ಬುಧವಾರ, ಮೇ 25, 2022
22 °C

ವನ್ಯಪ್ರಾಣಿ ದತ್ತು ಸ್ವೀಕಾರಕ್ಕೆ ನಕಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ (ಲಯನ್ ಸಫಾರಿ)ದಲ್ಲಿ ಅಳವಡಿಸಿದ ‘ವನ್ಯಪ್ರಾಣಿ ದತ್ತು ಕಾರ್ಯಕ್ರಮ’ಕ್ಕೆ ಜನರಿಂದ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ. ಮೃಗಾಲಯದ ಆರ್ಥಿಕ ವೆಚ್ಚ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹುಲಿ-ಸಿಂಹಧಾಮ ಮೃಗಾಲಯದ ಪ್ರಾಧಿಕಾರ ಕಳೆದ ವರ್ಷ ರೂಪಿಸಿದ ವನ್ಯಜೀವಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಸಕ್ತ ಸಾಲಿನಲ್ಲಿ ಒಬ್ಬರೂ ಮುಂದೆಬಂದಿಲ್ಲ!ಯಾವುದೇ ವ್ಯಕ್ತಿ, ಕುಟುಂಬ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ವ್ಯಾಪಾರಿಗಳು, ಕಂಪೆನಿಗಳು ವನ್ಯಜೀವಿಗಳನ್ನು ದತ್ತು ತೆಗೆದುಕೊಳ್ಳಬಹುದು. ಆದರೆ, ಈ ವರ್ಷದ ಮಾರ್ಚ್ ಆರಂಭವಾದರೂ ರಾಜಕಾರಣಿಗಳಾಗಲಿ, ಸಂಘ-ಸಂಸ್ಥೆಗಳಾಗಲಿ ಈ ಬಗ್ಗೆ ಆಸಕ್ತಿ ವಹಿಸಿಲ್ಲ. ‘ದತ್ತು ಸ್ವೀಕರಿಸಿ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಪ್ರತಿಯೊಬ್ಬರಲ್ಲಿ ಮನವಿ ಮಾಡಿಕೊಂಡರು ಯಾರೂ ಓಗೂಟ್ಟಿಲ್ಲ.ಕಳೆದ ವರ್ಷ ಸಂಸದ ಬಿ.ವೈ. ರಾಘವೇಂದ್ರ, ಬಿಆರ್‌ಪಿಯ ಜಂಗಲ್ ರೆಸಾರ್ಟ್‌ನವರು ತಲಾ ಒಂದು ಹುಲಿಯನ್ನು ತಲಾ  ` 1.80 ಲಕ್ಷಕ್ಕೆ ದತ್ತು ಸ್ವೀಕರಿಸಿದ್ದರು. ಇದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇವರಿಬ್ಬರ ದತ್ತು ಅವಧಿ 2010ರ ಆಗಸ್ಟ್ 30ಕ್ಕೆ ಮುಗಿದು ಹೋಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರ, 2010ರ ಜುಲೈ 30ರಂದೇ ಪತ್ರ ಬರೆದು ನೆನಪಿಸಿದೆ. ಆದರೆ, ಇದುವರೆಗೂ ಇವರಿಬ್ಬರು ದತ್ತು ಸ್ವೀಕಾರ ನವೀಕರಿಸಲು ಮುಂದಾಗಿಲ್ಲ.  2011ರಲ್ಲಿ ದತ್ತು ಶುಲ್ಕವನ್ನು ಪರಿಷ್ಕರಿಸಿದ ಪ್ರಾಧಿಕಾರ, ಎಪಿಎಂಸಿ ಅಧ್ಯಕ್ಷರು, ಮ್ಯಾಮ್ಕೋಸ್ ಅಧ್ಯಕ್ಷರು, ಶಿವಮೊಗ್ಗ ಎ.ಎ. ಸರ್ಕಲ್ ಸಿಂಡಿಕೇಟ್ ಶಾಖೆಯ ಪ್ರಧಾನ ವ್ಯವಸ್ಥಾಪಕರು, ಎಸ್‌ಬಿಎಂ ಸಹಾಯಕ ವ್ಯವಸ್ಥಾಪಕರು,   ವಿಜಯ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರು, ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಿಗೆ ಇದೇ ಜನವರಿ 12ರಂದು ಪತ್ರ ಬರೆದಿದೆ. ಜತೆಗೆ ಹಲವು ವ್ಯಾಪಾರಸ್ಥರಿಗೆ, ರಾಜಕಾರಣಿಗಳಿಗೆ ಮೌಖಿಕವಾಗಿ ಮನವಿ ಮಾಡಿದೆ. ಇಷ್ಟಾದರೂ ಒಬ್ಬರೂ ದತ್ತು ಸ್ವೀಕರಿಸಲು ಮುಂದೆ ಬಂದಿಲ್ಲ.ಆರಂಭದ ವರ್ಷದಲ್ಲಿ ಒಂದು ವರ್ಷದ ಅವಧಿಯ ದತ್ತು ಸ್ವೀಕಾರ ಇತ್ತು. ಈಗ ಒಂದು ದಿನಕ್ಕೂ ಪರಿಷ್ಕರಿಸಲಾಗಿದೆ. ಪ್ರಾಣಿಗಳಿಗೆ ಒಂದು ಹೊತ್ತಿನ ಊಟ ಕೂಡ ದಾನ ಮಾಡಬಹುದು. ಅದರ ಶುಲ್ಕವು ಆಯಾ ಪ್ರಾಣಿ-ಪಕ್ಷಿಯ ಆಹಾರ, ಆರೈಕೆ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ.ಮೃಗಾಲಯದಲ್ಲಿ 12 ಹುಲಿ, 5 ಸಿಂಹ, 5 ಚಿರತೆ, 2 ಕರಡಿ, 5 ನರಿ, 4 ನವಿಲು, 3 ಮೊಸಳೆ, 24 ಸಾಂಬಾರು, 35 ಕೃಷ್ಣಮೃಗ, 1 ಮಂಗ ಮತ್ತು ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳಿವೆ. ಉದಾಹರಣೆಗೆ ಸಿಂಹ ಮತ್ತು ಹುಲಿಯ ಒಂದು ವರ್ಷದ ಖರ್ಚು ` 2.50 ಲಕ್ಷ, ಬಾತುಕೋಳಿಗೆ ` 1,500, ಕರಡಿಗೆ ` 50 ಸಾವಿರ, ನರಿಗೆ ` 17,500 ಆಗುತ್ತದೆ. ಒಟ್ಟು ಮೃಗಾಲಯದ ವರ್ಷದ ಖರ್ಚು ` ಒಂದು ಕೋಟಿ   ದಾಟುತ್ತದೆ.ಆದರೆ, ಆದಾಯ ಕೇವಲ ` 70ರಿಂದ 80 ಲಕ್ಷ  ಬರುತ್ತದೆ. ಹೀಗಾಗಿ, ಅದನ್ನು ಸರಿದೂಗಿಸಲು ಹೆಚ್ಚು ದತ್ತು ಸ್ವೀಕರಿಸಿದರೆ ಒಳ್ಳೆಯದು. ದತ್ತು ತೆಗೆದುಕೊಂಡವರು ಮೃಗಾಲಯ ಪೋಷಕರಾಗುವುದರ ಜತೆಗೆ, ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ ಮುಂತಾದವುಗಳನ್ನು ದತ್ತು ಸ್ವೀಕರಿಸಿ ಅರ್ಥಪೂರ್ಣವಾಗಿ ಆಚರಿಸಬಹುದು ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ವಿಭಾಗ) ಟಿ.ಜೆ. ರವಿಕುಮಾರ್.2009ರಲ್ಲಿ ` 80 ಲಕ್ಷ ವೆಚ್ಚವಾಗಿತ್ತು. ಆದರೆ, ಆದಾಯ ಬಂದಿದ್ದು ` 65 ಲಕ್ಷ 2010-11ನೇ ಸಾಲಿನಲ್ಲಿ ` 110.94 ಲಕ್ಷ  ವೆಚ್ಚ ನಿಗದಿಪಡಿಸಲಾಗಿದೆ. ಆದರೆ, ಇದುವರೆಗೂ ` 80 ಲಕ್ಷ  ಆದಾಯ ಬಂದಿದೆ ಎಂಬ ವಿವರಣೆ ಅವರದ್ದು.   ದತ್ತು ತೆಗೆದುಕೊಂಡವರಿಗೆ ದತ್ತು ಸ್ವೀಕಾರ ಪ್ರಮಾಣಪತ್ರದ ಜತೆಗೆ ಐವರಿಗೆ ಉಚಿತವಾಗಿ ಮೃಗಾಲಯದ ಪ್ರವೇಶ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಅಲ್ಲದೇ, ದತ್ತು ಸ್ವೀಕಾರ ಮಾಡಿದವರ ಹೆಸರನ್ನು ಪ್ರತ್ಯೇಕ ನಾಮಫಲಕದಲ್ಲಿ ಆಯಾ ಪ್ರಾಣಿಗಳ ಬೋನಿನ ಮೇಲೆ ಅಥವಾ ವಿಶೇಷ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ, ದತ್ತು ಶುಲ್ಕಕ್ಕೆ ಆದಾಯ ತೆರಿಗೆ ಕಾಯ್ದೆ 1961 ಕಲಂ 80(ಜಿ) ಅಡಿ ವಿನಾಯ್ತಿ ನೀಡಲಾಗುತ್ತದೆ. ಇಷ್ಟಾದರೂ ಇದುವರೆಗೂ ಒಬ್ಬರೂ ದತ್ತು ಸ್ವೀಕರಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.