ಗುರುವಾರ , ಏಪ್ರಿಲ್ 15, 2021
24 °C

ಲೋಕಪಾಲ- ಮಾತಿಗೆ ತಪ್ಪಿದ ಪ್ರಧಾನಿ: ಮತ್ತೆ ಉಪವಾಸ ಸತ್ಯಾಗ್ರಹ: ಹಜಾರೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಬಲಿಷ್ಠ ಲೋಕಪಾಲ ಮಸೂದೆ ಜಾರಿಗೆ ತರದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಎಚ್ಚರಿಕೆ ನಿಡಿದರು. ಈ ವಿಷಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.ದಕ್ಷಿಣ ದೆಹಲಿಯ ಸರ್ವೋದಯ ಎನ್‌ಕ್ಲೆವ್‌ನಲ್ಲಿ ರಾಜಕೀಯೇತರ ಚಳವಳಿಗಾಗಿ ಸ್ಥಾಪಿಸಿರುವ ನೂತನ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಾಯಕರಿಗೇನೂ ಕೊರತೆಯಿಲ್ಲ. ಆದರೆ ಈ ಎಲ್ಲ ಮುಖಂಡರು 2ಜಿ ತರಂಗಾಂತರ ಮತ್ತು ಕಲ್ಲಿದ್ದ ಗಣಿ ಹಂಚಿಕೆ ಹಗರಣದಲ್ಲಿ ಶಾಮೀಲಾಗಿರುವುದು ಸಮಸ್ಯೆ ಎಂದರು. ದೇಶದಲ್ಲಿ ಬದಲಾವಣೆ ಉಂಟು ಮಾಡಬೇಕು ಎಂದು ಯಾರಾದರು ಬಯಸಿದ್ದರೆ ಮೊದಲು ಅವರು ಗ್ರಾಮದಲ್ಲಿ ಬದಲಾವಣೆ ತರಬೇಕು. ಕೇವಲ ಸರ್ಕಾರ ನೀಡುವ ಅನುದಾನದಿಂದ ಮಾತ್ರ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು. `ದೀರ್ಘ ಸಮಯದ ಹಿಂದೆಯೇ ಟಾಟಾ ಮತ್ತು ಬಿರ್ಲಾ ದೇಶದಲ್ಲಿ ಬದಲಾವಣೆ ತಂದಿದ್ದಾರೆ. ನಮಗೆ ನಾಯಕರ ಕೊರತೆ ಇಲ್ಲ. ಆದರೆ, ಈಗಿನ ನಾಯಕರು ಕಲ್ಲಿದ್ದಲು ಗಣಿ ಹಂಚಿಕೆ, 2ಜಿ ಹಗರಣದಲ್ಲಿ ಶಾಮಿಲಾಗಿದ್ದಾರೆ. ಮಾತಿಗೆ ತಕ್ಕಂತೆ ನಡೆದುಕೊಳ್ಳುವ ನಾಯಕರ ಅಗತ್ಯ ದೇಶಕ್ಕಿದೆ~ ಎಂದು ಹೇಳಿದರು.`ಲೋಕಪಾಲ ಮಸೂದೆಗೆ ಹೊರತುಪಡಿಸಿ ಬೇರಾವುದೇ ಬೇಡಿಕೆಗೆ ಒತ್ತಾಯಿಸಿ ಮತ್ತೆ ಉಪವಾಸ ನಡೆಸುವುದಿಲ್ಲ. ಆದರೆ, ಸರ್ಕಾರ 2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಪೂರ್ವದಲ್ಲಿ ಮಸೂದೆ ಜಾರಿಗೊಳಿಸದಿದ್ದಲ್ಲಿ ನನ್ನ ಮಾತಿನಿಂದ ಹಿಂದೆ ಸರಿಯುತ್ತೇನೆ. ಈ ಬಾರಿ ನಾನು ರಾಮಲೀಲಾ ಮೈದಾನದಲ್ಲಿ ಉಪವಾಸ ನಡೆಸುತ್ತೇನೆ~ ಎಂದರು. ಜನಲೋಕಪಾಲ ಮಸೂದೆಯಲ್ಲಿ ತಮ್ಮ ಬೇಡಿಕೆಗಳನ್ನು ಸೇರಿಸಲು ನಿರ್ಣಯ ಅಂಗೀಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಅದನ್ನು ಈಡೇರಿಸದೇ ಮೋಸ ಮಾಡಿದ್ದಾರೆ ಎಂದು ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದ 13 ದಿನಗಳ ಉಪವಾಸ ಸತ್ಯಾಗ್ರಹವನ್ನು ಉಲ್ಲೇಖಿಸಿ ಹೇಳಿದರು. `ಆ ಸಂದರ್ಭದಲ್ಲಿ ಪ್ರಧಾನಿ ಭರವಸೆ ನೀಡದಿದ್ದಲ್ಲಿ ಉಪವಾಸ ಕೈಬಿಡುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ನಾವು ಲೋಕಪಾಲಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ನಾವೆಂದೂ ಬೆಂಬಲಿಸುವುದಿಲ್ಲ~ ಎಂದು ತಿಳಿಸಿದರು.ಎದುರಾಳಿಗಳ ಜತೆ ಜಗಳಕ್ಕೆ ಇಳಿಯದಂತೆ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಉಲ್ಲೇಖಿಸದೇ ಕಾರ್ಯಕರ್ತರಿಗೆ ಕರೆ ನೀಡಿದರು.`ಹೌದು, ನಮ್ಮ ತಂಡ ಇಬ್ಭಾಗವಾಗಿದೆ. ಎರಡೂ ಮಾರ್ಗಗಳು ಅಗತ್ಯ. ಆದರೆ, ರಾಜಕೀಯ ನಮ್ಮ ಮಾರ್ಗವಲ್ಲ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮದೇ ಆದ ಮಾರ್ಗ ಕಂಡುಕೊಳ್ಳಬಹುದು. ಈ ವಿಚಾರದಲ್ಲಿ ಅವರು ಸಂಪೂರ್ಣ ಸ್ವತಂತ್ರರು. ಆದರೆ, ಪದೇ ಪದೇ ಮನಸ್ಸು ಬದಲಾಯಿಸಬಾರದು~ ಎಂದು ಹೇಳಿದರು.`ಇಲ್ಲಿಯವರೆಗೆ ನಾವು ಕೇವಲ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದೇವೆ. ಆದರೆ, ಸಂಪೂರ್ಣ ವ್ಯವಸ್ಥೆಯ ಬದಲಾವಣೆ ವಿರುದ್ಧ ಹೋರಾಟ ನಡೆಸುವ ಸಮಯ ಬಂದಿದೆ~ ಎಂದರು.ಕಾಂಗ್ರೆಸ್ಸಿಗನ ಮನೆಯಲ್ಲಿ ಅಣ್ಣಾ ಕಚೇರಿ
ಅಣ್ಣಾ ಹಜಾರೆ ಅವರು ದಕ್ಷಿಣ ದೆಹಲಿಯ ಸರ್ವೋದಯ ಎನ್‌ಕ್ಲೆವ್‌ನಲ್ಲಿ ತೆರೆದಿರುವ ನೂತನ ಕಚೇರಿ ಕಾಂಗ್ರೆಸ್ ಕಾರ್ಯಕರ್ತನಿಗೆ ಸೇರಿದ ಮನೆ ಎಂದು ವರದಿಯಾಗಿದೆ. ಆದರೆ ಇದನ್ನು ಅಣ್ಣಾ ತಂಡ ಅಲ್ಲಗಳೆದಿದೆ.`ಸರ್ವೋದಯ ಎನ್‌ಕ್ಲೆವ್‌ನಲ್ಲಿ ಬಿ-18 ಸಂಖ್ಯೆಯ ಮನೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮಹೇಶ್ ಶರ್ಮಾ ಅವರಿಗೆ ಸೇರಿದೆ. ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕಾಂಗ್ರೆಸ್‌ನಿಂದ ಟಿಕೆಟ್ ಯಾಚಿಸಿದ್ದರು~ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್‌ಡಬ್ಲ್ಯುಎ) ಉಪಾಧ್ಯಕ್ಷೆ ಪಾಯಲ್ ಅಗರ್‌ವಾಲ್ ತಿಳಿಸಿದ್ದಾರೆ.`ನಾವು ಚಳವಳಿಯನ್ನು ಬೆಂಬಲಿಸುತ್ತೇವೆ. ಆದರೆ, ರಾಜಕೀಯ ಪಕ್ಷವೊಂದರ ಕಾರ್ಯಕರ್ತನ ಮನೆ ಬಾಡಿಗೆ ಪಡೆದುಕೊಂಡಿರುವುದನ್ನು ಖಂಡಿಸುತ್ತೇವೆ. ನಾವೂ ಸಹ ಚಳವಳಿಯ ಭಾಗವಾಗಲು ಬಯಸಿದ್ದೇವೆ. ಆದರೆ, ಈ ವಿಷಯ ತಿಳಿದ ಬಳಿಕ ನಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ~ ಎಂದಿದ್ದಾರೆ.`ನಾನು ನನ್ನ ಮನೆಯನ್ನು ಅವರಿಗೆ ಬಾಡಿಗೆಗೆ ನೀಡಿದ್ದೇನೆ. ಯಾರೇ ಬಾಡಿಗೆಗೆ ಕೇಳಿದರೆ ಅವರಿಗೆ ಕೊಡುತ್ತೇನೆ. ಯಾವುದೇ ರಾಜಕೀಯ ಪಕ್ಷದ ಸದಸ್ಯನಾಗಿಲ್ಲ~ ಎಂದು ತಮ್ಮ ವಿರುದ್ಧದ ಆರೋಪವನ್ನು ಶರ್ಮಾ ತಳ್ಳಿ ಹಾಕಿದ್ದಾರೆ. `ಶರ್ಮಾ ಕಾಂಗ್ರೆಸ್ ಪಕ್ಷದವರಾಗಿದ್ದರೆ ಮತ್ತು ಆ ಪಕ್ಷದ ಪರ ಮತ ಚಲಾಯಿಸುವವರಾಗಿದ್ದರೆ ನಮ್ಮ ಚಳವಳಿ ಮೇಲೆ ಅದು ಹೇಗೆ? ಪ್ರಭಾವ ಬೀರುತ್ತದೆ. ಏಕೆಂದರೆ ಮನೆಯನ್ನು ಬಾಡಿಗೆ ಮೇಲೆ ಪಡೆಯಲಾಗಿದೆ~ ಎಂದು ಅಣ್ಣಾ ತಂಡದ ಸದಸ್ಯ ಶಿವೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ. ಮನೆಯನ್ನು ಪ್ರತಿ ತಿಂಗಳು 50 ಸಾವಿರ ರೂಪಾಯಿ ಬಾಡಿಗೆ ಮೇಲೆ ಅಣ್ಣಾ ತಂಡ ಪಡೆದುಕೊಂಡಿದೆ.
`ಐಎಸಿ ಹೆಸರು ಬಳಸುವುದಿಲ್ಲ~
ನವದೆಹಲಿ (ಪಿಟಿಐ): ತಮ್ಮ ಸಂಘಟನೆಗೆ ` ಇಂಡಿಯಾ ಅಗೆನೆಸ್ಟ್ ಕರಪ್ಷನ್~ (ಐಎಸಿ) ಹೆಸರು ಇಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.` ಹಜಾರೆ ಅವರು ನನ್ನ ಗುರು. ಐಎಸಿ ಹೆಸರು ಬಳಸಬಾರದು ಎಂದರೆ ಅವರು ಹೇಳಿದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಕಟಕ್ ವರದಿ: ಕಪ್ಪು ಹಣದ ಬಗ್ಗೆ ಐಎಸಿ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಆರೋಪವನ್ನು ತನಿಖೆಗೊಳಪಡಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ರವಿ ಶಂಕರ್ ಪ್ರಸಾದ್ ಭಾನುವಾರ ಆಗ್ರಹಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.