ಗುರುವಾರ , ಜನವರಿ 23, 2020
28 °C
ಲೋಕಸಭೆಯಲ್ಲಿ ಇಂದು ಅಂಗೀಕಾರ ಸಾಧ್ಯತೆ

ಲೋಕಪಾಲ: ರಾಜ್ಯಸಭೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಭ್ರಷ್ಟ ಸರ್ಕಾರಿ ನೌಕರರು,  ಜನಪ್ರತಿ­ನಿಧಿ­ಗಳ ವಿರುದ್ಧ ಕಾನೂನುಕ್ರಮ ಜರುಗಿ­ಸುವ ಲೋಕ­ಪಾಲ ಸ್ಥಾಪನೆಗೆ ದಾರಿ­ಮಾಡಿ­ಕೊಡುವ ಐತಿಹಾಸಿಕ ಲೋಕಪಾಲ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.ಐದು ತಾಸುಗಳ ಗಂಭೀರ ಚರ್ಚೆಯ ನಂತರ  ರಾಜ್ಯಸಭೆಯಲ್ಲಿ ಈ ಮಸೂ­ದೆಗೆ ಧ್ವನಿಮತದ ಅಂಗೀ­ಕಾರ ದೊರೆ­ತಿದ್ದು, ಬುಧವಾರ ಲೋಕ­ಸಭೆಯಲ್ಲಿ ಚರ್ಚೆಗೆ ಬರಲಿದೆ.ಮಸೂದೆಗೆ ಸಮಾಜ­ವಾದಿ ಪಕ್ಷ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಕಾರಣ ಲೋಕ­ಸಭೆ­ಯಲ್ಲೂ ಬುಧವಾರ ಮಸೂದೆ ಅಂಗೀಕಾರವಾಗುವ ಎಲ್ಲ ಸಾಧ್ಯತೆ ಇದೆ.ಸಂಸತ್ತಿನ ಉಭಯಸದನಗಳಲ್ಲಿ ಮಸೂದೆ ಅಂಗೀಕಾರಗೊಂಡು ಲೋಕ­ಪಾಲ ಸ್ಥಾಪನೆಯಾದಲ್ಲಿ ಅದು ಭ್ರಷ್ಟಾಚಾರ ದೂರುಗಳ ಸಾರ್ವ­ಜನಿಕ ತನಿಖಾಧಿಕಾರಿಯಾಗಿ (ಒಂಬು­ಡ್ಸ್‌­ಮನ್‌) ಕೆಲಸ ಮಾಡಲಿದೆ.ಅಣ್ಣಾ ಆರೋಗ್ಯ ಏರುಪೇರು: ಈ ನಡುವೆ, ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಸಾಮಾಜಿಕ ಕಾರ್ಯ­ಕರ್ತ ಅಣ್ಣಾ ಹಜಾರೆ ರಾಳೆ­ಗಣ­ಸಿದ್ದಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾ­ವಧಿ ಉಪವಾಸ ಸತ್ಯಾಗ್ರಹ 10ನೇ ದಿನ ಪೂರೈಸಿದ್ದು, ಅಣ್ಣಾ ಆರೋಗ್ಯ ಬಿಗಡಾಯಿಸಿದೆ.

ರಾಜ್ಯಸಭೆ­ಯಲ್ಲಿ ಮಸೂದೆಗೆ ಅಂಗೀಕಾರ ದೊರೆತ ತಕ್ಷಣವೇ ರಾಳೆಗಣಸಿದ್ದಿಯಲ್ಲಿ ಸಂಭ್ರಮಾಚರಣೆ ನಡೆಯಿತು.‘ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ –2011’ ಲೋಕ­ಸಭೆ­ಯಲ್ಲಿ ಅಂಗೀಕಾರ­ಗೊಂಡರೂ, ಎರಡು ವರ್ಷಗ­ಳಿಂದ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆ­ಯದೆ ಉಳಿದು­ಕೊಂಡಿತ್ತು.ವಿರೋಧ: ರಾಜ್ಯಗಳು ಲೋಕಾಯುಕ್ತ ಹುದ್ದೆಯನ್ನು ಕಡ್ಡಾಯ­ವಾಗಿ ಸೃಷ್ಟಿಸ­ಬೇಕು ಎಂಬ  ಅಂಶವನ್ನು  ಹಲವು ಪಕ್ಷಗಳು ವಿರೋಧಿಸಿದ್ದವು.

ಎಲ್ಲ ಪಕ್ಷಗಳು ಮಸೂದೆಯನ್ನು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವಂತೆ ಮಾಡಲು ಸಂಸದೀಯ ಆಯ್ಕೆ ಸಮಿತಿ ಹಲವು ತಿದ್ದುಪಡಿಗಳನ್ನು ಸೂಚಿಸಿತ್ತು. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಯಲ್ಲಿ ಈ ತಿದ್ದುಪಡಿಗಳನ್ನು ಅಳವಡಿಸಿ­ಕೊಳ್ಳಲಾಗಿದೆ.ಮಸೂದೆಗೆ ಹಲವು ತಿದ್ದುಪಡಿ­ಗಳನ್ನು ಮಾಡಿರುವ ಕಾರಣ ಈಗ ಮತ್ತೆ ಲೋಕಸಭೆಯ ಒಪ್ಪಿಗೆ ಪಡೆಯ­ಬೇಕಾಗಿದೆ.ಲೋಕಪಾಲ ಮಸೂದೆಯ ಚರ್ಚೆ ಬೆಳಿಗ್ಗೆ ಆರಂಭವಾದ ತಕ್ಷಣವೇ ಯುಪಿಎ ಮಿತ್ರಪಕ್ಷ ಸಮಾಜವಾದಿ ಪಕ್ಷ ವಿರೋಧ ವ್ಯಕ್ತಪಡಿಸಿತು. ಅಲ್ಲದೇ ಎಸ್‌ಪಿಯ ಸಂಸದರು ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಿ ಹೊರನಡೆದರು.ಐತಿಹಾಸಿಕ ದಿನ: ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆಗೆ ಧ್ವನಿಮತದ ಅಂಗೀಕಾರ ದೊರೆತಿರುವುದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿರುವ ಕಾನೂನು ಸಚಿವ ಕಪಿಲ್‌ ಸಿಬಲ್‌, ಲೋಕಪಾಲದ ಮಾದರಿಯಲ್ಲಿಯೇ ರಾಜ್ಯಗಳು ಲೋಕಾಯುಕ್ತ ಆರಂಭಿಸುವ ಭರವಸೆ ವ್ಯಕ್ತಪಡಿಸಿದರು.ಪ್ರಧಾನಿಯವರನ್ನೂ ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬ ವಿಷಯದ ಕುರಿತು ಮಾತನಾಡಿದ ಸಚಿವರು, ಈ ಸಂಬಂಧ ಹೆಚ್ಚಿನವರ ಒಮ್ಮತಾಭಿ ಪ್ರಾಯ ಇದೆ. ಆದರೆ ಕೆಲವರು ಮಾತ್ರ ತಮ್ಮದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಅವರು ಹೇಳಿದರು.ಭ್ರಷ್ಟಾಚಾರ ತಡೆ ಕಾಯಿದೆ ಸೇರಿ­ದಂತೆ ಇನ್ನಷ್ಟು ಕಾಯಿದೆ­ಯನ್ನು ಸರ್ಕಾರ ಜಾರಿಗೊಳಿಸಲು ಆಸಕ್ತಿ ಹೊಂದಿದೆ. ಆದರೆ ಇದಕ್ಕೆ ಸಂಸತ್ತಿನ ಉಭಯ ಸದನಗಳು ಸುಸೂತ್ರವಾಗಿ ನಡೆಯಬೇಕು ಎಂದು ಸಿಬಲ್‌ ಹೇಳಿದರು.ಸರ್ಕಾರ ಹಾಗೂ ಖಾಸಗಿ ಪಾಲುದಾರಿಕೆಯ ಯೋಜನೆ­ಗಳನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕು ಎಂಬ ಸೀತಾರಾಂ ಯೆಚೂರಿ ಮಂಡಿಸಿದ ತಿದ್ದುಪಡಿಗೆ ಕೇವಲ 19 ಮತ ದೊರೆತ ಕಾರಣ ಬಿದ್ದುಹೋಯಿತು.50 ವರ್ಷಗಳ ಹಿಂದಿನ ಪರಿಕಲ್ಪನೆ

ಭ್ರಷ್ಟರನ್ನು ನಿಗ್ರಹ ಮಾಡುವ ಲೋಕಪಾಲ ಸ್ಥಾಪನೆಯ ಪರಿಕಲ್ಪನೆಯ ಆರಂಭವಾಗಿದ್ದು 1960 ರ ಸುಮಾರಿಗೆ. ಲೋಕಪಾಲ ಪದವನ್ನು ಮೂರನೇ ಲೋಕಸಭೆ ಸದಸ್ಯರಾಗಿದ್ದ ಎಲ್‌.ಎಂ.ಸಿಂಘ್ವಿ ಹುಟ್ಟು ಹಾಕಿದರು.     1960ರಲ್ಲಿ ಕಾನೂನು ಸಚಿವರಾಗಿದ್ದ ಅಶೋಕ್ ಕುಮಾರ್‌ ಸೇನ್‌ ಲೋಕಪಾಲ ಸ್ಥಾಪನೆಯ ಪ್ರಸ್ತಾವ ಮಾಡಿದ್ದರು. ಮೊದಲ ಬಾರಿಗೆ ಜನ ಲೋಕಪಾಲ ಮಸೂದೆಯನ್ನು 1968ರಲ್ಲಿ ಶಾಂತಿಭೂಷಣ್‌ ಅವರು ಪ್ರಸ್ತಾಪಿಸಿದ್ದರು. 1969ರಲ್ಲಿ ಅದು ಲೋಕಸಭೆಯಲ್ಲಿ ಅಂಗೀಕಾರವಾಯಿತು.  ಆದರೆ ಅದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.  ಆನಂತರ ಲೋಕಪಾಲ ಮಸೂದೆಯನ್ನು ಕಾಂಗ್ರೆಸ್‌ ಸರ್ಕಾರ ಇದ್ದಾಗ 1971,1977,1985ರಲ್ಲಿ ಕಾನೂನು ಸಚಿವ ಅಶೋಕ್‌ ಕುಮಾರ್ ಸೇನ್‌ ಅವರೇ  ಮಂಡಿಸಿದ್ದರು.ಹಲವು ಸರ್ಕಾರಗಳ ಅವಧಿಯಲ್ಲಿ  1989,1996,1998,2001 ಹಾಗೂ 2005ರಲ್ಲಿ ಮಂಡಿಸಲಾಗಿದ್ದರೂ ಅಂಗೀಕಾರವಾಗಿರಲಿಲ್ಲ.ಮೂರು ಶಿಫಾರಸುಗಳಿಗೆ ಒಪ್ಪಿಗೆ

ಮಸೂದೆಗೆ ಸಂಬಂಧಿ­ಸಿದಂತೆ  ಆಯ್ಕೆ ಸಮಿತಿಯ ಮೂರು ಶಿಫಾರಸುಗಳನ್ನು ಸರ್ಕಾರ ಒಪ್ಪಿ­ಕೊಂಡಿದೆ. ಲೋಕಪಾಲ ತನಿಖೆ ನಡೆಸಲು ಸೂಚಿಸಿದ ಪ್ರಕರಣದ ಸಿಬಿಐ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡದೇ ಇರುವುದು.ಲೋಕಪಾಲರ ಆಯ್ಕೆ ಪ್ರಕ್ರಿಯೆಯಲ್ಲೂ ಬದಲಾವಣೆ ಮಾಡಲಾಗಿದೆ.   ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭಾ ಸ್ಪೀಕರ್‌, ಲೋಕಸಭೆಯ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ರಾಷ್ಟ್ರಪತಿಗಳು ಹೆಸರು ಸೂಚಿಸಿದ ಗಣ್ಯರೊಬ್ಬರು ಇರುತ್ತಾರೆ.ಆಪಾದಿತ ಸರ್ಕಾರಿ ನೌಕರನ ವಿರುದ್ಧ ತನಿಖೆ ಆರಂಭದಲ್ಲಿ ಆತನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬಾರದು ಎಂಬ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿಲ್ಲ.

ಪ್ರತಿಕ್ರಿಯಿಸಿ (+)