ಶುಕ್ರವಾರ, ಜೂನ್ 18, 2021
23 °C
ಹರಪನಹಳ್ಳಿ ತಾಲ್ಲೂಕು ಆಡಳಿತದಿಂದ ಮನೆ ತೆರವು

ವದಂತಿಗೆ ಕಿವಿಗೊಟ್ಟು ಬೀದಿ ಪಾಲಾದ ಸಂತ್ರಸ್ತರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಇದು ವದಂತಿಗೆ ಕಿವಿಗೊಟ್ಟು ಬೀದಿ ಪಾಲಾದ ಅಮಾಯಕರ ಸುದ್ದಿ. ನೆರೆಪೀಡಿತ ಪ್ರದೇಶದ ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲು ಸರ್ಕಾರ ‘ಆಸರೆ’ ಯೋಜನೆಯಡಿ ಮನೆಗಳನ್ನು ನಿರ್ಮಿಸಿತ್ತು. ಆದರೆ, ಭೂ ಮಾಲೀಕರು ಹಾಗೂ ಜಿಲ್ಲಾಡಳಿತ ಮಧ್ಯೆ ವಿವಾದ ಉಂಟಾಗಿ, ಹಂಚಿಕೆ ಆಗದೇ ಉಳಿದಿದ್ದ ಮನೆಗಳಲ್ಲಿ ಯಾರು ಅಕ್ರಮವಾಗಿ ವಾಸ ಮಾಡುತ್ತಾರೋ ಅಂತಹ ಕುಟುಂಬಗಳಿಗೆ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ಯಾರೋ ಹಬ್ಬಿಸಿದ ವದಂತಿ ನಂಬಿ ಪೇಚಿಗೆ ಸಿಲುಕಿದವರ ವ್ಯಥೆ.ರಾತ್ರೋರಾತ್ರಿ ಅಕ್ರಮವಾಗಿ ಮನೆಗಳಿಗೆ ಪ್ರವೇಶ ಮಾಡಿದ್ದ ಕುಟುಂಬಗಳನ್ನು ತಾಲ್ಲೂಕು ಆಡಳಿತ ಶುಕ್ರವಾರ ಕಾರ್ಯಾಚರಣೆ ನಡೆಸುವ ಮೂಲಕ ಬಲವಂತವಾಗಿ ತೆರವುಗೊಳಿಸಿತು. ಘಟನೆ ಹಿನ್ನೆಲೆ: ಪಟ್ಟಣದಲ್ಲಿ 2009ರಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಪರಿಣಾಮ ನಾಲ್ಕಾರು ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು.ನೆರೆಬಾಧಿತ ಪ್ರದೇಶಗಳ ಜನರನ್ನು ಶಾಶ್ವತವಾಗಿ ಸ್ಥಳಾಂತರಿಸುವ ಮೂಲಕ ಸುಸಜ್ಜಿತವಾದ ನೆಲೆ ಒದಗಿಸಲು ಸರ್ಕಾರ

ಆಸರೆ ಯೋಜನೆ ಅಡಿಯಲ್ಲಿ ಪಟ್ಟಣದ ಹರಿಹರ ರಸ್ತೆಯ ಆಶ್ರಯ ಕಾಲೊನಿಗೆ ಹೊಂದಿಕೊಂಡಂತೆ ಒಟ್ಟು 11ಮಂದಿ ರೈತರಿಗೆ ಸೇರಿದ 32 ಎಕರೆ ಭೂಮಿ ಖರೀದಿಸಿತ್ತು.ಭೂಮಿ ಖರೀದಿಸುವ ಸಂದರ್ಭದಲ್ಲಿ ಭೂಮಾಲಿಕರಿಗೆ ಪ್ರತಿ ಎಕರೆಗೆ ಒಂದು ಮನೆ ನೀಡಲು ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆಸರೆ ಯೋಜನೆಯ ಅಡಿ 543 ಮನೆ ನಿರ್ಮಾಣಕ್ಕೆ ಸರ್ಕಾರ ಮುಂದಾಯಿತು. ಕಾಮಗಾರಿ  2012ರಲ್ಲಿ ಪೂರ್ಣಗೊಂಡು, ಫಲಾನುಭವಿ ಕುಟುಂಬಗಳಿಗೆ ಹಂಚಿಕೆ ಮಾಡಿತು. ಆದರೆ, ಬೆರಳೆಣಿಯಷ್ಟು ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿದರೆ, ಬಹುತೇಕ ಮನೆಗಳು ಅನರ್ಹರ ಪಾಲಾಗಿವೆ ಎಂಬ ಆರೋಪ ಕೇಳಿಬಂತು.511 ಮನೆಗಳನ್ನು ಹಂಚಿಕೆ ಮಾಡಿದ ತಾಲ್ಲೂಕು ಆಡಳಿತ, ಉಳಿದ 32 ಮನೆಗಳನ್ನು ಭೂಸ್ವಾಧೀನದ ಮೂಲ ಮಾಲೀಕರಿಗೆ ಹಂಚಿಕೆ ಮಾಡಲು ಮುಂದಾಗಿತ್ತು. ಅದಾಗಲೇ ಕ್ಷೇತ್ರದಲ್ಲಿ ಬದಲಾದ ರಾಜಕಾರಣದಿಂದಾಗಿ ಜಿಲ್ಲಾಡಳಿತ ಹಾಗೂ ಭೂಮಾಲೀಕರ ಮಧ್ಯೆ ವಿವಾದ ಸೃಷ್ಟಿಯಾಯಿತು. ಮಾರುಕಟ್ಟೆಯ ಮೌಲ್ಯಕ್ಕಿಂತ ಹೆಚ್ಚುವರಿ ಬೆಲೆಯಲ್ಲಿ ಭೂಮಿ ಖರೀದಿಸಲಾಗಿದೆ.ಹೀಗಿದ್ದರೂ ಪ್ರತಿ ಎಕರೆಗೆ ಒಂದೊಂದು ಮನೆ ಬದಲಾಗಿ, 11ಮಂದಿ ಭೂ ಮಾಲೀಕರಿಗೆ ತಲಾ ಒಂದೊಂದು ಮನೆ ಕೊಡುವುದಾಗಿ ಜಿಲ್ಲಾಡಳಿತ ತೀರ್ಮಾನಿಸಿತು. ಇದರಿಂದ ಭೂ ಮಾಲೀಕರು ಹಾಗೂ ಜಿಲ್ಲಾಡಳಿತ ಮಧ್ಯೆ ವಿವಾದ ಉಂಟಾದ ಪರಿಣಾಮ 32 ಮನೆಗಳು ಹಂಚಿಕೆಯಾಗಲಿಲ್ಲ. ಈ ಮಧ್ಯೆ ಕಳೆದ ಬುಧವಾರದಿಂದ ಹಂಚಿಕೆ ಆಗದ ಮನೆಗಳಲ್ಲಿ ಯಾರು ವಾಸವಾಗಿರುತ್ತಾರೋ ಅವರಿಗೇ ಮನೆಗಳನ್ನು ಸಕ್ರಮ ಮಾಡಲಾಗುತ್ತದೆ ಎಂದು ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ.ಇದರಿಂದ ಮನೆ ದೊರೆಯದ ನೈಜ ಸಂತ್ರಸ್ತರು ರಾತ್ರೋರಾತ್ರಿ ಹಂಚಿಕೆ ಆಗದ ಮನೆಗಳ ಬೀಗ ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ಕೂಡಲೇ ಜಾಗೃತರಾದ ಪ್ರಭಾರ ತಹಶೀಲ್ದಾರ್‌ ಮಂಜುನಾಥ, ಕಂದಾಯ ಇಲಾಖೆ ಸಿಬ್ಬಂದಿ ಮೂಲಕ ಕುಟುಂಬಗಳನ್ನು ಪೊಲೀಸರ ನೆರವಿನಿಂದ ತೆರವುಗೊಳಿಸಲು ಆದೇಶ ನೀಡಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಪುನಃ ಮನೆ ಬಾಗಿಲಿಗೆ ಬೀಗ ಹಾಕಿ ಮೊಹರು ಮಾಡಿದರು.

ಕುಟುಂಬಗಳ ವಿರೋಧ

‘ಇಡೀ ಜೀವನವನ್ನೇ ಹುಲ್ಲು ಜೋಪಡಿಗಳಲ್ಲಿ, ಬಾಡಿಗೆ ಮನೆಗಳಲ್ಲಿ ಕಳೆದಿದ್ದೇವೆ. ಆಶ್ರಯ ಮನೆಗಳನ್ನು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮಾರಿಕೊಳ್ಳುತ್ತಾರೆ. ಹಣ ಕೊಡುವ ಶಕ್ತಿ ಇಲ್ಲದವರು ನಾವು ಏನು ಮಾಡಬೇಕು? ಬಡವರಾಗಿ ನಾವು ಹುಟ್ಟಿದ್ದೇ ತಪ್ಪೇ..? ಬೇರೆ ಎಲ್ಲಿಯಾದರೂ ನಮಗೆ ಮನೆ ಕೊಡಿ. ಈ ಮನೆ ಖಾಲಿ ಮಾಡುತ್ತೇವೆ’ ಎಂದು ಮನೆ ಪ್ರವೇಶ ಮಾಡಿದ್ದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.‘ಮನೆ ಕೊಡಿ ಎಂದು ನೂರಾರು ಸಲ ಅರ್ಜಿ ಸಲ್ಲಿಸಿದ್ದೇನೆ. ಆದರೂ, ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ, ಖಾಲಿ ಇರುವ ಮನೆಗಳಲ್ಲಿ ವಾಸ ಮಾಡುತ್ತಿದ್ದೆವು. ಈಗ ಏಕಾಏಕಿ ಪೊಲೀಸರು ಹಾಗೂ ಅಧಿಕಾರಿಗಳು ಬಂದು ನಮ್ಮ ಸಾಮಗ್ರಿ ಹೊರಚೆಲ್ಲಿದ್ದಾರೆ. ನಮಗೆ ಬೀದಿಯೇ ಗತಿ’ ಎಂದು ಉರಿಬಿಸಿಲಿಗೆ ಚಡಪಡಿಸುತ್ತಿದ್ದ ಹಾಲುಗಲ್ಲದ ಕಂದನನ್ನು ಕಂಕುಳಲ್ಲಿ ಎತ್ತಿಕೊಂಡಿದ್ದ ಸುಧಾ ಎಂಬ ಮಹಿಳೆ ಗೋಗರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.