ಬುಧವಾರ, ಮೇ 18, 2022
23 °C

ಲೇಖಕ ಟಾಲ್ಸ್‌ಟಾಯ್ ತೋಲ್ಸ್‌ತೋಯ್ ಆದದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು 1947-1948 ರಲ್ಲಿ ನ್ಯಾಷನಲ್ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲಿ ರಸಾಯನಶಾಸ್ತ್ರ ಅಧ್ಯಾಪಕರಾಗಿದ್ದ ಡಾ. ಕೆ. ಶ್ರೀನಿವಾಸನ್‌ರ ಸಂಪರ್ಕದಿಂದ ಮಾರ್ಕ್ಸ್‌ವಾದಿ ಸಾಹಿತ್ಯದ ಪರಿಚಯವಾಗಿ ಅವರಂತೆಯೇ ನಾನೂ ಅಂತಹ ವಿಚಾರವಾದಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಬೇಕೆಂಬ ಪ್ರೇರಣೆ ಉಂಟಾಯಿತು.ಅನಂತರ ಖ್ಯಾತ ಸಾಹಿತಿ ನಿರಂಜನರ ನಿಕಟ ಸ್ನೇಹ ಲಭಿಸಿ (ಅವರೂ ಆಗ ಮಾರ್ಕ್ಸ್‌ವಾದಿ ಮತ್ತು ರಷ್ಯನ್ ಸಾಹಿತ್ಯದಿಂದ ಪ್ರಭಾವಿತ ರಾಗಿದ್ದರು) ಅವರ ನೆರವಿನಿಂದ ಅನೇಕ ಲೇಖನಗಳನ್ನು ಬರೆದೆ. ಹಲವು ರಷ್ಯನ್ ಕಥೆ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದೆ. ಅವುಗಳಲ್ಲಿ ಪೂಷ್ಕಿನ್‌ರ `ದುಬ್ರೋವ್‌ಸ್ಕಿ~ ಹಾಗೂ ನಿಕೊಲಾಯ್ ಆಸ್ತ್ರೋವ್‌ಸ್ಕಿಯವರ ಎರಡು ಸಂಪುಟಗಳ `ಅಗ್ನಿದೀಕ್ಷೆ~ ಪ್ರಕಟವಾಗಿ ಅವುಗಳ ಬಗೆಗೆ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಗಳು ಬಂದವು. ಹೀಗೆ ನನಗೆ ರಷ್ಯನ್ ಸಾಹಿತ್ಯ ಅನುವಾದದಲ್ಲಿ ಹೆಚ್ಚಿನ ಆಸಕ್ತಿ ಮೂಡಿತು.1957 ರಲ್ಲಿ ಭಾರತದಲ್ಲಿನ ಸೋವಿಯತ್ ದೂತಾವಾಸ ದವರು `ಸೋವಿಯತ್ ದೇಶ~ ಕನ್ನಡ ಪಾಕ್ಷಿಕವನ್ನು ಪ್ರಕಟಿಸಲು ನಿರ್ಧರಿಸಿದಾಗ ನನ್ನನ್ನು ಅನುವಾದಕನಾಗಿ ಕಾರ್ಯ ನಿರ್ವಹಿಸಲು ಆಹ್ವಾನಿಸಿದರು. ಹೀಗೆ ನಾನು ನವದೆಹಲಿಯಲ್ಲಿ ಆರು ವರ್ಷ, ಮದ್ರಾಸಿನಲ್ಲಿ ಹತ್ತು ವರ್ಷ ಕನ್ನಡ ಅನುವಾದಕ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ರಷ್ಯನ್ ಅಧಿಕಾರಿಗಳ ಸಂಪರ್ಕ ಬೆಳೆದು, ರಷ್ಯನ್ ಭಾಷೆ ಸಾಹಿತ್ಯದಲ್ಲೂ ವಿಶೇಷ ಆಸಕ್ತಿ ಮೂಡಿತು. ಸ್ವಲ್ಪ ಪ್ರಮಾಣದಲ್ಲಿ ರಷ್ಯನ್ ಭಾಷೆ ಕಲಿಯಲು ಪ್ರಯತ್ನಿಸಿದೆ.1974 ರಲ್ಲಿ ಮಾಸ್ಕೋದಲ್ಲಿ `ಪ್ರಗತಿ ಪ್ರಕಾಶನ~ ದವರು ಕನ್ನಡ ವಿಭಾಗ ತೆರೆದಾಗ (ಇವರು ಜಗತ್ತಿನ 84 ಭಾಷೆಗಳಲ್ಲಿ ತಮ್ಮ ರಾಜಕೀಯ, ಸಾಹಿತ್ಯಿಕ ಹಾಗೂ ವೈಜ್ಞಾನಿಕ ಕೃತಿಗಳನ್ನು ಮಾಸ್ಕೋದಲ್ಲೇ ಅನುವಾದ ಮಾಡಿಸಿ ಪ್ರಕಟಿಸುತ್ತಿದ್ದರು) ನನ್ನನ್ನು ಅಲ್ಲಿ ಕನ್ನಡ ಅನುವಾದಕನಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಿದರು. ನನಗೆ ಆಗಲೇ ರಷ್ಯನ್ ಭಾಷೆಯ ಅಲ್ಪ ಪರಿಚಯವಿದ್ದಿತು. ಅಲ್ಲಿಗೆ ಹೋದ ಮೇಲೆ ನನಗೆ ರಷ್ಯನ್ ಭಾಷೆ ಕಲಿಯಲು ಎರಡು ವರ್ಷಗಳ ಕಾಲ ಒಬ್ಬ ಅಧ್ಯಾಪಕರ ನೆರವನ್ನೂ ನೀಡಿದರು. ಅಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಆಗ ಸುಮಾರು 150ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದೆ.ಅವುಗಳಲ್ಲಿ ಮುಖ್ಯವಾಗಿ ಮಾರ್ಕ್ಸ್‌ವಾದಿ ಚಿಂತನೆಯ ವಿಚಾರವಾದಿ ಕೃತಿಗಳೇ ಅಧಿಕವಾಗಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಸಾಹಿತ್ಯಿಕ, ವೈಜ್ಞಾನಿಕ ಜನಪ್ರಿಯ ಕೃತಿಗಳೂ ಮಕ್ಕಳ ಕಥೆ-ಕವನಗಳೂ ಇದ್ದವು. ಇವೆಲ್ಲವನ್ನೂ ಅಲ್ಲಿಯೇ ಅಂದವಾಗಿ ಮುದ್ರಿಸಿ ಆಕರ್ಷಕವಾಗಿರುವಂತೆ ಪ್ರಕಟಿಸಿ ಅಗ್ಗದ ಬೆಲೆಯಲ್ಲಿ ವಿತರಿಸಲು ಬೆಂಗಳೂರಿನ ನವಕರ್ನಾಟಕ ಪ್ರಕಾಶನಕ್ಕೆ ಕಳುಹಿಸಿಕೊಡಲಾಗುತ್ತಿತ್ತು.ನಾನು ಅನುವಾದಿಸಿದ ಎಲ್ಲ ಕೃತಿಗಳನ್ನೂ ನೇರವಾಗಿ ಕೇವಲ ರಷ್ಯನ್ ಭಾಷೆಯಿಂದಲೇ ಅನುವಾದಿಸಿದ್ದೇನೆ ಎಂದು ಹೇಳಿ ಕೊಳ್ಳುವ ಧಾರ್ಷ್ಟ್ಯ ನನಗಿಲ್ಲ. ಮಕ್ಕಳ ಕಥೆ ಕವನಗಳನ್ನು ಅನುವಾದಿಸುವಾಗ ಹಾಗೆ ಮಾಡಿದ್ದೇನೆಂದು ಹೇಳಿಕೊಳ್ಳಬಲ್ಲೆ. ಆದರೆ ಬೃಹತ್ ಕೃತಿಗಳನ್ನು ಅನುವಾದಿಸುವಾಗ ಇಂಗ್ಲಿಷ್ ಕೃತಿಗಳ ನೆರವನ್ನೂ ಪಡೆಯುತ್ತಿದ್ದೆನೆಂದು ಹೇಳಲೇಬೇಕು. ನಮ್ಮ ಸಂಪಾದಕ ವರ್ಗದಲ್ಲಿದ್ದ ಕನ್ನಡದ ಜೊತೆಗೆ ಹಲವು ಭಾರತೀಯ ಭಾಷೆಗಳನ್ನೂ ಚೆನ್ನಾಗಿ ತಿಳಿದಿದ್ದ ರಷ್ಯದ ದಾಷ್ಕೋ ಮತ್ತು ತಾನ್ಯಾ ಕೂಡ  ನನ್ನ ಅನುವಾದವನ್ನು ಕೂಲಂಕಷವಾಗಿ ಓದಿ,  ಸಲಹೆ ನೀಡುತ್ತಿದ್ದರು.ಅವರ ಸಲಹೆಯಂತೆಯೇ ರಷ್ಯನ್ ಸಾಹಿತಿಗಳ ಹೆಸರುಗಳನ್ನು ಮೂಲ ರಷ್ಯನ್‌ನಲ್ಲಿ ಉಚ್ಚರಿಸುವಂತೆ ಬದಲಿಸಲಾಯಿತು. ಅದರಂತೆ ಟಾಲ್ಸ್‌ಟಾಯ್ ಹೆಸರು ನಮ್ಮ ಅನುವಾದದಲ್ಲಿ ತೋಲ್ಸ್‌ತೋಯ್ ಆಯಿತು. ಅಂತೆಯೇ ಗಾರ್ಕಿ-ಗೋರ್ಕಿ ಎಂದು ಟರ್ಗೆನೆವ್-ತುರ್ಗೆನ್ಯೇವ್, ದಾಸ್ಟೋವ್‌ಸ್ಕಿ -ದಸ್ತಯೇವ್‌ಸ್ಕಿ ಎಂದು ಬದಲಾದರು.

ನಾನು ಅನುವಾದಿಸಿದ ಸಾಹಿತ್ಯ ಕೃತಿಗಳಲ್ಲಿ ನನಗೆ ತುಂಬ ಇಷ್ಟವಾದವು:ತೋಲ್ಸ್‌ತೋಯ್‌ರ ಕಥೆಗಳು; ತುರ್ಗೆನ್ಯೇವ್‌ರ `ತಂದೆಯರೂ ಮಕ್ಕಳೂ~ (ಕಾದಂಬರಿ); ಗೋರ್ಕಿಯವರ ಮೂರು ಸಂಪುಟಗಳ ಆತ್ಮಕಥೆ-ನನ್ನ ಬಾಲ್ಯ, ನನ್ನ ವಿಶ್ವ ವಿದ್ಯಾಲಯ, ನನ್ನ ಪ್ರಪಂಚ; ಚೇಖವ್‌ರ ಸಣ್ಣ ಕಥೆಗಳು; ದಸ್ತಯೇವ್‌ಸ್ಕಿಯವರ ಸಣ್ಣ ಕಥೆಗಳು.ನಾನು ಮೈಸೂರಿನಲ್ಲಿ  ಆನರ್ಸ್ ಓದುತ್ತಿದ್ದಾಗ ಒಮ್ಮೆ  ನಿರಂಜನ ದಂಪತಿಯೊಂದಿಗೆ  ಸಾಹಿತಿ ಚದುರಂಗರ ಮನೆಗೆ ಹೋಗಿದ್ದೆ. ಜಗತ್ತಿನ ಶ್ರೇಷ್ಠ ಸಾಹಿತ್ಯ ಕೃತಿಗಳ ಬಗೆಗೆ ಹೇಳುತ್ತ ಚದುರಂಗರು `ಜಗತ್ತಿನ ಸಣ್ಣ ಕಥೆಗಳೆಲ್ಲ ರಷ್ಯನ್ ಸಾಹಿತಿ ಗೊಗೋಲ್‌ರ `ಓವರ್‌ಕೋಟ್~ನ ಜೇಬುಗಳಿಂದಲೇ ಹೊರ ಬಂದವು~ ಎಂದು ಹೇಳಿದರು.ಈ ಮಾತನ್ನು ನಾನು ನನಗೆ ತುಂಬ ಆಪ್ತರಾಗಿದ್ದ ಹಿರಿಯ ಕಲಾವಿದ ಆರ್.ಎಸ್. ನಾಯ್ಡು ಅವರಿಗೆ ಹೇಳಿ ಅದನ್ನು ಕನ್ನಡಕ್ಕೆ ಅನುವಾದಿಸಬೇಕೆಂದಿದ್ದೇನೆ ಎಂದು ತಿಳಿಸಿದೆ. ಅವರು ತಕ್ಷಣವೇ  ನಾಲ್ಕು ಸುಂದರ ರೇಖಾಚಿತ್ರಗಳನ್ನು ರಚಿಸಿಕೊಟ್ಟರು.

ನಾನಾ ಕಾರಣಗಳಿಂದಾಗಿ ಅದನ್ನು ನಾನು ಆಗ ಭಾಷಾಂತರಿಸಲು ಆಗಲೇ ಇಲ್ಲ.ಈಗ ಅಮೆರಿಕದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ನಾನು ಗೊಗೋಲ್‌ರ `ಓವರ್‌ಕೋಟ್~ ಕಥೆಯನ್ನು ಮೂಲ ರಷ್ಯನ್‌ನಿಂದ ಕನ್ನಡಕ್ಕೆ ಅನುವಾದಿಸಲು ಯತ್ನಿಸುತ್ತಿದ್ದೇನೆ. ಇದರಲ್ಲಿ ನನಗೆ ರಷ್ಯನ್ ಭಾಷೆಯಲ್ಲೇ ವ್ಯಾಸಂಗ ಮಾಡಿದ ನನ್ನ ಮೂವರು ಮಕ್ಕಳು ಮುರಳಿ, ಮೋಹನ್ ಹಾಗೂ ಡಾ. ಪೂರ್ಣಿಮಾ ನೆರವಾಗುತ್ತಿದ್ದಾರೆ. ಇದು ಆರ್‌ಎಸ್‌ಎನ್‌ರ ಚಿತ್ರಗಳೊಂದಿಗೆ ಪ್ರಕಟ ಆಗಬೇಕು ಎಂಬುದು ನನ್ನ ಹೆಬ್ಬಯಕೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.