ಶುಕ್ರವಾರ, ಮೇ 14, 2021
27 °C

ಲೈಸೆನ್ಸ್‌ಗಾಗಿ ಹಮಾಲಿ ಕಾರ್ಮಿಕರ ಧರಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ದುಡಿಯುವ ಎಲ್ಲ ಹಮಾಲಿ ಕಾರ್ಮಿಕರಿಗೆ ಪರವಾನಗಿ ಪತ್ರ (ಲೈಸನ್ಸ್) ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ತಾಲ್ಲೂಕು ಸಮಿತಿ  ಸದಸ್ಯರು ಎಪಿಎಂಸಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.ಮಹಿಳೆಯರೂ ಸೇರಿದಂತೆ ಸುಮಾರು 200ರಷ್ಟು ಹಮಾಲಿ ಕಾರ್ಮಿಕರು ಕೆಲಸ ಬಿಟ್ಟು ಎಪಿಎಂಸಿ ಎದುರು ಧರಣಿ ಕುಳಿತಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ತಾಲ್ಲೂಕು ಸಮಿತಿ ಗೌರವಾಧ್ಯಕ್ಷ ಸಿ.ಆರ್.ಶಾನಭಾಗ, 2010ನೇ ಇಸವಿಯಲ್ಲಿ ಸರ್ಕಾರ ಎಲ್ಲ ಹಮಾಲಿ ಕಾರ್ಮಿಕರಿಗೆ ಲೈಸನ್ಸ್ ನೀಡಬೇಕು ಎಂದು ಆದೇಶಿಸಿದೆ.ಈ ಆದೇಶ ಅನುಸರಿಸಿ 600 ಹಮಾಲಿ ಕಾರ್ಮಿಕರ ವೈಯಕ್ತಿಕ ಅರ್ಜಿ ಪಡೆದು ಎಪಿಎಂಸಿಗೆ ಮಾಹಿತಿ ಸಲ್ಲಿಸಲಾಗಿದೆ. ಆದರೆ ಎಪಿಎಂಸಿ ತನ್ನ ಉಪನಿಯಮ ಹೇಳುತ್ತ ವಿಳಂಬ ಮಾಡುತ್ತಿದೆ. ಆಸಕ್ತ ಎಲ್ಲ ಹಮಾಲಿ ಕಾರ್ಮಿಕರಿಗೆ ಪರವಾನಿಗೆ ಪತ್ರ ನೀಡಬೇಕು ಎಂದು ಉಪನಿಯಮದಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಆದರೆ ಎಪಿಎಂಸಿ 75 ಜನರಿಗೆ ಮಾತ್ರ ಪರವಾನಿಗೆ ಪತ್ರ ನೀಡಿದೆ. ಸಂಘಟಿತ ಸಂಘಟನೆ ಇದ್ದಲ್ಲಿ ಅವರ ಜೊತೆ ಎಪಿಎಂಸಿ ಚರ್ಚಿಸಿ ಕ್ರಮ ಕೈಕೊಳ್ಳಲು ಕಾಯಿದೆಯಲ್ಲಿ ತಿಳಿಸಲಾಗಿದೆ ಎಂದರು.`ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಈ ಕಾಯಿದೆ ಅನುಷ್ಠಾನಗೊಂಡು ದಶಕ ಕಳೆದಿವೆ. ನಮ್ಮಲ್ಲಿ ಮಾತ್ರ ಈ ರೀತಿ ವಿಳಂಬವಾಗುತ್ತಿದೆ. ನಾವು ಮತ್ತೇನೂ ಕೇಳುತ್ತಿಲ್ಲ. ಹಮಾಲಿ ಎಂದು ಗುರುತಿಸಿ ಹಮಾಲಿ ಕಾರ್ಮಿಕರ ಪರವಾನಿಗೆ ಪತ್ರ ಕೇಳುತ್ತಿದ್ದೇವೆ~ ಎಂದು ಅವರು ಹೇಳಿದರು.  ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಮಾತನಾಡಿ ಪರವಾನಗಿ ಪತ್ರಕ್ಕಾಗಿ ಐದು ವರ್ಷದಿಂದ ಅರ್ಜಿ ಸಲ್ಲಿಸುತ್ತ ಬಂದಿದ್ದು, ಪ್ರಯೋಜನವಾಗಿಲ್ಲ ಎಂದರು. ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳಿಗೆ ಪರವಾನಿಗೆ ಪತ್ರ ನೀಡಲು ಈ ಹಿಂದೆಯೇ ಸೂಚನೆ ನೀಡಿದ್ದರು.ಎಪಿಎಂಸಿ ವ್ಯಾಪ್ತಿಯಲ್ಲಿ ದುಡಿಯುವ ಹಮಾಲಿ ಕಾರ್ಮಿಕರಿಗೆ ಲೈಸನ್ಸ್ ಹಾಗೂ ಗುರುತಿನ ಚೀಟಿ ನೀಡಬೇಕು. ಲೈಸನ್ಸ್ ಪಡೆದ ಹಮಾಲಿ ಕಾರ್ಮಿಕರ ಪರವಾಗಿ ಜನಶ್ರೀ ವಿಮಾ ಯೋಜನೆ ವಾರ್ಷಿಕ ಕಂತನ್ನು ಸಮಿತಿಯಿಂದ ಪಾವತಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು. ಆದರೆ ಶಿರಸಿ ಎಪಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಈ ನಿಯಮ ಜಾರಿಮಾಡುತ್ತಿಲ್ಲ.ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಪುರುಷ ಹಮಾಲಿ ಕಾರ್ಮಿಕರಿಗೆ ಲೈಸನ್ಸ್ ನೀಡುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು~ ಎಂದು ಅವರು ಹೇಳಿದರು.ಎಪಿಎಂಸಿ ಅಧ್ಯಕ್ಷ ನರೇಶ ಭಟ್ಟ ಮಾತನಾಡಿ ಸ್ಥಳೀಯ ಮಾರುಕಟ್ಟೆ ಪ್ರಾಂಗಣದಲ್ಲಿ ಹಮಾಲಿ ತೂಕದವರು ಸೇರಿ 75 ಕಾರ್ಮಿಕರಿಗೆ ಲೈಸನ್ಸ್ ನೀಡಲಾಗಿದೆ. 282 ಮಂದಿಗೆ ಲೈಸನ್ಸ್ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ.ಎಪಿಎಂಸಿ ಲೈಸನ್ಸ್ ಹೊಂದಿದ ಯಾವುದೇ ಹಮಾಲಿ ಧರಣಿಯಲ್ಲಿ ಹಾಜರಾದರೆ ಅಂಥವರ ಮೇಲೆ ಕಾನೂನಿನ ಕ್ರಮ ಕೈಕೊಳ್ಳಲಾಗುವುದು ಎಂದರು. ಸಂಘಟನೆ ಪ್ರಮುಖರಾದ ನಾಗಪ್ಪ ನಾಯ್ಕ, ಮಾರುತಿ ನಾಯ್ಕ, ವೆಂಕಟೇಶ ನಾಯ್ಕ, ದೇವೇಂದ್ರ ನಾಯ್ಕ, ಶೀಲಾ ಚಕ್ರಸಾಲಿ, ಖುತೇಜಾ ಶೇಖ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.