ಭಾನುವಾರ, ಜುಲೈ 25, 2021
22 °C

ಲಾಡೆನ್‌ಗೆ ಮುಳುವಾದ ದೂತ ಕುವೈತ್ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಅಬೋಟಾಬಾದ್‌ನಲ್ಲಿ ಲಾಡೆನ್ ಅಡಗಿಕೊಂಡಿದ್ದ ಬಗ್ಗೆ ಅಮೆರಿಕಕ್ಕೆ ಸುಳಿವು ಸಿಕ್ಕಿದ್ದೇ ಆತನ ‘ದೂತ’ನೊಬ್ಬನ ಚಲನವಲನಗಳಿಂದ. ಲಾಡೆನ್‌ನ ಆ ನಂಬಿಕಸ್ತ ಕುವೈತ್‌ನ ಅಬು ಅಹಮದ್ ಎಂದು ಮಾಧ್ಯಮ ವರದಿಗಳು ಹೇಳಿವೆ.

ಲಾಡೆನ್ ತನ್ನ ಅಡಗುತಾಣದಿಂದ ಹೊರಜಗತ್ತಿನೊಂದಿಗೆ ಸಂಪರ್ಕವಿರಿಸಿಕೊಳ್ಳಲು ಆತ ಟೆಲಿಫೋನ್, ಇಂಟರ್‌ನೆಟ್‌ಗಳನ್ನು ಬಳಸುತ್ತಲೇ ಇರಲಿಲ್ಲ. ಆತ ‘ಕೊರಿಯರ್’ ಸೇವೆಯನ್ನೇ ನೆಚ್ಚಿಕೊಂಡಿದ್ದ. ಲಾಡೆನ್ ಸಂದೇಶಗಳನ್ನು ಹೊತ್ತು ಹೊರಹೋಗುತ್ತಿದ್ದ ಇವರು, ಹೊರ ಲೋಕದ ಸಂಗತಿ ಮತ್ತು ಸಂದೇಶಗಳನ್ನು ಲಾಡೆನ್‌ಗೆ ತಲುಪಿಸುತ್ತಿದ್ದರು. ಈ ‘ಕೊರಿಯರ್ ಜಾಲ’ದ ಬಗ್ಗೆ ಅಮೆರಿಕ ತನ್ನ ಕಣ್ಣಿಟ್ಟಿತು.

ಲಾಡೆನ್ ಪತ್ತೆಗಾಗಿ 2007ರಲ್ಲಿ ಅಮೆರಿಕ ಶೋಧ ತೀವ್ರಗೊಳಿಸಿದ ಸಂದರ್ಭದಲ್ಲಿ ಅಬು ಅಹಮದ್ ಬಗ್ಗೆ ಕೇಂದ್ರ ಬೇಹುಗಾರಿಕಾ ಸಂಸ್ಥೆ (ಸಿಐಎ)ಗೆ ಮಾಹಿತಿ ದೊರೆತಿತ್ತು. ಆತನ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಸಿಐಎ ಕಳೆದ ವರ್ಷದ ಜುಲೈನಲ್ಲಿ ಅಬು ಅಹಮದ್‌ನನ್ನು ಪೆಶಾವರದಲ್ಲಿ ಹಿಂಬಾಲಿಸಿ ಆತನ ಕಾರಿನ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದರು. ಕೆಲವು ವಾರಗಳ ಬಳಿಕ ಅಬೋಟಾಬಾದ್ ಕಾಂಪೌಂಡ್ ಒಳಗೆ ಆತ ಕಾಗದಪತ್ರಗಳ ಮೂಟೆಯೊಂದನ್ನು ಕೊಂಡೊಯ್ದಿದ್ದನು.

ಪೂರ್ವ ಯುರೋಪ್‌ನ ರಹಸ್ಯ ಜೈಲುಗಳಲ್ಲಿ ಇರಿಸಲಾಗಿರುವ ಬಂಧಿತರ ವಿಚಾರಣೆ ಮತ್ತು ನಿರಂತರ ಬೇಹುಗಾರಿಕಾ ಕಾರ್ಯದ ಬಳಿಕ ಕಾರ್ಯಾಚರಣೆ ನಡೆಸಲಾಗಿದೆ. ಲಾಡೆನ್‌ನ ನಂಬಿಕಸ್ತ ಕೊರಿಯರ್ ಸಾಗಿಸುವ ವ್ಯಕ್ತಿಗಳ ಕುರಿತು ಬಂಧಿತರು ತಿಳಿಸಿದ್ದರು. ಆದರೆ ಅವರಿಂದ ಅಂತಹವರ ಹೆಸರುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಸಫಲವಾಗಿರಲಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಸಿಐಎ ಅಹಮದ್ ಕುಟುಂಬದ ಬಗ್ಗೆ ಕೆಲವು ವಿವರ ಸಂಗ್ರಹಿಸಿದ ಬಳಿಕ ರಾಷ್ಟ್ರೀಯ ಭದ್ರತಾ ಸಂಸ್ಥೆ ಕೊಲ್ಲಿಯಲ್ಲಿರುವ ಆತನ ಕುಟುಂಬ ಮತ್ತು ಪಾಕಿಸ್ತಾನದ ವ್ಯಕ್ತಿಯ ನಡುವೆ ನಡೆದ ದೂರವಾಣಿ ಸಂಭಾಷಣೆ ಮತ್ತು ಇ-ಮೇಲ್ ಸಂದೇಶಗಳನ್ನು ಕಲೆ ಹಾಕಲಾರಂಭಿಸಿತು. ಇದರಿಂದ ಆತನ ಪೂರ್ಣ ಹೆಸರು ಲಭ್ಯವಾಯಿತು. ಆತನನ್ನು ಪ್ರತಿನಿತ್ಯ ಹಿಂಬಾಲಿಸಿ ವಿವರ ಸಂಗ್ರಹಿಸಿ ಅಬೋಟಾಬಾದ್ ಮನೆಯಲ್ಲಿ ಲಾಡೆನ್ ಇರುವುದನ್ನು ಪತ್ತೆಹಚ್ಚಲಾಯಿತು ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.