ಭಾನುವಾರ, ಮೇ 22, 2022
22 °C

ಲಿಫ್ಟ್‌ನಿಂದ ಬಿದ್ದು ಮಾಜಿ ಸೇನಾಧಿಕಾರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಐದನೇ ಮಹಡಿಯಲ್ಲಿ ಕೆಟ್ಟು ನಿಂತಿದ್ದ ಲಿಫ್ಟ್‌ನಿಂದ ಇಳಿಯಲು ಯತ್ನಿಸಿದ ನಿವೃತ್ತ ಸೈನಿಕರೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬಯ್ಯಪ್ಪನಹಳ್ಳಿಯ ಸಮೀಪದ ಸದಾನಂದನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ವಾಯು ಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದ ಮೋತಿಲಾಲ್ ನೆಲ್ಲೂರಿ (62) ಮೃತಪಟ್ಟವರು.ಜಲವಾಯು ಟವರ್ಸ್‌ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಲ್ಲಿ ಮೋತಿಲಾಲ್ ಅವರ ಮನೆ ಇದೆ. ಬೆಳಿಗ್ಗೆ ಆರು ಗಂಟೆ ಸುಮಾರಿಗೆ ವಾಯು ವಿಹಾರಕ್ಕೆ ಹೋಗಿದ್ದ ಅವರು ಎಂಟು ಗಂಟೆ ಸುಮಾರಿಗೆ ಹಿಂತಿರುಗಿದರು, ಲಿಫ್ಟ್ ಮೂಲಕ ಅವರು ಏಳನೇ ಮಹಡಿಗೆ ಹೋಗುತ್ತಿದ್ದಾಗ ಐದು ಮತ್ತು ನಾಲ್ಕನೇ ಮಹಡಿಯ ಮಧ್ಯೆ ಲಿಫ್ಟ್ ಕೆಟ್ಟು ನಿಂತಿತು.ಲಿಫ್ಟ್‌ನ ಬಾಗಿಲು ಅರ್ಧದಷ್ಟು ತೆರೆದುಕೊಂಡಿದ್ದರಿಂದ ಅಲ್ಲಿಂದ ಹಾರಲು ಯತ್ನಿಸಿದ ಅವರು ಆಯ ತಪ್ಪಿ ಕೆಳಗೆ ಬಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.2003ರಲ್ಲಿ ನಿವೃತ್ತಿಯಾಗಿದ್ದ ಅವರು ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ಶಶಾಂಕ್ ಅವರ ಜತೆ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಇನ್ನೊಬ್ಬ ಮಗ ವಂಶಿಕೃಷ್ಣ ಅವರು ಮುಂಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ  ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.