ಗುರುವಾರ , ಏಪ್ರಿಲ್ 15, 2021
24 °C

ಲೋಕಾಯುಕ್ತ ನೇಮಕ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಲೋಕಾಯುಕ್ತರ ಹುದ್ದೆಯನ್ನು ಶೀಘ್ರ ಭರ್ತಿ ಮಾಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದು ಕಳೆದ ವಾರವಷ್ಟೇ ಸರ್ಕಾರಕ್ಕೆ ಚಾಟಿ ಬೀಸಿದ್ದ ಹೈಕೋರ್ಟ್, ಸೋಮವಾರ ಪುನಃ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.ಈ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದೇ 25ರ ಒಳಗೆ ನಿಲುವು ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸರ್ಕಾರಕ್ಕೆ ಸೂಚಿಸಿದೆ.ಲೋಕಾಯುಕ್ತ ನೇಮಕದ ಕುರಿತಾಗಿ ಏಪ್ರಿಲ್‌ನಲ್ಲಿ ಹೈಕೋರ್ಟ್ ಮಾರ್ಗಸೂಚಿ ರೂಪಿಸಿರುವ ಕಾರಣ, ಪ್ರಕ್ರಿಯೆ ವಿಳಂಬ ಆಗುತ್ತಿದೆ ಎಂಬ ಸರ್ಕಾರದ ವಾದ ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.`ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದುವರೆಗೂ ಸರಿಯಾದ ಮಾರ್ಗಸೂಚಿ ಇಲ್ಲ.  ನೇಮಕ ನಿಯಮದಲ್ಲಿ ಕೆಲವು ಗೊಂದಲಗಳು ಇವೆ. ಆದುದರಿಂದ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ಅಲ್ಲಿಯವರೆಗೆ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಕೆಲವೊಂದು ನಿರ್ದೇಶನ ಪಾಲನೆ ಮಾಡಬೇಕು ಎಂದು ಏಪ್ರಿಲ್‌ನಲ್ಲಿ ಹೇಳಿರುವ ಕೋರ್ಟ್, ಕೆಲವೊಂದು ಮಾರ್ಗಸೂಚಿ ರೂಪಿಸಿದೆ.ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸರ್ಕಾರ ವಿಶೇಷ ಮೇಲ್ಮನವಿ ಸಲ್ಲಿಸಿದ್ದು ಅದು ನೀಡುವ ಆದೇಶಕ್ಕೆ ಕಾಯಲಾಗುತ್ತಿದೆ~ ಎಂದು ಅಡ್ವೊಕೇಟ್ ಜನರಲ್ (ಎ.ಜಿ) ಹೇಳಿದರು.`ಮಾರ್ಗಸೂಚಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕಾಯ್ದೆಯ 3(2)(ಎ) ಹಾಗೂ 3(2)(ಬಿ) ಕಲಮಿನ ಬಗ್ಗೆ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾಯುತ್ತಿದ್ದೇವೆ. ಕೋರ್ಟ್, ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದೆ. ಅದು ಹೊರಡಿಸುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ~ ಎಂದರು.ಈ ಹೇಳಿಕೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. `ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದು ಉಪ ಲೋಕಾಯುಕ್ತ ಹುದ್ದೆಗೆ ಸಂಬಂಧಿಸಿದ ಪ್ರಕರಣವೇ ಹೊರತು ಲೋಕಾಯುಕ್ತ ನೇಮಕ ಪ್ರಕರಣ ಅಲ್ಲ. ಹಾಗಿದ್ದ ಮೇಲೆ ಈ ಹುದ್ದೆಗೆ ನೇಮಕ ಮಾಡಲು ನಿಮಗೇನು ಕಷ್ಟ~ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.`ಆಗಸ್ಟ್ 6ಕ್ಕೆ ಅರ್ಜಿಯು ವಿಚಾರಣೆಗೆ ಬಂದರೆ ಅಂದೇ ಅಂತಿಮ ಆದೇಶ ಹೊರಬೀಳುತ್ತದೆ ಎಂದು ಹೇಳಲು ಆಗದು. ಆಗೇನು ಮಾಡುತ್ತೀರಿ, ಪುನಃ ನೇಮಕ ವಿಳಂಬ ಮಾಡುವಿರಾ~ ಎಂದು ಕೇಳಿದರು.`ಹೈಕೋರ್ಟ್ ರೂಪಿಸಿರುವ ಮಾರ್ಗಸೂಚಿಯಿಂದ ನಿಮಗೆ  (ಸರ್ಕಾರಕ್ಕೆ) ತೊಡಕಾಗುತ್ತಿದೆ ಎನ್ನುವುದು ನಿಮ್ಮ ವಾದ. ಆದರೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದ್ದು ಈ ವರ್ಷದ ಏಪ್ರಿಲ್‌ನಲ್ಲಿ. ಲೋಕಾಯುಕ್ತ ಹುದ್ದೆ ತೆರವುಗೊಂಡಿದ್ದು 2011ರ   ಆಗಸ್ಟ್‌ನಿಂದ. ಹಾಗಿದ್ದ ಮೇಲೆ ಆಗಸ್ಟ್‌ನಿಂದ ಏಪ್ರಿಲ್‌ವರೆಗೆ ನೀವು ಮಾಡಿದ್ದೇನು, ಆಗ ಯಾವ ಮಾರ್ಗಸೂಚಿ ನಿಮಗೆ ತಡೆಯೊಡ್ಡಿತು~ ಎಂದು  ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.`ಸರ್ಕಾರದಿಂದ ಲೋಕಾಯುಕ್ತ ನೇಮಕ ಮಾಡಲು ಕಷ್ಟವಾದರೆ ಹೇಳಿ. ನೇಮಕ ಪ್ರಕ್ರಿಯೆ ಹೇಗೆ ಮಾಡಬೇಕು ಎನ್ನುವುದನ್ನು ನಾವು ಹೇಳುತ್ತೇವೆ~ ಎಂದು ನ್ಯಾ.ಸೇನ್, ಅಡ್ವೊಕೇಟ್ ಜನರಲ್ ಅವರಿಗೆ ತಿಳಿಸಿದರು. ಆಗ ಅವರು, `ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ಆರಂಭಿಸಲು ಸರ್ಕಾರಕ್ಕೆ ತಿಳಿಸಲಾಗುವುದು~ ಎಂದರು.ಅದಕ್ಕೆ ನ್ಯಾಯಮೂರ್ತಿಗಳು, `ಮೊದಲು ಆ ಕೆಲಸ ಮಾಡಿ. ಇದೇ 25ರ ಒಳಗೆ ಸ್ಪಷ್ಟ ನಿರ್ಧಾರಕ್ಕೆ ಬನ್ನಿ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.