ಮಂಗಳವಾರ, ಮೇ 24, 2022
31 °C

`ಲೋಕ ಅದಾಲತ್: ಅಪರಾಧ ಪ್ರಕರಣಗಳದ್ದೇ ಮೇಲುಗೈ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಳೆದ ವರ್ಷ ಅಂದರೆ 2012ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ 5785 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ವಿಲೇವಾರಿ ಮಾಡಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚೌಡಾಪುರ್‌ಕರ್ ಅರುಣ್ ಅವರು ತಿಳಿಸಿದ್ದಾರೆ.ನಗರದ ನ್ಯಾಯಾಲಯ ಆವರಣದಲ್ಲಿ ಸೋಮವಾರ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನ ಉದ್ಘಾಟನೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವರ್ಷ ಜನವರಿಯಿಂದ ಮೇ ಅವಧಿಯವರೆಗೆ 3126 ಪ್ರಕರಣಗಳು ಲೋಕ ಅದಾಲತ್ ಮೂಲಕ ವಿಲೇವಾರಿ ಆಗಿವೆ. ಲೋಕ ಅದಾಲತ್‌ನಲ್ಲಿ ಹೆಚ್ಚಾಗಿ ಚೆಕ್ ಬೌನ್ಸ್ ಮುಂತಾದ ಕ್ರಿಮಿನಲ್ ಕೇಸ್‌ಗಳೇ ವಿಲೇವಾರಿ ಆಗುತ್ತವೆ. ಸಿವಿಲ್ ಕೇಸುಗಳೂ ಲೋಕ ಅದಾಲತ್ ಮುಂದೆ ಬರುತ್ತವೆ. ಕೆಲವು ಪ್ರಕರಣಗಳನ್ನು ಈ ಮೂಲಕವೂ ಇತ್ಯರ್ಥ ಮಾಡಲಾಗಿದೆ. ಆದರೆ ವ್ಯಾಜ್ಯಪೂರ್ವ ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಸುಮಾರು ಒಂದೂವರೆ ವರ್ಷ ಅವಧಿಯಲ್ಲಿ ಬಂದಿಲ್ಲ ಎಂದು ಅವರು ಹೇಳಿದರು.ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಪ್ರಕರಣಗಳಿಗೇ ಹೆಚ್ಚು ಆದ್ಯತೆ ಕೊಡಲಾಗುವುದು. ಆದರೆ ಇತ್ತೀಚೆಗೆ ಇಂತಹ ಪ್ರಕರಣಗಳು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಸೀಮಿತವಾಗಿ ಬಿಟ್ಟಿವೆ. ಪ್ರತಿವಾದಿಗಳ ಅನಾಸಕ್ತಿಯಿಂದ ವ್ಯಾಜ್ಯ ಪೂರ್ವ ಪ್ರಕರಣಗಳು ಲೋಕ ಅದಾಲತ್ ಮೆಟ್ಟಿಲೇರುವುದಿಲ್ಲ ಎಂದು ಅವರು ಹೇಳಿದರು.ಲೋಕ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನರಲ್ಲಿ ಕಾನೂನು ಸಾಕ್ಷರತೆ ಮೂಡಿಸುವಲ್ಲಿ ಸಂಚಾರಿ ಜನತಾ ನ್ಯಾಯಾಲಯದ ಮೂಲಕ ನಡೆದ ಜಾಗೃತಿ ಕಾರ್ಯಕ್ರಮಗಳನ್ನು ವಿವರಿಸಿದರು. ಸಂಚಾರಿ ಜನತಾ ನ್ಯಾಯಾಲಯದ ಮೂಲಕ ಕಾನೂನು ಅರಿವು ಮೂಡಿಸುವ ಕೆಲಸ ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನಗಳ ಕಾಲ ನಡೆಯಲಿದೆ. ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ದೈನಂದಿನ ಬದುಕಿನಲ್ಲಿ ಅಗತ್ಯ ಇರುವ ಕಾನೂನು, ನಿಯಮಗಳ ಬಗ್ಗೆ ತಿಳಿ ಹೇಳಲಾಗುವುದು ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಅಶೋಕ್ ಆರಿಗ ಹೇಳಿದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸುಬ್ರಮಣ್ಯ ಜೆ. ಎನ್ ಮತ್ತಿತರರು ಉಪಸ್ಥಿತರಿದ್ದರು. ಕಾನೂನು ಸಾಕ್ಷರತಾ ರಥ ಜುಲೈ 3ರವರೆಗೆ ಮಂಗಳೂರಿನ ಆಸುಪಾಸಿನಲ್ಲಿ ಸಂಚರಿಸಿ ಕಾನೂನು ಮಾಹಿತಿ ನೀಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.