ಶನಿವಾರ, ಏಪ್ರಿಲ್ 10, 2021
30 °C

ವಡ್ಡರ್ ಸಾವಿನ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಯಲ್ಲಾಪುರ ತಾಲ್ಲೂಕಿನ ಮದ್ನೂರ ಗ್ರಾಮದ ದಲಿತ ಮುಖಂಡ ಮಾರುತಿ ವಡ್ಡರ ಅವರ ಸಾವು ಸಂಶಯಾಸ್ಪದವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.ದಲಿತ ಸಂಘರ್ಷ ಸಮಿತಿಯ ಯಲ್ಲಾಪುರ ಘಟಕದ ಅಧ್ಯಕ್ಷರಾಗಿದ್ದ ಮಾರುತಿ ಹುಬ್ಬಳ್ಳಿಗೆ ಹೋಗಿಬರುತ್ತೇನೆ ಎಂದು ಹೋದವರು ಹಾವೇರಿ ಜಿಲ್ಲೆಯ ಬ್ಯಾಡಗಿ ಹತ್ತಿರ ರೈಲು ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಈ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.ದಲಿತ ಮುಖಂಡ ಮಾರುತಿ ಯಲ್ಲಾಪುರ ತಾಲ್ಲೂಕಿನ ಮದ್ನೂರ ಹಾಗೂ ಕಿರವತ್ತಿ ಗ್ರಾ.ಪಂ.ಗಳಲ್ಲಿ ಕಾಮಗಾರಿಗಳ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದ್ದರು. ಸವರ್ಣಿಯ ಶ್ರೀಮಂತರು ಪರಿಶಿಷ್ಟ ಜಾತಿ, ಪಂಗಡದವರ ಜಮೀನುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಕಳೆದ 2-3ವರ್ಷಗಳಿಂದ ಹೋರಾಟದ ಮೂಲಕ ನ್ಯಾಯ ಕೊಡಿಸಿ ಜನಪ್ರಿಯತೆ ಗಳಿಸಿದ್ದರು.ಗ್ರಾಮ ಮಟ್ಟದಿಂದ ತಾಲ್ಲೂಕು ಮಟ್ಟದವರೆಗೆ ಅಧಿಕಾರಸ್ಥ ಸವರ್ಣಿಯ ರಾಜಕೀಯ ವ್ಯಕ್ತಿಗಳಿಂದ ಅನ್ಯಾಯಕ್ಕೊಳಗಾಗಿದ್ದ ಪ.ಜಾತಿ, ಜನಾಂಗದವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದರು. ಇಂತಹ ಘಟನೆಗಳಿಂದ ಕೆಲವರಿಗೆ ಕೋಪ ಮತ್ತು ದ್ವೇಷ ಸಹಜವಾಗಿದ್ದು, ಅದರಿಂದ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.ದಲಿತ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕಲು ಹಾಗೂ ಸದಸ್ಯರಲ್ಲಿ ಭಯ ಹುಟ್ಟಿಸಲು ಇಂತಹ ಘಟನೆಗಳು ನಡೆಯುತ್ತಿದ್ದು ದಲಿತ ನಾಯಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೇ ಮಾರುತಿ ವಡ್ಡರ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ಫಕ್ಕೀರಪ್ಪ, ಕ.ರಾ.ದ.ಸಂ. ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ವೈ.ಭಜಂತ್ರಿ, ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹನಮಂತ ಆರೆಗೊಪ್ಪ, ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಚಲವಾದಿ, ದಲಿತ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ಭೋವಿವಡ್ಡರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದುರ್ಗಪ್ಪ ಬಂಡಿವಡ್ಡರ, ಕೃಷ್ಣ ಹಿರೇಹಳ್ಳಿ, ಬಿ.ಎಂ.ಮಡ್ಲಿ, ಬಸವರಾಜ ಹಳ್ಳಮ್ಮನವರ ಇತರರು ಉಪಸ್ಥಿತರಿದ್ದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.