ಬುಧವಾರ, ಮೇ 19, 2021
26 °C

ಲಾರಿ ಡಿಕ್ಕಿ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳ ದಲ್ಲೇ ಸಾವನ್ನಪ್ಪಿದ ಘಟನೆ ಚಂದ್ರಾಲೇಔಟ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಚಂದ್ರಾಲೇಔಟ್‌ನ ಕೆಪಿಎ ಬ್ಲಾಕ್‌ನ ನಿವಾಸಿಯಾಗಿದ್ದ ರಮ್ಯಾ ಆರ್ ಕಾಮತ್ (26) ಮೃತಪಟ್ಟವರು. ಶಾಂತಿನಗರದ ಅಕ್ಕಿತಿಮ್ಮನಹಳ್ಳಿಯಲ್ಲಿರುವ ಖಾಸಗಿ ಕಂಪೆನಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಅವರು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಡುಗೆ ಅನಿಲ ಸಿಲಿಂಡೆರ್‌ತುಂಬಿಕೊಂಡು ಹೋಗುತ್ತಿದ್ದ ಲಾರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಕೆಳಗೆ ಬಿದ್ದ ರಮ್ಯಾ ಅವರ ಮೇಲೆ ಅದೇ ವಾಹನದ ಹಿಂದಿನ ಚಕ್ರ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಹೆಲ್ಮೆಟ್ ಧರಿಸಿದ್ದರು. ಆದರೆ ಚಕ್ರ ಹರಿದ ಪರಿಣಾಮ ತಲೆ ನಜ್ಜುಗುಜ್ಜಾಗಿದೆ. ಉಡುಪಿ ಜಿಲ್ಲೆಯವರಾದ ರಮ್ಯಾ ಅವರು ಗಿರೀಶ್ ಪ್ರಭು ಎಂಬುವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಪಘಾತ: ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿರುವ ಘಟನೆ ಮಲ್ಲೇಶ್ವರ ಸಂಚಾರ ಠಾಣೆ ವ್ಯಾಪ್ತಿಯ ಮೋದಿ ಜಂಕ್ಷನ್ ಬಳಿ ಗುರುವಾರ ರಾತ್ರಿ ನಡೆದಿದೆ.ಕುರುಬರಹಳ್ಳಿ ನಿವಾಸಿ ರಾಮಪ್ಪ (52) ಮೃತಪಟ್ಟವರು. ಅವರು ಕೂಲಿ ಕೆಲಸ ಮಾಡುತ್ತಿದ್ದರು. ರಾತ್ರಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಮಪ್ಪ ಅವರು ಪತ್ನಿ ಲಕ್ಷ್ಮಿಬಾಯಿ ಮತ್ತು ಐದು ಮಂದಿ ಹೆಣ್ಣು ಮಕ್ಕಳ ಜತೆ ಕುರುಬರಹಳ್ಳಿಯಲ್ಲಿ ನೆಲೆಸಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.ವ್ಯಾಪಾರಿಯ ಕೊಲೆ


ಬಲವಾದ ಆಯುಧದಿಂದ ತಲೆಗೆ ಹೊಡೆದು ಚಿನ್ನ- ಬೆಳ್ಳಿ ವ್ಯಾಪಾರಿಯನ್ನು ಕೊಲೆ ಮಾಡಿರುವ ಘಟನೆ ಚಿಕ್ಕಪೇಟೆಯ ಆರ್.ಟಿ. ಸ್ಟ್ರೀಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.ಕೋಣನಕುಂಟೆ ನಿವಾಸಿಯಾಗಿದ್ದ ನಟರಾಜು (42) ಕೊಲೆಯಾದವರು. ಆರ್.ಟಿ. ಸ್ಟ್ರೀಟ್‌ನಲ್ಲಿರುವ ಅವರ ಅಂಗಡಿಯಲ್ಲೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸುಮಾರು ಐವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ನಟರಾಜು ಅವರು ಹಳೆಯ ಚಿನ್ನ- ಬೆಳ್ಳಿ ವ್ಯಾಪಾರಿಯಾಗಿದ್ದರು. ಆಭರಣ ತಯಾರಿಸುವಾಗ ಚಿನ್ನದ ಕಣಗಳು ದೂಳಿನಲ್ಲಿ ಉಳಿದುಕೊಳ್ಳುತ್ತವೆ. ದಿನದ ಕೊನೆಯಲ್ಲಿ ಕಸ ಗುಡಿಸಿದಾಗ ಕಣಗಳು ಸಿಗುತ್ತವೆ.ಇದನ್ನು ಖರೀದಿಸುತ್ತಿದ್ದ ನಟರಾಜು ಪರಿಷ್ಕರಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ಕೊಲೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಸ್‌ನಿಂದ ಬಿದ್ದು ಗಾಯ

ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದ ಮೋಹನ್ ಕುಮಾರ್ (28) ಎಂಬುವರು ತೀವ್ರವಾಗಿ ಗಾಯಗೊಂಡ ಘಟನೆ ಇಂದಿರಾನಗರದಲ್ಲಿ ಶುಕ್ರವಾರ ನಡೆದಿದೆ. ಕೆ.ಆರ್. ಪುರದ ನಿವಾಸಿಯಾದ ಮೋಹನ್ ಅವರು ಹೂ ವ್ಯಾಪಾರಿ. ಹೂ ತುಂಬಿದ್ದ ಚೀಲದೊಂದಿಗೆ ಅವರು ಅನ್ನಪೂರ್ಣೇಶ್ವರಿ ಎಂಬ ಬಸ್ ಹತ್ತಿದ್ದಾರೆ. ಬಸ್‌ನಲ್ಲಿ ಜನ ತುಂಬಿದ್ದರಿಂದ ಅವರು ಬಾಗಿಲ ಬಳಿ ನಿಂತಿದ್ದರು. ಪ್ರಯಾಣಿಕರು ದೂಡಿದ್ದರಿಂದ ನಿಯಂತ್ರಣ ಕಳೆದಕೊಂಡ ಅವರು ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದಿರಾನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು

ಮನೆಯ ಬಾಗಿಲು ಮುರಿದ ದುಷ್ಕರ್ಮಿಗಳು ಚಿನ್ನದ ಆಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವ ಘಟನೆ ಹನುಮಂತನಗರದ ಅಶೋಕನಗರದಲ್ಲಿ ಗುರುವಾರ ನಡೆದಿದೆ.ಮನೆಯ ಮಾಲೀಕರಾದ ಕೃಷ್ಣಪ್ರಸಾದ್ ಅವರು ಬೆಳಿಗ್ಗೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದಾಗ ಬಾಗಿಲು ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು ಹದಿನೈದು ಗ್ರಾಂ ಚಿನ್ನದ ಆಭರಣ ಮತ್ತು ನಾನೂರು ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದಾರೆ. ಕೃಷ್ಣಪ್ರಸಾದ್ ಅವರು ರಾತ್ರಿ ಮನೆಗೆ ಬಂದಾಗ ಕಳವಾಗಿದ್ದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.