನಿವಾರ ಮುಂಬೈ ಮ್ಯಾರಥಾನ್‌ನಲ್ಲಿ ರಾಮ್‌ಸಿಂಗ್ ಯಾದವ್ ಶನಿವಾರ ಒಲಿಂಪಿಕ್ಸ್‌ಗೆ ನಿಗದಿಪಡಿಸಿದ್ದ ಗಡುವಿನೊಳಗೆ ಗುರಿತಲುಪಿದ್ದಾರೆ.ಎಸೆತದ ವಿಭಾಗದಲ್ಲಿ ಕಷ್ಣ ಪೂನಿಯಾ ಮೇಲೆ ಭರವಸೆ ಇದ್ದು ಅವರು ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹರವಂತ್ ಕೌರ್ ದಕ್ಷಿಣ ಆಫ್ರಿಕದಲ್ಲಿ ತರಬೇತಿಯಲ್ಲಿದ್ದು ಸರ್ಕಾರ ವೆಚ್ಚ ಭರಿಸುತ್ತಿದೆ. ಅನುಭವಿ ಸ್ಪರ್ಧಿ ವಿಕಾಸ್ ಗೌಡ ಅಮೆರಿಕದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದರು. ಏಷ್ಯನ್ ಕ್ರೀಡೆಗಳ 400 ಮೀ. ಹರ್ಡಲ್ಸ್‌ನಲ್ಲಿ ಜೋಸೆಫ್ ಅಬ್ರಹಾಂ ಅವರೂ ಕಠಿಣ ತರಬೇತಿ ಪಡೆಯುತ್ತಿದ್ದಾರೆ ಎಂದರು. ಕೊಟ್ಟಾಯಂನ ಮುಂಡಕಾಯ ಗ್ರಾಮದ ಅಬ್ರಹಾಂ ಅವರಿಗೆ ರಾಜಿಂದರ್ ಸಿಂಗ್ ಅವರೇ ಬೆಂಗಳೂರಿನಲ್ಲಿ ತರಬೇತಿ ನೀಡುತ್ತಿದ್ದಾರೆ. ಟ್ರಿಪಲ್‌ಜಂಪ್‌ನಲ್ಲಿ ರಣಜಿತ್ ಮಹೇಶ್ವರಿ ಕೂಡ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಷಾಟ್‌ಪುಟ್‌ನಲ್ಲಿ ಭರವಸೆ ಮೂಡಿಸಿರುವ ಓಂಪ್ರಕಾಶ್ ಕರ‌್ಹಾನಾ (ಹರಿಯಾಣ) ಹಂಗೆರಿಯಲ್ಲಿ ತರಬೇತಿಯಲ್ಲಿದ್ದಾರೆ.ನಾಡಾ ಕ್ರಮಕ್ಕೆ ಸ್ವಾಗತ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ಒಳ್ಳೆಯ ಕೆಲಸ ಮಾಡುತ್ತಿದೆ. ಅಥ್ಲೀಟುಗಳಿಗೆ ಈ ವಿಷಯದಲ್ಲಿ ಸಾಕಷ್ಟು ತಿಳಿವಳಿಕೆ ಮೂಡಿಸಬೇಕಾಗಿದೆ. ಸಣ್ಣ ಜ್ವರ, ಕೆಮ್ಮಿಗೆ ತೆಗೆದುಕೊಳ್ಳುವ ಔಷಧಿಯಲ್ಲೂ ನಿಷೇಧಿತ ಮದ್ದು ಇರಬಹುದು. ನಿಷೇಧಿತ ಮತ್ತು ನಿಷೇಧಿತವಲ್ಲದ ಮದ್ದಿನ ನಡುವೆ ಅಂತರ ತೆಳುವಾಗಿದೆ ಎಂದು ಸೈನಿ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)